ಹೊಸ ವರ್ಷದ ಹೊಸ್ತಿಲಲ್ಲೊಂದು ಹೊಸ ವರ್ಣ

’ಹಂಸನಾದ’ ಬ್ಲಾಗೋದುಗರಿಗೆಲ್ಲ  ೨೦೧೨ ಸಂತಸದಿಂದ ಕೂಡಿರಲಿ ಎಂಬ ಹಾರೈಕೆಗಳಿಂದಲೇ ಮೊದಲು ಮಾಡುವೆ.

ಅದು ಹೇಗೋ ಕಳೆದ ವರ್ಷದ ಮೊದಲ ಬರಹವೂ ’ಬುರುಡೆ ಇಲ್ಲದ ವೀಣೆ’ ಎಂಬ ಸಂಗೀತವಾದ್ಯವೊಂದರ ಬಗ್ಗೆ ಬರೆದ ಪದ್ಯವೇ ಆಗಿತ್ತು. ಇರಲಿ, ಎಲ್ಲರ ಬಾಳಿನಲ್ಲೂ ಸಂಗೀತ ಹಾಸುಹೊಕ್ಕಾಗಿದ್ದರೆ, ಸಂತೋಷ ನೆಮ್ಮದಿಗಳು ಹೆಚ್ಚುತ್ತವೆ ಅನ್ನುವುದು ನನ್ನ ಎಣಿಕೆ.

ವರ್ಣ ಎಂದರೆ ಕರ್ನಾಟಕ ಸಂಗೀತದ ಒಂದು ರಚನಾ ಪ್ರಕಾರ. ಎಲ್ಲರಿಗೂ ಗೊತ್ತಿರುವಂತೆ ವರ್ಣ ಎಂದರೆ ಬಣ್ಣ ಎನ್ನುವುದು ಸಾಮಾನ್ಯಾರ್ಥ. ಆದರೆ ಸಂಗೀತದಲ್ಲಿ ಇದು ಹೇಗೆ ಒಂದು ಹಾಡುವ ರಚನೆಯಾಯಿತು? ಬಹುಶಃ ಒಂದು ರಾಗದ ಬಗೆ ಬಗೆಯ ಬಣ್ಣಗಳನ್ನ ತೋರಿಸೋದರಿಂದಲೇ ಈ   ಹೆಸರು ಬಂದಿರಬೇಕೆಂದು ತೋರುತ್ತೆ.  ಒಂದು ರಾಗದ ಬೇರೆ ಬೇರೆ ಸ್ವರೂಪಗಳನ್ನು ತೋರಿಸುವುದು, ಅದು ಒಳಗೊಳ್ಳುವ  ಬಗೆ ಬಗೆ ವಿನ್ಯಾಸಗಳನ್ನು ತೋರಿಸುವುದು ವರ್ಣಗಳ ಒಂದು ಗುರಿ ಎನ್ನಬಹುದು.

ಈ ರಚನಾಪ್ರಕಾರ ತುಂಬಾ ಹಳೆಯದ್ದೇನಲ್ಲ. ಕರ್ನಾಟಕ ಸಂಗೀತದಲ್ಲಿ ೧೮ ನೇ ಶತಮಾನದಲ್ಲಿ ಹುಟ್ಟಿಕೊಂಡದ್ದು.ರಾಗಭಾವ ವನ್ನು ಹೊಮ್ಮಿಸುವುದು, ಮತ್ತು ತಾನದ ಶೈಲಿಯನ್ನು ಅನುಕರಿಸುವ ತಾನವರ್ಣಗಳು, ಮತ್ತೆ ನೃತ್ಯಗಳಿಗೆ ಹೇಳಿ ಮಾಡಿಸಿದಂತಹ ಪದವರ್ಣಗಳು ಎಂಬ ಎರಡು ರೀತಿಯ ವರ್ಣಗಳು ಚಾಲ್ತಿಯಲ್ಲಿವೆ.

ಮೊದಮೊದಲು ವರ್ಣಗಳನ್ನು ರಚಿಸಿದವರಲ್ಲಿ ನಮ್ಮ ವೀಣೆ ಶೇಷಣ್ಣನವರ ಮನೆತನದ ಪೂರ್ವಜರಾದ ಪಚ್ಚಮಿರಿಯಂ ಆದಿಪ್ಪಯ್ಯ ಪ್ರಮುಖರು. ಅವರ ಭೈರವಿ ರಾಗದ ವಿರಿಬೋಣಿ ಎಂಬ ವರ್ಣ ಇಂದಿಗೂ ಅತೀ ಪ್ರಸಿದ್ಧ ವರ್ಣವೆಂದರೆ ತಪ್ಪಿಲ್ಲ.

ವರ್ಣಗಳಲ್ಲಿ ಸಾಹಿತ್ಯ ನಾಯಕಿ-ನಾಯಕೀ ಭಾವದಲ್ಲಿರುವುದೇ ಹೆಚ್ಚು. ನಾಯಕ ಆ ಕಾಲದ ಯಾರಾದರೂ  ಅರಸನಾಗಿರಬಹುದು, ಇಲ್ಲವೇ,  ಯಾರಾದರೂ  ದೇವರನ್ನೇ ತನ್ನ ಜೊತೆಗಾರನೆಂದು ಭಾವಿಸಿರುವ ನಾಯಕಿಯೂ ಇರಬಹುದು. ಹೆಚ್ಚಿನ ವರ್ಣಗಳು ತೆಲುಗು ಭಾಷೆಯಲ್ಲಿವೆ.

