ಹೊಟ್ಟೆ ತುಂಬಿಸದ ಭಾಷೆ

ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗೆ ಅದು ಕಂಡರಾಗದು. ಒಬ್ಬರಿಗೆ ಸಂಗೀತ ಅಂದ್ರೆ ಆಗದು. ಇನ್ನೊಬ್ಬರಿಗೆ ಹಾಡನ್ನ ಕೇಳ್ದೇ ಇದ್ರೆ ತಲೆನೋವು ಬರುತ್ತೆ. ಈ ಯಾರಿಗೂ ಕ್ರಿಕೆಟ್ಟೇ ಆಗಲೀ, ಹಾಡು ಕೇಳೋದೇ ಆಗಲಿ, ಅನ್ನ ಕೊಡುವ ಕೆಲಸಗಳಲ್ಲ. ಆದರೂ ಅವರವರ ಸಂತೋಷಕ್ಕೆ ಅವರವರು ಮಾಡುವುದಷ್ಟೇ. ಎಷ್ಟೋ ಬ್ಲಾಗರುಗಳ ತುಂಬಾ ಒಳ್ಳೇ ಬರಹಗಳನ್ನ ಓದಿದೀನಿ. ಅದರಲ್ಲಿ ಎಷ್ಟು ಜನಕ್ಕೆ ಬರವಣಿಗೆ ಅನ್ನ ಕೊಡ್ತಿದೆಯೋ ಇಲ್ಲವೋ ನಾ ಕಾಣೆ. ಆದರೆ ನಾನು ಓದಿದಾಗ, ನನಗಂತೂ ಖುಷಿ ಅಂತೂ ಆಗ್ತಿದೆ. ಒಟ್ಟಿನಲ್ಲಿ ಅವರ ಹಾಡಿಗೆ ಅವರದೇ ಶ್ರುತಿ, ಅವರದೇ ತಾಳ ಅಂದುಕೊಳ್ಳೋಣ.

ಆದ್ರೆ ಯಾವತ್ತೂ ’ಭಾಷೆ’ಯೊಂದರಿಂದ ಅನ್ನ ಕಾಣೋದು ಕಷ್ಟ ಅನ್ನೋದು ಇವತ್ತಿನ ವಿಷಯವಲ್ಲ, ಬಹಳ ಹಿಂದಿನಿಂದಲೂ ಈ ದೂರು ಇದ್ದಿದ್ದೇ ಅನ್ನೋದಕ್ಕೆ ಈ ಸುಭಾಷಿತವೇ ಸಾಕ್ಷಿ!

ಭುಭುಕ್ಷಿತೈರ್ವ್ಯಾಕರಣಂ ನ ಭುಜ್ಯತೇ
ಪಿಪಾಸಿತೈಃ ಕಾವ್ಯರಸೋ ನ ಪೀಯತೇ |
ನಚ್ಛಂದಸಾ ಕೇನಚಿದುದ್ಧೃತಂ ಕುಲಂ
ಹಿರಣ್ಯಮೇವಾರ್ಜ್ಯಯ ನಿಷ್ಫಲಾಃ ಕಲಾಃ ||

(ಇದು ಮಾಘ ಕವಿ ಬರೆದ ಸುಭಾಷಿತವೆಂದು ಕ್ಷೇಮೇಂದ್ರನೆಂಬ ಕವಿ ಹೇಳಿದ್ದಾನಂತೆ)

ಇದನ್ನ ಹೀಗೆ ಕನ್ನಡಕ್ಕೆ ತಂದಿರುವೆ:

ಹಸಿದಾಗ ವ್ಯಾಕರಣವನುಣಲಾಗದು
ಬಾಯಾರಿಕೆಯಿಂಗಿಸದು ಸೊಗದ ಕವಿತೆ;
ಛಂದಸ್ಸಿನಿಂದಾರ ಮನೆ ಏಳಿಗೆಯಾಯ್ತು?
ಬರಡಯ್ಯ ಕಲೆಗಳು! ನೀ ಗಳಿಸಯ್ಯ ಹಣ!

-ಹಂಸಾನಂದಿ


Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?