ಜೀವದ ಗೆಳೆಯರು

ಹಾಲದು ತನ್ನೊಳು ಬೆರೆಸಿದ ನೀರಿಗೆ
ತನ್ನ ನಡತೆಯನೆಲ್ಲವ ನೀಡುವುದು
ಹಾಲ ಕಾಯಿಸಲು ನೀರು ಗೆಳೆಯನ
ನೋವಿಗೆ ಮರುಗಿ ಹಬೆಯಾಡುವುದು

ನೀರಿನ ಪಾಡನು ನೋಡುತ ಹಾಲು
ಉಕ್ಕುತ ಬೆಂಕಿಗೆ ಹಾರುವುದು
ಬೆರೆಸಲು ಅದಕೆ ತುಸುವೇ ನೀರನು
ಕೂಡಲೆ ತಣಿವನು ಹೊಂದುವುದು!

ಒಳ್ಳೆಯ ಗೆಳೆಯರ ನಡುವೆ ಗೆಳೆತನ
ಎಂದಿಗು ಇರುವುದು ಹೀಗೆ;
ನೋವುನಲಿವಲಿ ಜೊತೆಯನು ಬಿಡದಿಹ
ಹಾಲಿನ ನೀರಿನ ಹಾಗೆ!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ಕ್ಷೀರೇಣಾತ್ಮಗತೋದಕಾಯ ಯಿ ಗುಣಾಃ ದತ್ತಾಃ ಪುರಾ ತೇSಖಿಲಾಃ
ಕ್ಷೀರೇ ತಾಪಮವೇಕ್ಷ್ಯ ತೇನ ಪಯಸಾ ಹ್ಯಾತ್ಮಾ ಕೃಶಾನೌ ಹುತಃ |
ಗಂತುಂ ಪಾವಕಮುನ್ಮನಸ್ತದಭವದ್ದೃಷ್ಟ್ವಾ ತು ಮಿತ್ರಾಪದಂ
ಯುಕ್ತಂ ತೇನ ಜಲೇನ ಶಾಮ್ಯತಿ ಸತಾಂ ಮೈತ್ರೀ ಪುನಸ್ತ್ವೀದೃಶೀ ||

क्षीरेणात्मगतोदकाय हि गुणाः दत्ताः पुरा तेऽखिलाः
क्षीरे तापमवेक्ष्य तेन पयसा ह्यात्मा कृशानौ हुतः ।
गन्तुं पावकमुन्मनस्तदभवद्दृष्ट्वा तु मित्रापदम्
युक्तं तेन जलेन शाम्यति सतां मैत्री पुनस्त्वीदृशी ॥

-ಹಂಸಾನಂದಿ

ಕೊ: ಮೂಲದಲ್ಲಿಲ್ಲದ ವಿವರಗಳು ಅನುವಾದದಲ್ಲಿದ್ದರೂ, ಅದು ಅರ್ಥಕ್ಕೆ ಪೂರಕವಾಗಿದೆಯೆಂದು ಎಣಿಸುವೆ

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