ಒತ್ತಾಸೆ

"ಎಲ್ಲಿ ಹೋಗುವೆ ಇರುಳಿನಲಿ ತೋರ ತೊಡೆಯವಳೆ?"
"ನನ್ನುಸಿರ ಮಿಗಿಲಾದ ಆ ನನ್ನ ನಲ್ಲನಿರುವೆಡೆಗೆ"
"ಒಬ್ಬಂಟಿ ತೆರಳಲಂಜಿಕೆಯಾಗದೇನೆ ಹೇಳೆ ಗೆಳತಿ?"
"ಒತ್ತಾಸೆಗುಂಟಲ್ಲೆ ಕಮ್ಮಗೋಲನ ಐದು ಅಂಬುಗಳೇ!"

ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ  ಪದ್ಯ-71 ):
ಕ್ವ ಪ್ರಸ್ಥಿತಾಹಿ ಕರಭೋರು ಘನೇ ನಿಶೀಥೇ
ಪ್ರಾಣಾಧಿಕೋ ವಸತಿ ಯತ್ರ ಜನಃ ಪ್ರಿಯೋ ಮೇ |
ಏಕಾಕಿನೀ ವದ ಕಥಂ ನ ಬಿಭೇಷಿ ಬಾಲೇ
ನನ್ವಸ್ತಿ ಪುಂಖಿತಶರೋ ಮದನಃ ಸಹಾಯಃ ||

-ಹಂಸಾನಂದಿ

ಕೊ: ಈ ಪದ್ಯವು ಇಬ್ಬರು ಗೆಳತಿಯರ ನಡುವೆ ನಡೆಯುವ ಮಾತುಕತೆ. ಕಾರ್ಗತ್ತಲಿನಲ್ಲಿ ನಲ್ಲನನ್ನು ನೋಡಹೊರಟಿರುವಳೊಬ್ಬಳು, ಅವಳನ್ನು ಪ್ರಶ್ನಿಸುವ ಅವಳ ಗೆಳತಿಯೊಬ್ಬಳು.

ಕೊ.ಕೊ: ಕಮ್ಮಗೋಲ - ಗಮಗಮಿಸುವ ಹೂಗಳ ಬಾಣವನ್ನು ಹಿಡಿದು ಬರುತ್ತಾನೆಂದು ಪ್ರಸಿದ್ಧನಾದ ಮನ್ಮಥ. ನಮ್ಮಮ್ಮ ಶಾರದೆ ಉಮಾಮಹೇಶ್ವರಿ ಎಂಬ ಪ್ರಸಿದ್ಧ ಕನಕದಾಸರ ಪದದಲ್ಲಿ ಗಣೇಶನನ್ನು "ಕಮ್ಮಗೋಲನ ವೈರಿ ಸುತನಾದ" (ಎಂದರೆ ಮನ್ಮಥನನ್ನು ಸುಟ್ಟ ಶಿವನ ಮಗ) ಎಂದು ಹಾಡಿ ಹೊಗಳಿರುವುದನ್ನು ನೆನೆಸಿಕೊಳ್ಳಿ. ಮೂಲದಲ್ಲಿರುವ ಪುಂಖಿತ ಶರೋ = ರೆಕ್ಕೆಗಳುಳ್ಳ ಬಾಣಗಳು = ಹೂವಿನ ರೇಕುಗಳ ಎಂದು ಅರ್ಥೈಸುವ ಸ್ವಾತಂತ್ರ್ಯ ತೆಗೆದುಕೊಂಡಿದ್ದೇನೆ. ಹಾಗೇ ಮೂಲದಲ್ಲಿರುವ "ಕರಭೋರು" - ಸೊಂಡಿಲಿನಂತಹ ತೊಡೆಯವಳೇ ಎನ್ನುವ ಮಾತನ್ನು ಕನ್ನಡಕ್ಕೆ ಹೊಂದುವಂತೆ ’ತೋರ ತೊಡೆಯವಳೇ ಎಂದು ಹೇಳಿದ್ದೇನೆ.

ಕೊ.ಕೊ.ಕೊ: ಕನ್ನಡದ ಹಲವು ಛಂದಸ್ಸುಗಳಲ್ಲಿ ದ್ವಿತೀಯಾಕ್ಷರ ಪ್ರಾಸ (ಪ್ರತೀ ಸಾಲಿನ ಎರಡನೇ ಅಕ್ಷರ ಒಂದೇ ಆಗಿರುವುದು) ಇರುವುದು ಗೊತ್ತಿರುವ ಸಂಗತಿಯೇ. ಈ ಅನುವಾದದಲ್ಲಿ ನಾನು ಪ್ರತೀ ಸಾಲಿನ ಎರಡನೇ ಅಕ್ಷರವೂ ಒಂದು ಒತ್ತಕ್ಷರವಿರುವಂತೆ ಮಾಡಿದ್ದೇನೆ, ಸುಮ್ಮನೆ!

ಅಂದಹಾಗೆ, ಈ ಮೊದಲು ನಾನು ಮಾಡಿರುವ ಅನುವಾದಗಳಲ್ಲಿ ಆರಿಸಿದ ಅನುವಾದಗಳ ಪುಸ್ತಕ "ಹಂಸನಾದ" ವನ್ನು ನೀವು ಇಲ್ಲಿ ಚಿಟಕಿಸುವ ಮೂಲಕ ಕೊಳ್ಳಬಹುದು.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?