ಕನ್ನಡ ಮತ್ತು ಸಂಸ್ಕೃತದ ನಡುವೆ ಸಂಬಂಧವೇನು?

ಇತ್ತೀಚೆಗೆ ಗೆಳೆಯರೊಬ್ಬರು ಒಂದು ಪ್ರಶ್ನೆ ಕೇಳಿದರು:

"ಪದ ರಚನೆ, ವಿಭಕ್ತಿ ಪ್ರತ್ಯಯಗಳು, ಸಂಧಿಗಳು, ಏಕವಚನ - ಬಹುವಚನ, ಹೀಗೆ ಗಮನಿಸುತ್ತಾ ಹೋದರೆ ನಾವು ಭಾಷೆಯಲ್ಲಿ ಅನುಸರಿಸುವ ಹಲವು ಮಗ್ಗಲುಗಳಲ್ಲಿ ಕನ್ನಡ - ಹಿಂದಿ ಭಾಷೆಗಳಲ್ಲಿ ಅನೇಕ ಹೋಲಿಕೆಗಳನ್ನು ಕಂಡುಕೊಳ್ಳಬಹುದು. ಅದರಿಂದ ಕನ್ನಡ ಹಿಂದಿ , ಗುಜರಾತಿ ಅಥವಾ ಇನ್ನಾವುದೇ ಉತ್ತರ ಬಾರತೀಯ ಭಾಷೆಯನ್ನೂ ಕಲಿಯಲು ಸಾಕಷ್ಟು ಅನುಕೂಲವಾಗುತ್ತದೆ. ಹಾಗೇ ತೆಲುಗು, ತಮಿಳು ಅಥವಾ ಮಲಯಾಳಂ ಭಾಷೆಯಲ್ಲಿಯೂ ಸಹ ಅದೇ ರೀತಿ ಭಾವನೆ ಬರಬಹುದು. ಅಂದರೆ, ಭಾರತದ ಎಲ್ಲಾ ಭಾಷೆಗಳೆಲ್ಲಾ ಒಂದು ರೀತಿಯ ಸಾಮಾನ್ಯ ನಿಯಮಗಳನ್ನು ಅನುಸರಿಸುವುದು ಕಂಡು ಬರುತ್ತವೆಯಾ? ಆದೇ ರೀತಿ ಸಂಸ್ಕೃತ ಮೂಲದ ಭಾಷೆಗಳಿಗೂ (ಮರಾಠಿ, ಗುಜರಾತಿ,ಹಿಂದಿ ಇತ್ಯಾದಿ), ದ್ರಾವಿಡ ಮೂಲದ ತೆಲುಗು, ತಮಿಳು, ಕನ್ನಡ, ಮಲಯಾಳಂಗೆ ಇರುವ ವ್ಯತ್ಯಾಸವನ್ನು ತಿಳಿಸುವುದು ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಂತೆ ಅಂತಲೂ ಓದಿದ್ದೇನೆ. ಇದು ಹೇಗೆ?"

ನನ್ನ ಗೆಳೆಯರಿಗೆ ನಾನು ಕೊಟ್ಟ ಇಮೆಯ್ಲ್ ಗಳಲ್ಲಿ ಕೊಟ್ಟ ಉತ್ತರವನ್ನೇ ಇಲ್ಲಿ ಹಾಕುತ್ತಿದ್ದೇನೆ - ಏನಿಲ್ಲದಿದ್ದರೂ ನನ್ನ ನೆನಪಿನಲ್ಲಿ ಉಳಿಯಲಿ ಅಂತ ಆದ್ರೂ. ಎಷ್ಟೇ ಅಂದ್ರೂ ಒಂದು ಬ್ಲಾಗಿನ ಮೂಲ ಉದ್ದೇಶ ಅದೇ ತಾನೇ!

