ಹಾತೊರೆತ


ಕಿವಿಯಲವನ ಹೆಸರು ಬಿದ್ದರೂ
ಮೈ ಮಿಂಚಾಡುವುದು ನವಿರೆದ್ದು;
ಕಂಡರವನ ಮೊಗಚಂದಿರವು
ಚಂದ್ರಶಿಲೆಯಂತೆ ಕರಗುವುದು!

ಇನಿಯ ಬಳಿಬಂದೆನ್ನ ಕೊರಳನು
ಅವನ ತೋಳಲಿ ಸೆಳೆದು ಅಪ್ಪಲು
ಒಡೆದ ಈ ಮನಕುಂಟು ತಲ್ಲಣ
ತಿರುಗಿ ಪೆಡಸಾದೇನೆಂಬ ಕಳವಳ

ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕದಿಂದ)

ಶ್ರುತ್ವಾ ನಾಮಾಪಿ ಯಸ್ಯ ಸ್ಫುಟಘನಪುಲಕಂ ಜಾಯತೇಂSಗಂ ಸಮಂತಾತ್
ದೃಷ್ಟ್ವಾ ಯಸ್ಯಾನನೇಂದುಂ ಭವತಿ ವಪುರಿದಂ ಚಂದ್ರಕಾಂತಾನುಕಾರಿ |
ತಸ್ಮಿನ್ನಾಗತ್ಯ ಕಂಠಗ್ರಹಣಸರಭಸಸ್ಥಾಯಿನಿ ಪ್ರಾಣನಾಥೇ
ಭಗ್ನಾ ಮನಸ್ಯ ಚಿಂತಾ ಭವತಿ ಮಯಿ ಪುನರ್ ವಜ್ರಮಯ್ಯಾಮ್ ಕದಾ ನು ||

श्रुत्वा नामापि यस्य स्फुटघनपुलकं जायतेऽङ्गं समन्तात्
दृष्ट्वा यस्याननेन्दुं भवति वपुरिदं चन्द्रकान्तानुकारि  ।
तस्मिन्नागत्य कण्ठग्रहणसरभसस्थायिनि प्राणनाथे
भग्ना मानस्य चिन्ता भवति मम पुनर्वज्रमय्याः कदा नु || 

-ಹಂಸಾನಂದಿ
 
ಕೊ: ಮೂರನೇ ಸಾಲಿಗೆ "ತಸ್ಮಿನ್ನಾಗತ್ಯ ಕಂಠಗ್ರಹನಿಕಟ ಪದಸ್ಥಾಯಿನಿ ಪ್ರಾಣನಾಥೇ" ಎಂಬ ಪಾಠಾಂತರವಿರುವಂತೆ ತೋರುತ್ತದೆ.

ಕೊ.ಕೊ: ಚಂದ್ರಶಿಲೆ (Moonstone) ಎಂಬ ಖನಿಜವು ಚಂದ್ರನ ಬೆಳಕಲ್ಲಿ ತೇವಗೊಳ್ಳುತ್ತದೆ, ಮೃದುವಾಗುತ್ತದೆ ಎಂಬುದೊಂದು ಕವಿಸಮಯ. ಇದು ಎಷ್ಟರ ಮಟ್ಟಿಗೆ ವೈಜ್ಞಾನಿಕ ಸತ್ಯ ಎನ್ನುವುದು ನನಗೆ ಗೊತ್ತಿಲ್ಲ!

ಕೊ.ಕೊ.ಕೊ: ಕೊನೆಯ ಸಾಲಿನಲ್ಲಿರುವ "ಭಗ್ನಾ ಮನಸ್ಯ ಚಿಂತಾ" ಎಂಬ ಮಾತುಗಳು, ಯಾವುದೋ ಕಾರಣಕ್ಕೆ ತನ್ನ ಇನಿಯನಿಂದ ಕೋಪಿಸಿಕೊಂಡು ದೂರಾದ ಹೆಣ್ಣೊಬ್ಬಳು, ದೂರವಿದ್ದಾಗಲೂ ಅವನನ್ನು ಮರೆಯಲಾರದೇ ಕೊರಗುವ ಹಾತೊರೆತವನ್ನು ಸೂಚಿಸುತ್ತದೆ ಎಂದು ನನ್ನೆಣಿಕೆ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