ಹೊಸವರ್ಷಕ್ಕೆ

೨೦೧೩ ಎಲ್ಲರಿಗೂ ಸಂತಸ ನೆಮ್ಮದಿಗಳಿಂದ ಕೂಡಿರಲೆಂಬ ಹಾರೈಕೆಗಳೊಂದಿಗೆ ಎರಡು ಚೌಪದಿಗಳು:
ಚಂದದಾ ಮುಂಬೆಳಗ ಚುಮ್ಮೆನುವ ಚಳಿಯಲ್ಲಿ
ಚಂದಿರನು ಕಣ್ಣಿಂದ ಕಾಣದಾದ
ಸುಂದರಾಕಾಶದಲಿ ಹಾಕುತ್ತ ರಂಗೋಲಿ
ತಂದಿರಲು ನೇಸರನು ಮನಕೆ ಮೋದ

ಹೊಸತೇನು ಬಂತಿಲ್ಲಿ ಹೂವಿಲ್ಲ ಚಿಗುರಿಲ್ಲ ?
ತುಸು ಸೊಗಸು ಕಂಡಿಲ್ಲವೆಂದೆನ್ನಬೇಡ!
ಮುಸುಕಿದಾಗಸದಲ್ಲಿ  ರಂಗಿನೋಕುಳಿ ಚೆಲ್ಲಿ-
ಯೆಸೆವ ಹೊಸ ಭಾಸ್ಕರನ ಸೊಬಗ ನೋಡಾ!

-ಹಂಸಾನಂದಿ

ಕೊ: ಕ್ರಿಸ್ತ ವರ್ಷಾರಂಭದಲ್ಲಿ ನಮ್ಮ ಯುಗಾದಿಯ ಚೈತ್ರದ ಚಿಗುರು, ಸೊಗಸು ಯಾವುದೂ ಕಾಣದು ಎಂದು ಹೇಳುವುದುಂಟು. ಅದು ನಿಜವೂ ಹೌದು. ಆದರೆ, ವರಕವಿ ಬೇಂದ್ರೆಯವರು ನುಡಿದಂತೆ, ನಿದ್ದೆಗೊಮ್ಮೆ ನಿತ್ಯಮರಣ ಎದ್ದಸಲ ನವೀನ ಜನನವೆಂಬಂತೆ ಸೂರ್ಯನ ಪ್ರತಿ ಹೊಸ ಹುಟ್ಟೂ ಒಂದೊಂದು ಹೊಸ ಜೀವನವೇ! ಅದಕ್ಕೆಂದೇ, ಎಲ್ಲ ಕಡೆಗಳಿಂದಲೂ ಒಳ್ಳೆಯ ಸಂಗತಿಗಳು ನಮ್ಮೆಡೆಗೆ ಬರಲೆಂಬ ಹಳೆಯ ಸೂಕ್ತಿಯಂತೆ, ಈ ವರ್ಷಾರಂಭವನ್ನೂ ಸ್ವಾಗತಿಸುವುದರಲ್ಲಿ ತಪ್ಪೇನಿದೆ ಎನ್ನಿಸದಿರದು.

ಕೊ.ಕೊ: ಸುಮಾರು ಎಲ್ಲ ಸಾಂಪ್ರದಾಯಿಕ ಹೊಸವರ್ಷಗಳೂ ಆಕಾಶದ ಯಾವುದಾದರೊಂದು ಘಟನೆಗೆ ಸಂಬಂಧಿಸಿರುವುದಾಗಿರುತ್ತೆ. ಭಾರತದ ಚಾಂದ್ರಮಾನ ಮತ್ತೆ ಸೌರಮಾನ ವರ್ಷಗಳೂ ಇದಕ್ಕೆ ಹೊರತಲ್ಲ. ಆದರೆ ಜನವರಿ ಒಂದರಂದು ಆ ರೀತಿಯ ಯಾವುದೇ ವಿಶೇಷವು ನಡೆಯುವುದಿಲ್ಲ ಅನ್ನುವುದು ನಿಜವಾದರೂ, ವರ್ಷಕ್ಕೊಮ್ಮೆ ನಡೆಯುವ ಘಟನೆಯೊಂದು ಜನವರಿ ಒಂದಕ್ಕೆ ಹತ್ತಿರವಾಗಿ ಜರುವುಗುವುದಂತೂ ಉಂಟು. ಜನವರಿ ಎರಡು ಯುನಿವರ್ಸಲ್ ಸಮಯ ಐದು ಗಂಟೆಗೆ (ಅಂದರೆ ನಾನಿರುವ ಕ್ಯಾಲಿಫೋರ್ನಿಯಾದಲ್ಲಿ ಜನವರಿ ಒಂದರಂದೇ, ರಾತ್ರಿ ೯ ಗಂಟೆಗೆ)  ಭೂಮಿ ಸೂರ್ಯನ ಸುತ್ತ ಸುತ್ತುವ ಹಾದಿಯಲ್ಲಿ ಸೂರ್ಯನಿಗೆ ಅತಿ ಹತ್ತಿರದಲ್ಲಿ ಹಾದುಹೋಗುತ್ತದೆ.


ಚಿತ್ರ ಕೃಪೆ: ನನ್ನ ಹೆಂಡತಿ ಪೂರ್ಣಿಮಾಳ ಕೈಚಳಕ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