ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....

ಮೈಸೂರು ಮಲ್ಲಿಗೆಯ ಸೊಗಸನ್ನು ತಮ್ಮ ಕವಿತೆಗಳ ಮೂಲಕ ಕನ್ನಡಿಗರಿಗೆ ಕೊಟ್ಟ ಕೆ.ಎಸ್.ನರಸಿಂಹಸ್ವಾಮಿಯವರಿಗೆ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಅದೇ ಕೋಟಿ ರೂಪಾಯಿ ಅನ್ನೋದು ನಮ್ಮೆಲ್ಲರಿಗೂ ಗೊತ್ತು. ಮೈಸೂರು ಅನಂತ ಸ್ವಾಮಿಯವರಿಗೂ ಹಾಗೇ ಇದ್ದಿರಬೇಕು ಅನ್ನಿಸುತ್ತೆ. ಇಲ್ಲದಿದ್ದರೆ, ಅವರಿಗೆ ಆ ಹಾಡನ್ನು, ಅಷ್ಟು ಚೆನ್ನಾಗಿ ಹಾಡಲು ಸಾಧ್ಯವೇ ಆಗುತ್ತಿರಲಿಲ್ಲ ಅನ್ನುವುದು ನನ್ನ ಅಭಿಪ್ರಾಯ. ನಾನೂ ಅವರಂತೆ ಒಂದು ಹೊಸ ಕವಿತೆ ಬರೆಯೋಣವೆಂದು ನೋಡಿದ್ದೇನೆ. ಆದರೆ, ನಾನು ಕೆ.ಎಸ್.ನ. ಅವರಂತೆ ಕವಿಯಾಗಲಿಲ್ಲವೇ? ನನಗೆ ಅನ್ನಿಸೋ ತರಹ, ನನ್ನಂತೆ ಎಷ್ಟೋ ಜನಗಳಿಗೂ ಅದೇ ಭಾವನೆಯಿದ್ದರೂ, ಇದೇ ಸಮಸ್ಯೆಯ ಕಾರಣ ಆ ರೀತಿ ಹೊಸ ಪದ್ಯಗಳನ್ನು ಹಾಡಿಲ್ಲ ಅಂತ ಕಾಣುತ್ತೆ. ಇದು ಒಂದು ತರಹ ಒಳ್ಳೆಯದೇ ಆಯಿತು. ಇಲ್ಲದಿದ್ದರೆ, ಮೈಸೂರ ಮಲ್ಲಿಗೆಗೆ ಅದಕ್ಕೆ ತಕ್ಕಷ್ಟು ಪ್ರಖ್ಯಾತಿ ಬರುತ್ತಲೇ ಇರಲಿಲ್ಲವೇನೋ! ಶಾಂತಂ ಪಾಪಂ! ಅಂತಹ ದೊಡ್ಡ ಕವಿಗಳಿಗೆ ಎಷ್ಟು ಅನ್ಯಾಯವಾಗಿಬಿಡುತ್ತಿತ್ತು ಅಲ್ಲವೇ?

ಅದಿರಲಿ. ನರಸಿಂಹ ಸ್ವಾಮಿ ಅವರು ಹೀಗೆ ಹೊಗಳೋದಕ್ಕೂ, ಕವಿತೆ ಬರೆಯಲು ಬರದ ನಮ್ಮ ನಿಮ್ಮಂತಹವರು ಹೊಗಳಲು ಪ್ರಯತ್ನಿಸೋದಕ್ಕೂ, ಹೆಂಡತಿಯರ ಯಾವ ಗುಣ ಕಾರಣವಾಗಿರಬಹುದು? ನಿಜ ಹೇಳಬೇಕೆಂದರೆ, ಮನೆಯ ಒಡತಿ ಸರಿ ಇಲ್ಲದಿದ್ದರೆ, ಮನೆ ಮೂರಾಬಟ್ಟೆಯಾಗಿರುವ ಎಷ್ಟೋ ಸಂಸಾರಗಳಿವೆ. ಅಂದ ಹಾಗೆ, ಹೆಂಡತಿ ಎಂದರೆ ಹೆಣ್ಣು ಒಡತಿ ಅಂತಲೇ? ಒಡತಿ ಅಂದಮೇಲೆ ಹೆಣ್ಣೇ ಆಗಿರಬೇಕಲ್ಲ? ಹಾಗಾದರೆ, ಹೆಣ್ಣು ಒಡತಿ ಅಂತ ಹೇಳಬೇಕಾದ ಅವಶ್ಯಕತೆ ಏನಿದೆ? ಒಡತಿಯ ರೀತಿನೀತಿ ನೋಡಿ ಅನುಮಾನ ಪಡಬೇಡಿ ಅಂತಲೇ? ಇದನ್ನು ಯಾರಾದರೂ ವ್ಯಾಕರಣ ಚೆನ್ನಾಗಿ ತಿಳಿದವರನ್ನು ವಿಚಾರಿಸಬೇಕಷ್ಟೇ!

