ಚೊಚ್ಚಲ ಬಸಿರು

ಕನ್ನಡ  ಕವಿತೆಗಳನ್ನು ಬರೆಯುವ ಆಸಕ್ತಿ ಉಳ್ಳವರಿಗೆ,  ಪದ್ಯಪಾನ - ಎನ್ನುವುದು ಕಾವ್ಯ ಕುತೂಹಲಿಗರ ಒಂದು ತಂಗುದಾಣವೇ ಸರಿ. ಟೋಸ್ಟ್ ಮಾಸ್ಟರ್ಸ್ ಹೇಗೆ ಸಮಾನ ಮನಸ್ಕರ ನಡುವೆ ಮಾತುಗಾರಿಕೆಯನ್ನು ಕಲಿಸುತ್ತೋ, ಪದ್ಯಪಾನ  ಅದೇ ರೀತಿ, ಕವಿತೆಗಳನ್ನ ಛಂದಸ್ಸಿಗೆ ತಕ್ಕಂತೆ ಬರೆಯುವುವನ್ನ "ನೋಡಿ ಕಲಿ-ಮಾಡಿ ತಿಳಿ" ಯ ಮೂಲಕ ಕಲಿಸುತ್ತೆ.

ತಿಂಗಳೊಪ್ಪತ್ತಿನಲ್ಲಿ ಹೊಸ ಹೊಸ ಪ್ರಶ್ನೆಗಳನ್ನು ಹಾಕಿ, ಆಸಕ್ತರನ್ನು ಪದ್ಯಗಳನ್ನು ಬರೆಯಲು ಪ್ರೇರೇಪಿಸುವ ಈ ಪದ್ಯಪಾನದ ಹಿಂದಿರುವವರು ಶತಾವಧಾನಿ ಗಣೇಶ್ ಮತ್ತೆ ಕಾವ್ಯಾಸಕ್ತರ ಒಂದು ಬಳಗ. ಕೆಲವು ತಿಂಗಳುಗಳಿಂದ ಆಗೀಗ ಈ ತಾಣಕ್ಕೆ ಹೋಗಿ ಓದುತ್ತಿದ್ದುದ್ದುಂಟಾದರೂ, ನಾನು ಅಲ್ಲಿಯ ಪ್ರಶ್ನೆಗಳಿಗೆ ಉತ್ತರವಾಗಿ  ಪದ್ಯಗಳನ್ನು ಬರೆಯುವ ಪ್ರಯತ್ನ ಮಾಡುತ್ತಿರುವುದು ಈಚೆಗಷ್ಟೇ. ಎಡವದೇ ನಡೆವವರುಂಟೇ?  ಆದರೆ ಎಡವಿದರೆ, ಕೈಹಿಡಿದು ನಡೆಸುವಂತಹ ಕನ್ನಡ ಕವಿತಾಸಕ್ತರ ದಂಡೇ ಅಲ್ಲಿರುವಾಗ ಪ್ರಯತ್ನಿಸದೇ ಸುಮ್ಮನಿದ್ದರೆ ಅದರಿಂದ ನಷ್ಟ ನನಗೇ ತಾನೇ! ಅದಕ್ಕೇ ಈಚೆಗೆ ಒಂದೆರಡು ಪ್ರಯತ್ನ ಮಾಡತೊಡಗಿದ್ದೇನೆ.

ಅದರಲ್ಲಿ ಈ ಬಾರಿಯ ಪ್ರಶ್ನೆ - ಯಾವುದಾದರೂ ಒಂದು ಛಂದಸ್ಸಿನಲ್ಲಿ ಚೊಚ್ಚಲ ಬಸಿರ ಬಗ್ಗೆ ಪದ್ಯ ಬರೆಯಬೇಕಾಗಿತ್ತು.

ಅದಕ್ಕೆಂದು ಬರೆದ ಎರಡು ಕುಸುಮ*ಗಳು:


ಮೊದಲ ಮಳೆಯಾ ಸೊಗಸು
ಮೊದಲ ಬಸಿರಿನ ಹಿತವು
ಹದವಾದ ರೆಂಬೆಯಲಿ ಮೊಗ್ಗಿನರಳು |
ಚದುರಿತಾಗಸದಿ ತುಂ-
ಬಿದ ಕಾರಮೋಡಗಳು
ಮುದದಿ ಕಂದನು ಬುವಿಗೆ ಬರುವ ಮೊದಲು ||

ಹದಿಹರೆಯದಾ ಹೆಣ್ಣ
ಮುದವೀವ ಮೊಗ ಸೊಗಸು
ಪದುಮವನು ಸುತ್ತುವಾ ದುಂಬಿ ಸೊಗಸು |
ಚದುರು ಮೋಡದ ನಡುವೆ
ಬಿದಿಗೆ ಚಂದಿರ ಸೊಗಸು
ಮೊದಲ ಬಸುರಿನ ಹೆಣ್ಣ ಬಯಕೆ ಸೊಗಸು ||ಮತ್ತೆ, ಇದೇ ವಿಷಯದ ಮೇಲೆ ಎರಡು ಭಾಮಿನಿ ಷಟ್ಪದಿಯಲ್ಲಿ:


ಕಂದ ಬರುವನು ತಂದು ಕೊಡುವನು
ಚಂದ  ದಿನವೊಂಬತ್ತು ತಿಂಗಳ-
ಲೆಂದು ಭಾಮಿನಿ ಕಾಯುತಿದ್ದರೆ ಬರುವ ದಿನಗಳನು
ಬಂದುವೋಕರಿಕೆಯ ದಿನಂಗಳು
ತಂದವೋ ಅರಿಯದಾ ಹಿಂಸೆಯ-
ಲೆಂತು ತಾಳ್ವುದೊ ಮುಂದೆ ಎನಿಸಿತು ಮೂರು ತಿಂಗಳಲಿ


ತಿಂದುದೊಂದೂ ದಕ್ಕದಂತಿರ
ಲೆಂತು ಕಳೆವಳೊ ಬರುವ ದಿನಗಳ
ನೊಂದು ಅರಿಯದ ತರಳೆ ಉಣ್ಣದೆ ಸೊರಗಿ ಪೋಗಿಹಳು
ಕಂದ ಹುಟ್ಟುವುದಾರು ಮಾಸದಿ
ಚಂದ ಕನಸುಗಳನ್ನೆ ಕಾಣುತ
ಕುಂದುಗಳ ಮರೆವೆನ್ನುವಾ ಮುಡಿವನ್ನು ತಾಳಿಹಳು

-ಹಂಸಾನಂದಿ

ಕೊ: ಕುಸುಮ, ಭಾಮಿನಿ ಎರಡೂ ಷಟ್ಪದಿಗಳು, ಅಂದರೆ ಆರು ಸಾಲಿನಲ್ಲಿ ಪದ್ಯವನ್ನಳವಡಿಸುವಂತಹ ಕನ್ನಡ ಛಂದಸ್ಸಿನ ಮಾದರಿಗಳು.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