ನಾಲ್ಕು ವಾದ್ಯಗಳು ಒಬ್ಬಳು ಹಾಡುಗಾರ್ತಿ

ಯಾಕೋ "ಒಬ್ಬ ರಾಧೆ ಇಬ್ಬರು ಕೃಷ್ಣರು" ಅನ್ನೋ ಯಂಡಮೂರಿ ವೀರೇಂದ್ರನಾಥರ ಕಾದಂಬರಿಯಂತೆ ಇದೆಯಲ್ಲ ತಲೆಬರಹ ಅಂದಿರಾ? ಹಾಗೇನೂ ಇಲ್ಲಪ್ಪ. ಒಂದು ಚಿಕ್ಕ ಹರಟೆ. ಜೊತೆಗೆ ಒಂದೆರಡು ಪದ್ಯ.  ಅಷ್ಟೇ.

ಕರ್ನಾಟಕ ಸಂಗೀತವನ್ನು ಹಾಡುವವರು ಎಷ್ಟೋ ಜನ ಅರ್ಥವನ್ನು ತಿಳಿದು ಹಾಡುವುದಿಲ್ಲ ಅಂತ ಒಂದು ದೂರು ಯಾವಾಗಲೂ ಕೇಳಿಬರುವುದುಂಟು. ಬೇರೆ ಬೇರೆ ಭಾಷೆಯ ಹಾಡುಗಳನ್ನು ಹಾಡುವಂತಹ ಪರಿಪಾಠವಿರುವಾಗ, ತಮಗೆ ತಿಳಿಯದ ಭಾಷೆಯಲ್ಲಿರುವ ಹಾಡುಗಳೆಲ್ಲವನ್ನೂ ಅರ್ಥ ತಿಳಿದು ಹಾಡುವುದಾದರೂ ಹೇಗೆ ಅಂತ ಇದಕ್ಕೊಂದು ಮರುಪ್ರಶ್ನೆ ಹಾಕುವವರಿದ್ದಾರೆ. ಅಲ್ಲದೆ, ಇನ್ನೊಂದು ಕಡೆ ಸಂಗೀತದಲ್ಲಿ ಸಾಹಿತ್ಯವು ಮೇಲುಗೈಯಾಗಿರುವ ಅಗತ್ಯವಿಲ್ಲ ಅನ್ನುವ  ಅಭಿಪ್ರಾಯವೂ ಇದೆ. ವಾದ್ಯ ಸಂಗೀತದಲ್ಲಿ ’ಮಾತು’ ಇರದಿದ್ದರಿಂದ ಹಲವು ಕಲಾವಿದರು ಈಚೆಗೆ ಯಾವ ಹಾಡಿಗೂ ಕಟ್ಟುಬೀಳದೆ, ಕೇವಲ ವಾದ್ಯ ಸಂಗೀತಕ್ಕೆಂದೇ ರಚಿಸಿರುವ ರಚನೆಗಳೂ ಇವೆ.

ಸಂಗೀತ ಕಚೇರಿಗಳಲ್ಲಿ ಯಾವುದಾದರೊಂದು ಕೃತಿಯನ್ನು ವಿಸ್ತಾರವಾಗಿ ಹಾಡಲು ತೆಗೆದುಕೊಂಡಾಗ,  ಒಂದು ಸಾಲನ್ನೇ ಮತ್ತೆ ಮತ್ತೆ ಮರಳಿ ಮರಳಿ ಹಾಡುತ್ತ, ಅದರ ಸಂಗೀತ ಸಾಧ್ಯತೆಗಳನ್ನು ಹೆಚ್ಚಿಸುವ ಒಂದು ವಿಧಾನಕ್ಕೆ ನೆರವಲು ಎಂದು ಹೆಸರು. ಮತ್ತೆ ಮತ್ತೆ ಹಾಡುವಂತಹ ಈ ಸಾಲನ್ನು ತೆಗೆದುಕೊಳ್ಳುವಾಗಲಾದರೂ ಕಲಾವಿದರು ಸಾಹಿತ್ಯಕ್ಕೆ ಸ್ವಲ್ಪ ಹೆಚ್ಚಿನ ಗಮನವಿತ್ತರೆ ಒಳ್ಳಿತು ಅನ್ನುವುದು ಒಬ್ಬಬೇಕಾದ್ದ ಮಾತು. ಇಲ್ಲದಿದ್ದರೆ ಹಾಡು ಅರ್ಥವಾಗುವುದು ಬಿಟ್ಟು ಅಭಾಸವಾಗುವ ಸಾಧ್ಯತೆಗಳು ಇದ್ದೇ ಇವೆ! ಎಲ್ಲೋ ತುಂಡರಿಸಿ, ಎಲ್ಲೋ ಸೇರಿಸಿ, ಅಂತೂ ಅನರ್ಥವೇ. ಹಾಗಾಗಿ ನೆರವಲಿಗೆ ಆಯ್ದುಕೊಳ್ಳುವ ಸಾಲು, ನಮಗೆ ಅರ್ಥವಾಗದ ಭಾಷೆಯಲ್ಲಿದ್ದರೆ ಅದರ ಅರ್ಥವನ್ನು ಬಲ್ಲವರಿಂದ ಅರಿತು, ಅದನ್ನು ಮರಳಿ ಮರಳಿ ಹಾಡುವುದರಲ್ಲಿ ಏನೂ ತಪ್ಪಾಗಲಾರದು, ಅರ್ಥಸ್ವಾರಸ್ಯ ಕೆಡಲಾರದು ಅನ್ನುವುದನ್ನು ಖಾತ್ರಿಪಡಿಸಿಕೊಂಡು ಹಾಡುವುದು ಒಳ್ಳೆಯದು.