ಅದು ಹಾಗಿರಲಿ, ನಿಜ ಹೇಳಬೇಕೆಂದರೆ ದಾರಿತಪ್ಪುತ್ತಿದ್ದ ಗಂಡಸರನ್ನು ಸರಿದಾರಿಗೆ ತಂದವರು ಹಲವರು ಹೆಂಡಿರಾದರೆ, ಮತ್ತೆ ಸರಿಯಾದ ದಾರಿಯಲ್ಲೇ ಇದ್ದವರನ್ನು ಇನ್ನೂ ಸಾಧಕರನ್ನಾಗಿ ಮಾಡಿದವರು ಇನ್ನಷ್ಟು ಹೆಂಡಿರು. ಯಾವ ಕಲಾವಿದ, ಸಾಹಿತಿಯನ್ನು ತೆಗೆದುಕೊಂಡರೂ, ಅವರ ಯಶಸ್ಸಿನ ಹಿಂದೆ ಅವರವರ ಹೆಂಡತಿಯರ ಭಾರೀ ಕೈವಾಡವಿರುತ್ತೆ. ಹಿಂದೆ ಸಾಕ್ರೆಟಿಸ್ ಅದಕ್ಕೇ ಹೇಳಿದ್ದು ಅಂತ ಕಾಣುತ್ತೆ, - ಎಲ್ಲ ಗಂಡಸರೂ ಮದುವೆ ಆಗಲೇಬೇಕು. ಯಾಕಂದ್ರೆ, ಒಳ್ಳೇ ಹೆಂಡತಿ ಸಿಕ್ಕರೆ, ಜೀವನ ಉದ್ಧಾರ ಆಗುತ್ತೆ, ಕೆಟ್ಟ ಹೆಂಡತಿ ಸಿಕ್ಕರೆ ತನ್ನಂತೆ ತತ್ವ ಜ್ಞಾನಿ ಆಗಬಹುದು ಅಂದನಂತೆ, ಅವನು! ಅಂತೂ ಎಲ್ಲಾ ಹೆಂಡತಿಯರ ಮಹಿಮೆ ಅನ್ನೋದರಲ್ಲಿ ಅನುಮಾನವೇ ಇಲ್ಲ. ರಾಮಕೃಷ್ಣ ಪರಮಹಂಸ ಅವರ ಜೀವನದಲ್ಲಿ ಅವರ ಹೆಂಡತಿ ಶಾರದಾದೇವಿ ಅವರ ಪಾತ್ರ, ಮಹಾತ್ಮಾ ಗಾಂಧಿಯವರಿಗೆ ಹೆಜ್ಜೆ ಹೆಜ್ಜೆಯಲ್ಲೂ ನೆರಳಾಗಿದ್ದ ಕಸ್ತೂರಬಾ ಮೊದಲಾದವರ ವಿಷಯಗಳೆಲ್ಲ ನಾವು ಕೇಳಿ ತಿಳಿದವುಗಳೇ ಆಗಿದೆ.

