ಕಾಮನ ಹಬ್ಬ

ಇದೀಗ ತಾನೇ ನೆನಪಾಯ್ತು - ನಾಳೆ ಫಾಲ್ಗುಣದ ಹುಣ್ಣಿಮೆ. ಅಂದ್ರೆ ಕಾಮನ ಹಬ್ಬ. ಶಿವ ಮನ್ಮಥನ ಮುಂದೆ ತನ್ನ ಹಣೆಗಣ್ಣನ್ನ ತೆರೆದು ಅವನ ಸುಟ್ಟ ದಿನವೇ ಇದು ಅನ್ನೋದು ನಮ್ಮ ನಂಬಿಕೆ. ಈ ದಿನವೇ ಅವನು ಮನ್ಮಥನನ್ನು ಸುಟ್ಟು, ನಂತರ ಅಲ್ಲೇ ಸುಳಿಯುತ್ತಿದ್ದ ಪಾರ್ವತಿಯನ್ನು ಕಂಡು, ಅವಳನ್ನು ಮೆಚ್ಚಿ ಮದುವೆಯಾಗಿದ್ದು; ವಿರಕ್ತರಲ್ಲಿ ವಿರಕ್ತನಾಗಿದ್ದ ಶಿವನು ಪ್ರೇಮಿಗಳಲ್ಲಿ ಪ್ರೇಮಿಯಾಗಿ ಕಂಗೊಳಿಸಿದ್ದು, ನಂತರ ಷಣ್ಮುಖ ಹುಟ್ಟಿದ್ದು ಇದೇ ಕಾಳಿದಾಸನ ಕುಮಾರ ಸಂಭವ ಕಾವ್ಯದ ಮುಖ್ಯ ಹೂರಣ.

ಅದಕ್ಕೇ ಶಿವನನ್ನು ಭರ್ತೃಹರಿ ತನ್ನ ಶೃಂಗಾರ ಶತಕದಲ್ಲಿ ಹೀಗೆ ಕೊಂಡಾಡುತ್ತಾನೆ: (ಪದ್ಯ -೯೭)

ಏಕೋ ರಾಗಿಷು ರಾಜತೇ ಪ್ರಿಯತಮಾದೇಹಾರ್ಧಧಾರೀ ಹರೋ
ನೀರಾಗಿಷ್ವಾಪಿ ಯೋ ವಿಮುಕ್ತ ಲಲನಾಸಂಗೋ ನ ಯಸ್ಮಾತ್ಪರಃ |
ದುರ್ವಾರ ಸ್ಮರಬಾಣಪನ್ನಗವಿಷಜ್ವಾಲಾವಲೀಢೋ ಜನಃ
ಶೇಷಃ ಕಾಮವಿಡಂಬಿತೋ ಹಿ ವಿಷಯಾನ್ ಭೋಕ್ತುಂ ನ ಮೋಕ್ತುಂ ಸಮಃ ||

(ಸಾರಾಂಶ: ಪ್ರೇಮಿಗಳಲ್ಲಿ ಅಗ್ರೇಸರನಾದವನು ತನ್ನ ದೇಹದ ಅರ್ಧಭಾಗದಲ್ಲೇ ತನ್ನ ಪ್ರಿಯೆ ಪಾರ್ವತಿಯನ್ನು ಧರಿಸಿ ಅರ್ಧನಾರೀಶ್ವರನಾದಂತಹ ಶಿವ. ಅದೇ ರೀತಿ ಅವನೇ ಹೆಣ್ಣಿನ ಸಂಗವನ್ನು ತೊರೆದ ವಿರಾಗಿಗಳಲ್ಲೂ ಅವನೇ ಅಗ್ರಗಣ್ಯ! ಅದಕ್ಕೇ ಅಲ್ಲವೇ ನಿವಾರಿಸಲಾರದ ಹಾವಿನ ವಿಷ ಜ್ವಾಲೆಯಂತಹ ಕಾಮಬಾಣಗಳನ್ನು ಅವನು ತಡೆಯಲು ಸಾಧ್ಯವಾಗಿದ್ದು? ಸಾಮಾನ್ಯ ಜನರಿಂದ ಆಗುವುದೇನು? ಪಾಪ, ಕಾಮಬಾಣಗಳಿಗೆ ಸಿಲುಕಿದರೆ ಅವರು, ಅನುಭವಿಸಲೂ, ಬಿಡಲೂ, ಒಂದೂ ಅರಿಯದೇ ಹೋಗುವರು!)

