ಎಲ್ ಕಮೀನೋ ರಿಯಾಲ್

ಎಲ್ ಕಮೀನೋ ರಿಯಾಲ್’ ಅಂದ್ರೆ ’ರಾಜಮಾರ್ಗ’ - ಇದು ಸ್ಪ್ಯಾನಿಶ್ ಮಿಶನ್ ಗಳ ಕಾಲದಲ್ಲಿ ಕ್ಯಾಲಿಫೋರ್ನಿಯದ ದಕ್ಷಿಣ ತುದಿಯಿಂದ ರಾಜ್ಯದ ನಡುವಿನ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ವರೆಗೆ ಇದ್ದ ಮಿಶನ್ ಗಳನ್ನು ಸೇರಿಸುತ್ತಿದ್ದ ರಸ್ತೆ. ಈಗ ಹಳೇ ರಸ್ತೆ ಇಲ್ಲ ಬಿಡಿ. ಆದರೂ ಅದು ಹಾದು ಹೋಗುತ್ತಿದ್ದ ಕಡೆಯಲ್ಲಿ ಅದೇ ಹೆಸರೇ ಉಳಿದಿದೆ. ಕೆಲವು ಕಡೆ ಹಿಂದಿನ ಕಾಲದಲ್ಲಿ ಹೇಗಿತ್ತೋ ಹಾಗೇ ಕಟ್ಟಡಗಳನ್ನೂ ಉಳಿಸಿಕೊಂಡಿರುವುದೂ ಇದೆ.

ಇವತ್ತು ಬೆಳಿಗ್ಗೆ ಎಲ್ ಕಮೀನೋ ರಿಯಾಲ್ ನಲ್ಲಿ ಬರುತ್ತಿದ್ದಾಗ ನೀಲಿ ಆಕಾಶ, ಬಾನಿನಲ್ಲಿರುವ ತೆಳು ಬಿಳಿ ಮೋಡಗಳು, ರಸ್ತೆಯ ತುದಿಯಲ್ಲೇ, ಇನ್ನೇನು ಇಲ್ಲೇ ಬಂದುಬಿಟ್ಟಿತು ಅನ್ನುವಂತೆ ಕಾಣುವ (ಆದರೆ ಇಪ್ಪತ್ತೈದು ಮೈಲಿ ದೂರದಲ್ಲಿರುವ) ೪೦೦೦ ಅಡಿ ಎತ್ತರದ ಹ್ಯಾಮಿಲ್ಟನ್ ಬೆಟ್ಟ. ಅದರ ತುದಿಯಲ್ಲಿರೋ ಕಂಡೂ ಕಾಣದಂತಿದ್ದ ಲಿಕ್ ವೇಧಶಾಲೆ - ಅದರ ಜೊತೆಗೆ ಕೈಲಿರುವ ಮೊಬೈಲ್ ಫೋನ್ ಎಲ್ಲ ಸೇರಿ ಇಲ್ಲಿ ಹಾಕಿರುವ ಈ ಚಿತ್ರ ಕ್ಲಿಕ್ಕಿಸಿದ್ದಾಯಿತು.
ಯುಎಸ್ಎಯ ಅರೆವಾಸಿ ರಾಜ್ಯಗಳೆಲ್ಲ ಮೂರ್ನಾಲ್ಕು ದಿನದಿಂದ ಎಂಟು ಹತ್ತು ಇಪ್ಪತ್ತು ಇಂಚು ಹಿಮದ ಅಡಿಯಲ್ಲಿ ನಲುಗುತ್ತಿರುವಾಗ, ನಮಗೆ ಎಳೆಬಿಸಿಲನ್ನು ದಯಪಾಲಿಸಿರುವ ವರುಣನಿಗೆ ಒಂದು ನಮಸ್ಕಾರವನ್ನೂ ಹಾಕಿದ್ದಾಯಿತು ಅನ್ನಿ!

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?