ಆದಿಕವಿ ವಾಲ್ಮೀಕಿಯ ಕಥೆಯನ್ನೇ ತೆಗೆದುಕೊಳ್ಳೋಣ. ಮೊದಲು ಅವನು ಕಾಡುಮೇಡುಗಳಲ್ಲಿ ದಾರಿಹೋಕರ ತಲೆ ಒಡೆಯುವ ದರೋಡೆಕೋರನಾಗಿದ್ದನಂತೆ. ತಾನು ಮಾಡುತ್ತಿರುವುದೆಲ್ಲ ತನ್ನ ಹೆಂಡಿರುಮಕ್ಕಳಿಗಾಗಿ; ಹಾಗಾಗಿ, ತನ್ನ ಸಂಪಾದನೆಯಲ್ಲಿ ಅವರಿಗೆ ಹೇಗೆ ಪಾಲಿದೆಯೋ , ಹಾಗೇ ತನ್ನ ಪಾಪಕಾರ್ಯದಲ್ಲೂ ಅವರಿಗೆ ಪಾಲು ಇದ್ದೇ ಇದೆ ಎಂದು ಎಣಿಸಿದ್ದ ಪಾಪ! ಆದರೆ, ಒಮ್ಮೆ ಈ ವಿಷಯವಾಗಿ ಹೆಂಡತಿಯನ್ನು ಕೇಳಬೇಕಾಗಿ ಬಂತು . ಆ ಮಹಾತಾಯಿ ಗಂಡನಾಗಿದ್ದು ನೀನು ನಮ್ಮನ್ನು ಸಾಕುವುದು ನಿನ್ನ ಧರ್ಮ. ಹಾಗೆಂದು, ನೀನು ಸಿಕ್ಕಸಿಕ್ಕವರ ಕೊಲೆಮಾಡಿದರೆ, ಆ ಪಾಪವನ್ನೆಲ್ಲ ಅನುಭವಿಸಲು ನನ್ನದೇನು ಕರ್ಮ? ಎಂದು ಕೇಳೇಬಿಟ್ಟಳು. ಭ್ರಮೆಯಿಂದ ಮುಕ್ತನಾದ ಅವನು ತನ್ನ ಮೇಲೆ ಹುತ್ತವೇ ಬೆಳೆದುಕೊಳ್ಳುವಷ್ಟು ಭಾರೀ ತಪಸ್ಸು ಮಾಡಿ, ಮಹಾ ಜ್ಞಾನಿಯಾಗಿ ವಾಲ್ಮೀಕಿ ಅನ್ನುವ ಹೆಸರು ಪಡೆದ. ನಂತರ ರಾಮಾಯಣದಂತಹ ಮಹಾ ಕಾವ್ಯವನ್ನೂ ಬರೆದ. ಈಗ ನೋಡಿ, ಅವನ ಹೆಂಡತಿ ಅವನಿಗೆ ಬೇರೇನಾದರೂ ಉತ್ತರ ಕೊಟ್ಟಿದ್ದಿದ್ದರೆ, ರಾಮಾಯಣದಂತಹ ಕೃತಿ ನಮಗೆ ಸಿಗುತ್ತಿತ್ತೋ ಇಲ್ಲವೋ! ಅಲ್ಲವೇ? ಹೆಂಡತಿಯ ಮಹಿಮೆ ಈಗ ನಿಮಗೆ ಕಂಡಿತೋ ಇಲ್ಲವೋ?

