ಕಳ್ಳಹೊಳೆ ಮತ್ತು ಹೇಮಾವತಿ

ನಮ್ಮೂರ ಹತ್ತಿರ ಹರಿಯೋ ಯಗಚೀನ ಕಳ್ಳ ಹೊಳೆ ಅಂತಿದ್ದರಂತೆ. ಯಾಕಂದ್ರೆ, ಅದರ ಹರಿವು ಸಣ್ಣದು, ಆದರೆ, ಎಲ್ಲೋ ಇಪ್ಪತ್ತು ಮೂವತ್ತು ಮೈಲಿ ಹಿಂದೆ ಮಳೆಯಾದರೆ ಯಗಚಿಯಲ್ಲಿ ಇದ್ದಕ್ಕಿದ್ದಂತೆ ನೆರೆ ಬಂದು ಬಿಡುತ್ತಿತ್ತಂತೆ. ಅಂತಹ ಸಂದರ್ಭದಲ್ಲಿ, ಹೊಳೆಯ ಪಾತ್ರದಲ್ಲಿ ಆಟವಾಡುತ್ತಿದ್ದ ಮಕ್ಕಳು, ದನ ಕರುಗಳೆಲ್ಲ ಕೊಚ್ಚಿಕೊಂಡು ಹೋಗುತ್ತಿದ್ದವಂತೆ. ಯಾವಾಗ ನೀರು ಬರುತ್ತೆ ಅನ್ನೋದು ಗೊತ್ತಾಗದೇ, ಕಳ್ಳನ ತರಹ ಜನ ಜಾನುವಾರನ್ನೆಲ್ಲ ನುಂಗಿಕೋತಾ ಇದ್ದಿದ್ದರಿಂದಲೇ ಇದು ಕಳ್ಳ ಹೊಳೆ ಅಂತ ಹೆಸರಾಗಿತ್ತಂತೆ. ಇವೆಲ್ಲ ನಾನು ಗೊರೂರು ರಾಮಸ್ವಾಮಿ ಅಯ್ಯಂಗಾರರ ಪುಸ್ತಕದಲ್ಲಿ ಓದಿದ್ದ ವಿಷಯಗಳು.

ಮೂರನೇ ತರಗತಿಯಲ್ಲಿ ನಮಗೆ ಎರಡು ಪಠ್ಯ ಪುಸ್ತಕಗಳಿದ್ದವು - ಒಂದು ನಮ್ಮ ರಾಜ್ಯ ಅಂತ, ಮತ್ತೊಂದು ನಮ್ಮ ಜಿಲ್ಲೆ ಅಂತ. ನಮ್ಮ ಜಿಲ್ಲೆ ಅಂದರೆ ನೋಡುವ ಸ್ಥಳಗಳು ಬೇಲೂರು ಹಳೇಬೀಡು ಶ್ರವಣಬೆಳಗೊಳ; ಬೆಳೆಯೋ ಬೆಳೆಗಳು ರಾಗಿ ಆಲೂಗೆಡ್ಡೆ ಕಾಫಿ ಬೀಜ; ಕೈಗಾರಿಕೆ ಅಂದರೆ ಯಂತ್ರಭಾಗಗಳ ಕಾರ್ಖಾನೆ, ಕಾಫಿ ಬೀಜ ಸಂಸ್ಕರಣೆ ಅಂತ ನಾವು ಓದಿಕೊಂಡಿದ್ದೇ ಓದಿಕೊಂಡಿದ್ದು. ಅದರಲ್ಲಿ ಜಿಲ್ಲೆಯ ನದಿಗಳು ಅಂದರೆ ಕಾವೇರಿ ಹೇಮಾವತಿ ಮತ್ತೆ ಯಗಚಿ ಅಂತಲೂ ಇರ್ತಿತ್ತು. ನನ್ನ ಊರಿಗೆ ತೀರ ಹತ್ತಿರವಿದ್ದ ಯಗಚಿಯ ಹರಿವನ್ನ ನಾನು ನೋಡಿದ್ದೇ ಕಡಿಮೆ. ಊರಿನ ಪಶ್ಚಿಮದ ಹಾಲುಬಾಗಿಲು ಅನ್ನುವ ಕಡೆ ಯಗಚಿ ಹೊಳೆ ಪಕ್ಕದಲ್ಲಿ ಒಂದು ನೀರನ್ನು ಶುಚಿಮಾಡಿ, ಊರಿಗೆ ಸರಬರಾಜು ಮಾಡುವ ವ್ಯವಸ್ಥೆ ಇತ್ತು. ಕೆಲವೊಮ್ಮೆ ನಮ್ಮ ತರಗತಿಯ ಕೆಲವು ಹುಡುಗರು ಹಾಲುಬಾಗ್ಲಿನಲ್ಲಿ ಹೋಗಿ ಈಜಿ ಬಂದೆವು ಅಂತ ಹೇಳ್ತಿದ್ದಿದ್ದೂ ಉಂಟು. ನನಗೆ ಈಜೂ ಬರ್ತಿರ್ಲಿಲ್ಲ. ಮತ್ತೆ ಈ ಹಾಲುಬಾಗಿಲಿಗೆ ಹೋಗಿ ಈಜೋ ಹುಡುಗರೇನೂ ನನಗೆ ಅಂತಾ ಗೆಳೆಯರೂ ಆಗಿರ್ಲಿಲ್ಲವಾದ್ದರಿಂದ, ಮತ್ತೆ ಸ್ವಲ್ಪ ಶಾಲೆಯಲ್ಲಿ ಕೆಲವು ಬೇರೆ ಕಾರಣಗಳಿಗೆ ಕುಪ್ರಸಿದ್ಧರೂ ಆಗಿದ್ರಿಂದ, ನಾನು ಹಾಲುಬಾಗ್ಲಿನ ಕಡೆಗೆ ತಲೆ ಹಾಕ್ಲೂ ಇಲ್ಲ. ಹಾಕಿದ್ರೆ, ಮನೆಯಲ್ಲಿ ಸರಿಯಾಗಿ ಲತ್ತೆಗಳು ಬೀಳ್ತಿದ್ದವು ಅನ್ನೋದೂ ಗೊತ್ತಿದ್ದ ಮಾತು. ಮೊದಲಿಗೆ ನಾನು ಸ್ವಲ್ಪ ಹೆಚ್ಚೇ ಎಚ್ಚರಿಕೆಯ ಸ್ವಭಾವದವನಾಗಿದ್ದೆ. ತೊಂದರೆ ಬಂದಾದಮೇಲಿಂದ ಅದನ್ನ ನಿಭಾಯ್ಸೋದಕ್ಕಿಂತ ತೊಂದರೆ ಇಲ್ಲದ ಹಾಗೆ ತಡೆಯೋದೇ ಒಳ್ಳೇದು ಅಂತ ಹೇಗೋ ಗೊತ್ತಾಗ್ಬಿಟ್ಟಿತ್ತು. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ; ನಾನು ಹಾಲುಬಾಗಿಲಿನಲ್ಲಿ ಹರಿಯೋ ಯಗಚಿಯನ್ನ ನೋಡಲೇ ಇಲ್ಲ!. ನಾನು ಏನಿದ್ರೂ ಯಗಚೀನ ಕಂಡಿದ್ದಿದ್ದು ಬೇಲೂರಿನಲ್ಲಿ. ಬೇಲೂರಿಗೆ ಆಗ ಈಗ ಅಂತ ಹೋಗ್ತಾ ಇದ್ದಿದ್ದುಂಟು. ಅಲ್ಲಿ ಊರಿಗೆ ಹೋಗೋ ಮುಂಚೆ ದೊಡ್ಡ ಸೇತುವೆ, ಅದರಡೀಲಿ ಹರಿಯೋ ಚಿಕ್ಕ ಕಾಲುವೇನೇ ಯಗಚಿ! ನದಿ ಅಲ್ಲ, ಹೊಳೆ ಅಲ್ಲ, ಹಳ್ಳ ಅಂತ ಹೇಳೋಕೂ ಕಷ್ಟವೇ. ಇದಕ್ಕೆ ಕಳ್ಳ ಹೊಳೆ ಅಂತಾರಲ್ಲ, ಇದರಲ್ಲಿ ಪ್ರವಾಹವೂ ಬರೋದಕ್ಕೆ ಸಾಧ್ಯವೇ ಅನ್ನಿಸ್ತಿತ್ತು. ಇಂತಹ ಈಗ ಯಗಚಿಯಂತಹ ಹೊಳೆಗೂ ಈಗ ಒಂದು ಅಣೆಕಟ್ಟೆ ಕಟ್ಟುಬಿಟ್ಟಿದ್ದಾರೆ ಬೇಲೂರಿಗಿಂತ ಸ್ವಲ್ಪ ಮೇಲೆ. ಯಗಚಿ ಯಾಕೆ, ಯಗಚೀಗೆ ಸೇರೋ ವಾಟೆಹೊಳೆ ಅನ್ನೋ ಇನ್ನೊಂದು ಚಿಕ್ಕ ಹೊಳೇಗೂ ಕಟ್ಟೆ ಕಟ್ಟಿಬಿಟ್ಟಿದ್ದಾರೆ ಬಿಡಿ.

ಆದ್ರೆ ಕಟ್ಟೆ ಅಂದರೆ ನನ್ನ ಮನಸ್ಸಿಗೆ ಬರೋದು ಯಾವಾಗಲೂ ಶ್ರೀರಾಮದೇವರ ಕಟ್ಟೇನೆ. ಈ ಕಟ್ಟೆ ಕಟ್ಟಿರೋದು ಹೇಮಾವತಿ ನದಿ ಮೇಲೆ. ನನ್ನ ಚಿಕ್ಕಂದಿನಲ್ಲಿ ನಾನು ಹೆಚ್ಚಾಗಿ ಕಂಡ ನದಿ ಅಂದ್ರೆ ಹೇಮಾವತಿ.ಗೊರೂರಿನ ನರಸಿಂಹ ದೇವಸ್ಥಾನದ ಪಕ್ಕದಲ್ಲಿ ಕುಳಿತರೆ, ಅಥವಾ ನರಸೀಪುರದಲ್ಲಿ ನೆಂಟರ ಮನೆಯಿಂದ ನೇರ ಕೆಳಗೆ ನಡೆದು ಹೋದರೆ ಸ್ನಾನಘಟ್ಟದಲ್ಲೇ ಆಗಲಿ, ಅದೆಷ್ಟು ಸೊಗಸಾಗಿರ್ತಿತ್ತು! ಅಥವಾ ತುಂಬಿ ಸುರಿಯುವ ಗೊರೂರಿನ ಅಣೆಕಟ್ಟಿನ ಹತ್ತಿರ ನಿಂತುಕೊಂಡರೆ ತುಂತುರು ಮಳೇಲಿ ನಿಂತಹಾಗಿರ್ತಿತ್ತು!