ಈ ಬಗ್ಗೆ ದೊಡ್ಡ ದೊಡ್ಡ ವಿದ್ವಾಂಸರ ಪುಸ್ತಕಗಳು ಬೇಕಾದಷ್ಟಿವೆ. ಇದೊಂದು ನನ್ನ ಸಣ್ಣ ಇಣುಕು ನೋಟ ಅಷ್ಟೇ
.


ಸಂಧಿ:

ಸಂಧಿಗಳಲ್ಲಿ ಕನ್ನಡಕ್ಕೂ ಸಂಸ್ಕೃತಕ್ಕೂ ವ್ಯತ್ಯಾಸಗಳಿವೆ. ಕನ್ನಡದಲ್ಲಿ ಸಮಸಂಸ್ಕೃತ ಪದಗಳಲ್ಲಿ ಬರುವ ಸವರ್ಣದೀರ್ಘ, ಗುಣ ಮೊದಲಾದ ಸಂಧಿಗಳು ನಿಜವಾಗಿ ಕನ್ನಡ ಸಂಧಿಗಳಲ್ಲ. ಲೋಪ/ಆಗಮ/ಆದೇಶ ಮೊದಲಾದವು ಮಾತ್ರ ಕನ್ನಡ ಮೂಲದ ಸಂಧಿಗಳು. ಕನ್ನಡ ವ್ಯಾಕರಣ ವನ್ನು ಸಂಸ್ಕೃತ ವ್ಯಾಕರಣದ ಮೇಲೆ ವಿವರಿಸುವ ಪದ್ಧತಿ ಬೆಳೆದುಬಂದಿರುವುದರಿಂದ, ನಮಗೆ ಅವೂ ಎಲ್ಲವೂ ಕನ್ನಡವೆಂದೇ ಅನ್ನಿಸುತ್ತದೆ. ಸಂಧಿಗಳಲ್ಲಿ ಬರುವ ಎರಡೂ ಪದಗಳು ಸಂಸ್ಕೃತ ಮೂಲದವೇ, ಇಲ್ಲ ಅಚ್ಚಕನ್ನಡದವೇ ಅನ್ನುವುದನ್ನ ನೋಡಿದರೆ, ಅಲ್ಲಿ ಬರುವ ಸಂಧಿ ಯಾವುದೆಂದು ಸುಲಭವಾಗಿ ತಿಳಿಯಬಹುದು.

ವಿಭಕ್ತಿ:

ಇನ್ನು ವಿಭಕ್ತಿಗಳಿಗೆ ಬಂದರೆ: ಉ - ಅನ್ನು- ಇಂದ- ಗೆ - ದೆಸೆಯಿಂದ- ಅ - ಮತ್ತು ಅಲ್ಲಿ ಎಂಬ ಏಳು ವಿಭಕ್ತಿಗಳನ್ನು ಸಂಸ್ಕೃತದ ವಿಭಕ್ತಿಗಳಂತೆಯೆ ವಿವರಿಸುವುದು ರೂಢಿ.

ಆದರೆ ರಾಮನು ಕಾಡಿಗೆ ಹೋದನು ಅನ್ನುವುದಕ್ಕಿಂತ ರಾಮ ಕಾಡಿಗೆ ಹೋದನು ಅನ್ನುವುದೇ ಕನ್ನಡದ ನೆಲೆಯಿಂದ ಸರಿ. ಅಂದರೆ ಪ್ರಥಮಾ ವಿಭಕ್ತಿಯೂ, ನಾಮಪದವೂ ಕನ್ನಡದಲ್ಲಿ ಒಂದೇನೇ. ಆದರೆ ಸಂಸ್ಕೃತದಲ್ಲಿ ರಾಮ ಅನ್ನುವುದು ಪದವಾದರೆ, ರಾಮಃ ಅನ್ನುವುದು ಪ್ರಥಮಾ ವಿಭಕ್ತಿ.

