ಹೂ ಬಾಣ ಹಿಡಿದವನಿಗೆ

ಇದು ರಮ್ಯ ಚೈತ್ರ ಕಾಲ. ವಸಂತ ಕಾಲ. ನಮ್ಮ ಪುರಾಣಗಳ ಪ್ರಕಾರ, ವಸಂತ ಅಂದರೆ ಮನ್ಮಥನ ಗೆಳೆಯನಂತೆ. ವಸಂತಕಾಲದಲ್ಲಿ ಅರಳುವ ಅರವಿಂದ, ಅಶೋಕ, ನೀಲೋತ್ಪಲ, ಚೂತ ಮತ್ತೆ ನವಮಲ್ಲಿಕಾ - ಹೀಗೆ ಐದು ಹೂವಿನ ಅಂಬುಗಳನ್ನು ನೇರವಾಗಿ ಪ್ರೇಮಿಗಳ ಎದೆಗೇ ಗುರಿ ಇಡುತ್ತಾನಂತೆ! ತಪಸ್ಸು ಮಾಡಲು ಕುಳಿತಿದ್ದ ಶಿವನನ್ನೇ ಬಿಡಲಿಲ್ಲ ಈ ಮದನ ಅಂದರೆ, ಇವನು ಅದೆಷ್ಟು ಗಟ್ಟಿಗ ನೋಡಿ! ಶಿವನ ಮೂರನೇ ಉರಿಗಣ್ಣಿಂದ ಬೂದಿ ಆದರೂ, ದೇಹವೇ ಇರದೇ ಹೋದರೂ ತನ್ನ ಕಾಯಕವನ್ನು ಮಾತ್ರ ಮುಂದುವರಿಸಿಯೇ ಇದ್ದಾನೆ, ಯುಗ ಯುಗಾಂತರದಿಂದಲೂ.ಈ ಹೂ ಬಾಣ ಹಿಡಿದವನ ಮೇಲಿರುವ ಕೆಲವು ಸಂಸ್ಕೃತ ಪದ್ಯಗಳ ಭಾವಾನುವಾದವನ್ನು ನಾನು ಮಾಡಿರುವುದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಮೊದಲಿಗೆ ಭರ್ತೃಹರಿಯ ಶೃಂಗಾರ ಶತಕ ಎಂಬ ಸಂಕಲದ ಆಯ್ದ ಕೆಲವು ಪದ್ಯಗಳ ಅನುವಾದ ಕೇಳಿ:

ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ
ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ
ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ
-ವರಿಗೆ ನಮಿಪೆ ಹೂ ಬಾಣಗಳ ಹಿಡಿದಿಹಗೆ


ಅಂತೂ, ತ್ರಿಮೂರ್ತಿಗಳೇ ಮನ್ಮಥನ ಉಪಟಳದಿಂದ ತಪ್ಪಿಸಿಕೊಳ್ಳಲಾರರಿದ್ದಾಗ, ಬೇರೆ ಹುಲು ಮಾನವರ ಪಾಡೇನು ಅಲ್ಲವೇ?

ಇನ್ನೊಂದು ಪದ್ಯದ ಅನುವಾದ ನೋಡಿ - ಎಂತಹ ವೀರರಾದರೂ, ಶೂರರಾದರೂ, ಮನ್ಮಥನನ್ನು ಎದುರುಹಾಕಿಕೊಳ್ಳುವುದು ಕಷ್ಟವೇ ಅನ್ನುವುದನ್ನು ಭರ್ತೃಹರಿ ಒತ್ತಿಹೇಳುತ್ತಾನೆ.

ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;
ಮೃಗರಾಜ ಸಿಂಹವ ಮಡುಹುವಲೂ ನಿಪುಣರು.
ಅಂಥ ಗಟ್ಟಿಗರೆದುರೇ ಸಾರಿ ಹೇಳುವೆ ನಾನು
ಆ ಮನ್ಮಥನ ಸೊಕ್ಕನ್ನು ಅಡಗಿಸುವರು ಸಿಗರು!