ಆದ್ರೆ ಹೇಮಾವತಿ ಅಂದರೆ ಎಲ್ಲಕ್ಕಿಂತ ಮೊದಲಿಗೆ ನನಗೆ ನೆನಪಿಗೆ ಬರೋದು ನಮ್ಮೂರಿನ ಬಸ್ ನಿಲ್ದಾಣದ ಬಳಿ ಇದ್ದ ಹೇಮಾವತಿಯ ವಿಗ್ರಹ. ಹೇಮಾವತಿಗೂ ಒಂದು ವಿಗ್ರಹ ಮಾಡಿಸಬೇಕು ಅಂತ ಯಾರಿಗೆ ಹೊಳೀತೋ ಗೊತ್ತಿಲ್ಲ. ಮೊದಲೇ ನಮ್ಮೂರಿನಲ್ಲಿ ಕುಡಿಯೋ ನೀರಿಗೆ ಕಷ್ಟ ಇತ್ತು. ಯಗಚಿಯಂತಹ ಕಳ್ಳಹೊಳೆಯಿಂದ ನೀರು ಸರಬರಾಜು ಇದ್ದ ಮೇಲೆ ಕಷ್ಟವಲ್ಲದೇ ಇನ್ನೇನಿದ್ದೀತು ಅಂತ ಕೇಳ್ಬೇಡಿ ಮತ್ತೆ. ಗೊರೂರಿನಲ್ಲಿ ದೊಡ್ಡ ಅಣೆಕಟ್ಟೆ ಕಟ್ಟಿದಮೇಲೆ ಅಲ್ಲಿಂದ ನಮ್ಮೂರಿಗೆ ನೀರು ಬರೋ ಯೋಜನೆ ಇದೆ ಅಂತ ಗೊತ್ತಾದಮೇಲೆ ನಮಗೆ ಸಂತೋಷವೋ ಸಂತೋಷ. ಮನೆಯೊಳಗೆ ಮುಕ್ಕಾಲು ದಿನ ಗಾಳಿ ಮಾತ್ರ ಬರುತ್ತಿದ್ದ ನಲ್ಲಿಯಲ್ಲಿ ನೀರೂ ಬಂದುಬಿಡುತ್ತೆ ಅಂತ ಖುಷಿ. ಅಂಗಳದಲ್ಲಿದ್ದ ವಠಾರದ ಮೂರು ನಾಲ್ಕು ಮನೆಗಳಿಗೂ ನೀರು ಹೊಂದಿಸಬೇಕಾದ ನಲ್ಲಿಯಲ್ಲಿ (ಬಂದರೆ) ನೀರು ಹಿಡಿದು ಹೊತ್ತು ಹಾಕೋ ಗೋಜಿಲ್ಲವಲ್ಲ ಅಂತ ಒಂದು ನಿರಾಳ. ನೀರೇ ಬರದಿದ್ದಾಗ ೫೫ ಅಡಿ ಆಳದ ಬಾವಿಯಲ್ಲಿ ನೀರು ಸೇದಿ ಕೈ ಉರಿಸಿಕೊಳ್ಳಬೇಕಿಲ್ಲವಲ್ಲ ಅಂತ ಸಿಕ್ಕಾಪಟ್ಟೆ ಆನಂದ. ಆದ್ರೆ ಕನಸುಗಳೆಲ್ಲ ನಿಜ ಆಗೋ ಹಾಗಿದ್ರೆ ಕನಸುಗಳಿಗೆಲ್ಲ ಬೆಲೆ ಎಲ್ಲಿರುತ್ತೆ? ಈ ಹೇಮಾವತಿ ನದಿ ನೀರಿನ ಯೋಜನೆಯಂತೂ ಪಂಚವಾರ್ಷಿಕವೋ ದಶವಾರ್ಷಿಕವೋ ಏನೋ ಒಂದು ಯೋಜನೆಯಾಗಿ, ಪಾರ್ಕಿನ ಮುಂದೆ ಕಟ್ಟಿಸಿ ನಿಲ್ಲಿಸಿದ ಹೇಮಾವತಿ ಪ್ರತಿಮೆಗೆ ಅಧಿಕೃತವಾಗಿ ಅನಾವರಣಗೊಳ್ಳೋ ಯೋಗ ಅಂತೂ ಅಷ್ಟು ಸುಲಭವಾಗಿ ಬರಲೇ ಇಲ್ಲ. ಹರಿವಳು ಹೇಮೆ ನಮ್ಮ ಮನೆಯಂಗಳದಿ ಅಂತ ಲೋಕಲ್ ಪೇಪರ್ ನಲ್ಲಿ ತಲೆ ಬರಹ ಕಂಡು ಅದೆಷ್ಟೋ ವರ್ಷಗಳ ನಂತರ ಹೇಮೆ ನಮ್ಮ ಮನೆಗಳಿಗೆ ಬಂದಿದ್ದು.

