ರಾಮಾಯಣದಲ್ಲೊಂದು ಮಹಾಭಾರತ

ರಾಮಾಯಣದ ಕಥೆ ಕೇಳದ ಕನ್ನಡಿಗರು ಯಾರಿದ್ದಾರೆ? ಹಾಗೇ ರಾಮಾಯಣವನ್ನ ಬರೆದ   ವಾಲ್ಮೀಕಿಯ ಕಥೆಯೂ ಸುಪರಿಚಿತವೇ. ಬೇಡನಾಗಿದ್ದವ ನಂತರ ಮನಃಪರಿವರ್ತನೆಗೊಂಡು ವಾಲ್ಮೀಕಿಯಾಗಿ ರಾಮಾಯಣದಂತಹ  ಮಹಾಕಾವ್ಯನ್ನೇ ಬರೆದ. ಅದರಲ್ಲೂ, ಈ ರಾಮಾಯಣಕ್ಕೆ ಮಂಗಳ  ಹಾಡಿದ್ದು ಜೋಡಿ  ಹಕ್ಕಿಗಳಲ್ಲಿ ಒಂದನ್ನು ಬೇಡನೊಬ್ಬ  ಬಾಣದಲ್ಲಿ  ಹೊಡೆದು ಕೊಂದಾಗಲೇ. ಆಗ ವಾಲ್ಮೀಕಿಯ ಬಾಯಲ್ಲಿ ಹೊರಬಂದದ್ದು ಈ ಶ್ಲೋಕ:


ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ |
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮ ಮೋಹಿತಮ್ ||

"ಎಲೋ ಬೇಡನೇ! ಜೋಡಿ ಕ್ರೌಂಚಗಳಲ್ಲೊಂದನ್ನು ಕೊಂದ  ನೀನು ನೂರ್ಕಾಲದಲ್ಲೂ ಏಳಿಗೆಯನ್ನು ಹೊಂದದೇ ಹೋಗು" ಎಂಬ ಈ ದುಃಖದ, ಶಪಿಸುವ ಮಾತೇ ಛಂದೋಬದ್ಧವಾಗಿ ಮೂಡಿಬಂದಿದ್ದರಿಂದ ನಾರದನೇ, ವಾಲ್ಮೀಕಿಗೆ ಇದೇ ಅವನ ರಾಮಾಯಣಕ್ಕೆ ಮಂಗಳಾಚರಣೆಯಾಗಲಿ ಎಂದು ಹರಸಿದನಂತೆ. ಹಾಗೆಂದೇ ಈ ಶ್ಲೋಕಕ್ಕೆ ಬೇರೆ ಬೇರೆ ಅರ್ಥಗಳನ್ನೂ ಕೊಡುವುದುಂಟು. ಅದಿರಲಿ.

ಈಚೆಗೆ ಪದ್ಯಪಾನದಲ್ಲಿ, ರಾಮಾಯಣಕ್ಕೆ ಕಾರಣವಾದ ಈ ಘಟನೆಯಬಗ್ಗೆ, ಯಾವುದಾದರೂ ಒಂದು ಛಂದೋಬದ್ಧವಾದ ಪದ್ಯವನ್ನು ಬರೆಯಿರೆಂಬ ಸಮಸ್ಯೆ ಇತ್ತು - ಆದರೆ ಒಂದು  ಕರಾರು - ಪದ್ಯದಲ್ಲಿ "ಸುಯೋಧನ", "ಕರ್ಣ", "ದುಶ್ಯಾಸನ", "ಶಕುನಿ"  - ಈ ಪದಗಳು ಪದ್ಯಗಳಲ್ಲಿ ಇರಬೇಕು, ಅಂದರೆ, ರಾಮಾಯಣದಲ್ಲಿ, ಒಂದು ರೀತಿ ಮಹಾಭಾರತವನ್ನು ತರುವಂತೆಯೇ ಆಯ್ತಲ್ಲ!  ಇದೇ ತಾನೇ ಸಮಸ್ಯಾ ಪೂರಣದ ಮಜ !


ಇದನ್ನು ನಾನು ಬಿಡಿಸಿದ್ದು ಹೀಗೆ -ಈ ಭಾಮಿನಿಯ ಮೂಲಕ:

ಬೇಡನೋರ್ವನು ಮರದ ಮೇಗಡೆ 
ಜೋಡಿ ಶಕುನಿಯ ಕಂಡು ಒಮ್ಮೆಲೆ
ಹೂಡಿ ಶರವ ಸುಯೋಧನಂತೆಯೆ ಹೆದೆಯ ಸೆಳೆದಿರಲು
ಕೇಡಿಗನೆ! ದುಶ್ಯಾಸನನೆ! ನಿನ-
ಗೇಡು ಸಾಸಿರದಲ್ಲು ಏಳಿಗೆ
ಬೇಡವೆನುತಲಿ ಕರ್ಣಭೇದಿಪಶಾಪ ಮುನಿಯಿತ್ತ ||

-ಹಂಸಾನಂದಿ

ಕೊ: ಶಕುನದ ಹಕ್ಕಿ ಅಂತ ಹಕ್ಕಿಯೊಂದಿದೆ. ಅದೇ ಕ್ರೌಂಚವೇ ಅಲ್ಲವೇ ಅನ್ನುವುದು ಗೊತ್ತಿಲ್ಲ. ಆದರೆ, ಶಕುನಿ ಎಂದರೂ ಹಕ್ಕಿ ಅನ್ನುವ ಅರ್ಥವೂ ಇದೆ. ಸುಯೋಧನ  ಅನ್ನುವುದನ್ನು,  ಹೋರಾಟಗಾರ ಎಂಬ ಅರ್ಥದಲ್ಲೂ,  ದುಶ್ಯಾಸನ ಅನ್ನುವುದನ್ನು ಅಂಕೆಗೆ ಸಿಕ್ಕದವನು ಎಂಬ ಅರ್ಥದಲ್ಲೂ,  ಕರ್ಣ ಎನ್ನುವುದನ್ನು ಕಿವಿ ಎಂದೂ  ( ಎಲ್ಲವೂ ರೂಢ್ಯರ್ಥಗಳೇ )  ಬಳಸಿದ್ದೇನೆ.

ಕೊ.ಕೊ: ಏಡು ಅನ್ನುವ ಪದಕ್ಕೆ ಬರಹ ನಿಘಂಟು ಸಮಯ, ಕಾಲ ಎಂಬ ಅರ್ಥ ಕೊಡುತ್ತದೆ. ಮಾನಿಷಾದ ಶ್ಲೋಕದ “ಶಾಶ್ವತೀ ಸಮಾಃ” - ಅಂದರೆ  ಬಹುಕಾಲ - ಇದಕ್ಕೆ "ಏಡು ಸಾಸಿರ"  ಇದು ಸಮಾಂತರವಾಗಿದೆಯೆನ್ನಿಸಿ ಹಾಗೆ ಬಳಸಿದ್ದೇನೆ.

ಕೊ.ಕೊ.ಕೊ : ಪದ್ಯಪಾನದ ಜಾಲತಾಣಕ್ಕೇ ಹೋದರೆ ನೀವು ಇದೇ ಸಮಸ್ಯೆಗೆ ಬೇರೆ ಬೇರೆಯವರ ಉತ್ತರಗಳನ್ನೂ  ಓದಿ ಆನಂದಿಸಬಹುದು.


Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?