ವಾಲ್ಮೀಕಿಯಿಂದ, ಸ್ವಲ್ಪ ನಮ್ಮ ಕಾಲದ ಕಡೆಗೆ ಬರೋಣ. ಹೆಂಡತಿಯಿಂದ ಭಾರೀ ಬದಲಾವಣೆ ಹೊಂದಿ, ಅದರಿಂದ ಕನ್ನಡ ಸಾಹಿತ್ಯಕ್ಕೂ, ಕರ್ನಾಟಕ ಸಂಗೀತಕ್ಕೂ ಅಸಾಮಾನ್ಯ ಕೊಡುಗೆ ಕೊಟ್ಟವರು ಪುರಂದರದಾಸರು. ಚಿನ್ನದ ವ್ಯಾಪಾರ ಮಾಡುತ್ತಿದ್ದ ಶ್ರೀನಿವಾಸ ನಾಯಕನನ್ನು ಪುರಂದರದಾಸರನ್ನಾಗಿ ಬದಲಾಯಿಸುವಲ್ಲಿ ಕೆಲಸಮಾಡಿದ, ಅವರ ಹೆಂಡತಿ ಸರಸ್ವತೀಬಾಯಿಯ ಮೂಗುತಿಯ ಕಥೆ ಎಲ್ಲರಿಗೂ ಗೊತ್ತು. ಇದರ ಸತ್ಯಾಸತ್ಯತೆಗಳನ್ನು ಬದಿಗಿಟ್ಟರೂ, ಹೆಂಡತಿಯೇ ತನ್ನ ಬದಲಾವಣೆಗೆ ಪ್ರಮುಖ ಕಾರಣವಾದದ್ದನ್ನು ಪುರಂದರ ದಾಸರೇ ಒಂದು ಕೀರ್ತನೆಯಲ್ಲಿ ಹೀಗೆ ಹೇಳುತ್ತಾರೆ:

ಪಲ್ಲವಿ:

ಆದದ್ದೆಲ್ಲ ಒಳಿತೆ ಆಯಿತು ನಮ್ಮ |
ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು ||

ಚರಣಗಳು:

ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಮಾಚಿ ನಾಚುತಿದ್ದೆ |
ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ ||

ಗೋಪಾಳ ಬುಟ್ಟಿ ಹಿಡಿಯುವುದಕ್ಕೆ ಭೂಪತಿಯಂತೆ ಗರ್ವಿಸುತಿದ್ದೆ |
ಆ ಪತ್ನೀ ಕುಲ ಸಾವಿರವಾಗಲಿ ಗೋಪಾಳ ಬುಟ್ಟಿ ಹಿಡಿಸಿದಳಯ್ಯ ||

ತುಳಸಿ ಮಾಲೆಯ ಹಾಕುವುದಕ್ಕೆ ಅರಸನಾಗಿ ನಾಚುತಿದ್ದೆ |
ಸರಸಿಜಾಕ್ಷ ಪುರಂದರ ವಿಠಲನು ತುಳಸಿ ಮಾಲೆ ಹಾಕಿಸಿದನಯ್ಯ ||

ಈ ರಚನೆಯಲ್ಲಿ ತಮಗೆ ಹರಿದಾಸನಾಗಲು ಪ್ರೇರೇಪಿಸಿ, ಸರಿದಾರಿಗೆ ಹಚ್ಚಿದ ತಮ್ಮ ಹೆಂಡತಿಯನ್ನು ಪುರಂದರದಾಸರು, ಆ ಪತ್ನೀ ಕುಲ ಸಾವಿರವಾಗಲಿ ಎಂದು ಮನಃಪೂರ್ತಿಯಾಗಿ ಸ್ಮರಿಸಿದ್ದಾರೆ. ಹೀಗಾಗಿ, ಮೂಗುತಿ, ಮುದುಕ ಬ್ರಾಹ್ಮಣನ ಕಥೆ ಏನೇ ಇರಲಿ, ಆಕೆ ತನ್ನ ಗಂಡನ ಮನಸ್ಸು ಹರಿದಾಸನಾಗುವ ಕಡೆ ಹರಿಸುವುದಕ್ಕೆ ಕಾರಣವಾದವರೆಂಬುದು ಖಂಡಿತ ಎಂದು ತಿಳಿಯುತ್ತದೆ. ಪುರಂದರ ದಾಸರು ಆ ಮಟ್ಟದಲ್ಲಿ, ಸಂಗೀತ ಹಾಗೂ ಸಾಹಿತ್ಯದಲ್ಲಿ ಸಾಧನೆ ಮಾಡಲು, ಅವರಿಗೆ ದಾಸರಾಗುವ ಮೊದಲಿನಿಂದಲೂ ಅವರಿಗೆ ಈ ವಿಷಯಗಳಲ್ಲಿ ತಕ್ಕ ಮಟ್ಟಿಗೆ ಪ್ರೌಢಿಮೆ ಇದ್ದು, ನಂತರ ಇದನ್ನೆ ಅವರು ಪ್ರಮುಖ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರಿಂದ ಸಾಧ್ಯವಾಯಿತು ಎಂದೇ ಅಂದುಕೊಳ್ಳೋಣ. ಹಾಗಿದ್ದರೂ, ವ್ಯಾಪಾರದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಿರಬಹುದಾದ ಅವರಿಗೆ, ಹೆಂಡತಿಯ ಪ್ರೇರೇಪಣೆ ತಮ್ಮ ವ್ಯಾಪಾರದಿಂದ ವಿಮುಖರಾಗಿ, ಹೊಸ ಹಾದಿಯನ್ನು ತುಳಿಯುವಂತೆ ಮಾಡಿದ್ದು ಕನ್ನಡಿಗರೆಲ್ಲರ ಭಾಗ್ಯ ಎನ್ನಬೇಕು.

