ಗಾನ ವನ ಮಯೂರಿ

ಇವತ್ತು (ಏಪ್ರಿಲ್ ೬,೨೦೧೧) ಸಂಗೀತಪ್ರೇಮಿಗಳನ್ನು ಅಗಲಿದ ಸಂಗೀತ ಕಲಾಚಾರ್ಯ ಶ್ರೀಮತಿ ಕಲ್ಪಕಂ ಸ್ವಾಮಿನಾಥನ್ (೧೯೨೨-೨೦೧೧) ಮುತ್ತುಸ್ವಾಮಿ ದೀಕ್ಷಿತರ ಶಿಷ್ಯ ಪರಂಪರೆಯ ಒಂದು ಮುಖ್ಯ ಕೊಂಡಿ.ಇವತ್ತು ಅವರು ಸಂಗೀತ ಪ್ರೇಮಿಗಳ ಜೊತೆ ಇಲ್ಲದಿರಬಹುದು. ಆದರೆ, ಅವರ ಸಂಗೀತ ಇನ್ನೂ ನಮ್ಮೊಡನೆ ಇದೆ. ಮತ್ತೆ ಇನ್ನೂ ಬಹುಕಾಲ ಇರುವುದು.


ಚಿತ್ರ ಕೃಪೆ: ವಿಜಯ್ ಶರ್ಮ Picture Courtesy: Vijay Sarma

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಅವರ ಹೆಸರನ್ನೂ ಕೇಳಿರಲಿಲ್ಲ. ಸ್ವತಃ ನಾನೇ ಚೆನ್ನೈ ವಾಸಿಯಾಗಿ ಹದಿನೆಂಟು ತಿಂಗಳು ಕಳೆದಿದ್ದಾಗಲೂ ಒಮ್ಮೆಯೂ ಅವರ ಕಚೇರಿಯನ್ನು ಕೇಳಿರಲಿಲ್ಲ. ಎಂತಹ ದುರದೃಷ್ಟ! ನಂತರ ನನಗೆ ಅವರ ಕಚೇರಿಯನ್ನು ನೇರವಾಗಿ ಕೇಳುವ ಅವಕಾಶವೂ ಸಿಗಲೇ ಇಲ್ಲ.

ಮೊದಮೊದಲಿಗೆ ನಾನು ಕಲ್ಪಕಂ ಅವರ ಹೆಸರನ್ನು ಕೇಳಿದ್ದು ಅಂತರ್ಜಾಲದಲ್ಲೇ. ೧೯೯೪-೯೫ರಲ್ಲಿ ಇರಬೇಕು. ಆಗಿನ್ನೂ ನ್ಯೂಸ್ ಗ್ರೂಪ್ ಗಳ ಕಾಲ. rec.music.indian.classical ಅನ್ನುವುದೊಂದು ನ್ಯೂಸ್ ಗ್ರೂಪ್ ಇತ್ತು. ಆದರೆ ನಾನು ಅವರ ಸಂಗೀತದ ಅನುಭವ ಪಡೆಯುವುದಕ್ಕೆ ಇನ್ನೂ ಒಂದಷ್ಟು ವರ್ಷ, ಅಂದರೆ ಕಲ್ಪಕಂ ಅವರು ಕ್ಲೀವ್‍ಲ್ಯಾಂಡ್ ತ್ಯಾಗರಾಜ ಉತ್ಸವಕ್ಕೆ ಅಮೆರಿಕೆಗೆ ಬರುವುದಕ್ಕೆ, ಅವರ ಕಚೇರಿಯ ಮುದ್ರಿಕೆಗಳು ಅಂತರ್ಜಾಲದಲ್ಲಿ ದೊರೆಯುವವರೆಗೂ ಕಾಯಬೇಕಾಯಿತು.

ಮುತ್ತುಸ್ವಾಮಿ ದೀಕ್ಷಿತರ ಶಿಷ್ಯಪರಂಪರೆಗೆ ಸೇರಿದ ಶ್ರೀಮತಿ ಕಲ್ಪಕಂ ಸ್ವಾಮಿನಾಥನ್, ದೀಕ್ಷಿತರ ಕೃತಿಗಳ ಉತ್ಕೃಷ್ಟ ಪಾಠಾಂತರಗಳಿಗೆ ಹೆಸರಾದವರು. ಎಷ್ಟೆಂದರೆ, ಮುತ್ತುಸ್ವಾಮಿ ದೀಕ್ಷಿತರು ಕಲ್ಪಕಂ ಅವರ ವೀಣೆಗೆಂದೇ ಕೆಲವು ರಚನೆಗಳನ್ನು ಮಾಡಿದ್ದಾರೋ ಎನ್ನುವಷ್ಟು. ಒಂದು ಗುಲಗಂಜಿ ತೂಕ ಹೆಚ್ಚಿಲ್ಲ, ಒಂದು ಗುಲಗಂಜಿ ತೂಕ ಕಡಿಮೆ ಇಲ್ಲದೆ, ಕೃತಿಗಳನ್ನೂ, ಅವುಗಳ ಸಂಗತಿಗಳನ್ನೂ ನುಡಿಸುವುದಕ್ಕೆ ಅವರಿಗೆ ಅವರೇ ಸಾಟಿಯಾಗಿದ್ದವರವರು.

ಅವರು ನುಡಿಸುತ್ತಿದ್ದ ದೀಕ್ಷಿತರ "ಗೌರೀ ಗಿರಿರಾಜ ಕುಮಾರಿ ಗಾನ ವನ ಮಯೂರಿ" ಎನ್ನುವ ಕೃತಿಯಲ್ಲಿ ಬರುವ "ಗಾನ ವನ ಮಯೂರಿಯ ಸಾಕಾರರೂಪವಾಗಿದ್ದ ಶ್ರೀಮತಿ ಕಲ್ಪಕಂ ಅವರಿಗೆ ಕೊನೆಯ ನಮನಗಳನ್ನು ಅವರ ಒಂದು ಮುದ್ರಿಕೆಯೊಡನೆಯೇ ಮಾಡುವೆ:


(ಮುತ್ತುಸ್ವಾಮಿ ದೀಕ್ಷಿತರ ಶಿಷ್ಯ ವಡಿವೇಲು ಅವರ ನಾಟ ರಾಗದ ’ಸಮುಖಮುನು’ ಎಂಬ ಅಪರೂಪದ ವರ್ಣ)

ಒಬ್ಬ ರಸಿಕರು ಹೇಳಿದಂತೆ, "ಸರಸ್ವತಿ, ಮತ್ತೆ ತನ್ನೆಡೆಗೇ ಮರಳಿದ್ದಾಳೆ"!


-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