೧೮-೧೯ನೇ ಶತಮಾನಗಳಲ್ಲಿ ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್, ಪೂಚ್ಚಿ ಶ್ರೀನಿವಾಸ ಅಯ್ಯಂಗಾರ್, ಸ್ವಾತಿ ತಿರುನಾಳ್ ಮೊದಲಾದವರು ಉತ್ತಮ ತಾನವರ್ಣವರನ್ನು ರಚಿಸಿದವರಲ್ಲಿ ಪ್ರಮುಖರು. ಮತ್ತೆ ಇಪ್ಪತ್ತನೇ  ಶತಮಾನದಲ್ಲಿ ಲಾಲ್ಗುಡಿ ಜಯರಾಮನ್  ಮತ್ತೆ ಬಾಲಮುರಳಿಕೃಷ್ಣ ಅವರು ಬಹಳ ಒಳ್ಳೆಯ ವರ್ಣಗಳನ್ನು ರಚಿಸಿದ್ದಾರೆ.

ಇಷ್ಟೆಲ್ಲ ಯಾಕೆ ಹೇಳ್ತಾ  ಇದ್ದೀನಿ ಅಂದರೆ, ಕಳೆದ ಒಂದೆರಡು ವರ್ಷಗಳಿಂದ ನಾನೂ ಒಂದು ಮೂರು-ನಾಲ್ಕು ವರ್ಣಗಳನ್ನು ರಚಿಸುವ ಪ್ರಯತ್ನ ಮಾಡಿದ್ದೇನೆ.ಹಿಂದೆ ಒಂದು ವರ್ಣದ ಬಗ್ಗೆ ಬರೆದಿದ್ದೆ. ಈಗ  ಈಚಿನದ್ದೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.

ಇದರ ಸಾಹಿತ್ಯದ ಸಾಲುಗಳನ್ನು ನಾನು ಪುರಂದರ ದಾಸರ ಪದವೊಂದರಿಂದ ತೆಗೆದುಕೊಂಡಿದ್ದೇನೆ. ಆದರೆ ಅಲ್ಲಿ ಬದಲಾವಣೆಗಳನ್ನು ತಂದು, ವರ್ಣದ ಧಾಟಿಗೆ ಹೊಂದಿಸುವ ಪ್ರಯತ್ನ ಮಾಡಿದ್ದೇನೆ. ಮತ್ತೆ ಇದನ್ನು ನಾಲ್ಕು-ಕಲ್ಯಾಣಿ ರಾಗಗಳ ರಾಗಮಾಲಿಕಾ ವರ್ಣವಾಗಿ ಅಳವಡಿಸಿದ್ದೇನೆ.

ಇದರ ಸಾಹಿತ್ಯ ಹೀಗಿದೆ. ಮೊದಲೇ  ಹೇಳಿದಂತೆ, ಈ ಸಾಲುಗಳು ಪುರಂದರ ದಾಸರ ತಂಗಾಳಿ ವಶವಲ್ಲವೇ  ಎನ್ನುವ ಪದದಿಂದ ಪ್ರೇರಿತವಾಗಿವೆ. ಪುರಂದರ ವಿಠಲನನ್ನೇ ಸೇರ ಹಂಬಲಿಸ್ಸಿದ ನಾಯಕಿ, ಅವನೇಕೆ ಬಾರನೋ  ಎಂದು ತನ್ನಳನಲ್ಲು ತನ್ನ ಸಖಿಯಲ್ಲಿ ತೋಡಿಕೊಳ್ಳುತ್ತಿದ್ದಾಳೆ.

ಅಂಗಳದಿ ಬೆಳದಿಂಗಳು ತುಂಬಿದೆ  ಬಂಗಾರ ಭಾರ   ಒಡಲಿಗೆ  || ಪಲ್ಲವಿ||
ತಂಗದಿರನ ಕಿರಣ ಕಂದಿಸಿತೆನ್ನ   ತಂಗಾಳಿಯಲಿ ನಾ ನಿಲಲಾರೆನೇ || ಅನುಪಲ್ಲವಿ||
ಪುರಂದರ ವಿಠಲ ಬಾರನೇಕೇ ? ||ಚರಣ||


ಈ  ವರ್ಣದ ಪಲ್ಲವಿ ಕಲ್ಯಾಣಿ ರಾಗದಲ್ಲೂ,  ಅನುಪಲ್ಲವಿ ಹಮೀರ್ ಕಲ್ಯಾಣಿ ರಾಗದಲ್ಲೂ, ಚಿಟ್ಟೆ ಸ್ವರವು ಮೋಹನ ಕಲ್ಯಾಣಿ ರಾಗದಲ್ಲೂ ಮತ್ತೆ ಚರಣ ಯಮನ್ ಕಲ್ಯಾಣಿ ರಾಗದಲ್ಲೂ ಇವೆ.  ಚರಣದ ನಂತರ ಬರುವ ಎತ್ತುಗಡೆ  ಸ್ವರಗಳು ಇವೇ ನಾಲ್ಕು ರಾಗದಲ್ಲಿ ಹಿಮ್ಮುಖವಾಗಿ ಇವೆ.

ಇಲ್ಲಿ ಚಿಟಕಿಸಿದರೆ ಈ ವರ್ಣವನ್ನು ನೀವು ಕೇಳಬಹುದು: http://soundcloud.com/hamsanandi/kalyanimalika-varna

ಇದರ ಮೆಟ್ಟನ್ನು ನೋಡಬೇಕಾದರೆ ಇಲ್ಲಿ ಚಿಟಕಿಸಿ.

ನಿಮ್ಮೆಲ್ಲರ ಬಾಳೂ ಬರುವ ವರ್ಷದಲ್ಲಿ ವರ್ಣರಂಜಿತವಾಗಿರಲಿ, ನೆಮ್ಮದಿಯಿಂದ ತುಂಬಿರಲಿ ಎಂಬ ಹಾರೈಕೆಗಳೊಡನೆ,

-ಹಂಸಾನಂದಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