ಹಬ್ಬಗಳ ಲೆಕ್ಕಾಚಾರ

ಕೆಲವು ಬಾರಿ ಭಾರತದಲ್ಲಿರುವ ನನ್ನ ನೆಂಟರು/ಗೆಳೆಯರು ನಾನಿರುವ ಕ್ಯಾಲಿಫೋರ್ನಿಯಾದಲ್ಲಿ ನಾವು ಆಚರಿಸುವ ಕೆಲವು ಹಬ್ಬಗಳು ಹೇಗೆ/ಏಕೆ ಒಂದು ದಿನ ಮೊದಲಾಗೇ ಬರುತ್ತವೆ ಅಂತ ಕೇಳಿದ್ದರು. ಅದರ ಬಗ್ಗೆ ಒಂದು ಕಿರುಬರಹ ಇಲ್ಲಿದೆ -  ಇದು ಹಬ್ಬದ ದಿನವೇ ಹಬ್ಬ ಆಚರಿಸುವವರ ಬಗ್ಗೆ - ಅನುಕೂಲಕ್ಕೆಂದು ವೀಕೆಂಡ್ ಹಬ್ಬ ಆಚರಿಸುವರ ಬಗ್ಗೆ ಅಲ್ಲ ಅನ್ನೋದನ್ನ ಮೊದಲೇ ಸ್ಪಷ್ಟ ಪಡಿಸಿಬಿಡ್ತೇನೆ!
ನಮ್ಮ ಮನೆಗಳಲ್ಲಿ ಮಾಡುವ ಯುಗಾದಿಹಬ್ಬ, ದೀಪಾವಳಿ ಹಬ್ಬ, ಗಣೇಶನ ಹಬ್ಬ, ಬೊಂಬೆ ಹಬ್ಬ ಹೀಗೆ ಹಲವು ದೊಡ್ಡ ಹಬ್ಬಗಳು ಚಂದ್ರ ನಮಗೆ ಹೇಗೆ ಕಾಣುತ್ತಿದ್ದಾನೆ ಎಂಬ ಲೆಕ್ಕಾಚಾರದ ಮೇಲೆಯೇ ನಿಂತಿವೆ. ಚಂದ್ರಮಾನ ಲೆಕ್ಕಾಚಾರಗಳಲ್ಲಿ ಒಂದು ದಿನ ಪಾಡ್ಯ ಮುಗಿದು, ಚಂದ್ರ ಬಿದಿಗೆಗೆ ಹೋದರೆ, ಆ ದಿನವೆಲ್ಲ ಹಬ್ಬದ ಆಚರಣೆಗೆ ಪಾಡ್ಯ ಎಂಬ ಲೆಕ್ಕ. (ನನ್ನ ತಿಳುವಳಿಕೆಯ ಮಟ್ಟಿಗೆ ಬರೆದಿರುವೆ - ತಪ್ಪಿದ್ದರೆ, ತಿಳಿದವರು ತಿದ್ದಬಹುದು). ಒಂದು ವೇಳೆ, ಪಾಡ್ಯ ಬೆಳಗ್ಗೆ ಹತ್ತು ಗಂಟೆಗೇ ಮುಗಿದು ಹೋದರೂ ಆ ದಿನವೆಲ್ಲ ಪಾಡ್ಯ ಅಂತಲೇ ಲೆಕ್ಕ ಹಬ್ಬ ಮಾಡೋದಿಕ್ಕೆ. ಪಾಡ್ಯ ಬಿದಿಗೆ ಎಲ್ಲ ಚಂದ್ರನ ಎಷ್ಟು ಭಾಗ ಕಾಣುತ್ತೆ ಅನ್ನೋದರ ಮೇಲೆ ಇರೋದ್ರಿಂದ, ಅದು ನೇರವಾಗಿ ಗಣಿತದ ಲೆಕ್ಕ ಅಷ್ಟೇ. ಅದರಲ್ಲಿನ್ನೇನೂ ಅದಕ್ಕಿಂತ ಆಳವಾದ ಮಾತಿಲ್ಲ.