ಈಗ ಇನ್ನೂ ಸಾವಿರ ವರ್ಷಗಳಷ್ಟು ಹಿಂದೆ ಹೋಗೋಣ. ಸಂಸ್ಕೃತ ಕವಿಗಳ ಮುಂಚೂಣಿಯಲ್ಲಿರುವವನು ಕಾಳಿದಾಸ. ವಾಲ್ಮೀಕಿ, ಪುರಂದರ ದಾಸರ ಹಾಗೆ, ಸಂಸ್ಕೃತದ ಮಹಾಕವಿ ಕಾಳಿದಾಸನೂ ಇಂತಹ ದಂತಕಥೆಯೊಂದಕ್ಕೆ ಪಕ್ಕಾದವನೇ. ಅಸಾಮಾನ್ಯವಾದ ಸಾಧನೆ ಮಾಡಿರುವವರ ಹಿಂದೆಲ್ಲ, ಅವರಿಗೆ ಅಮಾನುಷ ಶಕ್ತಿಗಳು ದೊರಕಿದ್ದವು ಎಂದು ಹೇಳುವ ಕಥೆಗಳು ಬಂದಿರುವುದು ನಮಗೆ ಈಗಾಗಲೇ ನೋಡಿ ಗೊತ್ತಿರುವ ಸಂಗತಿ.

ರಾಜಕುಮಾರಿಯೊಬ್ಬಳಂತೆ. ತನ್ನ ಮಗನನ್ನು ಮದುವೆಯಾಗೊಲ್ಲಳು ಎಂಬ ರೊಚ್ಚಿನಿಂದ, ಮಂತ್ರಿ ಏನೂ ಅರಿಯದ ಅವಿದ್ಯಾವಂತನೊಡನೆ ಅವಳ ಮದುವೆಯನ್ನು ಮೋಸದಿಂದ ಮಾಡುತ್ತಾನೆ. ಮದುವೆಯ ದಿನ ರಾತ್ರಿ ಗಂಡನನ್ನು ಏಕಾಂತದಲ್ಲಿ ಕಂಡ ರಾಜಕುವರಿ ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಎಂದು ಕೇಳುತ್ತಾಳೆ. ಏನಾದರೂ ಸೊಗಸಾಗಿರುವ ಮಾತಿದೆಯೇ? ಇದ್ದರೆ ಆಡು ಎಂಬರ್ಥದಲ್ಲಿ. ಗಂಡ ಬ್ಬೆಬ್ಬೆಬ್ಬೆ ಎಂದು ತಡವರಿಸುವುದನ್ನು ಕಂಡಾಗ ತಾನು ಮೋಸ ಹೋದದ್ದು ಅವಳಿಗೆ ಅರಿವಾಗುತ್ತದೆ. ಅವಳು ಗಂಡನನ್ನು ಕಾಳಿಯ ಗುಡಿಗೆ ಕಳಿಸಿ, ಅವಳಿಂದ ವಿದ್ಯಾಭಿಕ್ಷೆಯನ್ನು ಕೇಳಲು ಹೇಳುತ್ತಾಳೆ. ಕಾಳಿಯ ಕೃಪೆಗೆ ಪಾತ್ರನಾದ ಗಂಡ, ಹೆಂಡತಿಯನ್ನೂ ಮರೆತು, ದೇಶಾಂತರ ಹೋಗಿ ಕಾಳಿದಾಸನೆಂಬ ಹೆಸರಿನಲ್ಲಿ ಪ್ರಖ್ಯಾತನಾಗುತ್ತಾನೆ.

