ಸಾವಿನ ಕಣಿವೆ

ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್ಪದಿಯಲ್ಲಿ ಹೊಸೆದ ಎರಡು ಪದ್ಯಗಳು:


ಹಲ್ಲು ಕಡಿಸುವ ಚಳಿಯ
ಸೊಲ್ಲನಡಗಿಪ ಕುಳಿರ
ಕಲ್ಲು ತುಂಬಿದ ಹಾದಿ ಮರೆಸುವಂತೆ
ಚೆಲ್ಲಿ ಹರಿದಿವೆ ಬಾನ
-ಲೆಲ್ಲೆಲ್ಲು ತಾರೆಗಳು
ಮಲ್ಲೆ ಬನದಲಿ ಕೋಟಿ ಹೂಗಳಂತೆ!

ಬೇಸರವ ಕಳೆಯಲಿಕೆ
ನೇಸರುದಯದ ಚಂದ
ಹಸನಾದ ನೋಟಗಳ ಸಾಲೆ ಇರಲು
ಹಸಿರು ಸಿಗದಿರಲೇನು?
ಬಿಸಿಲ ಧಗೆಯಿರಲೇನು?
ಹೆಸರು ಸಾವಿನಕಣಿವೆ ಸರಿಯಲ್ಲವು!


ಯುಎಸ್‍ಎ ಯಲ್ಲಿ ಅತಿ ಬಿಸಿಲು ಝಳವಿರುವ, ಅತಿ ತಗ್ಗಾದ (ಸಮುದ್ರ ಮಟ್ಟಕ್ಕಿಂತ ೨೮೨ ಅಡಿ ಕೆಳಗೆ) ಮತ್ತೆ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿ. ಮೇಲಿನ ಪದ್ಯಗಳಿಗೆ ಕಾರಣವಾದ,  ಅಲ್ಲಿನ ಕೆಲ ಚಿತ್ರಗಳು ಇಲ್ಲಿವೆ.

ಚಿತ್ರ ಕೃಪೆ - ನನ್ನ ಸ್ಯಾಮ್ಸಂಗ್ ಗ್ಯಾಲಕ್ಸ್ಜಿ ಫೋನ್



"ಕಲಾವಿದನ ಬಣ್ಣದ ತಟ್ಟೆ!" - Artists' Palette

ಡಾಂಟೆಯ ನೋಟ - ಆರು ಸಾವಿರ ಅಡಿ ಎತ್ತರದಿಂದ ಕಂಡಂತೆ ’ಸಾವಿನ ಕಣಿವೆಯ’ ತಳ 

ಸ್ಟೋವ್ ಪೈಪ್ ವೆಲ್ಸ್ ಹಳ್ಳಿ

ಗೋಲ್ಡನ್ ಕ್ಯಾನ್ಯನ್

ಬ್ಯಾಡ್ ವಾಟರ್ -ಸಮುದ್ರ ಮಟ್ಟದಿಂದ ೨೮೨ ಅಡಿ ಕೆಳಗೆ;ಚಿತ್ರದ ಕಲ್ಲು ಬಂಡೆಯ ನಡುವೆ ಕಾಣುವ ಬಿಳಿಪಟ್ಟಿಯ ಮೇಲೆ ಸಮುದ್ರ ಮಟ್ಟವನ್ನ ಗುರುತಿಸಿದೆ

ಉಪ್ಪು ಹರಳುಗಟ್ಟಿರುವ ಬ್ಯಾಡ್ ವಾಟರ್ ಬೇಸಿನ್



-ಹಂಸಾನಂದಿ

ಕೊ: ಗೆಳೆಯ ಮಂಜುನಾಥ ಕೊಳ್ಳೇಗಾಲ ಅವರು ನೀಡಿದ ಸಲಹೆಗಳಿಗೆ ಧನ್ಯವಾದಗಳು!

ಕೊ.ಕೊ: Death Valley, California ಬಗ್ಗೆ ಹೆಚ್ಚಿನ ಮಾಹಿತಿ, ವಿಕಿಪೀಡಿಯಾದಲ್ಲಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?