ಪಹಾಡಿ

ನಮ್ಮ ಸಂಗೀತದಲ್ಲಿ ರಾಗಗಳ ಹೆಸರುಗಳನ್ನು ಹುಡುಕುವುದೂ ಒಮ್ಮೊಮ್ಮೆ ನದೀಮೂಲ ಹುಡುಕಿದಷ್ಟೇ ಕಷ್ಟ. ರಾಗಗಳಿಗೂ, ಅವುಗಳು ನಮ್ಮಲ್ಲಿ ಉಂಟು ಮಾಡುವ ಭಾವನೆಗಳಿಗೂ ಯಾವ ನೇರ ಸಂಬಂಧವೂ ಇಲ್ಲ. ಕೆಲವು ರಾಗಗಳು ದೇವ ದೇವಿಯರ ಮೇಲೆ ಹೆಸರಿದ್ದರೆ, ಕೆಲವು ಪ್ರಾಣಿ ಪಕ್ಷಿಗಳ ಮೇಲೆ. ಇನ್ನು ಕೆಲವಕ್ಕೆ ಯಾವ ಅರ್ಥವೂ ತೋರುವುದೂ ಇಲ್ಲ. ಒಂದೇ ರೀತಿಯ ಹೆಸರುಳ್ಳ ರಾಗಗಳಿಗೆ ಹೋಲಿಕೆ ಇರಬೇಕೆಂಬುದೂ ಇಲ್ಲ. ಒಟ್ಟಿನಲ್ಲಿ ಒಂದು ರಾಗಕ್ಕೆ ಇಂತಹದ್ದೇ ಹೆಸರೇಕೆ ಬಂತು ಅನ್ನುವುದನ್ನು ಹೇಳುವುದು ಕಷ್ಟವೇ.

ಆದರೆ ಕೆಲವು ರಾಗಗಳ ಹೆಸರನ್ನು ನೋಡಿದಾಗ ಮಾತ್ರ ಅವು ಮೊದಲಿಗೆ ಎಲ್ಲಿಂದ ಬಂದವು ಎನ್ನುವುದನ್ನು ತೋರುತ್ತವೆಯೋ ಎಂದು ಊಹಿಸಬಹುದು. ಕನ್ನಡ, ಕಾನಡಾ, ಕನ್ನಡಗೌಳ, ಕನ್ನಡಬಂಗಾಳ, ಸಿಂಧುಕನ್ನಡ, ಗುರ್ಜರಿ, ಗೌಳ(ಗೌಡ), ಗೌಡಮಲ್ಹಾರ್, ಬಂಗಾಳ, ಸೌರಾಷ್ಟ್ರ, ಸುರುಟಿ, ಸೋರಟ್ ಇತ್ಯಾದಿ ಹಲವಾರು ದೇಶವಾಚಕ ರಾಗಗಳಿವೆ. ಹಾಗೇ ಹೊರದೇಶಗಳಿಂದ ಬಂದಿರುವಂತಹ ಯಮನ್/ಕಲ್ಯಾಣಿ (ಎಮನ್), ಹೆಜ್ಜುಜ್ಜಿ ( ಹಿಜಾಜ್) ಮೊದಲಾದ ರಾಗಗಳೂ ಇವೆ. ಮತ್ತೆ ಕೆಲವು ಜಾನಪದ ಸಂಗೀತದಿಂದ ಬಂದಿರುವಂತಹ ಎರಕಲಕಾಂಭೋಜಿ, ಪಹಾಡಿ ಮೊದಲಾದ ರಾಗಗಳೂ ಇವೆ.