ಈ ಮನ್ಮಥನಂತ ಬಿಲ್ಗಾರರು ಈ ಜಗತ್ತಿನಲ್ಲಿ ಇಲ್ಲವೇ ಇಲ್ಲವಂತೆ. ಬೇರೆಲ್ಲ ಬಿಲ್ಲಾಳುಗಳು ಲೋಹದ ಬಾಣವನ್ನು ಹೂಡಿದರೆ, ಮದನನು ಹೂಡುವುದು ಹೂವಿನ ಬಾಣಗಳನ್ನು. ಈ ಹೂಬಾಣಗಳ ಏಟೇ ಬೇರೆ ರೀತಿಯದ್ದು, ನೋಡಿ ಇಲ್ಲಿ:


ಹಲವು ಬಿಲ್ಲಾರರು ಇರುವರು ಜಗದಲ್ಲಿ
ಅಂಬಿನಲಿ ಒಂದನೆರಡಾಗಿ ಸೀಳುವವರು;
ಮದನನೊಬ್ಬನೆ ಇಲ್ಲಿ ಆ ತೆರದ ಬಿಲ್ಲಾಳು
ಗುರಿಯಿಟ್ಟು ಇಬ್ಬರನು ಒಂದಾಗಿಸುವವನು!


ಈ ಮನ್ಮಥ ಹೂಬಾಣಗಳೊಂದನ್ನೇ ನೆಚ್ಚಿಕೊಂಡಿಲ್ಲ. ಯಾಕಂದರೆ ಅವನ ಸಹಾಯಕ್ಕೆ ಹೆಣ್ಣಿದ್ದಾಳೆ! ಹೆಣ್ಣು ತನ್ನ ಸ್ವಭಾವದಲ್ಲೇ ಗಂಡನ್ನು ಸೆಳೆಯುವ ಸೂಜಿಗಲ್ಲು. ಅದಕ್ಕೂ ಹೆಚ್ಚಾಗಿ, ಅವಳನ್ನ ಹೆಣ್ಣನ್ನ ಮನ್ಮಥನ ಗಾಳವೆಂದು ವರ್ಣಿಸಿದ್ದಾನೆ ಭರ್ತೃಹರಿ ಇಲ್ಲಿ.


ಮದನನೆಂಬ ಬೆಸ್ತ ಭರದಿ ಹಾಕಿಹನು
ಹೆಣ್ಣೆಂಬ ಗಾಳವನು ಬಾಳಗಡಲಿನಲಿ;
ಅವಳ ತುಟಿಗಳ ಸೆಳೆತಕ್ಕೀಡಾದವರನು
ಹಾಕಿ ಹುರಿಯುವನು ಒಲವ ಬೆಂಕಿಯಲಿ!


ಹೆಣ್ಣಿನ ಸೆಳೆತಕ್ಕೆ ಸಿಲುಕಿ, ಒಲವಿನ ಬೆಂಕಿಯಲ್ಲಿ ಹುರಿದು ಹೋಗುವ ಭಯವಿದ್ದರೂ, ಗಂಡಿಗೆ ಅದರ ಗಮನವೇ ಇಲ್ಲ. ಏಕೆನ್ನುವಿರಾ? ಸ್ವಭಾವತಃ ಚೆಲುವೆಯರಾದ ಹೆಣ್ಣಿಗೆ ಇನ್ನು ಅದರ ಜೊತೆಗೆ ಆಭರಣಗಳೂ ಸೇರಿಬಿಟ್ಟರೆ ಕೇಳುವಂತೆಯೇ ಇಲ್ಲ! ಯಾರ ಮನಸ್ಸನ್ನು ತಾನೆ ಅವರು ಕದಿಯದೇ ಇರುವರು?

ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿ
ಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವ
ತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರು
ತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!


ಆದರೆ ಈ ಆಭರಣಗಳಿಲ್ಲದೇ ಹೋದರೂ, ಹೆಣ್ಣು ಗಂಡನ್ನು ಸೆಳೆಯಲು ಅವಳಿಗೆ ಬ್ರಹ್ಮ ಕೊಟ್ಟ ಹಲವು ಆಯುಧಗಳಿವೆಯಲ್ಲ? ಅದನ್ನ ಪ್ರಯೋಗ ಮಾಡಿದರಾಯಿತು. ಭರ್ತೃಹರಿಯ ಮಾತಿನಲ್ಲಿ ಹೇಳುವುದಾದರೆ,

ಕೊಂಕಾದ ಕುಡಿಹುಬ್ಬು ಕಡೆಗಣ್ಣುಗಳ ನೋಟ
ನಯವಾದ ಮೆಲುನುಡಿ ನಾಚಿಕೆಯ ನಸುನಗೆ
ಲೇಸಾದ ನಿಲುಮೆ ಜೊತೆಗೆ ಹಿತವಾದ ನಡಿಗೆ
ಪೆಣ್ಗಳಿಗಿವು ಸಿಂಗರವು ಮತ್ತವೇ ಆಯುಧವು!


