ಲಕುಮಿಯ ನೋಟ

ಜೇನ ಸವಿಯಲು ಚೆಲುವ ಕನ್ನೈದಿಲೆಯೆಡೆಗೆ
ಮರಳಿ ಮರಳಿ ಬರುವ ಜೇನ್ದುಂಬಿಯಂತೆ
ನಾಚುತಲಿ ಒಲವಿನಲಿ ಮುರಾರಿಯ ಮೊಗವನೆ
ಓರಣದಿ ಹೊರಳುತಲಿ ನೋಡುತಿಹ ಮುಗುದೆ
ಆ ಕಡಲಣುಗೆಯ ಸೊಗದ ನೋಟದ ಮಾಲೆ
ತೋರುತಿರಲಿ ನನಗೆ ಸಕಲ ಸಂಪದಗಳನೆ!

ಸಂಸ್ಕೃತ ಮೂಲ (ಶಂಕರಾಚಾರ್ಯರ ಕನಕಧಾರಾ ಸ್ತೋತ್ರದಿಂದ):

ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋ ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭವಾಯಾಃ ||

-ಹಂಸಾನಂದಿ

ಕೊ: ನೈದಿಲೆಯ ಹೂವಿಗೆ ಮುತ್ತುವ ದುಂಬಿ ಹೇಗೆ ಹೂವಿನ ಒಳಗೂ ಹೊರಗೂ ಹಾರಾಡುತ್ತಿರುತ್ತದೆಯೋ, ಅದೇ ರೀತಿ ಲಕ್ಷ್ಮಿಯ ನೋಟವು ಹರಿಯ ಕಡೆಗಿರುವ ಪ್ರೀತಿಯಿಂದ ಹತ್ತಿರಕ್ಕೂ , ನಾಚಿಕೆಯಿಂದ ದೂರಕ್ಕೂ, ಮರಳಿ ಮರಳಿ ಹೋಗುತ್ತಿರುವುದನ್ನೇ ಶಂಕರಾಚಾರ್ಯರು ಒಂದು ಚೆನ್ನಾಗಿ ಪೋಣಿಸಿ ಹೆಣೆದ ಹೂವಿನ ಹಾರಕ್ಕೆ ಹೋಲಿಸಿದ್ದಾರೆ.

ಕೊ.ಕೊ: ನಾಳೆ ವರಮಹಾಲಕ್ಷ್ಮಿ ಹಬ್ಬ. ಕಳೆದ ಮೂರು ವರ್ಷಗಳಲ್ಲೂ ಈ ಹಬ್ಬದ ದಿನ (೨೦೦೮, ೨೦೦೯, ೨೦೧೦) ಒಂದು ಬರಹವನ್ನು ಹಾಕಿದ್ದರಿಂದ, ಇವತ್ತೂ ಒಂದು ಹಾಕುವುದಕ್ಕೆ ಮನಸ್ಸಾಯಿತು.

ಕೊ.ಕೊ.ಕೊ: ಮೂಲ ಶ್ಲೋಕದಲ್ಲಿರುವ ಲಾಲಿತ್ಯ ಅನುವಾದದಲ್ಲಿ ಕಡಿಮೆಯಾಗಿದೆ ಎಂಬ ಕೊರತೆ ಇದ್ದರೂ, ಹಬ್ಬದ ದಿನಕ್ಕೊಂದು ಅನುವಾದ ಇರಲಿ ಎಂಬ ಕಾರಣಕ್ಕೆ ಹಾಕಿಬಿಡುತ್ತಿದ್ದೇನೆ!
Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