ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತುಕೊಟ್ಟು...

ಮಗುವೆಂದು ತಿಳಿಯುತ್ತ
ಮುತ್ತಿಟ್ಟ ಗೋಪಿಯರ
ತುಟಿಕಂಪ  ಸವಿಯುವನು ಈತ!

ಮಗುವೆಂದು ಅಪ್ಪಿದರೆ
ಬರಸೆಳೆದು ಕುತ್ತಿಗೆಯ
ಬಣ್ಣ ಕೆಂಪೇರಿಸಿದ ಈತ!

ಮಗುವೆಂದು  ಮುದ್ದಿನಲಿ
ತೊಡೆಮೇಲೆ ಏರಿಸಲು
ಮುಟ್ಟುತಲೆ ನಾಚಿಸುವ ಈತ!

ಕೇಡಿಗನು ಈ ಮಗುವೆ
ಕಳುಹಿಸಲಿ ಬಲುದೂರ
ನಮ್ಮೆಲ್ಲ  ಕೇಡುಗಳ ಈಗ!


ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ 2-68 ):

ಓಷ್ಟಂ ಜಿಘ್ರನ್ ಶಿಶುರಿತಿ ಧಿಯಾ ಚುಂಬಿತೋ ವಲ್ಲವೀಭಿಃ
ಕಂಠಂ ಗೃಹ್ಣನ್ ಅರುಣಿತ ಪದಂ ಗಾಢಮಾಲಿಂಗಿತಾಂಗಃ |
ದೋಷ್ಣಾ ಲಜ್ಜಾಪದಮಭಿಮೃಶನ್  ಅಂಕಮಾರೋಪಿತಾತ್ಮಾ
ಧೂರ್ತಸ್ವಾಮೀ ಹರತು ದುರಿತಂ ದೂರತೋ ಬಾಲಕೃಷ್ಣಃ ||

-ಹಂಸಾನಂದಿ

ಕೊ: ಹೊಗಳಬೇಕಾದವರನ್ನು ಮೇಲ್ನೋಟಕ್ಕೆ ಬೈಯುತ್ತ ಹೊಗಳುವುದಕ್ಕೆ "ನಿಂದಾ ಸ್ತುತಿ" ಎಂದು ಹೆಸರು. ಇಂತಹದ್ದರಲ್ಲಿ ಹರಿದಾಸರು ಪ್ರವೀಣರು. ಪುರಂದರದಾಸರು, ಕನಕದಾಸರು ಮೊದಲಾದವರು ಹಲವಾರು ದೇವರನಾಮಗಳನ್ನು ನಿಂದಾಸ್ತುತಿಯ ರೂಪದಲ್ಲಿ ರಚಿಸಿರುವುದು ತಿಳಿದಿರುವ ಸಂಗತಿಯೇ.

ಕೊ.ಕೊ: ’ಮೆಲ್ಲ ಮೆಲ್ಲನೆ ಬಂದನೆ’  ಅನ್ನುವುದು ಪುರಂದರ ದಾಸರ ಒಂದು ಜನಪ್ರಿಯ ರಚನೆ . ಅದರಲ್ಲಿ ಬರುವ  "ಹಾಲು ಮಾರಲು ಹೋದರೆ ನಿನ್ನಯ ಕಂದ ಶಾಲೆಯ ಸೆಳೆದುಕೊಂಡು ಪೋದನೆ" , "ಶಶಿಮುಖಿಯರನೆಲ್ಲ ಬಸಿರು ಮಾಡಿದನೀತ" ಮೊದಲಾದ ಸಾಲುಗಳಲ್ಲಿ ಕಂಡುಬರುವ ಭಾವವೇ ಈ ಪದ್ಯದಲ್ಲೂ ನನಗೆ ಕಂಡಿದ್ದರಿಂದ ಆ ರಚನೆಯ ಅನುಪಲ್ಲವಿಯ ಸಾಲನ್ನೇ ಇಲ್ಲಿ ತಲೆಬರಹವಾಗಿ ಕೊಟ್ಟಿದ್ದೇನೆ.

ಕೊ.ಕೊ.ಕೊ: ಹಿರಿಯ ಮಿತ್ರ ಶ್ರೀ ಕೃಷ್ಣಪ್ರಿಯ ಅವರು ಕೊಟ್ಟ ಕೆಲವು ಸಲಹೆಗಳನ್ನು  ಅಳವಡಿಸಿ ಪಂಚಮಾತ್ರಾಗಣಕ್ಕೆ ಹೊಂದಿಸುವ ಪ್ರಯತ್ನ ಮಾಡಿದ್ದೇನೆ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?