ಇವತ್ತು ನಾನು ಹೇಳಹೊರಟಿದ್ದು ಪಹಾಡಿ ರಾಗದ ಬಗ್ಗೆ. ಹೆಸರು ಸೂಚಿಸುವಂತೆ ಇದು ಹಿಮಾಲಯದ ಗುಡ್ಡಗಾಡಿನ ಜನಪದ ಸಂಗೀತದಿಂದ ಶಾಸ್ತ್ರೀಯ ಸಂಗೀತಕ್ಕೆ ಬಂದಿರಬಹುದು ಅಂತ ಸುಲಭವಾಗಿ ಊಹಿಸಬಹುದು.

ಸಾಮಾನ್ಯವಾಗಿ, ರಾಗವೊಂದಕ್ಕೆ ಆರೋಹಣ ಅವರೋಹಣಗಳಿಂದ ಅದರ ಚಲನೆಯನ್ನು ಹೇಳುತ್ತೇವೆ. ಹಾಗೆ ಹೇಳಲು ಹೋದರೆ ಪಹಾಡಿ ರಾಗದ ಮೂಲ ಸ್ವರಸಂಪತ್ತಿಯು ಮೋಹನ (ಅಥವಾ ಭೂಪಾಲಿ) ರಾಗದ ಸ್ವರ ಸಂಪತ್ತಿಯೇ. ಅಂದರೆ

ಸ ರಿ ಗ ಪ ದ ಸ
ಸ ದ ಪ ಗ ರಿ ಸ

ಇಲ್ಲಿ ಎಲ್ಲ ಸ್ವರಗಳೂ (ಹಿಂದೂಸ್ತಾನಿ ಸಂಗೀತದ) ಶುದ್ಧ ಸ್ವರಗಳೇ.

ಹಾಗಿದ್ದರೆ ಭೂಪಾಲಿಗೂ ಪಹಾಡಿಗೂ ವ್ಯತ್ಯಾಸ ಏನಂತೀರಾ? ಎರಡಿವೆ. ಒಂದು ಪಹಾಡಿಯು ಜಾನಪದ ಸಂಗೀತ ಮೂಲವಾದ್ದರಿಂದ, ವರ್ಜ್ಯ ಸ್ವರಗಳನ್ನ ಅಷ್ಟು ಕಟ್ಟು ನಿಟ್ಟಾಗಿ ಪಾಲಿಸುವುದಿಲ್ಲ. ಅಂದರೆ ಅವರೋಹಣದ ಎಷ್ಟೋ ಸಂಚಾರಗಳಲ್ಲಿ ನಿ, ಮ ಸ್ವರಗಳನ್ನು ಕಾಣಬಹುದು. ಅಲ್ಲದೇ ಬೇರೆ ಸ್ವರಗಳನ್ನೂ ರಂಜನೆಗೋಸ್ಕರ ಬಳಸಲೂಬಹುದು. ಮತ್ತಿನ್ನೊಂದೇನೆಂದರೆ, ಪಹಾಡಿಯು ಮಂದ್ರ ಮತ್ತೆ ಮಧ್ಯ ಸ್ಥಾಯಿಗಳಲ್ಲಿ ಹೆಚ್ಚಿಗೆ ವಿಸ್ತರಿಸಿಕೊಳ್ಳಲ್ಪಡುವಂತಹ ರಾಗ. ಹಾಗಾಗಿ ಹಾಡುವಾಗ/ನುಡಿಸುವಾಗ, ಮಧ್ಯಮಶ್ರುತಿಯಲ್ಲಿ ಹಾಡುವ ಪರಿಪಾಠವಿದೆ.

ಪಹಾಡಿಯನ್ನು ಒಂದು ಕಿರುರಾಗವಾಗಿ ಪರಿಗಣಿಸಲಾಗುತ್ತೆ. ಹಾಗಾಗಿ, ಇದನ್ನು ಹೆಚ್ಚಾಗಿ ಕಚೇರಿಯ ಕೊನೆಯ ಭಾಗಗಳಲ್ಲಿ ಹಾಡುವ/ನುಡಿಸುವುದು ಸಾಮಾನ್ಯ. ಭಜನ್ ಮೊದಲಾದ ಲಘು ಪ್ರಕಾರಗಳಿಗೆ ಇದು ಚೆನ್ನಾಗಿ ಒಪ್ಪುತ್ತೆ.