ಇದರ ಜೊತೆಗೇ, ಮಹಾ ವೀರ ಅರ್ಜುನ ಹುಟ್ಟಿದ್ದೂ ಈ ದಿನವೇ. ಅವನು ಹುಟ್ಟಿದ್ದು ಫಾಲ್ಗುಣ ಮಾಸದ ಹುಣ್ಣಿಮೆಯಲ್ಲಿ, ಚಂದ್ರ ಉತ್ತರಫಲ್ಗುಣೀ ನಕ್ಷತ್ರದ ಬಳಿ ಇದ್ದಾಗ ಅಂತ ಮಹಾಭಾರತ ಹೇಳುತ್ತೆ. ಆ ಕಾರಣಕ್ಕೇ ಅರ್ಜುನನಿಗೆ ಫಲ್ಗುಣ ಅನ್ನೋ ಹೆಸರೂ ಇದೆ.

ಆಕಾಶ ನೋಡೋ ಆಸಕ್ತಿ ಇದ್ದರೆ ಇವತ್ತು ರಾತ್ರಿ ನೋಡಿ ಪೂರ್ವದಲ್ಲಿ - ಚಂದ್ರ ಅದೇ ಉತ್ತರಾ ನಕ್ಷತ್ರದ (Beta Leonis) ಬಳಿಯಲ್ಲೇ ಇರ್ತಾನೆ. ನಿಜ ಹೇಳಬೇಕೆಂದರೆ, ಈ ಚಾಂದ್ರಮಾನ ತಿಂಗಳಿಗೆ ಫಾಲ್ಗುಣ ಅಂತ ಹೆಸರು ಬಂದಿರೋದೂ ಕೂಡ, ಚಂದ್ರ ಹುಣ್ಣಿಮೆಯಂದು ಪೂರ್ವಫಲ್ಗುಣೀ/ಉತ್ತರ ಫಲ್ಗುಣೀ ನಕ್ಷತ್ರಗಳ ಬಳೆ ಇರ್ತಾನೆ ಅಂತಲೇನೆ. ನಮ್ಮ ಚಾಂದ್ರಮಾನದ ಹನ್ನೆರಡೂ ತಿಂಗಳೂ ಇದೇ ರೀತಿಯಲ್ಲೇ ಬಂದಿವೆ - ಚೈತ್ರ - ಹುಣ್ಣಿಮೆಯಲ್ಲಿ ಚಂದ್ರ ಇರುವುದು ಚಿತ್ತಾ ನಕ್ಷತ್ರದಲ್ಲಿ; ವೈಶಾಖ - ವಿಶಾಖಾ, ಜ್ಯೇಷ್ಠಾ - ಜ್ಯೇಷ್ಠಾ, ಆಷಾಢ - ಪೂರ್ವಾಷಾಢ/ಉತ್ತರಾಷಾಢ, ಶ್ರಾವಣ - ಶ್ರವಣ, ಭಾದ್ರಪದ - ಪೂರ್ವಾಭಾದ್ರ/ಉತ್ತರಾಭಾದ್ರ, ಆಶ್ವಯುಜ - ಅಶ್ವಿನೀ, ಕಾರ್ತೀಕ - ಕೃತ್ತಿಕಾ, ಮಾರ್ಗಶೀರ್ಷ - ಮೃಗಶಿರಾ, ಪೌಷ (ಪುಷ್ಯ) - ಪುಷ್ಯ, ಮಾಘ - ಮಖಾ ಹೀಗೆ ಆಯಾ ಹುಣ್ಣಿಮೆಯಂದು ಚಂದ್ರ ಆಯಾ ನಕ್ಷತ್ರದ ಬಳಿ ಇರ್ತಾನೆ ಅನ್ನೋ ಕಾರಣಕ್ಕೇನೇ. ಅಂದ ಹಾಗೆ ಮರೆಯೋದಕ್ಕೆ ಮುಂಚೆ ಮೊನ್ನೆಮೊನ್ನೆ ಓದಿದ ಒಂದು ವಿಷಯ ಹೇಳ್ಬಿಡ್ತೀನಿ. ಮೊನ್ನೆ ನಾನು ಓದಿದ್ದಷ್ಟೇ - ವಿಷಯ ಹಳೇದೇ! ಪುರಾತನ ಚೀನೀ ತಿಂಗಳುಗಳ ಹೆಸರುಗಳೂ ಕೂಡ ಭಾರತದಿಂದ ಹೋಗಿವೆ ಅನ್ನೋದಕ್ಕೆ ಅವರ ಪದ್ಧತಿಯಲ್ಲಿ ಅವುಗಳ ಹಳೆಯ ಹೆಸರೇ ಸಾಕ್ಷಿ ಅನ್ನೋದೇ ಆ ವಿಷಯ!