ಆದರೆ, ಕ್ಯಾಲಿಫೋರ್ನಿಯಾಗಿಂತ ಸುಮಾರು ಅರೆದಿನ ಮುಂದೆ ಇರುವಂತಹ ಕರ್ನಾಟಕದಲ್ಲಿ ಯಾಕೆ ಪಾಡ್ಯ ಬಿದಿಗೆ ತಡವಾಗಿ ಬರಬೇಕು?  ಇದು ಮೊದಲೇ ಬರಬೇಡವೇ? ಅನ್ನೋದು ಬಹಳ ಜನಗಳ ಪ್ರಶ್ನೆ. ಅಥವಾ ಬೆಂಗಳೂರಿನಲ್ಲಿ ಆಗಸ್ಟ್ ೨೬ಕ್ಕೆ ಗಣೇಶನ ಹಬ್ಬ ಇದ್ದರೆ, ಕ್ಯಾಲಿಫೋರ್ನಿಯಾದಲ್ಲೂ ಆಗಸ್ಟ್ ೨೬ಕ್ಕೆ ಆಚರಿಸಬೇಕು ಅಲ್ವಾ? ಅನ್ನೋದು ಅವರ ಪ್ರಶ್ನೆ. ಹಾಗೆ ಆಗಾಲೇಬೇಕಿಲ್ಲ ಅನ್ನೋದು ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ.
 
ಇದಕ್ಕೆ ಕಾರಣ, ಎರಡೂ ಕಡೆಯಿಂದ ನಾವು ನೋಡೋದು ಒಂದೇ ಚಂದ್ರನ್ನ ಅನ್ನೋದನ್ನ ನೆನೆಸಿಕೊಳ್ಳೋಣ. ಚಂದ್ರ ಭೂಮಿಯ ಸುತ್ತ ಸುಮಾರು ೩೦ ದಿನದಲ್ಲಿ ಸುತ್ತುತ್ತಾ ಇರೋದ್ರಿಂದ, ಒಂದು ದಿನದಲ್ಲಿ ೧/೩೦ ಭಾಗದಷ್ಟು ಸುತ್ತಬೇಕು. ಅರ್ಧ ದಿನದಲ್ಲಿ ೧/೬೦ ಭಾಗದಷ್ಟು ಮುಂದಕ್ಕೆ ಹೋಗಿರ್ತಾನೆ ಚಂದ್ರ. ಅಂದರೆ, ಅಷ್ಟು ಹೊತ್ತಿಗೆ ಭೂಮಿಯಿಂದ ಕಾಣೋ ಚಂದ್ರನ ಭಾಗ ಬದಲಾಗಿರುತ್ತೆ (ಹೆಚ್ಚು ಅಥವಾ ಕಡಿಮೆ). ಉದಾಹರಣೆಗೆ, ಯಾವದೋ ಏಪ್ರಿಲ್ ತಿಂಗಳಿನ ೫ನೇ ತಾರೀಕು ಬೆಂಗಳೂರಿನ ದಿನದಲ್ಲಿ, ಬೆಳಗ್ಗೆ ಯಾವುದೋ ಹೊತ್ತಿನಲ್ಲಿ ಚಂದ್ರ ಪಾಡ್ಯದಿಂದ ಬಿದಿಗೆಗೆ ಹೋಗಿರ್ತಾನೆ ಅಂದುಕೊಳ್ಳಿ. ಅಂದ್ರೆ ಆ ೫ನೇ ತಾರೀಕು ಬೆಂಗಳೂರಿನಲ್ಲಿ ಪಾಡ್ಯ- ನಮ್ಮ ಚಾಂದ್ರಮಾನದ ಪ್ರಕಾರ. ಇನ್ನು ಹನ್ನೆರಡು ಗಂಟೆ ಕಳೀನಿ. ಕ್ಯಾಲಿಫೋರ್ನಿಯಾದಲ್ಲಿ ೫ನೇ ತಾರೀಕು ಬೆಳಗ್ಗೆ ಈಗ. ಆದರೆ ಈಗ ಚಂದ್ರನ ಕಾಣೋ ಭಾಗ ಇನ್ನೊಂದು ಸ್ವಲ್ಪ ಹೆಚ್ಚಿಬಿಟ್ಟಿದೆ ಇಲ್ಲಿ - ಅಂದರೆ ಇಲ್ಲಿ ಪಾಡ್ಯ ಅಲ್ಲ, ಬಿದಿಗೆ ಆಗಿಬಿಟ್ಟಿರಲೂಬಹುದು! ಹಾಗಿದ್ದರೆ, ಇಲ್ಲಿ ೪ನೇ ತಾರೀಕೇ ಪಾಡ್ಯ ಆಗಿದ್ದಿರಬೇಕು. ಇದು ಯುಗಾದಿ ಪಾಡ್ಯ ಅಂತ ಇಟ್ಕೊಂಡ್ರೆ, ಕರ್ನಾಟಕದಲ್ಲಿ ಏಪ್ರಿಲ್ ೫ನೇ ತಾರೀಕು ಯುಗಾದಿ, ಅದೇ ಕ್ಯಾಲಿಫೋರ್ನಿಯಾ ಕನ್ನಡಿಗರಿಗೆ ಏಪ್ರಿಲ್ ೪ನೇ ತಾರೀಕೇ ಯುಗಾದಿ - ಈ ನಾನು ಹೇಳಿರುವಂತಹ ಸಂದರ್ಭದಲ್ಲಿ. ಈ ಲೆಕ್ಕಾಚಾರಗಳು ಅಕ್ಷಾಂಶ ರೇಖಾಂಶಗಳ ಪರಿಣಾಮವಾಗಿ ಬದಲಾಗುವುದರಿಂದ, ಎಲ್ಲಾ ಸಾರಿಯೂ ಹೇಗೇ ಆಗುತ್ತೆ ಅಂತ ಹೇಳೋಗಾಗಲ್ಲ (ನನಗೆ!).

ಇದು ಯಾಕೆ ನೆನಪಾಯ್ತು ಅಂದ್ರೆ  ಇದೇ ಡಿಸೆಂಬರ್ ಹತ್ತರಂದು ಚಂದ್ರ ಗ್ರಹಣ. ಚಂದ್ರ ಗ್ರಹಣ ಆಗೋದು ಹುಣ್ಣಿಮೆ ದಿನ ಅಂತ ಎಲ್ಲರಿಗೂ ಗೊತ್ತು. (ನಾಸಾ ಗ್ರಹಣ ಪುಟ ನೋಡಿ: http://eclipse.gsfc.nasa.gov/OH/OHfigures/OH2011-Fig06.pdf ನೋಡಿ). ಬೆಂಗಳೂರಿನಲ್ಲಿ ಗ್ರಹಣ ೧೦ರಂದು ಸಂಜೆ, ಚಂದ್ರ ಹುಟ್ತಾ ಇರೋವಾಗಲೇ ಗ್ರಹಣ ಹಿಡಿದಿರುವ ಚಂದ್ರನೇ ಹುಟ್ಟುತ್ತೆ. ಅದೇ, ಕ್ಯಾಲಿಫೋರ್ನಿಯಾದಲ್ಲಿ ೧೦ರಂದು ಬೆಳಗ್ಗೆ ಚಂದ್ರ ಮುಳುಗುತ್ತಾ ಇರುವಾಗ ಗ್ರಹಣ ಹಿಡಿಯುತ್ತೆ. ಅಂದರೆ, ಇಲ್ಲಿ ೯ನೇ ಸಂಜೆಯೇ ಹುಣ್ಣಿಮೆ ಚಂದಿರ ಕಂಡಿರಬಹುದು. ಗ್ರಹಣ ಬಿಡೋದು ತಾನೆ ಹಿಡಿಯೋದಕ್ಕಿಂತ ಮೊದಲು ಆಗಬೇಕು? ಅಂದ್ರೆ, ಕ್ಯಾಲಿಫೋರ್ನಿಯಾದಲ್ಲಿ ಗ್ರಹಣ ಹಿಡಿದಿದ್ದು ಕಂಡ ಮೇಲೆ ಬೆಂಗಳೂರಿನಲ್ಲಿ ಗ್ರಹಣ. ಹಾಗಾಗಿ ಚಂದ್ರನ ತಿಥಿ ಕ್ಯಾಲಿಫೋರ್ನಿಯಾದಲ್ಲಿ ಬೆಂಗಳೂರಿನಲ್ಲಿ ಬದಲಾಗೋದಕ್ಕಿಂತ ಮೊದಲು ಬದಲಾಗಿರಬಹುದು ಅನ್ನೋದಕ್ಕೆ ಇದೊಂದು ಉದಾಹರಣೆ ಅಷ್ಟೇ.

(ಇದು ಒಂದು ತರಹ over-simplified explanation - ಆದರೂ ಇರಲಿ ಅಂತ ಬರೆದೆ!)

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