ಹಾಗಿದ್ದ ಮೇಲೆ ಗಂಡು ಏನು ತಾ ಮಾಡಬಹುದು? ತನ್ನ ಎಚ್ಚರಿಕೆಯಲ್ಲಿ ಇರಬೇಕು, ಆದೊಂದೇ ದಾರಿ ಅನ್ನುತ್ತಾನೆ ಭರ್ತೃಹರಿ:

ದೂರ ಸರಿ ಗೆಳೆಯ!
ದಿಟದಿ ಚಂಚಲೆಯೀ
ಸೊಬಗಿನವಳು;

ಹೆಡೆಯನಾಡಿಸುವ
ಚೆಲುವ ನಾಗರವ
ಹೋಲುವಳು.

ದೂರದಿಂದಲೇ ತನ್ನ
ಕುಡಿ ನೋಟವೆನ್ನುವ
ವಿಷದ ಉರಿಯಲ್ಲೇ
ನಿನ್ನ ಸುಡಬಲ್ಲಳು!

ನಿನ್ನ ಕಚ್ಚಿದರೆ
ಬೇರೆ ಹಾವುಗಳು,
ಬದುಕಿಸಿಯಾರು
ನುರಿತ ವೈದ್ಯರು

ಚತುರೆ ಹೆಣ್ಣೆಂಬ
ಹಾವಿಗೆ ಸಿಲುಕಲು
ಉಳಿಸುವ ಆಸೆಯ
ತೊರೆದುಬಿಡುವರು!


ಅಂತೂ ಇಂತೂ, ಮದನನ ಬಾಣಕ್ಕೆ ಗುರಿಯಾದವರಿಗೆ, ಬದುಕುವ ದಾರಿಯೇ ಕಾಣದಾಗದೇ, ಪ್ರೀತಿಯಲ್ಲೇ ಇದ್ದೂ ಸತ್ತ ಹಾಗೆ ಆಗಿಬಿಡುವ ಭಾವನೆ. ಕೊನೆಯಲ್ಲಿರುವ ಈ ಧರ್ಮ ಕೀರ್ತಿಯ ಒಂದು ಪದ್ಯದಲ್ಲಿ. ಇದು ಸಂಸ್ಕೃತ ವ್ಯಾಕರಣದಲ್ಲಿ ಮನಸ್ಸು ಅನ್ನುವ ಪದದ ಮೇಲೆ ಮಾಡಿರುವ ಒಂದು ಶ್ಲೇಷೆ. ಮನಸ್ಸು ಎನ್ನುವ ಪದ ಸಂಸ್ಕೃತ ವ್ಯಾಕರಣದಲ್ಲಿ ನಪುಂಸಕಲಿಂಗ. ಆ ಕಾರಣಕ್ಕೆ ಧರ್ಮಕೀರ್ತಿ ಹೇಳುವುದು ಹೀಗೆ:

ಮನಸು ಗಂಡಲ್ಲ ಹೆಣ್ಣಲ್ಲ
ಎನುವ ಪಾಣಿನಿಯ ನೆಚ್ಚಿ
ಮನವ ನಿನ್ನಲಿ ಕಳುಹಿ
ನಾನಂತೂ ಕೆಟ್ಟೆ ನಲ್ಲೆ!
ನಾನಂತೂ ಕೆಟ್ಟೆನಲ್ಲೆ!

ಮನವೇನೋ ನಲಿಯತಿದೆ
ನೆಲೆಸಿ ಅಲ್ಲೇನೇ; ಆದರೆ
ಪಾಣಿನಿಯ ತಪ್ಪಿಂದ
ನಾವಂತೂ ಸತ್ತೆವಲ್ಲೆ!


-ಹಂಸಾನಂದಿ

ಕೊ: ನೆನ್ನೆ, ಇವತ್ತು ಇಲ್ಲಿ ನಡೆದ ಕನ್ನಡ ಸಾಹಿತ್ಯ ರಂಗದ ವಸಂತ ಸಾಹಿತ್ಯೋತ್ಸವದಲ್ಲಿ (http://www.kannadasahityaranga.org/) ಓದಿದ ಬರಹ. ಅನುವಾದಗಳೆಲ್ಲ ಈ ಮೊದಲು ಹಾಕಿದ್ದವೇ. ಒಂದು ವಿಷಯಕ್ಕೆ ಸೇರಿದ ಅನುವಾದಗಳನ್ನು ಒಟ್ಟುಗೂಡಿಸಿ ಹೆಣೆದದ್ದು ಮಾತ್ರ ಹೊಸತು!

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?