ಮಾರವೈರಿ ರಮಣಿ

ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ.

ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿಕಾಭೂಷಣಿ ರಾಗದ, ರೂಪಕತಾಳದ ಮಾರವೈರಿ ರಮಣಿ ಎನ್ನುವ ರಚನೆ. ಮೊದಲು ಸಾಹಿತ್ಯವನ್ನು ಓದಿ.

ಪಲ್ಲವಿ:
ಮಾರವೈರಿ ರಮಣಿ ಮಂಜು ಭಾಷಿಣೀ ||ಮಾರವೈರಿ||

ಅನುಪಲ್ಲವಿ:
ಕ್ರೂರ ದಾನವೇಭವಾರಣಾರೀ ಶ್ರೀಗೌರೀ ||ಮಾರವೈರಿ||

ಚರಣ:
ಕರ್ಮಬಂಧವಾರಣ ನಿಷ್ಕಾಮಚಿತ್ತ ವರದೇ
ಧರ್ಮವರ್ಧನೀ ಸದಾ ವದನಹಾಸೇ ಶುಭಫಲದೇ ||ಮಾರವೈರಿ||

ಇದನ್ನು ’ತ್ಯಾಗರಾಜರದ್ದು’ ಎನ್ನಲಾದ ಎಂದು ಬರೆದಿದ್ದಕ್ಕೆ ಒಂದು ಕಾರಣವಾಗಿದೆ. ಸಾಮಾನ್ಯವಾಗಿ ತ್ಯಾಗರಾಜರ ರಚನೆಗಳಲ್ಲಿ ಕಂಡುಬರುವ ತ್ಯಾಗರಾಜರ ಮುದ್ರೆ ಇದರಲ್ಲಿ ಕಂಡುಬರುವುದಿಲ್ಲ. ತ್ಯಾಗರಾಜರ ಮುದ್ರೆ ಇರುವ ಕೆಲವು ರಚನೆಗಳನ್ನೂ ಅವರಲ್ಲದೆ, ಅವರ ನಂತರ ಕೆಲವು ವಾಗ್ಗೇಯಕಾರರು ತ್ಯಾಗರಾಜರ ಹೆಸರಿಟ್ಟು ರಚಿಸಿರುವ ಉದಾಹರಣೆಗಳಿವೆ. ಇಂತಹ ಸಂದರ್ಭಗಳಲ್ಲಿ ರಚನಾ ಕೌಶಲ,ಸಾಹಿತ್ಯ ಮೊದಲಾದುವುಗಳನ್ನು ಕಂಡು ಆ ರಚನೆಗಳು ಯಾರದ್ದಿರಬೇಕೆಂಬ ಊಹೆಯನ್ನೂ ಮಾಡಲಾಗಿದೆ. ತ್ಯಾಗರಾಜರ ಮುದ್ರೆಯಿದ್ದರೂ ಸಾಹಿತ್ಯದಲ್ಲಿರುವ ಕುಂದುಕೊರತೆಗಳಿಂದ ಅಥವಾ ಕಂಡುಬರುವ ಬೇರೆ ಗುಣಗಳನ್ನು ಕಂಡು ರಚನೆ ಯಾರದ್ದಿರಬಹುದೆಂದು ಊಹೆ ಮಾಡುತ್ತಾರೆ. ಅಂತಹದ್ದರಲ್ಲಿ, ತ್ಯಾಗರಾಜರ ಮುದ್ರೆಯೇ ಇಲ್ಲದ ಒಂದು ರಚನೆಯ ಬಗ್ಗೆ ಅನುಮಾನ ಹುಟ್ಟುವುದು ಸಹಜವೇ. ದೊರೆತಿರುವ ಸುಮಾರು ೮೦೦ ಕೃತಿಗಳಲ್ಲಿ ತ್ಯಾಗರಾಜರ ಮುದ್ರೆಯೇ ಇಲ್ಲದೆ ಅವರದ್ದೆಂದು ಹೇಳಲ್ಪಟ್ಟಿರುವಂತಹ ರಚನೆ ನನಗೆ ತಿಳಿದಂತೆ ಇದೊಂದೇ. ತ್ಯಾಗರಾಜರ ಕೆಲವು ಶಿಷ್ಯ ಪರಂಪರೆಯಲ್ಲಿ (ಬಹುಶಃ ಆಂಧ್ರ ಪರಂಪರೆಯಲ್ಲಿ) ಈ ಕೃತಿ ಹಾಡುವುದು ರೂಢಿಯಲ್ಲಿದೆ.