ಪಾಪ, ಕಾಳಿದಾಸನಿಗೆ ಹೆಂಡತಿಯೇ ಮರೆತು ಹೋದರೂ, ಅವಳು ಕೇಳಿದ ಪ್ರಶ್ನೆ ಕಿವಿಯಲ್ಲಿ ಗುಞ್ ಗುಡುತ್ತಿತ್ತೇನೋ! ಅದಕ್ಕೆ ಅವನು ಈ ಪದಗಳಿಂದಲೇ ಪ್ರಾರಂಭವಾಗುವ ಕಾವ್ಯಗಳನ್ನು ಬರೆದನಂತೆ. ಇದನ್ನು ನೋಡಿದರೆ, ಕಾಳಿದಾಸನ ಕೃತಿಗಳನ್ನು ನೋಡಿದ ನಂತರ, ಅದರ ಮೊದಲಲ್ಲಿ ಬರುವ ಪದಗಳನ್ನು ಉಪಯೋಗಿಸಿ, ರೋಮಾಂಚಕವಾದ ಕಥೆಯನ್ನು ಹೆಣೆಯಲಾಗಿದೆ ಎಂದು ನನ್ನ ಅನಿಸಿಕೆ. ಅದೇನೇ ಇರಲಿ, ಈ ಮೂರು ಶ್ಲೋಕಗಳನ್ನು ಇಲ್ಲಿ ನೋಡೋಣ.

ಕಾಳಿದಾಸನ ಕುಮಾರಸಂಭವ ಎಂಬ ಮಹಾಕಾವ್ಯ ಈ ಪದ್ಯದಿಂದ ಪ್ರಾರಂಭವಾಗುತ್ತದೆ:

ಅಸ್ತ್ಯುತ್ತರಸಸ್ಯಾಮ್ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ |
ಪೂರ್ವಾಪರೌ ತೋಯನಿಧೀವಗಾಹ್ಯಾ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ||

ಬಡಗು ದಿಕ್ಕಲಿ ಇಹ ದೇವತಾತ್ಮನವ
ಒಡೆಯ ಬೆಟ್ಟಂಗಳಿಗೆ ಹೆಸರೋ ಹಿಮಾಲಯ |
ಕಡಲೆರಡೂ ಕಡೆಯಲ್ಲು ಇರಿಸಿ ಮೊದಲು
ನಡುವೆ ತಾ ನಿಂತನು ಅಳತೆಗೋಲಿನ ತೆರದಿ || (ಅನುವಾದ ನನ್ನದು)

ಕಾಳಿದಾಸನಿಗೇನಾದರೂ ಆಕಾಶ ಯಾತ್ರೆ ಗೊತ್ತಿತ್ತೇ? ಇಲ್ಲದಿದ್ದರೆ, ಉತ್ತರದಿಕ್ಕಿನಲ್ಲಿ ಹಿಮಾಲಯವೆಂಬ ಪರ್ವತಗಳ ರಾಜನಿದ್ದಾನೆ. ಎರಡೂ ಕಡೆ (ತುದಿಯಲ್ಲೂ) ಸಮುದ್ರಗಳಿರುವ ಇವನು, ಭೂಮಿಗೇ ಅಳತೆಗೋಲಿನಂತಿದ್ದಾನೆ ಎಂಬ ಕಲ್ಪನೆಯನ್ನು ಹೇಗೆ ಮಾಡಿದನೋ ಅವನು? ಗಗನದಿಂದ, ಹಿಮಾಲಯ ಹೇಗೆ ಕಾಣುತ್ತದೆ ಎಂಬುದನ್ನು ಅವನು ಗೂಗಲ್ ಅರ್ತ್ ನಲ್ಲೇನಾದರೂ ನೋಡಿದ್ದನೇ? ಈ ಬಗೆಯ ಕಲ್ಪನೆ,ಭೂಮಿಯನ್ನು ಅಳೆಯುವ ಅಳತೆಗೋಲು ಎಂಬಂತಹ ಉಪಮೆಗಳಿಂದಲೇ ಅವನು ಉಪಮಾಲೋಲನೆಂಬ ಹೆಸರು ಗಳಿಸಿದ್ದಾನೆ.

