ಪುಳಿಯೋಗರೆ ಮತ್ತು ಬಿಸಿಬೇಳೇ ಹುಳಿಯನ್ನ ....

ತಲೆಬರಹ ನೋಡಿ, ಇದೇನು, ಅಡಿಗೆ ಶಾಲೆ ಶುರು ಮಾಡ್ತೀರಾ ಅಂದ್ರಾ? ಮಾಡಿದ್ರೆ ತಪ್ಪೇನಿಲ್ಲ, ಆದ್ರೆ ಸದ್ಯಕ್ಕಂತೂ ಯೋಚನೆ ಇಲ್ಲ ಅದರದ್ದು. ಇನ್ನು ಮುಂದೆ ಯಾವಾಗಲಾದ್ರೂ ಮಾಡೋಹಾಗಿದ್ರೆ ನಿಮಗೆ ಹೇಳೋದಂತೂ ಮರೆಯೋದಿಲ್ಲ! ಈಗ ಈ ಹಳೇ ಒಂದು ವಿಷಯದ ನೆನಪು ನನ್ನ ತಲೆಯೊಳಗೆ ಹೊಕ್ಕಿತ್ತು. ಅದಕ್ಕೇ ಅಂತಾನೇ ಈ ಪುಳಿಯೋಗರೆ ಮತ್ತೆ ಬಿಸಿಬೇಳೆ ಹುಳಿಯನ್ನದ ಪುರಾಣ ಹೇಳೋಕೆ ಹೊರಟಿದ್ದು.


ನನಗಂತೂ ಅನ್ನವಿಲ್ಲದೇ ಒಂದು ಇದ್ದರೂ ಏನೋ ಕಳೆದುಕೊಂಡ ಹಾಗಾಗುತ್ತೆ. ದಿನಾಲೂ ತಿನ್ನೋ ಆ ಅನ್ನಕ್ಕೆ ಅಷ್ಟು ಸತ್ವ ಇರುತ್ತೆ ಅಂತ ಗೊತ್ತಾಗಿದ್ದು ನಾನು ಮಹಾರಾಷ್ಟ್ರದಲ್ಲಿ ಕೆಲಸ ಮಾಡಲು ಹೋದಾಗಲೇ. ಇನ್ನೂ ಬಾಡಿಗೆ ಮನೆ ಸಿಕ್ಕಿರಲಿಲ್ಲ. ಯಾವುದೋ ಒಂದು ಹಾಸ್ಟೆಲ್ ನಲ್ಲಿ ವಾಸ, ಮತ್ತೆ ಒಂದು ಮೆಸ್ ನಲ್ಲಿ ಊಟ. ಆ ಮೆಸ್ ನಡೆಸುವಾಕೆಯಂತೂ ಚಪಾತಿ ಪಲ್ಯವನ್ನು ಬಡಿಸುವಾಗ ಅಷ್ಟೇನೂ ಹಿಂದೆಗೆಯದಿದ್ದರೂ, ಅನ್ನ ಬಡಿಸಲು ಮಾತ್ರ ಕಪಿಮುಷ್ಟಿಯೇ ಸರಿ! ಚಮಚಾಗಳ ಲೆಕ್ಕದಲ್ಲಿ ಅನ್ನ ಹಾಕಿದರೆ ದಿನಾ ಅನ್ನ ತಿನ್ನುವಂತಹವರಿಗೆ ಅದೆಷ್ಟು ಹಿಂಸೆ ಆಗಬಹುದು ಅಂತ ಗೊತ್ತಾಗಿದ್ದೇ ಆಗ. ಒಂದು ೩-೪ ವಾರ ಗಳಲ್ಲಿ ಮನೆ ಬಾಡಿಗೆಗೆ ಸಿಕ್ಕಿ, ನಾನು ನನ್ನ ಕೈಯಡುಗೆಯನ್ನೇ ತಿನ್ನುವಂತಾದ ಮೇಲೆ ಬದುಕಿದೆ.


ಒಂದೆರಡು ತಿಂಗಳಲ್ಲಿ ಬರೀ ಬದುಕುವಷ್ಟೇ ಅಲ್ಲದೆ ಚೆನ್ನಾಗೇ ಬದುಕುವಷ್ಟೂ ಅಡುಗೆ ಕೈ ಹತ್ತಿತು ಅನ್ನಿ. ನನ್ನ ಕೈ ರುಚಿ ನನ್ನ ಜೊತೆ ಕೆಲಸ ಮಾಡುತ್ತಿದ್ದವರಿಗೂ ಹತ್ತಿ, ಸಂಜೆ ಭೇಟಿ ಕೊಡತೊಡಗಿದರು. ಊಟದ ಸಮಯಕ್ಕೆ ಮನೆಗೆ ಬಂದವರನ್ನು ಊಟಕ್ಕೇಳಿ ಅನ್ನೋದು ಕನ್ನಡಿಗರಿಗೆ ಬಿಡಿ, ರಕ್ತದಲ್ಲೇ ಬಂದಿರುತ್ತೆ ಅನ್ನೋದು ನಿಮಗೂ ಗೊತ್ತಿದೆ. ಹಾಗಾಗಿ, ನನ್ನ ಅಡುಗೆಯ ರುಚಿಯನ್ನ ಅವರೂ ಆಗಿಂದಾಗ್ಗೆ ಕಾಣತೊಡಗಿದರು. ಊಟದ ದೆಸೆಯಿಂದಲೋ ಅಲ್ಲವೋ, ನಮ್ಮ ಮನೆಗೆ ಗೆಳೆಯರ ಹಾಯ್ದಾಟ ಹೆಚ್ಚೇ ಇತ್ತು, ನಾನು ಆ ಊರು ಬಿಡುವವರೆಗೆ.