ಕನ್ನಡದಲ್ಲಿ ತೃತೀಯಾ ಮತ್ತೆ ಪಂಚಮಿ ಅನ್ನುವ ಎರಡು ಬೇರೆ ವಿಭಕ್ತಿಗಳು ನಿಜವಾಗಿ ಇಲ್ಲ. ಪಂಚಮಿ ಅನ್ನುವ ವಿಭಕ್ತಿಗೆ ಅದಕ್ಕೇ ’ದೆಸೆ’ಯಿಂದ ಅನ್ನುವ ಜೋಡಿ ಪ್ರತ್ಯಯಗಳನ್ನ ಸೇರಿಸಲಾಗಿದೆ ಅನ್ನುವುದು ಒಂದು ಅಭಿಪ್ರಾಯ. ಸಂಸ್ಕೃತದಲ್ಲಿ ’ಸಹ’ಯೋಗೇ ತೃತೀಯಾ ಅನ್ನುವ ಸೂತ್ರವಿದೆ. ಅಂದರೆ ಇನ್ನೊಂದರ ಜೊತೆಗೆ ಇದ್ದಾಗ ತೃತೀಯಾ ಬರುತ್ತೆ. ಉದಾ: ರಾಮೇಣ ಸಹ ಕೃಷ್ಣಃ ಆಗತಃ - ರಾಮ’ನಿಂದ’ ಜೊತೆ ಕೃಷ್ಣ ಬಂದ = ರಾಮನ ಜತೆ ಕೃಷ್ಣ ಬಂದ ಇದು ಕನ್ನಡದಲ್ಲಿ ನಿಜವಾಗಲೂ ಷಷ್ಟಿ ಅಲ್ಲವೆ?

ಇದಲ್ಲದಿದ್ದರೆ ತೃತೀಯೆ ಕರ್ಮಣೀ ಪ್ರಯೋಗದಲ್ಲಿ ಬರುತ್ತೆ - ’ರಾಮೇಣ ವನಂ ಗಮ್ಯತೇ’ - ರಾಮನಿಂದ ವನವನ್ನು ಹೊಗಲ್ಪಡುತ್ತದೆ -> ಇದರ ಅರ್ಥ ರಾಮನು ವನವನ್ನು ಹೊಗುತ್ತಾನೆ ಎಂದಲ್ಲವೇ?

ಪಂಚಮಿಯು ಸಂಸ್ಕೃತದಲ್ಲಿ ಭಯ, ನಷ್ಟ, ಕಾತರ ಇಂತಹವುಗಳ ಜೊತೆಯಲ್ಲಿ ಉಪಯೋಗಿಸಲ್ಪಡುತ್ತದೆ. ಕನ್ನಡದಲ್ಲಿ ಬಳಸುವ ’ಇಂದ’ ಬಹುಶಃ ಯಾವಾಗಲೂ ಈ ಪಂಚಮಿಯೇ ಎಂದಿದ್ದಾರೆ ಕೆಲವರು. ರಾಮನಿಂದ ನಾನು ಏಟು ತಿಂದೆ. ಕಳ್ಳನಿಂದ ದರೋಡೆ ಆಯಿತು. ಇತ್ಯಾದಿ. ಒಟ್ಟಿನಲ್ಲಿ ಕನ್ನಡದಲ್ಲಿ ತೃತೀಯ ಮತ್ತೆ ಪಂಚಮಿಗಳು ಒಂದರ ಜಾಗದಲ್ಲಿ ಒಂದು ಬರಬಹುದು.ಆದ್ದರಿಂದಲೇ ಕೆಲವು ವಿದ್ವಾಂಸರು ಕನ್ನಡದಲ್ಲಿ ನಿಜವಾಗಿ ತೃತೀಯೆ ಇಲ್ಲವೇ ಇಲ್ಲ, ಇರುವುದೇ ಬರೀ ಪಂಚಮಿ ಅಂದಿದ್ದಾರೆ. ಅದೇ ರೀತಿ ಇನ್ನೊಂದು ವಿಷಯ ಅಂದ್ರೆ ಕನ್ನಡದಲ್ಲಿ ತೃತೀಯ ಮತ್ತೆ ಸಪ್ತಮಿ ಕೂಡ ಒಂದರ ಜಾಗದಲ್ಲಿ ಒಂದು ಬರಬದುದು! ಮಣ್ಣಿಂದ ಮಾಡಿದ ಗೊಂಬೆ = ಮಣ್ಣಲ್ಲಿ ಮಾಡಿದ ಗೊಂಬೆ ; ಪುಸ್ತಕದಲ್ಲಿ ಓದಿ ಕಲಿತದ್ದು = ಪುಸ್ತಕದಿಂದ ಓದಿ ಕಲಿತದ್ದು. ಸೇಡಿಯಾಪು ಕೃಷ್ಣ ಭಟ್ಟರದೊಂದು ಒಳ್ಳೇ ಬರಹವಿದೆ ಈ ವಿಷಯದ ಬಗ್ಗೆ.

