ಠಾ ಠಂ ಠ ಠಂ ಠಂ ಠ ಠ ಠಂ ಠ ಠಂ ಠಃ

ಭೋಜರಾಜನ ಬಗ್ಗೆಯೂ ಹೊರಟಿರುವ ಗದ್ದಲದ ಬಗ್ಗೆ ಸುನಾಥರ ಸಲ್ಲಾಪದಲ್ಲಿ ಓದಿದಾಗ ಕಾಳಿದಾಸ-ಭೋಜರಾಜರ ಹೆಸರು ನೆನಪಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಚಮತ್ಕಾರದ ಪದ್ಯಗಳಿಗೆ, ಸಮಸ್ಯಾ ಪೂರಣಕ್ಕೆ ಬಂದಾಗ ಮೊದಲು ನೆನಕೆಗೆ ಬರುವುದು ಕಾಳಿದಾಸ-ಭೋಜರಾಜ ಈ ಜೋಡಿಯ ಹೆಸರೇ. ಭೋಜರಾಜನಿಗೆ ಆಗಾಗ್ಗೆ ವಿಚಿತ್ರ ಪ್ರಶ್ನೆಗಳನ್ನು ಕೇಳುವುದೇ ಕೆಲಸ. ಮತ್ತೆ ಅವುಗಳನ್ನು ಕಾಳಿದಾಸನಲ್ಲದೇ ಬೇರಾರಿಗೂ ಬಿಡಿಸಲಾಗದಿರುವುದೂ ಶತಸ್ಸಿದ್ಧ. ಅದರಲ್ಲೋ , ಭೋಜರಾಜ ಸುಮ್ಮನೆ ವಿಚಿತ್ರ ಪ್ರಶ್ನೆಗಳನ್ನು ಕೇಳುವುದೇ ಹೆಚ್ಚು.

ಹೀಗೆ ಒಂದು ದಿನ ಅವನು ಕೊಟ್ಟ ಸಾಲು: "ಠಾ ಠಂ ಠ ಠಂ ಠಂ ಠ ಠ ಠಂ ಠ ಠಂ ಠಃ ". ಅರ್ಥವಿಲ್ಲದ ಇಂತಹ ಒಂದು ಸಾಲನ್ನು ಇದನ್ನು ಬಳಸಿ ಪದ್ಯವೊಂದನ್ನು ಬರೆಯಬೇಕು. ಸುಲಭದ ಮಾತೇ? ಸಭೆಯಲ್ಲಿ ಯಾರಿಗೂ ಆಗಲಿಲ್ಲ. ಆದರೇನು? ಕಾಳಿದಾಸ ಇದ್ದಾನಲ್ಲ! ಅವನು ಈ ಪ್ರಶ್ನೆಯನ್ನು ಬಿಡಿಸಿದ್ದು ಹೀಗೆ:

ರಾಮಾಭಿಷೇಕೇ ಜಲಮಾಹರಂತ್ಯಾಃ
ಹಸ್ತಾಚ್ಚ್ಯುತೋ ಹೇಮಘಟೋ ಯುವತ್ಯಾಃ |
ಸೋಪಾನಮಾಸಾದ್ಯ ಕರೋತಿ ಶಬ್ದಂ
ಠಾ ಠಂ ಠ ಠಂ ಠಂ ಠ ಠ ಠಂ ಠ ಠಂ ಠಃ ||

रामाभिषेके जलमाहरान्त्याः
हस्ताच्च्युतो  हेमघटो युवत्याः |
सोपानमासाद्य करोति शब्दम्
ठा ठं ठ ठं ठं ठ ठ ठं ठ ठं ठः ||

ಹಾಗಂದರೆ ಏನಂತೀರಾ? ನನ್ನ ಕನ್ನಡ ಅನುವಾದ ಓದಿ:

ರಾಮನಭಿಷೇಕಕ್ಕೆ ನೀರನ್ನು ತರುತಿರುವ
ಯುವತಿಯು ಕೈಯಿಂದ ಬಿಂದಿಗೆಯು ಬಿದ್ದಾಗ
ಮೆಟ್ಟಿಲಿನ ಮೇಲುರುಳಿ ಮಾಡಿತದು ಸದ್ದು
ಠಾ ಠಣ್ ಠ ಠಣ್ ಠಣ್ ಠ ಠ ಠಣ್ ಠಣಿರೆಂದು

ಆಹಾ ಓಹೋ - ಕಾಳಿದಾಸ ಅದೆಂತಹ ಚಮತ್ಕಾರೀ ಕವಿ ಅಂತ ಮೂಗಿನ ಮೇಲೆ ಬೆರಳಿಟ್ಟಿರಾ? ನಿಲ್ಲಿ ಸ್ವಾಮೀ! ಇದನ್ನು ಎಳೆ ಎಳೆಯಾಗಿ ಬಿಡಿಸಿ ನೋಡೋಣ:

೧) ಭೋಜರಾಜ ಇದ್ದಿದ್ದು ಸುಮಾರು ಕ್ರಿ.ಶ.೧೦೦೦ದ ಆಚೀಚೆ ಅನ್ನುವುದಕ್ಕೆ ಬಹಳ ಸಾಕ್ಷಿಗಳಿವೆ. ಆಸಕ್ತಿ ಇದ್ದವರು ವಿಕಿಪೀಡಿಯಾ ಓದಬಹುದು.

