ನಂದನ ಕಂದನಿಗೆ

ಪೊಂಗೊಳಲ ರಂಧ್ರಗಳ
ಚೆಂಬೆರಳ ತುದಿಗಳಲಿ
ಮುಚ್ಚುತಾ ತೆರೆಯುತಿಹನ

ತಿರುತಿರುಗಿ ಮರಮರಳಿ
ತನ್ನುಸಿರ ಗಾಳಿಯನು
ಕೊಳಲಿನಲಿ ತುಂಬುವವನ

ಅರಳಿದ ತಾವರೆಯ
ಹೋಲುವಾ ಕಂಗಳಿಹ
ಚೆಂದದಾ ನಿಲುವಿನವನ

ವಂದಿಸುವೆ ನಾನೀಗ
ಬೃಂದಾವನದಿ ನಲಿವ
ನಂದಗೋಪನ ಕಂದನ


ಸಂಸ್ಕೃತ ಮೂಲ ( ಲೀಲಾ ಶುಕನ ಕೃಷ್ಣಕರ್ಣಾಮೃತದಿಂದ):

ಅಂಗುಲ್ಯಗ್ರೈಃ ಅರುಣಕಿರಣೈಃ ಮುಕ್ತಸಂರುದ್ಧರಂಧ್ರಂ
ವಾರಂ ವಾರಂ ವದನಮರುತಾ ವೇಣುಮಾಪೂರಯಂತಂ |
ವ್ಯತ್ಯಸ್ತ್ಯಾಂಘ್ರಿಂ ವಿಕಚಕಮಲಚ್ಛಾಯವಿಸ್ತಾರ ನೇತ್ರಂ
ವಂದೇ ವೃಂದಾವನಸುಚರಿತಂ ನಂದಗೋಪಾಲ ಸೂನುಂ ||


-ಹಂಸಾನಂದಿ

ಚಿತ್ರ ಕೃಪೆ: ಅನೂಪ್ ಹುಲ್ಲೇನ ಹಳ್ಳಿ ಅವರ ಸುಂದರ ಫೋಟೋ ಬ್ಲಾಗ್, ಅನುಬಿಂಬ್ ; ಸೋಮನಾಥಪುರದ ಹೊಯ್ಸಳ ಶೈಲಿಯ ಗೋಪಾಲ ಕೃಷ್ಣನ ವಿಗ್ರಹ. ಪದ್ಯದಲ್ಲಿ ಹೇಳಿರುವ "ವ್ಯತ್ಯಸ್ಥ್ಯಾಂಘ್ರಿಂ" ಅನ್ನುವುದಕ್ಕೆ ಈ ವಿಗ್ರಹ ಒಳ್ಳೇ ಉದಾಹರಣೆಯೆನಿಸಿತು.

ಕೊ: ಇದು ಕೃಷ್ಣಕರ್ಣಾಮೃತದ ಐದನೇ ಪದ್ಯ. ಈ ಮೊದಲು ಮಾಡಿದ್ದ ಈ ಅನುವಾದವು ಈ ಪದ್ಯದ ನಂತರ ಬರುವ ಪದ್ಯ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?