ನೀರಿನ ರೂಪದಲ್ಲಿ ಹೇಮೆ ನಮ್ಮ ಮನೆಗಳಿಗೆ ಬರದಿದ್ದರೇನಂತೆ? ವಿಗ್ರಹವಾಗಿ ಊರ ನಟ್ಟ ನಡುವೆ ನಿಂತು ಬಿಟ್ಟಿದ್ದಳಲ್ಲ? ಈ ಹೇಮಾವತಿ ವಿಗ್ರಹದ ಯೋಚನೆ ಯಾರದ್ದು ಅಂತ ಗೊತ್ತಿಲ್ಲ ಅಂದೆನಲ್ಲ. ಯಾರದ್ದಾದರೂ ಆಗಿರಲಿ. ವಿಗ್ರಹ ಮಾತ್ರ ಬಹಳ ಚೆನ್ನಾಗಿತ್ತು. ಕನ್ನಂಬಾಡಿ ಕಟ್ಟೆಯಲ್ಲಿರೊ ಕಾವೇರಿಯ ತರಹ ಚಿಕ್ಕ ಕಲ್ಲಿನ ಮೂರ್ತಿಯಲ್ಲ ಈ ಹೇಮಾವತಿ. ಬದಲಾಗಿ, ಎತ್ತರದ ನಿಲುವಿನ, ಆರೋ ಎಂಟೋ ಅಡಿ ಎತ್ತರದ ಕಾಂಕ್ರೀಟ್ ತರುಣಿ. ತಿಳಿ ಹಳದಿ ಬಣ್ಣ. ಪಕ್ಕದಲ್ಲಿ ಕೈ ಹಿಡಿದೆಳೆಯುತ್ತಿರುವ ಚಿಕ್ಕ ಮಗುವೊಂದು. ಕೈಯಲ್ಲಿ ಅಲಂಕಾರವಾಗಿರುವ ಕೆಳಗೆ ಬಾಗಿದ ಕೊಡವೊಂದು. ಆರೆಂಟು ಅಡಿ ಪೀಠದ ಮೇಲೆ ನಿಂತಿರುವ ಈಕೆ, ತನ್ನ ಮುಗುಳುನಗೆಯ ಮುಖದಲ್ಲೇ ಸುತ್ತ ಮುತ್ತಲಲ್ಲಿ ನಡೆಯುವ ವ್ಯಾಪಾರದ ಮೇಲೆಲ್ಲ ಒಂದು ಕಣ್ಣಿಟ್ಟಿರುವಳಂತೆ ಕಾಣುತ್ತಿದ್ದಳು. ಎದುರುಗಡೆಯಲ್ಲೇ ಬಲ ಮೂಲೆಯಲ್ಲಿ ಬಸ್ ನಿಲ್ದಾಣ. ಹಿಂದುಗಡೆಯ ಪಾರ್ಕಿನ ಒಂದು ಬದಿಯಲ್ಲಿ ನೂರಾರು ವರ್ಷಗಳ ಹಿಂದೆ ನಮ್ಮೂರ ಅರಸರುಗಳು ಅಲ್ಲಿ ಇಲ್ಲಿ ಕೆತ್ತಿಟ್ಟ ಹಾಳುಬಿದ್ದಿದ್ದ ಶಾಸನಗಳು, ಮೂರ್ತಿಗಳು ಇವುಗಳನ್ನೆಲ್ಲ ಒಳಗೊಂಡ ಒಂದು ವಸ್ತುಸಂಗ್ರಹಾಲಯ. ಇನ್ನೊಂದು ಕಡೆ ಇದ್ದ ಪ್ರಾಣಿಸಂಗ್ರಹಾಲಯದಲ್ಲಿ ಹುಲ್ಲು ಮೇಯುತ್ತಾ ಒಣಗಿಕೊಂಡಿದ್ದ ಹತ್ತಾರು ಜಿಂಕೆಗಳು, ಆಟದ ಬಯಲಿನಲ್ಲಿ ಕೇಕೆ ಹಾಕುತ್ತಾ ಆಡುವ ಮಕ್ಕಳ ಸದ್ದನ್ನು ಕೇಳುತ್ತಾ ಮನಸ್ಸಿನಲ್ಲೇ ಮಂಡಿಗೆ ತಿನ್ನುವ ಕಪಿಗಳು, ಯಾರೇ ಬರಲಿ ನಾವು ಜಗ್ಗೆವು ಎಂದು ಸದಾಕಾಲ ಬಿದ್ದುಕೊಂಡಿರುತ್ತಿದ್ದ ಹಾವುಗಳು. ಇನ್ನು ಈ ಹೇಮಾವತಿಯ ಎಡಪಕ್ಕದಲ್ಲೇ ನಂದಿನಿ ಹಾಲಿನ ಮಳಿಗೆ. ಕೆಳಗೆ ಕುಳಿತ ಎಳೇ ಸೌತೇಕಾಯನ್ನೋ ಮಾವಿನ ಹಣ್ಣನ್ನೋ ಮತ್ತೊಂದನ್ನೋ ಮಾರಲು ಕುಳಿತ ಹಳ್ಳೀ ರೈತರು. ಬೇಲೂರ್ ಹಳೇಬೀಡ್ ಬೇಲೂರ್ ಹಳೇಬೇಡ್ ಅಂತಲೋ, ಹಾರ್ನಹಳ್ಳಿ ಅರಸೀಕೆರೆ ತಿಪಟೂರು ಅಂತಲೋ ಕೂಗುತ್ತಿರುವ ಮೆಟಾಡೊರ್ ವ್ಯಾನ್ ಚಾಲಕರು. ಮುಂದಿನ ಮೂಲೆಯಲ್ಲಿರುವ ಕಾಲೇಜಿಗೆ ಹೋಗುತ್ತಿರುವ ಹುಡುಗಿಯರು. ಅವರ ಬೆನ್ನ ಹತ್ತಿ ಹೋಗುವ ಹುಡುಗರು. ಈ ಎಲ್ಲರನ್ನೂ ಮೇಲುಸ್ತುವಾರಿ ಮಾಡುತ್ತಿರುವ ಒಂದು ದೇವತೆಯಂತೆ ಕಾಣುತ್ತಿದ್ದಳು ಈ ಹೇಮಾವತಿ. ಅವಳ ಮುಖದಲ್ಲಿದ್ದ ತೆಳುನಗೆ, ಮಕ್ಕಳು ಏನಾದರೂ ಮಾಡಿಕೊಂಡರೂ ನನಗೆ ತಿಳಿಯುತ್ತೆ ಅನ್ನುವಂತಿರುವ ತಾಯಿಯ ಪ್ರೀತಿಯ ಮುಖದಂತಿತ್ತು ಅನ್ನಿಸುತ್ತೆ ಈಗ ನನಗೆ. ಅಥವಾ ಏನಾದರೂ ಚಿಂತೆಯಿಲ್ಲ ನಾನಿದ್ದೇನೆ ನೋಡಿಕೊಳ್ಳಲು ಅನ್ನುವ ವಾತ್ಸಲ್ಯ ಭಾವ ಅಂತ ಬೇಕಾದರೂ ಅನ್ನಿ. ನಗರ ಸಭೆಯವರ ದಯದಿಂದ, ಊರಿಗೆ ನೀರು ಬರದಿದ್ದರೂ, ಹೇಮಾವತಿ ಕಾಲಕಾಲಕ್ಕೆ ಬಣ್ಣ ಕಾಣುತ್ತಿದ್ದಳು. ಅವಳ ಕೈಲಿದ್ದ ಬಿಂದಿಗೆಯಲ್ಲಿ ನೀರು ಮಾತ್ರ ನಮ್ಮ ಮನೆಯ ನಲ್ಲಿಯ ಹಾಗೇ, ಒಂದು ದಿನ ಇದ್ದರೆ ಒಂದು ದಿನ ಇರುತ್ತಿರಲಿಲ್ಲ. ಮಕ್ಕಳಿಗೆ ಕೊಡದೆ ತಾನೊಬ್ಬಳೇ ತಿಂಡಿ ತಿಂದಾಳೇನು ತಾಯಿ ಮತ್ತೆ?

