ಮುಂಜಾವಿನ ಹೊಸ ಕಂಗ್ಲಿಷ್ ಹಾಡು


ಮಿಲ್ಪಿಟಸ್ಸೆನುವೂರಿನೊಂದು  ಫಾಲ್ಬೆಳಗಿನಲಿ
ಕಲ್ಪಿಸಿದೆ ಕಂಗ್ಲೀಷು  ಚೌಪದಿಗಳ
ಜಲ್ಪಿಸುತ್ತಿಹೆಯೆನದೆ ಸುಮ್ಮನೇ ಓದಿಬಿಡಿ
ಸೊಲ್ಪ ನಾನ್ಸೆನ್ಸಾದರೂ ಲೈನ್ಗಳ      ||1||

ಮುಂದೆ ಮುಂಜಾವಿನಲಿ ಮೂಡು ಕೆಂಪೇರುತಿದೆ
-ಯೆಂದು ಬಣ್ಣಿಸುವುದೆಲ್ಲ   ಹಳೆಯದಾಯ್ತು
ಸಂದುಗೊಂದಿಯಪಾರ್ಟುಮೆಂಟಿನಲಿ ವಾಸಿಸಿರ
-ಲಿಂದು ಕವಿಕಣ್ಣುಗಳೆ ಮಾಯವಾಯ್ತು  ||2||

ಉದಯದಲಿ ಗಿರಿಮೇಲೆ ರವಿಯ ಹೊಂಗಿರಣಗಳು
ಹದವಾದ ಲಾನಿಗಿರೆ ಮಂಜು ಹೊದಿಕೆ
ಚದುರಿಹವು ಬಣ್ಣದೆಲೆ ತುಸುಕುಳಿರ ಗಾಳಿಯಲಿ
ಮುದದ ಮುಂಜಾವಗಳು ಫಾಲಿನಲ್ಲೆ  ||3||

ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಾಲಿ
ಒಳಿತಾದ ಸ್ಟಾರ್ಬಕ್ಸು ಕಾಫಿಯನ್ನು
ಗಳಹುತ್ತ ಫೇಸ್ಬುಕ್ಕಿನಲ್ಲಿಯಪ್ಡೇಟಿಸುವುದ
ಸುಳುವಾಗಿಸಿದ ಮಾರ್ಕು ಜ಼ುಕರ್ಬರ್ಗನು ||4||

-ಹಂಸಾನಂದಿ

ಕೊ: ಪದ್ಯಪಾನದಲ್ಲೊಂದು ಹಳೆಯ ಪ್ರಶ್ನೆ ನೋಡಿದೆ- ಮುಂಜಾವಿನ ಸೊಬಗನ್ನು ಚೌಪದಿಯಲ್ಲಿ ವರ್ಣಿಸಿ, ಕಲ್ಪನೆಗಳು ಹೊಸದಾಗಿರಲಿ ಅಂತ. ಅದನ್ನು ನೋಡಿ, ಕಂಗ್ಲಿಷ್ ನಲ್ಲಿ ಇವತ್ತು ಬರೆದ ನಾಲ್ಕು ಚೌಪದಿಗಳಿವು. ತಲೆಬರಹ ಸೂಚಿಸಿದ್ದು ಗೆಳೆಯ ಸುಬ್ರಹ್ಮಣ್ಯ ಅವರು.

ಕೊ.ಕೊ: ಮಿಲ್ಪಿಟಸ್ ಎಂಬುದು ನಾನಿರುವ ಊರಿನ ಹೆಸರು; ಸ್ಯಾನ್ ಹೊಸೆ, ಕ್ಯಾಲಿಫೋರ್ನಿಯ ಪಕ್ಕದಲ್ಲಿರುವ ಊರಿದು. ಊರಿನ ಪೂರ್ವಕ್ಕಿರುವ ಮಾನ್ಯುಮೆಂಟ್ ಬೆಟ್ಟದಲ್ಲಿ ಪ್ರತಿದಿನ ನಮ್ಮ ಕಿಟಕಿಯಲ್ಲಿ ಕಾಣುವ ಸೂರ್ಯೋದಯದಿಂದ ಸ್ವಲ್ಪ ಪ್ರಭಾವಿತವಾದ ಚೌಪದಿಗಳಿವು ಎಂದರೂ ತಪ್ಪಿಲ್ಲ.


Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