ಇಲ್ಲಿ ಕೇಳಿ - ಹರಿಪ್ರಸಾದ್ ಚೌರಾಸಿಯಾ, ಶಿವ ಕುಮಾರ್ ಶರ್ಮ ಮತ್ತು ಬ್ರಿಜ್ ಭೂಷಣ್ ಲಾಲ್ ಕಾಬ್ರಾ ಅವರ ’Call of the Valley' ಯ ಪಹಾಡಿ ಪ್ರಖ್ಯಾತ ರಚನೆ:


ಪಹಾಡಿ ಚಲನಚಿತ್ರಗೀತೆಗಳಲ್ಲೂ ಚೆನ್ನಾಗಿಯೇ ತನ್ನ ಗುರುತನ್ನು ಮೂಡಿಸಿದೆ. ಇಲ್ಲಿ ಕೇಳಿ ೬೦ರ ದಶಕದ ಕನ್ನಡ ಚಿತ್ರ ’ನಾಂದಿ’ ಯ ಒಂದು ಪ್ರಸಿದ್ಧ ಗೀತೆ - ಉಡುಗೊರೆಯೊಂದ ತಂದ ನನ್ನಯ ಮನದಾನಂದ. ಇದು ಬಹುಶಃ ಶುದ್ಧ ಪಹಾಡಿಗೊಂದು ಒಳ್ಳೆಯ ಉದಾಹರಣೆ. ಅನ್ಯಸ್ವರಗಳ ಬಳಕೆ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ.ಕಾಕನ ಕೋಟೆ ಚಿತ್ರದ ’ನೇಸರ ನೋಡು’ :


ಇನ್ನೊಂದು ಪ್ರಸಿದ್ಧ ಕನ್ನಡ ಚಿತ್ರಗೀತೆ - ದೋಣಿ ಸಾಗಲಿ ಮುಂದೆ ಹೋಗಲಿ- ಇದರಲ್ಲಿ ಅನ್ಯ ಸ್ವರಗಳು ಹೆಚ್ಚಾಗಿಯೇ ನುಸುಳಿರುವುದನ್ನು ಗಮನಿಸಬಹುದು:


ಜಾನಪದ ಸಂಗೀತದಿಂದ ಹಿಂದೂಸ್ತಾನಿ ಸಂಗೀತಕ್ಕೆ ಮೊದಲು ಪ್ರವೇಶಿಸಿದ ಪಹಾಡಿ, ನಂತರ ಅದೇ ಹೆಸರು ಅವತಾರಗಳಲ್ಲಿ ಕರ್ನಾಟಕ ಸಂಗೀತಕ್ಕೂ ತನ್ನ ಹೆಜ್ಜೆ ಇಟ್ಟಿದೆ. ಇಲ್ಲಿ ಕೇಳಿ - ಡಾ.ಬಾಲಮುರಳಿಕೃಷ್ಣ ಅವರು ಸಂಗೀತ ಸಂಯೋಜಿಸಿದ ಸ್ವಾತಿ ತಿರುನಾಳರ ಒಂದು ಭಜನ್ - ಆಜ್ ಆಯೇ ಶ್ಯಾಮ್ ಮೋಹನ್ಪಹಾಡಿಯಲ್ಲಿ ಕರ್ನಾಟಕ ಸಂಗೀತ ಶೈಲಿಯಲ್ಲಿ ಇರುವ ರಚನೆಗಳು ಕಡಿಮೆಯೇ ಆದರೂ, ಅದರಲ್ಲಿ ಒಂದು ಲಾಲ್ಗುಡಿ ಜಯರಾಮನ್ ಅವರು ರಚಿಸಿದ ಈ ಉತ್ಕೃಷ್ಟ ತಿಲ್ಲಾನ!
-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