ಇನ್ನು ಮೇಘದೂತದ ಮೊದಲ ಶ್ಲೋಕ ನೋಡೋಣ:

ಕಶ್ಚಿತ್ ಕಾಂತಾ ವಿರಹ ಗುರುಣಾ ಸ್ವಾಧಿಕಾರಾತ್ ಪ್ರಮತ್ತಃ
ಶಾಪೇಣ ಅಸ್ತಂಗಮಿತ ಮಹಿಮಾ ವರ್ಷ ಭೋಗ್ಯೇಣ ಭರ್ತುಃ |
ಯಕ್ಷಶ್ಚಕ್ರೇ ಜನಕ ತನಯಾ ಸ್ನಾನ ಪುಣ್ಯೋದಕೇಷು
ಸ್ನಿಗ್ಧಃ ಛಾಯಾ ತರುಷು ವಸತಿಂ ರಾಮಗಿರ್ಯಾಶ್ರಮೇಷು ||

ಒಬ್ಬ ಯಕ್ಷ ತನ್ನೊಡೆಯನಿಂದ ನಲ್ಲೆಯನು ಅಗಲಿ ಬೆಂದು
ಶಪಿತ ವರುಷವನು ಕಳೆಯಲಾಗದೆ ಮಹಿಮೆ ಕಳೆದುಕೊಂಡು |
ಜನಕತನಯೆ ಮಿಂದುದುದಕಗಳಲಿ ತಣ್ಣೆಳಲ ಅಂಗಳಲ್ಲಿ
ವಸತಿ ನಿಂದನೋ ರಾಮಗಿರಿಯ ಪುಣ್ಯಾಶ್ರಮಂಗಳಲ್ಲಿ || (ವರಕವಿ ದ.ರಾ.ಬೇಂದ್ರೆ ಅವರ ಅನುವಾದ)

ಯಕ್ಷನೊಬ್ಬ ತಾನು ಮಾಡಿದ ತಪ್ಪಿಗಾಗಿ, ಯಕ್ಷಲೋಕದ ಅಲಕಾವತಿಯಿಂದ ಗಡೀಪಾರಾಗಿ, ಸೀತೆ ತನ್ನ ವನವಾಸಕಾಲದಲ್ಲಿ ವಾಸಿಸಿದ್ದ ವಿಧರ್ಭದ ರಾಮಗಿರಿಗೆ ಹೋಗಬೇಕಾಯಿತಂತೆ. ಈ ಯಕ್ಷನೂ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ತನಗದೆ ಕೋಟಿ ರುಪಾಯಿ ಎಂದು ಹಾಡುವವರ ಜಾತಿಯೇ! ತನ್ನ ಪ್ರಿಯತಮೆಗೆ ತನ್ನ ಸಂದೇಶವನ್ನು ತಿಳಿಸಲು ಇನ್ನಾರೂ ಸಿಗದೆ, ಮುಂಗಾರಿನ ಮೋಡವನ್ನೆ ಬಳಸಿಕೊಂಡನಂತೆ. ಗೂಗಲ್ ಅರ್ತ್ ಪರಿಚಯವಿಲ್ಲದಿದ್ದರೂ, ಭಾರತ ದೇಶದ ಮೂರುಸುತ್ತೂ ಚೆನ್ನಾಗಿ ಅರಿತಿದ್ದ ಕಾಳಿದಾಸ. ವಿದರ್ಭದ ರಾಮಗಿರಿ (ಈಗಿನ ರಾಮ್‌ಟೆಕ್, ಮಹಾರಾಷ್ಟ್ರ) ದಿಂದ ಹಿಮಾಲಯದ ಅಲಕಾಪುರಿಗೆ ಹೋಗುವ ದಾರಿಯನ್ನು ಅವನು ಮೇಘದೂತದಲ್ಲಿ ಚೆನ್ನಾಗಿ ವರ್ಣಿಸುತ್ತಾನೆ.