ಒಟ್ಟಲ್ಲಿ ಈ ಕಾರಣಗಳಿಂದ ಸಂಸ್ಕೃತದ ವಿಭಕ್ತಿಗಳೂ ಕನ್ನಡದ ಪ್ರತ್ಯಯಗಳೂ ಪೂರ್ತಿ ಒಂದೇನೇ ಎಂದು ಹೇಳುವುದು ಸಾಧ್ಯವಿಲ್ಲ.

ವಚನ:

ಮತ್ತೆ ವಚನಗಳು - ದ್ವಿವಚನ ಅನ್ನುವ ಕಾನ್ಸೆಪ್ಟ್ ಸಂಸ್ಕೃತದ್ದು ಮಾತ್ರ. ಇದು ಕನ್ನಡಕ್ಕೆ ಹೊಂದೊಲ್ಲ. ಹಸ್ತೌ = ಎರಡು ಕೈಗಳು ಅಂತಲೇ ಹೇಳಬೇಕಾಗುತ್ತೆ ನೋಡಿ. ಒಂದು ಮತ್ತೆ ಹಲವು ಅಂತ ಎರಡೇ ವಚನಗಳು ಕನ್ನಡದಲ್ಲಿ.

ಲಿಂಗ:

ಇನ್ನು ಲಿಂಗ. ಕನ್ನಡದ ಲಿಂಗ ವಿಭಾಗ ಬಹಳ ಸರಳ. ಗಂಡು - ಹೆಣ್ಣು - ಮತ್ತೆ ಮನುಷ್ಯನಲ್ಲದ/ಜೀವವಿಲ್ಲದ ಹೀಗೆ ಮೂರು ಭಾಗ ಮಾತ್ರ. ಅಲ್ಲದೆ ಒಂದು ಪದದ ಅರ್ಥದ ಮೇಲೆ ಲಿಂಗ ಯಾವುದು ಅನ್ನೋದು ನಿರ್ಧಾರ ಆಗುತ್ತೆ. ಆದರೆ ಸಂಸ್ಕೃತದಲ್ಲಿ ದಾರಾ = ಹೆಂಡತಿ ಅನ್ನುವುದು ಪುಲ್ಲಿಂಗ. ಆದರೆ ಛಾಯಾ = ನೆರಳು ಅನ್ನುವುದು ಸ್ತ್ರೀಲಿಂಗ. ಇದನ್ನು ನೋಡಿದಾಗ ಕನ್ನಡದ ಲಿಂಗ ವಿಭಾಗ ಸಂಸ್ಕೃತದ ರೀತಿ ಇಲ್ಲ ಆನ್ನುವುದು ಸ್ಪಷ್ಟ . ಹಿಂದೀ, ಮರಾಠೀ ಮೊದಲಾದ ಭಾಷೆಗಳಲ್ಲಿ ಲಿಂಗಗಳು ಸಂಸ್ಕೃತದ ನೇರ ಪ್ರಭಾವದಿಂದ ಬಂದಿರುವುದು ತಿಳಿಯುತ್ತದೆ.

