ಕನ್ನಡಿಗರು ಓದಬೇಕಾದ ಎರಡು ಪುಸ್ತಕಗಳು

ದೇಶ ಸುತ್ತು - ಕೋಶ ಓದು ಅನ್ನೋ ಮಾತಿದೆ. ನಾಲ್ಕು ಊರು ನೋಡಿ, ತರಹೇವಾರಿ ಜನರನ್ನು ನೋಡಿ ಅವರ ನಡೆ ನುಡಿಯಿಂದ ಬೇಕಾದಷ್ಟು ಕಲಿಯಬಹುದು. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆಯಾಗುವ ಸಾಧ್ಯತೆ ಇದ್ದೇ ಇದೆ. ಮತ್ತೆ ಬಗೆ ಬಗೆತ ಪುಸ್ತಕಗಳನ್ನ ಓದಿ ನಮ್ಮ ಅರಿವಿನ ಹರಹನ್ನು ಹಿರಿದಾಗಿಸಿಕೊಳ್ಳಬಹುದು ಅನ್ನುವುದು ಈ ಮಾತಿನ ಸಾರಾಂಶ.

ಒಂದು ವಿಷಯದಲ್ಲಿ ನಮ್ಮ ತಿಳಿವು ಹೆಚ್ಚಬೇಕಾದರೆ ಅದರ ಹಲವಾರು ಮಗ್ಗುಲುಗಳನ್ನೂ ನೋಡುವುದು ಒಳ್ಳೆಯದು. ಇಲ್ಲದಿದ್ದರೆ, ನಮ್ಮ ತಿಳಿವೂ ನಾಲ್ಕು ಜನ ಕುರುಡರು ಆನೆಯ ಸ್ವರೂಪವನ್ನು ವಿವರಿಸಿದ ರೀತಿ ಆಗುವ ಭಯವೂ ಇದ್ದೇ ಇದೆ. ನಾನು ಸಾಕಿದ ಮೊಲಕ್ಕೆ ಮೂರೇ ಕೊಂಬು ಎಂದು ವಿತಂಡವಾದ ಮಾಡುವವರನ್ನು ನೋಡಿದಾಗಲೆಲ್ಲ ನನಗೆ ಈ ಕಥೆ ನೆನಪಾಗುತ್ತಲೇ ಇರುತ್ತದೆ.

ಇವತ್ತು ಹಳೇಸೇತುವೆಯಲ್ಲಿ ಫೆಬ್ರವರಿ ಹದಿನಾಲ್ಕಕ್ಕೆ ಅನುಕರಣೆಯ ಆಚರಣೆಗಳ ಬದಲು, ಒಂದೋ ಎರಡೋ ಬದುಕಿನ ಅರ್ಥವನ್ನು ತಿಳಿಸುವ ಪುಸ್ತಕಗಳನ್ನು ಕೊಳ್ಳಿ ಅಂತಓದಿದಾಗ, ನಾನು ಓದಿದ, ಮತ್ತೆ ಕನ್ನಡ ನುಡಿ- ಕನ್ನಡ ನಾಡುಗಳ ಹಿನ್ನೆಲೆ ಬಗ್ಗೆ ಆಸಕ್ತಿ ಇರುವ ಎಲ್ಲ ಕನ್ನಡಿಗರೂ ಓದಬೇಕಾದ ಎರಡು ಪುಸ್ತಕಗಳ ಬಗ್ಗೆ ಹೇಳಬೇಕೆನಿಸಿತು:

ಮೊದಲನೆಯದು ಸೇಡಿಯಾಪು ಕೃಷ್ಣ ಭಟ್ಟರ ವಿಚಾರ ಪ್ರಪಂಚ.

ಸೇಡಿಯಾಪು ಕೃಷ್ಣಭಟ್ಟರು ಹಲವಾರು ಸಾಹಿತ್ಯ ಸಂಚಿಕೆಗಳಲ್ಲಿ ಬರೆದ ಬರಹಗಳು, ಹಲವೆಡೆ ಮಾಡಿದ ಭಾಷಣಗಳು ಇದರಲ್ಲಿವೆ.