ಈ ವಿವಾದ ಅದೇನೇ ಇರಲಿ. ಇದೊಂದು ಸರಳ ಸುಂದರ ರಚನೆ ಎಂಬುವುದರಲ್ಲಿ ಅನುಮಾನವಿಲ್ಲ. ರಚನೆ ಸಂಸ್ಕೃತದಲ್ಲಿದ್ದು, ವಾಗ್ಗೇಯಕಾರರು ಗೌರಿಯನ್ನು ಇದರಲ್ಲಿ "ಮನ್ಮಥನ ಹಗೆಯಾದ ಶಿವನ ಪ್ರಿಯಳೇ, ಹಿತವಾದ ನುಡಿಯವಳೇ, ಕ್ರೂರರಕ್ಕಸರೆಂಬ ಆನೆಗಳಿಗೆ ಸಿಂಹಿಣಿಯಂತಿರುವವಳೇ, ಭೂಲೋಕದ ಬಂಧನವನ್ನು ಬಿಡಿಸುವವಳೇ, ಆಸೆಗಳನ್ನು ಬಿಟ್ಟವರಿಗೆಲ್ಲ ಒಳಿತುಗಳನ್ನೂ ನೀಡುವವಳೇ, ನಗುಮೊಗದ ಧರ್ಮವರ್ಧನಿಯೇ" ಎಂದು ಹಾಡಿ ಹೊಗಳಿದ್ದಾರೆ.

ಕೃತಿ ಎಪ್ಪತ್ತನೆಯ ಮೇಳರಾಗವಾದ ನಾಸಿಕಾಭೂಷಣಿಯಲ್ಲಿದೆ. ವಿವಾದಿ ರಾಗವಾಗಿದ್ದರೂ ಕೂಡ ಹಿತವಾದ ರಾಗವೇ! ಇದನ್ನು ಇಲ್ಲಿ ಕೆಳಗಿರುವ ಕೊಂಡಿಯನ್ನು ಚಿಟುಕಿಸಿ, ಬಾಲಮುರಳಿಕೃಷ್ಣ ಅವರ ಕಂಠಸಿರಿಯಲ್ಲಿ ಕೇಳಿ, ಆನಂದಿಸಿ:

http://www.raaga.com/play/?id=47992

ಇದೇ ರಚನೆ, ಅವರದ್ದೇ ಕಂಠದಲ್ಲಿ, ಹಲವು ದಶಕಗಳ ನಂತರದ್ದು - ಬಾಲಮುರಳಿಕೃಷ್ಣ ಅವರ ಎಪ್ಪತ್ತೈದನೆ ಹುಟ್ಟುಹಬ್ಬದ ಸಂದರ್ಭದ್ದು:ಮಂಜುಭಾಷಿಣಿ ಶ್ರೀಗೌರಿ ನಿಮ್ಮೆಲ್ಲರಿಗೆ ಆನಂದವನ್ನು ತರಲೆಂಬ ಹಾರೈಕೆಯಲ್ಲಿ,

-ಹಂಸಾನಂದಿ


ಕೊ: ತ್ಯಾಗರಾಜರ ರಚನೆಗಳಲ್ಲಿ ಹೆಚ್ಚಾಗಿ ಕಾಣದ ಸ್ವರಾಕ್ಷರ ಪ್ರಯೋಗಗಳನ್ನು ಈ ರಚನೆಯಲ್ಲಿ ಕಾಣಬಹುದು. ಧರ್ಮವರ್ಧನೀ "ಸದಾ" ವದನ ಹಾಸೇ, "ಮಾರ" ವೈರಿ ರಮಣೀ ಎಂಬ ಸಾಲುಗಳ ಸಂಗೀತವನ್ನು ಗಮನಿಸಿ.

ಕೊ.ಕೊ: ತ್ಯಾಗರಾಜರ ಊರಾದ ತಿರುವೈಯ್ಯಾರಿನಲ್ಲಿ ಇರುವ ಶಿವನ ದೇಗುಲದಲ್ಲಿ ಶಿವನಿಗೆ ಪಂಚನದೀಶ್ವರನೆಂದು ಹೆಸರು. ಆ ಊರಿನ ಸಮೀಪದಲ್ಲೇ ಕಾವೇರಿ ಐದು ಭಾಗವಾಗಿ ಒಡೆದು ಹರಿಯುತ್ತಾಳೆ. ಅದಕ್ಕೇ ಊರಿಗೂ ತಿರುವೈಯ್ಯಾರು (ಪವಿತ್ರವಾದ ಐದುನದಿಗಳ ಊರು) ಎಂಬ ಹೆಸರು.ಆ ದೇಗುಲದಲ್ಲಿರುವ ದೇವಿಯ ಸನ್ನಿಧಿಗೆ ಧರ್ಮವರ್ಧನಿ ಅಥವಾ ಧರ್ಮಸಂವರ್ಧನಿ (ತಮಿಳಿನಲ್ಲಿ ಐಯಾಱಪ್ಪರ್, ಅಱಂವೞರ್ತನಾಯಕಿ) ಎಂಬ ಹೆಸರು.

ಕೊ.ಕೊ.ಕೊ: ಇದೇ ರಾಗದಲ್ಲಿ ಬಾಲಮುರಳಿಕೃಷ್ಣ ಅವರು ’ಅಂಬಿಕಾಂ ಉಪಾಸೇಹಂ’ ಎನ್ನುವ ಒಂದು ರಚನೆ ಮಾಡಿದ್ದಾರೆ. ಅದೂ ಸೊಗಸಾಗಿದೆ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?