ಕನ್ನಡದ ಪ್ರತ್ಯಯಗಳು (first person) ಹೇಳುವವರು ಗಂಡಾಗಲಿ, ಹೆಣ್ಣಾಗಲಿ ಬದಲಾಗವು. ಉದಾ: ನಾನು ಊಟ ಮಾಡ್ತೀನಿ. ಅವನು ನನ್ನ ಅಣ್ಣ. ನನ್ನ ಅತ್ತಿಗೆ ಬೆಂಗಳೂರಿನವರು. ಆದರೆ ಹಿಂದಿಯಲ್ಲಿ ಇದು ಮೈ ಖಾವೂಂಗಾ, ಮೈ ಖಾವೂಂಗೀ, ವೊಹ್ ಮೇರಾ ಭಾಯೀ ಹೈ, ಮೇರೀ ಭಾಭೀ ಬೆಂಗಳೂರ್ ವಾಲೀ ಹೈ ಎಂದಾಗುತ್ತೆ. ಆದರೆ ಸಂಸ್ಕೃತದಲ್ಲಿ ಪ್ರಥಮ ಪುರುಷ ಏಕ ವಚನ ಕನ್ನಡದ ಹಾಗೇ ಇದೆ ಅನ್ನೋದು ಬೇರೆ ಸಮಾಚಾರ.

ಬೇರೆ ಬೇರೆ ಭಾಷೆಗಳು (ಬೇರೆ ಮೂಲದ್ದಾದರೂ), ಒಟ್ಟಿಗೆ ಒಡನಾಡುವಾಗ ಹೋಲಿಕೆ ಬರುವುದು ಸಹಜವೇ. ಅದರಲ್ಲೂ ಸಂಸ್ಕೃತದ ಪ್ರಭಾವ ಕನ್ನಡದ ಮೇಲೆ ಬಹಳವೇ ಆಗಿದೆ. ಅತಿ ಮೊದಲ ಕನ್ನಡ ಬರಹದ ದಾಖಲೆಗಳಲ್ಲಿ ಸಂಸ್ಕೃತ ಪದಗಳ ಬಳಕೆ ಬಹಳವೇ ಹೆಚ್ಚಿವೆ. ಈಗ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಪದಗಳು ಮಲೆಯಾಳಕ್ಕೂ, ತೆಲುಗಿಗೂ ಹೊಕ್ಕಿವೆ ಅನ್ನುವುದು ತಿಳಿದ ಸಂಗತಿಯೇ.

ಆದರೆ, ಒಂದು ಭಾಷೆಗೆ ತೀರಾ ಅಡಿಪಾಯವಾದ ಪದಗಳು ಸಂಸ್ಕೃತದಲ್ಲೂ, ಕನ್ನಡದಲ್ಲೂ ಬೇರೆಯಿವೆ. ಆದರೆ, ಕನ್ನಡ/ತಮಿಳು/ತೆಲುಗು ಇತ್ಯಾದಿ ನುಡಿಗಳಲ್ಲಿ ಒಂದಕ್ಕೊಂದನ್ನು ಬಹಳ ಹತ್ತಿರವಾಗಿ ಹೋಲುತ್ತವೆ. ಇದರಿಂದಲೇ ಕನ್ನಡ ತಮಿಳು ತೆಲುಗು ಮೊದಲಾದವು ಸಂಸ್ಕೃತ ಮೂಲವಲ್ಲ ಅಂತ ಖಡಾಖಂಡಿತವಾಗಿ ಹೇಳಬಹುದು.

