ನವರಾತ್ರಿಯ ಏಳನೇ ದಿನ

ಇವತ್ತು ನವರಾತ್ರಿಯ ಏಳನೇ ದಿನ. ನವರಾತ್ರಿ ಮಂಡಪದಲ್ಲಿ ಮೊದಲ ಆರು ದಿನ ಸರಸ್ವತಿಯ ಮೇಲಿನ ಕೃತಿಗಳು ಮೂಡಿ ಬಂದರೆ, ಕಡೆಯ ಮೂರು ದಿನ ಪಾರ್ವತಿಯ ಮೇಲೆ ಬರೆದಿರುವ ಕೃತಿಗಳ ಸರತಿ. ಈ ದಿನ ಅಲ್ಲಿ ಕೇಳಿ ಬರುವ ರಚನೆ ಶುದ್ಧಸಾವೇರಿ ರಾಗದ ’ಜನನಿ ಪಾಹಿ ಸರಾ’. ಅದನ್ನು ನೀವು ಇಲ್ಲಿ ಚುಟುಕಿಸಿ ಕೇಳಬಹುದು.

ಇವತ್ತಿನ ದಿನ ನೀವು ಕೇಳಲು ನಾನು ಆಯ್ದ ರಚನೆ ಕನಕದಾಸರು ಮಾಡಿರುವ, ಮಾತಿನ ದೇವತೆ ಶಾರದೆಯ ಮೇಲಿನ ಒಂದು ಸುಂದರ ದೇವರನಾಮ:

ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣ ಕಮಲಂಗಳ ದಯಮಾಡು ದೇವೀ || ಪಲ್ಲವಿ||

ಶಶಿಮುಖದ ನಸುನಗೆಯ ಬಾಲೇ!
ಎಸೆವ ಕರ್ಣದ ಮುತ್ತಿನ ಓಲೇ
ನಸುವ ಸುಪಲ್ಲ ಗುಣಶೀಲೇ ದೇವೀ
ಬಿಸಜಾಕ್ಷಿ ಎನ್ನ ಹೃದಯದಲಿ ನಿಂದು ||ಚರಣ ೧||

ರವಿ ಕೋಟಿ ತೇಜ ಪ್ರಕಾಶೇ ಸದಾ
ಕವಿ ಜನ ಹೃತ್ಕಮಲ ವಾಸೇ
ಅವಿರಳಪುರಿ ಕಾಗಿನೆಲೆಯಾದಿ ಕೇ-
ಶವನ ಸುತನಿಗೆ ಸನ್ನುತ ರಾಣಿವಾಸೇ || ಚರಣ ೨||

ಹೆಚ್ಚಿನ ದಾಸರ ರಚನೆಗಳನ್ನು, ನಂತರದ ಸಂಗೀತಗಾರರು ಸಂಗೀತಕ್ಕೆ ಅಳವಡಿಸಿರುತ್ತಾರೆ. ಕೆಲವು ರಚನೆಗಳಲ್ಲಿ ಮಾತ್ರ ಮೂಲ ಮಟ್ಟುಗಳು ಉಳಿದುಕೊಂಡಿವೆ. ಈ ರಚನೆಯನ್ನು ಬಹಳ ಸುಂದರವಾಗಿ ರಂಜನಿ ರಾಗದಲ್ಲಿ ಅಳವಡಿಸಿರುವುದು ಬೆಂಗಳೂರಿನ ಸಂಗೀತವಿದ್ವಾಂಸರಾದ ತಿರುಮಲೆ ಶ್ರೀನಿವಾಸ್ (ತಿರುಮಲೆ ತಾತಾಚಾರ್ಯ ಶರ್ಮ ಅವರ ಮೊಮ್ಮೊಗ) ಅನ್ನುವುದು ನನಗೆ ಈಗ ತಾನೇ ತಿಳಿದುಬಂತು. ಹಾಡಿರುವುದು ಡಾ.ನಾಗವಲ್ಲಿ ನಾಗರಾಜ್ ಮತ್ತು ರಂಜನಿ ನಾಗರಾಜ್.ಎಲ್ಲರಿಗೂ ಸರಸ್ವತೀ ಪೂಜೆಯ ಶುಭ ಹಾರೈಕೆಗಳು.

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?