ಸೆರೆ

ಕಮಲದೆಸಳನು ಹೋಲ್ವ ಚೆಲುವ ಬೆರಳಲ್ಲಿ
ಪಿಡಿದಿರುವ ಪೊಂಗೊಳಲಿನಿಂಪು ದನಿಯಲ್ಲಿ
ಸವಿಯನ್ನೆ ಸುರಿಯುತಿಹ ನಸುನಗುವ ಮೊಗದ
ಹವಳದುಟಿಗಳ ಸೊಗವು ಸೆರೆಗೊಂಡಿತೆನ್ನ!


ಸಂಸ್ಕೃತ ಮೂಲ (ಲೀಲಾ ಶುಕನ ಕೃಷ್ಣಕರ್ಣಾಮೃತ, ಆಶ್ವಾಸ೧-೫೨):

ಕರಕಮಲ ದಲಕಲಿತ ಲಲಿತತರ ವಂಶೀ
ಕಲನಿನದ ಗಳದಮೃತ ಘನಸರಸಿ ದೇವೇ |
ಸಹಜರಸ ಭರಭರಿತ ದರಹಸಿತ ವೀಥೀ
ಸತತವಹಧರಮಣೀಮಧುರಿಮಣಿ ಲೀಯೇ ||-ಹಂಸಾನಂದಿ

ಕೊ: ಸಾಮಾನ್ಯವಾಗಿ ಅನುವಾದಿಸುವಾಗ ಮೂಲದಲ್ಲಿಲ್ಲದ ಪದಗಳನ್ನು ಸೇರಿಸುವುದೂ, ಮೂಲದಲ್ಲಿರುವ ಪದಗಳನ್ನು (ಅಥವಾ ಅರ್ಥವನ್ನೂ) ಪೂರಾ ಬಿಟ್ಟುಬಿಡಬಾರದೆಂಬುದೊಂದು ಕಟ್ಟುಪಾಡು. ಆದಷ್ಟೂ ನಾನು ಇದಕ್ಕೆ ಕಟ್ಟುಬೀಳಲು ಪ್ರಯತ್ನಿಸುವುದಾದರೂ, ಈ ಬಾರಿ ಹಾಗೆ ಮಾಡಲಿಲ್ಲ

ಕೊ.ಕೊ: ಮೂಲದಲ್ಲಿರುವ ೫/೫/೫/೪ ಮಾತ್ರೆಗಳ ಓಟವನ್ನು ಇದ್ದಿದ್ದರಲ್ಲಿ ಉಳಿಸುವ ಪ್ರಯತ್ನ ಮಾಡಿದ್ದೇನೆ.

ಚಿತ್ರ ಕೃಪೆ: ಮಿತ್ರ ಸುಯೋಗ್ ಗೈಧಾನಿ ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ , ನಿಜ ಹೇಳಬೇಕೆಂದರೆ, ಈ ಚಿತ್ರವನ್ನು ನೋಡಿದ ಮೇಲೆ, ಇದಕ್ಕೆ ತಕ್ಕ ಪದ್ಯವನ್ನು ಹುಡುಕಲೇಬೇಕೆಂದು ಕೃಷ್ಣಕರ್ಣಾಮೃತದಲ್ಲಿ ಅನೇಕ ಹೊಸ ಪದ್ಯಗಳನ್ನು ಓದಿ, ನಂತರ ನನಗೆ ಬಹಳ ಹಿಡಿಸಿದ್ದೂ, ಮತ್ತೆ ನನ್ನ ಅನುವಾದಿಸುವ ಅಳವಿಗೆ ಸ್ವಲ್ಪವಾದರೂ ದಕ್ಕೀತೆಂದು ಈ ಪದ್ಯವನ್ನು ತೆಗೆದುಕೊಂಡೆ. ಎಷ್ಟೆಂದರೂ ಮೂಲ ಮೂಲವೇ, ಅನುವಾದ ಅನುವಾದವೇ.  ಮೂಲದಲ್ಲಿರುವ ಲಾಲಿತ್ಯ ನನ್ನ ಅನುವಾದದಲ್ಲಿ ಇಲ್ಲವೆನಿಸಿದರೂ,  ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವ ಹಾಗೆ, ಈ ಅನುವಾದ ಮಾಡುವಿಕೆಯೇನೋ ನನಗೆ ಬಹಳ ಸಂತಸ ಕೊಟ್ಟಿತು!
Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?