ಉದಾ: ಸಂಖ್ಯೆಗಳು - ಒಂದು ಎರಡು ಮೂರು .... ಹತ್ತು ಇಪ್ಪತ್ತು ಇತ್ಯಾದಿ; ಹಾಗೇ ಹತ್ತೊಂಬತ್ತು, ಇಪ್ಪತ್ತೊಂಬತ್ತು ( ಸಂಸ್ಕೃತ ಹಿಂದಿಗಳಲ್ಲಿ ಇವೆಲ್ಲ ಒಂದುಕಮ್ಮಿಇಪ್ಪತ್ತು, ಒಂದುಕಮ್ಮಿ ಮೂವತ್ತು ಹೀಗೆ ಹೇಳಲಾಗುತ್ತೆ)

ನಂಟನ್ನು ಹೇಳುವ ಪದಗಳು: ಅಮ್ಮ, ಅಪ್ಪ, ಅಣ್ಣ, ತಂಗಿ, ಅತ್ತೆ, ಮಾವ, ಮೈದುನ, ಮಗ, ಮಗಳು ಇತ್ಯಾದಿ

ದೇಹದ ಭಾಗಗಳನ್ನು ಹೆಸರಿಸುವ ಪದಗಳು: ಮೂಗು, ಬಾಯಿ, ಕಣ್ಣು, ತಲೆ, ಕಿವಿ ಇತ್ಯಾದಿ

ಕಾಲವನ್ನು ತಿಳಿಸುವ ಪದಗಳು: ನೆನ್ನೆ, ಮೊನ್ನೆ, ನಾಳೆ, ಹಿಂದೆ, ಮುಂದೆ ಇತ್ಯಾದಿ

ಇದೇ ರೀತಿ ಸಂಸ್ಕೃತ ಮತ್ತು ಮರಾಠಿ, ಅಥವಾ ಸಂಸ್ಕೃತ ಮತ್ತು ಹಿಂದಿ ನಡುವೆ ಹೋಲಿಸಿನೋಡಿದರೆ ಅವುಗಳ ನಡುವೆ ಇನ್ನೂ ಹತ್ತಿರದ ನಂಟು, ಅಥವಾ ಸಂಸ್ಕೃತ ಮೂಲವಾದ ಪ್ರಾಕೃತಗಳಿಂದ ಬಂದಿರುವುದು ಸ್ಪಷ್ಟವಾಗುತ್ತೆ. ಉದಾ: ಸಂಸ್ಕೃತದ ಮುಖ (=ಬಾಯಿ) ಅನ್ನುವುದು ಹಿಂದಿಯಲ್ಲಿ ಮುಹ್ ಆಗಿದೆ. ಅದೇ ರೀತಿ ಸಂಸ್ಕೃತದ ತುಂಡ (=ಬಾಯಿ) ಅನ್ನುವುದು ಮರಾಠಿಯಲ್ಲಿ ತೊಂಡ್ ಆಗಿದೆ. ಮರಾಠಿಯು ಮಹಾರಾಷ್ಟ್ರೀ ಎಂಬ ಹೆಸರಿನ ಪ್ರಾಕೃತದಿಂದಲೂ, ಹಿಂದಿಯು ಶೌರಸೇನೀ (ನನ್ನ ನೆನಪು ತಪ್ಪಿದ್ದರೂ ಇರಬಹುದು) ಎಂಬ ಪ್ರಾಕೃತದಿಂದಲೂ ಬಂದಿವೆಯೆಂದು ಸಿದ್ಧಪಡಿಸಲಾಗಿದೆ

