ಮುದ್ದುಸ್ವಾಮಿಗೆಇದ್ದನೊಬ್ಬನು ಮುದ್ದುಸ್ವಾಮಿಯು ಸಿದ್ಧನಾತನು ಖಂಡಿತ
ಮುದ್ದುಕುವರನ ಬಿಡದೆ ಭಜಿಸುತ ವೀಣೆ  ಬಾರಿಸಿ ಸಂತತ
ಸಿದ್ಧಿವಡೆದನು ರಾಮಸ್ವಾಮಿಯ ಸುತನು ದೀಕ್ಷೆಯ ಹಿಡಿದವ
ಸುದ್ದಿ ಮಾಡದೆ ಸೊಗದ ಗೀತವ  ತಿದ್ದಿ ತೀಡುತ ಪಾಡುತ ||1||

ನಾಗರಾಜನ ಹೆಸರು ಹೊಂದಿದ ಸಾಧ್ವಿತಾಯಿಯ ಮಗನಿವ
ರಾಗಸಾಗರ ಭಕ್ತಿಯಾಗರ ಮೇಳಪದ್ಧತಿ ನಿಲಿಸಲು
ಹೋಗಲಾಡಿಸಿ ದೋಷವೆನ್ನುವ ಸುಳ್ಳುಮಾತುಗಳಡಗಿಸಿ
ಸಗ್ಗವಿಲ್ಲಿಗೆ ತಂದುಕೊಟ್ಟನು ತನ್ನ ಕೃತಿಗಳ ಮೂಲಕ ||2||

-ಹಂಸಾನಂದಿ

ಚಿತ್ರಕೃಪೆ: http://en.wikipedia.org/wiki/File:Dikshitar.png

ಕೊ: ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರ ಬಗ್ಗೆ ಎರಡು ವೃತ್ತಗಳನ್ನು ಬರೆಯುವ ಪ್ರಯತ್ನ. ಇವೆರಡನ್ನೂ ಮತ್ತಕೋಕಿಲ ಎಂಬ ವೃತ್ತಕ್ಕೆ ಹೊಂದಿಸುವ ಗುರಿ. ಈ ಛಂದಸ್ಸಿಗೆ ಮಲ್ಲಿಕಾಮಾಲೆ ಎಂದೂ ಹೆಸರಿದೆಯಂತೆ. ಈ ಪದ್ಯಗಳು ೧೦೦% compliant ಇಲ್ಲದೇ ಇರಲೂಬಹುದು!

ಕೊ.ಕೊ: ಮುತ್ತುಸ್ವಾಮಿ ಎಂಬ ಹೆಸರು ಹೆಚ್ಚಾಗಿ ಪ್ರಚಲಿತದಲ್ಲಿದ್ದರೂ ಮುದ್ದುಸ್ವಾಮಿ ಎನ್ನುವುದೇ ಸರಿಯಾದ ರೂಪವೆಂದು ಕೆಲವು ವಿದ್ವಾಂಸರ ಅಭಿಮತ

ಕೊ.ಕೊ.ಕೊ: ಮುತ್ತುಸ್ವಾಮಿ ದೀಕ್ಷಿತರ ತಂದೆಯ ಹೆಸರು ರಾಮಸ್ವಾಮಿ ದೀಕ್ಷಿತ. ತಾಯಿಯ ಹೆಸರು ಸುಬ್ಬಮ್ಮ. ಮುತ್ತುಸ್ಚಾಮಿದೀಕ್ಷಿತರು ವೈಣಿಕ, ಗಾಯಕ ಹಾಗೂ ಯೋಗ ಸಿದ್ಧಿಪಡೆದವರೆಂದೂ ಹೆಸರಾಗಿದ್ದಾರೆ. ಇದಲ್ಲದೆ, ವೆಂಕಟಮಖಿಯ ಮೇಳ ಪದ್ಧತಿಯನ್ನು ಹೆಚ್ಚಾಗಿ ಪ್ರಚಾರಕ್ಕೆ ತರುವುದಕ್ಕೆಂದೇ ಅದಕ್ಕೆ ತಕ್ಕಂತಹ ರಚನೆಗಳನ್ನೂ ಮಾಡಿದ್ದಾರೆ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