೨) ಕಾಳಿದಾಸ ಇದ್ದಿದ್ದು ಇಂತಹದ್ದೇ ಕಾಲದಲ್ಲಿ ಅಂತ ಹೇಳಲು ಇನ್ನೂ ಸಾಧ್ಯವಾಗಿಲ್ಲವಾದರೂ, ಅವನು ಕ್ರಿ.ಶ್.೬೩೪ಕ್ಕೆ ಮೊದಲೇ ದೇಶದ ಉದ್ದಗಲಕ್ಕೂ ಪ್ರಖ್ಯಾತಿ ಪಡೆದಿದ್ದ ಅನ್ನುವುದು ಶತಸ್ಸಿದ್ಧ. ಐಹೊಳೆಯ ಮೇಗುತಿ ಗುಡಿಯಲ್ಲಿರುವ ರವಿಕೀರ್ತಿಯ ಶಾಸನವೇ ಇದಕ್ಕೆ ಪ್ರಮುಖ ಪುರಾವೆ.ಐಹೊಳೆಯ ರವಿಕೀರ್ತಿಯ ಶಾಸನ - ಚಿತ್ರ ಕೃಪೆ: ವಿಕಿಪೀಡಿಯಾ

ಕನ್ನಡ ಲಿಪಿಯಲ್ಲಿ, ಸಂಸ್ಕೃತ ಭಾಷೆಯಲ್ಲಿ ಇರುವ ಈ ಶಾಸನದ ಕಡೆಯ ಪದ್ಯದಲ್ಲಿ ಶಾಸನಕಾರ ರವಿಕೀರ್ತಿ ತನ್ನ ಕೀರ್ತಿಯನ್ನು ಕಾಳಿದಾಸ ಭಾರವಿಗಳಿಗೆ ಹೋಲಿಸಿಕೊಂಡಿದ್ದಾನೆ (ಸಃ ವಿಜಯತು ರವಿಕೀರ್ತಿಃ ಕಾಳಿದಾಸ ಭಾರವಿಕೀರ್ತಿ: ಎಂದೇನೋ ಬರುತ್ತದೆ. ಪದ್ಯದ ಪೂರ್ಣ ಪಾಠ ಈಗ ಸಿಗುತ್ತಿಲ್ಲ).

೧ ಮತ್ತು ೨ ನ್ನು ಒಟ್ಟಿಗೆ ನೋಡಿದಾಗ ಏನು ಹೇಳಬಹುದು?

ಕಾಳಿದಾಸ ಮತ್ತೆ ಭೋಜ ಇವರಿಬ್ಬರು ಇದ್ದಿದ್ದೂ ನಿಜ. ಆದರೆ ಕಾಳಿದಾಸ ಮತ್ತು ಭೋಜ ಒಟ್ಟಿಗೇ ಇರಲು ಸಾಧ್ಯವೇ ಇಲ್ಲ!

ಅಂದರೆ ಈ ಪದ್ಯ ಬರೆದಿದ್ದು ಕಾಳಿದಾಸನೇ? ಗೊತ್ತಿಲ್ಲ. ಇರಬಹುದು. ಇಲ್ಲದೆಯೂ ಇರಬಹುದು. ಬೇರೆ ಯಾರೋ ಬರೆದು ಕಾಳಿದಾಸನ ಹೆಸರಿಗೆ ಅಂಟಿಸಿರಲೂಬಹುದು.

ಹಾಗಾದ್ರೆ, ರಾಜಣ್ಣಾವ್ರ ’ಕವಿರತ್ನ ಕಾಳಿದಾಸ’ ಚಿತ್ರವನ್ನ ಏನು ಮಾಡೋದು?

ಒಳ್ಳೇ ಹಾಡು, ನಟನೆಗೋಸ್ಕರ ನೋಡಿ ಆನಂದಿಸಬಹುದು. ಆದರೆ, ಅದನ್ನೇ ಚರಿತ್ರೆ ಅಂದ್ಕೋಬಾರದು. ಅಷ್ಟೇ!

-ಹಂಸಾನಂದಿ

ಕೊ: ಅಂದಹಾಗೆ ರವಿಕೀರ್ತಿಯ ಶಾಸನ ಇನ್ನೂ ಒಂದು ದೃಷ್ಟಿಯಲ್ಲಿ ಬಹಳ ಮಹತ್ವಪೂರ್ಣ. ’ಕಲಿಯುಗ’ ಮೊದಲಾದದ್ದು ಕ್ರಿ.ಪೂ. ೩೧೦೨ ಅನ್ನುವ ತೀರ್ಮಾನಕ್ಕೆ ಬರಲಿಕ್ಕೆ ಒಂದು ಮುಖ್ಯ ಆಧಾರ ಇದೇನೇ. ಹಾಗಾಗಿ ಇದಕ್ಕೆ ಜ್ಯೋತಿಶ್ಶಾಸ್ತ್ರದಲ್ಲೂ (astronomy) ಮುಖ್ಯ ಸ್ಥಾನವಿದೆ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