ಹಿಂದಿ ಟೆಲಿವಿಶನ್ ವಾಹಿನಿಗಳ(ಮತ್ತೆ ಹಿಂದಿ ಸಾಫ್ಟ್ವೇರ್ ಇಂಜಿನಿಯರ್ ಗಳ!) ದಾಳಿ ನಮ್ಮೂರ ಕಡೆ ಆಗೋ ಮೊದಲು, ಹೋಳಿ ಅನ್ನೋ ಹೆಸರು ನಮ್ಮ ಕಡೆ ಅಷ್ಟು ಚಲಾವಣೆಯಲ್ಲಿ ಇರಲಿಲ್ಲ. ಬೀದಿಯಲ್ಲಿ ಓಡಾಡೋರಿಗೆ ಬಣ್ಣ ಎರಚೋದೂ ಇರಲಿಲ್ಲ. ಬಣ್ಣ ಹಾಕೋ ಓಕುಳಿ ಹಬ್ಬವನ್ನ ಹಳ್ಳಿ ಹಳ್ಳಿಯಲ್ಲಿ ಅವರ ದೇವರ ಉತ್ಸವದ ಹೊತ್ತಿನಲ್ಲಿ ಅವರವರ ಪದ್ಧತಿಯ ಪ್ರಕಾರ ಮಾಡ್ಕೋತಿದ್ದರು. ಈ ಫಾಲ್ಗುಣದ ಹುಣ್ಣಿಮೆಗೆ ಕಾಮನ ಹಬ್ಬ ಅಂತಲೋ, ಕಾಮನ ಹುಣ್ಣಿಮೆ ಅಂತಲೋ ಕರೆಯೋದೇ ರೂಢಿ ಆಗಿತ್ತು. ಸಂಜೆ ಹೊತ್ತಲ್ಲಿ ಚಂದಿರನ ಬೆಳಕಲ್ಲಿ, ಅಲ್ಲಲ್ಲಿ ಸೌದೆ ಕಸ ಕಡ್ಡಿ ಮೊದಲಾದ್ದೆಲ್ಲ ಸೇರಿಸಿ, ಅದಕ್ಕೆ ಬೆಂಕಿ ಹಚ್ಚಿ,”ಕಾಮಣ್ಣ ಕಟ್ಟಿಗೆ ಭೀಮಣ್ಣ ಬೆರಣಿ’ ಅಂತಲೋ ಏನೋ ಹಾಡುತ್ತಾ ಇರುತ್ತಿದ್ದ ಹುಡುಗರನ್ನ ಕಾಣಬಹುದಿತ್ತು. ಅದೊಂದು ತರಹ ಸಂಭ್ರಮದ ಕ್ಷಣಗಳಾಗಿರುತ್ತಿದ್ದವು.

ನನ್ನ ಮಟ್ಟಿಗೆ ಹೇಳೋದಾದ್ರೆ ಕಾಮನ ಹಬ್ಬ ಇನ್ನೂ ಒಂದು ದೃಷ್ಟಿಯಲ್ಲಿ ಸಂತೋಷಕ್ಕೆ ಕಾರಣವಾಗ್ತಿತ್ತು. ಏನಂದ್ರೆ, ಶಾಲೆ, ಪರೀಕ್ಷೆಗಳು ಇವೆಲ್ಲ ಮುಗಿಯೋ ಕಾಲ ತಾನೇ ಅದು? ಹದಿನೈದು ದಿನಗಳಲ್ಲಿ ಯುಗಾದಿ, ಮತ್ತೆ ಹದಿನೈದುದಿನಗಳಲ್ಲಿ ನಮ್ಮೂರಿನಲ್ಲಿ ತೇರು! ಅಂದ್ರೆ ಬೇಸಿಗೆ ರಜಾ! ಮಜವೇ ಮಜಾ!

ಆ ದಿನಗಳೆಲ್ಲ ಎಲ್ಲಿ ಹೋದವೋ? ಎಲ್ಲೋ ಕಾಣದಂತೆ ಮಾಯವಾಗಿ ಬಿಟ್ಟಿವೆ ಅನ್ಸುತ್ತೆ. ನನ್ನ ಬಾಳಿನಿಂದಂತೂ ಖಂಡಿತವಾಗಿ..

-ಹಂಸಾನಂದಿ