ಪದ್ಯಪಾನದ ಅಮಲು


ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಡಾ.ರಾ.ಗಣೇಶರ ಶತಾವಧಾನ ನೋಡಿದ ನಂತರ ಮನದಲ್ಲಿ ಮೂಡಿ ಬಂದೆರಡು ಪದ್ಯಗಳು:1)
ಚೆಲ್ಲಿರಲು ಹೂವುಗಳು ಆಗಸದಿ ಭರದಿಂದ
ಮಲ್ಲೆ ಸಂಪಿಗೆ ಜಾಜಿ ಪಾರಿಜಾತಗಳು
ಸೊಲ್ಲ ಹೆಣ್ಣೇ ಬುವಿಗೆ ರಾಗ ರೂಪವನು ತಾ
-ಳಿಲ್ಲಿ ಬಂದಿಹಳೆಂಬ ಬೆರಗು ತರಿಸಿ!

(ಅವಧಾನ ಮುಗಿದ ನಂತರ ಹೂಮಳೆ ಸುರಿದಾಗ , ಮನಸಿನಲ್ಲಿ ಮೂಡಿದ ಭಾವವಿದು)


2)
ಮದ್ಯಪಾನಕು ಪದ್ಯಪಾನಕು ಭೇದವೊಂದೇ ಅಕ್ಕರ
ವಿದ್ಯಮಾನವ ಕೇಳಿರೈ ಬಲು ವೈಪರೀತ್ಯವು ನಿಚ್ಚಳ
ಮದ್ಯಪಾನವ ಮಾಡಿದರೆ ನಶೆಯಿಳಿವುದೊಂದೇ ಹೊತ್ತಿಗೆ
ಪದ್ಯಪಾನಕೆ ತೊಡಗಿಬಿಟ್ಟರೆ ಕೊನೆಯೆಕಾಣದು ಮತ್ತಿಗೆ !

-ಹಂಸಾನಂದಿ

ಕೊ: ರಾಗ: ರಾ.ಗಣೇಶ್ ; ಸೊಲ್ಲ ಹೆಣ್ = ಮಾತಿನ ದೇವತೆ, ನುಡಿದೇವಿ, ಸರಸ್ವತಿ

ಕೊ.ಕೊ: ಶತಾವಧಾನ ಆದಮೇಲೆ, ಅದನ್ನು ಆಯೋಜಿಸಿದ ಪದ್ಯಪಾನ ಹಲವರಿಗೆ ಹೊಸದಾಗಿ ಪರಿಚಿತವಾಗಿದ್ದರಿಂದ, ಮರುದಿನ ಆ ವೆಬ್ ಸೈಟ್ ನ ಸರ್ವರ್  ಬಂದ ಜನರ ಪ್ರವಾಹವನ್ನು ತಡೆಯಲಾಗದೇ ತೊಂದರೆಗೊಳಗಾಗಿತ್ತು. ಆಮೇಲೆ ಸರಿಪಡಿಸಿದ್ದಾರೆನ್ನಿ. ಆ ಸಂದರ್ಭದಲ್ಲಿ ಹೊಳೆದ ಪದ್ಯ ಎರಡನೆಯದು. ಪದ್ಯಪಾನದ ಮತ್ತಿನ ಬಗ್ಗೆಯ ಈ ಪದ್ಯ ಮತ್ತಕೋಕಿಲ ಎಂಬ ಛಂದಸ್ಸಿನಲ್ಲಿದೆ :)

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?