ಇಂದಿನ ಮರಾಠಿ ಮತ್ತು ಕೊಂಕಣಿ ಭಾಷೆಗಳ ಮೇಲೆ ಮೇಲೆ ಕನ್ನಡದ ಪ್ರಭಾವ ಬಹಳ ಇರುವುದು ಸ್ಪಷ್ಟ. ಕೆಲವು ತೀರಾ ಬಳಕೆಯ ಮರಾಠಿ ಪದಗಳು, ಕೊಂಕಣಿ ಪದಗಳು ಕನ್ನಡದಿಂದಲೇ ಬಂದವಾಗಿವೆ. ಆದರೆ ಅವುಗಳನ್ನು ಕನ್ನಡ ಮೂಲವಾದ ಭಾಷೆಗಳು ಎನ್ನಲಾಗುವುದಿಲ್ಲ. ಅದೇ ರೀತಿ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ವಿಪರೀತವೆನ್ನುವಷ್ಟೇ ಆಗಿದೆ. ನಾವು ದಿನಾಲೂ ಬಳಸುವ ಪದಗಳನ್ನ (ನಾನು ಕಾವ್ಯ ಕವನಗಳ ವಿಷಯ ಮಾತಾಡ್ತಿಲ್ಲ), ನೋಡಿದ್ರೆ ಇದು ಗೊತ್ತಾಗುತ್ತೆ. ಹಲವು ಪದಗಳನ್ನ ನಾವು ಹಾಗೇ ತೆಗೆದುಕೊಂಡಿದ್ದರೆ, ಇನ್ನೊಂದಷ್ಟನ್ನ ಸ್ವಲ್ಪ ಬೇರೆಯದೇ ಅರ್ಥದಲ್ಲಿ ಬರುವಂತೆ ಮಾರ್ಪಡಿಸಿಕೊಂಡಿದ್ದೇವೆ. ಆದರೆ ಇದು ಪದಸಂಪತ್ತಿಗೆ (vocabulary) ಹೊರತು, ಇದರಿಂದ ಕನ್ನಡವನ್ನು ಸಂಸ್ಕೃತದಿಂದ ಹುಟ್ಟಿಸಲು ಸಾಧ್ಯವಾಗುವುದಿಲ್ಲ.

ಹಾಗಂತ ಈಗ ನಮ್ಮ ದಿನಬಳಕೆಯಲ್ಲಿರುವ ಕನ್ನಡದಲ್ಲಿರುವ ಸಂಸ್ಕೃತ ಪದಗಳನ್ನೆಲ್ಲ ಗುಡಿಸಿ ಹಾಕಬೇಕೇ? ನನ್ನನ್ನು ಕೇಳಿದರೆ ಬೇಕಿಲ್ಲ. ಸಂಸ್ಕೃತ ಪದಗಳನ್ನ ಬಳಸಿದ ಮಾತ್ರಕ್ಕೆ ಕನ್ನಡದ ಹಿರಿಮೆ ತಗ್ಗಲಿಲ್ಲ. ಹಾಗೇ, ಕನ್ನಡ ಸಂಸ್ಕೃತ ಪದಗಳನ್ನ ಬಳಸದಿದ್ದರೆ, ಅದರಿಂದ ಸಂಸ್ಕೃತದ ಹಿರಿಮೆಯೂ ಕುಂದುವುದಿಲ್ಲ.

ಅಂದ ಹಾಗೇ ಸಂಸ್ಕೃತದ ಪ್ರಭಾವ ತೀರಾ ಕಡಿಮೆ ಎಂದು ಹೇಳಿಕೊಳ್ಳುವ ತಮಿಳಿನಲ್ಲೂ ದಿನ ನಿತ್ಯದ ಬಳಕೆಯಲ್ಲಿ ಬೇಕಾದಷ್ಟು ಸಂಸ್ಕೃತ ಪದಗಳು ಹೊಕ್ಕಿವೆ ಅನ್ನುವುದು - ಆದರೆ ಹೆಚ್ಚಿನ ಜನಕ್ಕೆ ಅದರ ತಿಳುವಳಿಕೆ ಇಲ್ಲ ಅನ್ನೋದು ಬೇರೆ ವಿಚಾರ. ಅದರ ಬಗ್ಗೆ ಬರೆಯೋ ಅಗತ್ಯವಿಲ್ಲ ಬಿಡಿ ಈಗ!

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?