ಹೀಗೆ ಎಷ್ಟೋ ವರ್ಷ ಕಾಯಿಸಿ ಆಮೇಲೆ ಹೇಮಾವತಿ ನಮ್ಮ ಮನೆಗಳಿಗೂ ಹೆಜ್ಜೆ ಇಟ್ಟಳು. ಗಂಗಾ ಸ್ನಾನ ತುಂಗಾ ಪಾನ ಅಂತ ಹೇಳೋ ಮಾತನ್ನ ನೀವು ಕೇಳೇ ಇರ್ತೀರ. ಅದು ಪ್ರಾಸಕ್ಕೆ ಮಾಡಿರೋ ಗಾದೆ ಸ್ವಾಮೀ! ನಾನು ತುಂಗೆ ನೀರನ್ನೂ ಕುಡಿದೆ. ಗಂಗೆ ನೀರನ್ನೂ ಕುಡಿದೆ. ಆದರೆ ಇವೆರಡೂ ಹೇಮಾವತಿಗೆ ಸಮವಲ್ಲ ಬಿಡಿ! ನಮ್ಮೂರು ಚೆಂದವೂ ನಿಮ್ಮೂರು ಚಂದವೂ ಎಂದೆನ್ನ ಕೇಳಲೇಕೆ? ನಮ್ಮೂರೆ ನನಗೆ ಬಲುಚೆಂದವೆಂದು ಮತ್ತೆ ಮತ್ತೆ ಹೇಳಬೇಕೆ?

ಅಂದಹಾಗೆ ಕಳ್ಳ ಹೊಳೆ ಯಗಚಿ ಕೂಡ ಹೇಮಾವತಿಗೆ ಸೇರಿಕೊಳ್ಳೋ ಹೊಳೆಯೇ. ಹಿಂದೆ ಶೆಟ್ಟಿಹಳ್ಳಿ ಹತ್ತಿರ ಹೇಮಾವತಿಗೆ ಸೇರುತ್ತಿದ್ದಳು ಯಗಚಿ. ಅಲ್ಲೊಂದು ಗುಡಿಯೂ ಇತ್ತಂತೆ. ಈ ವಿಷಯವನ್ನೂ ನಾನು ರಾಮಸ್ವಾಮಯ್ಯಂಗಾರರ ಪುಸ್ತಕವೊಂದರಲ್ಲೇ ಓದಿದೆ. ಬೂತಯ್ಯನ ಮಗ ಅಯ್ಯುವಿನಲ್ಲೇ ಇರಬೇಕು, ಮರೆತು ಹೋಗಿದೆ. ಗೊರೂರಿನಲ್ಲಿ ಕಟ್ಟೆಯಾದಮೇಲೆ, ಈ ಸಂಗಮ ಮುಳುಗಿಹೋಯಿತಂತೆ. ಈಗ ಸುಮ್ಮನೇ ಹೇಮಾವತಿ ಅಣೆಕಟ್ಟೆಯ ಹಿನ್ನೀರಿಗೇ ಸೇರಿಕೊಳ್ಳುತ್ತೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ! ಹೇಮಾವತಿ ಪಾಪ ಕೃಷ್ಣರಾಜ ಸಾಗರದ ಹಿನ್ನೀರಿಗೆ ಹೋಗಿ ಕಾವೇರಿಯನ್ನ ಸೇರಿಕೊಳ್ಳೋದಿಲ್ವೇ ಮತ್ತೆ?