ಕೃಷ್ಣಭಟ್ಟರು ಹಲವು ಭಾಷೆಗಳಲ್ಲಿ ವಿದ್ವಾಂಸರು. ಕನ್ನಡ, ತುಳು, ಸಂಸ್ಕೃತ ಮೊದಲಾಗಿ. ದಕ್ಷಿಣ ಕನ್ನಡ ಜಿಲ್ಲೆಯವರಾದ್ದರಿಂದ, ಮಲೆಯಾಳ, ಕೊಂಕಣಿಗಳ ಸಂಸರ್ಗವೂ ಇವರಿಗೆ ಇದ್ದಿರಬಹುದು. ಹೀಗಾಗಿ ಕನ್ನಡ ನಾಡು ನುಡಿಯಬಗ್ಗೆ ಇವರ ವಿದ್ವತ್ಪೂರ್ಣವಾದ ಸಂಶೋಧನಾ ಲೇಖನಗಳನ್ನು ಓದುವುದೇ ಒಂದು ಸುಂದರ ಅನುಭವ. ಒಳಗೆ ಏನು ಸಿಗಬಹುದು ಅಂತ ತೋರುವುದಕ್ಕೆ, ಪರಿವಿಡಿಯ ಒಂದು ಪುಟವನ್ನು ಇಲ್ಲಿ ನೋಡಿ:
ನಿಮಗೆ ನಾನು ಶಿಫಾರಸ್ಸು ಮಾಡುತ್ತಿರುವ ಇನ್ನೊಂದು ಪುಸ್ತಕ ಇದು. ತೀನಂಶ್ರೀ ಅವರ ಸಮಗ್ರ ಗದ್ಯ. ಇದೂ ಕೂಡ ಅವರು ಬರೆದ ಬೇರೆ ಬೇರೆ ಬಿಡಿ ಬರಹ ಭಾಷಣಗಳ ಸಂಗ್ರಹ. ಇನ್ನು ಈ ಪುಸ್ತಕವನ್ನು ನಾನು ಹೇಳುತ್ತಿರುವುದಕ್ಕೂ ಕಾರಣಗಳು ಅವೇನೇ ಡಿಟೊ ಡಿಟೋ. ಕನ್ನಡ ನಾಡು ನುಡಿಗೆ ಸಂಬಂಧಿಸಿದ ಹಲವಾರು ಹೊಳಹುಗಳನ್ನು ಕೊಡುವಂತಹ ಸಂಗ್ರಹ ಇದು ಕೂಡ. ನಾವೆಲ್ಲ ಓದಬೇಕಾದ ಹಲವಾರು ಬರಹಗಳು ಇಲ್ಲಿವೆ.

ಈ ಎರಡೂ ಪುಸ್ತಕಗಳು ಬಿಡಿ ಬರಹಗಳದ್ದಾದ್ದರಿಂದ, ಯಾವುದೋ ಕೈಗೆ ಸಿಕ್ಕಿದ ಪುಟವನ್ನು ತೆಗೆದು ಓದತೊಡಗಿದರೂ ಸೊಗಸಾಗಿರುತ್ತೆ ಅನ್ನುವುದು ಒಂದು ಮಾತು. ಮತ್ತೆ ನಮಗೆ ತಿಳಿದಿಲ್ಲದ ಹೊಸವಿಷಯಗಳನ್ನು ತಿಳಿದ ಸಂತೋಷವೂ ಸಿಗುತ್ತದೆ ಅನ್ನುವುದು ಇನ್ನೊಂದು ಮಾತು.

ಅರೆಬೆಂದ ಮಡಿಕೆಗಳ ಸದ್ದೇ ಜೋರಾಗಿರುವ ಈ ಕಾಲದಲ್ಲಿ, ಸೇಡಿಯಾಪು ಕೃಷ್ಣ ಭಟ್ಟರ, ಮತ್ತೆ ತೀನಂಶ್ರೀಕಂಠಯ್ಯನವರಂತಹ ತುಂಬಿಯೂ ತುಳುಕದಂತಹ ಕೊಡಗಳ ವಿಚಾರವನ್ನು ನಾವು ಅರಿಯುವುದು ನಮಗೇ ಒಳಿತು ಅಂತ ನನ್ನೆಣಿಕೆ. ಇನ್ಯಾಕೆ ತಡ? ನಿಮ್ಮ ಪುಸ್ತಕದ ಅಂಗಡೀಲಿ ವಿಚಾರಿಸ್ತೀರಲ್ಲ, ಈ ಪುಸ್ತಕಗಳು ಸಿಗುತ್ತವೆಯೋ ಅಂತ?

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?