ಈ ಊಟದ ವಿಷಯ ಮಾತಾಡೋವಾಗ ನೆನಪಿಗೆ ಬಂತು. ಯಾಕೋ ಬಹಳ ಜನ ಕನ್ನಡಿಗರಿಗೆ ಪುಳಿಯೋಗರೆಯನ್ನ ಚೆನ್ನಾಗಿ ಮಾಡೋಕೆ ಬರೋದಿಲ್ಲ. ಆದ್ರೆ, ಕನ್ನಡಿಗರು ಬಿಸಿಬೇಳೇ ಹುಳಿಯನ್ನ ಮಾಡೋದ್ರಲ್ಲಿ ಎತ್ತಿದ ಕೈ. ಬೇಕಿದ್ರೆ ಈ ಎರಡೂ ಮಾತು ಸರೀನೋ ಅಲ್ವೋ ಅನ್ನೋಕೆ ಒಂದಷ್ಟು ಕನ್ನಡದವರ ಮನೆಯಲ್ಲಿ ಎರಡನ್ನೂ ರುಚಿ ನೋಡಿ. ನಿಮಗೇ ಅನ್ಸತ್ತೆ. ಇಲ್ಲದಿದ್ರೆ. ಬೇರೆ ತಮಿಳೋರನ್ನೋ, ತೆಲುಗರನ್ನೋ ಕೇಳಿ. ಬಿಸಿಬೇಳೇ ಅನ್ನ ಮಾಡೋದ್ರಲ್ಲಿ ಕನ್ನಡಿಗರನ್ನ ಬಿಟ್ರಿಲ್ಲ ಅಂತ ಅವರುಗಳೂ ಒಮ್ಮತದಿಂದಲೇ ಒಪ್ಕೋತಾರೆ. ಹೀಗೆ ಒಂದನ್ನ ಚೆನ್ನಾಗಿ ಮಾಡೋವ್ರು ಇನ್ನೊಂದನ್ನು ಚೆನ್ನಾಗಿ ಮಾಡ್ದೇ ಇರೋದು ಒಂದು ಬೇಜಾರಿನ ವಿಷಯ ಅಲ್ವೇ ಅಂತ ಅನ್ನಿಸುತ್ತಿತ್ತು.

ಆದ್ರೆ, ಹಾಗೇನು ಮಾಡೋ ಗೋಜಿಲ್ಲ ಅಂತ ಈಗೀಗ ಗೊತ್ತಾಗ್ತಿದೆ. ಇದನ್ನ ಸರಿಪಡಿಸುವುದು ಬಹಳ ಸಲೀಸು. ಒಂದೇ ದಾರಿ. ಕನ್ನಡಿಗರು ಇನ್ಮೇಲೆ ಪುಳಿಯೋಗರೆ ಮಾಡೋದೇ ಬೇಡ. ಅದರ ಬದಲು ಬರೀ ಬಿಸಿಬೇಳೆ ಹುಳಿಯನ್ನ ಮಾತ್ರ ಮಾಡ್ಬೇಕು. ಎಲ್ಲೋ ನೂರರಲ್ಲಿ ಹತ್ತೋ ಇಪ್ಪತ್ತೋ ಜನ ಚೆನ್ನಾಗಿ ಪುಳಿಯೋಗರೆ ಮಾಡ್ಬಿಟ್ರೆ ಸಾಲದು. ಉಳಿದವರು ಎಲ್ಲಿಗೆ ಹೋಗ್ಬೇಕು? ಅವರಿಗೇನು ತಮಗೆ ಪುಳಿಯೋಗರೆ ಮಾಡೋಕೆ ಬರೋಲ್ಲ ಅಂತ ಹೇಳಿಸಿಕೊಳ್ಳೋಕೆ ಹುಚ್ಚೇ? ಇಲ್ಲ ಸುಮ್ಮ ಸುಮ್ಮನೆ ಅವರು ಕಷ್ಟ ಪಟ್ಟು ಕಲಿತ್ಕೋಬೇಕೇನು ಬೇರೆಯವರನ್ನ ಮೆಚ್ಚಿಸೋಕೆ? ಅದರ ಬದಲು ಪುಳಿಯೋಗರೆ ಮಾಡೋಗೆ ಬರೋವ್ರಿಗೇನೇ  ನೀವು ಇನ್ಮೇಲೆ ಪುಳಿಯೋಗರೆ ಮಾಡೋಹಾಗಿಲ್ಲ ಅಂತ ಕಟ್ಟುಪಾಡು ಮಾಡಿದ್ರಾಯ್ತಪ್ಪ.

ಏನಂತೀರ?

-ಹಂಸಾನಂದಿ

ಚಿತ್ರ ಕೃಪೆ: http://www.itslife.in/wp-content/gallery/receipe-rice/recipe-rice-puliyogare.jpg ಮತ್ತು http://en.wikipedia.org/wiki/File:Bisi_Bele_Bath.jpg

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?