ಇನ್ನು ಕೊನೆಯದು ಅವನ ರಘುವಂಶ. ಅದರ ಮೊದಲ ಪದ್ಯ ಹೀಗಿದೆ:

ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||

ನಾ ತಲೆವಾಗುವೆ ಶಿವಶಿವೆಗೆ
ಈ ಜಗದಲೆಲ್ಲರ ಹೆತ್ತವರ |
ಬಿಡದೊಡಗೂಡಿಯೆ ಇಹರಲ್ಲ!
ಮಾತಲಿ ಹುರುಳು ಬೆಸೆದಂತೆ || (ಅನುವಾದ ನನ್ನದು)

ಮಾತು ಮತ್ತು ಅರ್ಥದಂತೆ ಸದಾ ಜೊತೆಯಾಗಿರುವ ಪಾರ್ವತೀಪರಮೇಶ್ವರರನ್ನು ಸ್ಮರಿಸುವ ಈ ಪದ್ಯವೇ ಸೂಚಿಸುತ್ತಿದೆ - ಅರ್ಥವಿಲ್ಲದೇ ಮಾತಿಗೆ ಬೆಲೆಯಿಲ್ಲ, ಅಂತೆಯೇ ಪಾರ್ವತಿಯಿಲ್ಲವೇ ಪರಮೇಶ್ವರನಿಗೂ ಬೆಲೆಯಿಲ್ಲ ಎಂದು! ದೇವಾನುದೇವತೆಗಳಿಗೇ ಹೆಂಡತಿಯಿಲ್ಲದೆ ಬೆಲೆಯಿಲ್ಲದಿರುವಾಗ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ ಎಂದು ನರಸಿಂಹಸ್ವಾಮಿಯವರು ಹೇಳಿದ್ದರಲ್ಲಿ ಆಶ್ಚರ್ಯವೇನಿದೆ? ಶಿವನೂ ಬಹುಶಃ ಹೀಗೇ ಕವಿತೆಗಳನ್ನು ಹಾಡಿರಬಹುದು ಅನ್ನುವ ಸಂಶಯ ನನ್ನದು. ಆದರೆ, ಗಣಪ ಬರೆದುಕೊಳ್ಳದೇ ಹೋಗಿರಬಹುದು. ಯಾಕಂದ್ರೆ, ಅವನು ವ್ಯಾಸರ ಮಹಾಭಾರತ ಬರೆಯೋದಕ್ಕೆ ಹೋಗಿದ್ದನಲ್ಲ? ಅಥವಾ, ತನ್ನ ಹೆಂಡತಿಯರಾದ ಸಿದ್ಧಿ ಬುದ್ಧಿಯರನ್ನು ಹಿಂಬಾಲಿಸಿ ಹೋಗಿದ್ದನೋ ಏನೋ ನಾ ಕಾಣೆ!

ಆದ್ರೆ, ಈಗ ತಾನೇ ನೋಡಿದೆವಲ್ಲ? ಹುರುಳಿಲ್ಲದ ಮಾತಿಗೆ ಬೆಲೆಯಿಲ್ಲ ತಾನೇ? ಹಾಗಾದರೆ, ಅರ್ಥವನ್ನು ಕಳೆದುಕೊಳ್ಳುವ ಮೊದಲು, ನನ್ನ ಮಾತನ್ನು ಇಲ್ಲಿಗೇ ಮುಗಿಸುವುದೊಳಿತು !

-ಹಂಸಾನಂದಿ

(೨೦೦೮ ರ ಫೆಬ್ರವರಿ ೧೪ರಂದು ದಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟವಾಗಿದ್ದ ಬರಹ ಇದು)

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?