ಈಗ ನಾನಿರುವ ಊರಿನಲ್ಲಿ ಇರುವ ಹೊಳೆಯನ್ನು ಕಂಡಾಗ ನನಗೆ ಮತ್ತೆ ಮತ್ತೆ ಕಳ್ಳಹೊಳೆಯ ನೆನಪಾಗುತ್ತಿರುತ್ತೆ. ಇದೂ ಅದರಂತೆ ಪುಟ್ಟ ಹೊಳೆ. ಇದರಲ್ಲೂ ವರ್ಷದ ಮುಕ್ಕಾಲು ದಿನ ನೀರು ಕಂಡೂ ಕಾಣದಂತೆಯೇ ಹರಿಯುತ್ತೆ. ಒಮ್ಮೊಮ್ಮೆ ಅಂತೂ ನೀರೆಲ್ಲಿದೆ ಅಂತ ಭೂತಗನ್ನಡಿಯಲ್ಲಿ ನೋಡಬೇಕಾಗುತ್ತೆ. ಆದರೆ, ಮಳೆಗಾಲದಲ್ಲಿ ಬೆಟ್ಟದ ಮೇಲೆಲ್ಲೋ ನಲವತ್ತು ಮೈಲಿ ಆಚೆ ಮಳೆ ಬಂದುಬಿಟ್ಟರೆ ಈ ಹೊಳೆಯಲ್ಲೂ ಇದ್ದಕ್ಕಿದ್ದಂತೆ ಪ್ರವಾಹ ಬಂದುಬಿಡುತ್ತೆ. ಹದಿನಾಲ್ಕು ಹದಿನೈದು ವರ್ಷಗಳ ಹಿಂದೊಮ್ಮೆ ಹೀಗೇ ಹುಚ್ಚು ಪ್ರವಾಹ ಬಂದು ಊರಿನ ನಟ್ಟನಡುವೆ ಡೌನ್ ಟೌನ್ ಭಾಗದಲ್ಲಿ ಎಷ್ಟೋ ಮುಳುಗಡೆಯಾಗಿ ಹೋಗಿತ್ತಂತೆ. ಆಮೇಲೆ, ಈ ರೀತಿ ಅಷ್ಟು ಸುಲಭವಾಗಿ ಆಗದಂತೆ ಒಂದಷ್ಟು ವ್ಯವಸ್ಥೆ ಮಾಡಿದ್ದಾರೆ ಅನ್ನಿ.

ಈ ರೀತಿ ಹಳೆ ವಿಚಾರಗಳನ್ನು ನೆನೆಸಿಕೊಂಡಾಗಲೆಲ್ಲ, ಆ ದಿನಗಳು ಎಷ್ಟು ಚೆನ್ನಾಗಿದ್ದವು ಅನ್ನಿಸೋದು ಸಹಜ. ಆದರೆ, ಮನುಷ್ಯ ಬರೀ ನೆನಪುಗಳಿಂದಷ್ಟೇ ಬದುಕೋಗಾಗೋಲ್ಲ. ಅವನಿಗೆ ಹಿನ್ನೋಟವೂ ಬೇಕು. ಮುನ್ನೋಟವೂ ಬೇಕು. ಹಿಂದೆ ಆಗಿದ್ದ ಒಳ್ಳೇ ಅನುಭವಗಳು ಒಂದು ರೀತಿ ಖುಷಿ ಕೊಟ್ಟರೆ, ಇನ್ನೂ ಮುಂದೆ ಬರುವ ಕಾಣದ ದಿನಗಳು ತಮ್ಮೊಳಗೆ ಹುದುಗಿಸಿರುವಂತಹ ಗುಟ್ಟುಗಳು ಅದೇನು ಖುಷಿಗಳನ್ನ ಕೊಡುತ್ತವೋ ಬಲ್ಲವರ್ಯಾರು? ಹಿಂದೆ ಒಂದು ಕಳ್ಳಹೊಳೆ ಪ್ರವಾಹದಲ್ಲಿ ಏನೇನು ತರ್ತಿತ್ತೋ? ಮುಂದಿನ ಜೀವನದಲ್ಲಿ ಇನ್ನು ಯಾವ ಯಾವ ರೀತಿಯ ಕಳ್ಳಹೊಳೆಗಳು ಬರಬೇಕೋ? ಎಂತೆಂತಹ ಅನುಭವವನ್ನು ಕೊಡಬೇಕೋ!ಅಲ್ಲವೇ?

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?