ಇಷ್ಟೆಲ್ಲಾ ಹಿನ್ನೆಲೆ ಯಾಕೆ ನೆನಪಾಯಿತೆಂದರೆ ಕೆಲವು ದಿನಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟ ಒಂದು ಸವಾಲು ಬಹಳ ಆಸಕ್ತಿ ಹುಟ್ಟಿಸುವಂತಿತ್ತು - ನಾಲಕ್ಕು ಹಿಂದೂಸ್ತಾನಿ ಸಂಗೀತ ವಾದ್ಯಗಳಾದ  ಸಿತಾರ್, ಬೀನ್, ಸಂತೂರ್ ಮತ್ತೆ ತಬಲ ಈ ಪದಗಳನ್ನು ಬಳಸಿಕೊಂಡು ಒಂದು ಛಂದೋಬದ್ಧವಾದ ಪದ್ಯ ಬರೆಯಬೇಕು - ಆದರೆ, ಪದ್ಯದ ವಿಷಯ ಕರ್ನಾಟಕ ಸಂಗೀತದ ಬಗ್ಗೆ ಇರಬೇಕು!ಒಂದು ಪದ್ಯದಲ್ಲಿ ಉತ್ತರಿಸಲಾಗದಿದ್ದರೂ, ಎರಡು ಪದ್ಯಗಳಲ್ಲಿ ನಾನು ಇದನ್ನು ಬಿಡಿಸಲು ಯತ್ನಿಸಿದ್ದು ಹೀಗೆ. ಸಂದರ್ಭವನ್ನ ಮೊದಲೇ ವಿವರಿಸಬೇಕು (ಇದು ಪದ್ಯಗಳು ಸ್ವಲ್ಪ ಸೋತಿವೆ ಎಂಬುದರ ಗುರುತು ಕೂಡಾ, ಇರಲಿ) :

ಚೆಲುವಾಂಬಾ ಎಂಬಾಕೆ, ತನ್ನ ಮಗಳು ಸುಭದ್ರಾಳನ್ನು (ಮುದ್ದಿನ ಹೆಸರು -ಸುಬೀ ಅಂತಿಟ್ಕೊಳ್ಳಿ !) ಹಾಡಲು ಕರೆಯುವುದು, ಮತ್ತೆ ಆಗ ಆ ಹುಡುಗಿ ಅರ್ಥ ತಿಳಿಯದೇ ಇರುವ ಒಂದು ತಮಿಳು ಹಾಡಿನ ಸಾಲಿಗೆ ನೆರವಲ್ ಮಾಡುವುದು. ಇಲ್ಲಿದೆ ಈ ಸನ್ನಿವೇಶದ ಪದ್ಯರೂಪ:

ಬಾ ಸುಬೀ, ನಡುಮನೆಗೆ ತಂಬೂರಿಯನು ಹಿಡಿದು
ಬೇಸರಿಸದೆಲೆ ನಗುತ ಬಲವಾಗಿ ದನಿಯ-
ನ್ನಾಸರೆಯ ಷಡ್ಜದಲಿ ನಿಲಿಸುತಿರು ನೀನೆನಲು
ಕಾಸಗಲ ಕುಂಕುಮದ ತಾಯಿ ಚೆಲುವಾಂಬಾ

ಬಾಲೆ ಕಿರು ಬಾಯಗಲಿಸಿ ತಾರ ಸ್ವರಕೇರಿ
ಶಾಲ ತುದಿಬೆರಳಲ್ಲಿ ಸುತ್ತಿ ಹಾಡಿಹಳು
“ಪಾಲುಳ್ಳೊರು ಪಾಸಂ ತೂರ ಪರುಪು ರಸಂ”
ಕಾಲು ಬಾಲವಿರದೀ ಸಾಲಿಗೆ ನೆರವಲು|

-ಹಂಸಾನಂದಿ

ಕೊ: ಚಿತ್ರ ಕೃಪೆ - ಗೂಗಲೇಶ್ವರ

ಕೊ.ಕೊ:  ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧವಾದ,  ನನಗೆ ತಿಳಿದ ಯಾವುದೇ ಹಾಡಿನಲ್ಲೂ  ಈ ಸಾಲು ಇಲ್ಲ; ಇದು ನನ್ನ ಕಲ್ಪನೆಯ ಸಾಲು!

ಕೊ.ಕೊ.ಕೊ:   "ಹಾಲಿನಲ್ಲಿ ಪ್ರೀತಿ, ತೊಗರಿ ಬೇಳೆ ಸಾರು’ ಎಂಬ ಅರ್ಥವನ್ನು ಕೊಡುವ   ಇಂಥ ಸಾಲು ಯಾಕೆಂದಿರಾ? ಕೆಲವೊಮ್ಮೆ ಹಾಡುವ ಸಾಲನ್ನು ಎಲ್ಲೋ ಬಿಡಿಸಿ ಎಲ್ಲೋ ಸೇರಿಸಿ ಹಾಡುವಾಗ ಇಂಥ ಅನರ್ಥಗಳು ಸಂಭವಿಸುತ್ತಲೇ ಇರುತ್ತವಲ್ಲ!  ಹಾಗಾಗಿ ಕಾಲು-ಬಾಲವಿರದೊಂದು ಸಾಲಿಗೆ ನೆರವಲ್ ಮಾಡಿದ ಒಂದು ಸಂದರ್ಭವನ್ನು ಕವಿತೆಯಾಗಿಸುವ ಯತ್ನ ಇದು.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