ಹಂಸನಾದ ೧೦೦೦೦೦


ಹಂಸನಾದದಲ್ಲಿ ನಾನು ಮೊದಲ ಪೋಸ್ಟ್ ಹಾಕಿದ್ದು ೨೦೦೭ರ ಡಿಸೆಂಬರ್ ೧೨ರಂದು. ಅಂತೂ ಇಂತೂ ಐದು ವರ್ಷ ದಾಟಿದ ಮೇಲೆ, "ಎಂಟು ವರ್ಷಕ್ಕೆ ನನ್ನ ಮಗ ದಂಟು" ಅನ್ನೋ ಹಾಗೆ ಹಿಟ್ ಕೌಂಟರ್ ಕೊನೆಗೂ ಒಂದು ಲಕ್ಷ ಅಂಕೆಯನ್ನ ದಾಟಿದೆ!

ಹೆತ್ತವರಿಗೆ ಹೆಗ್ಗಣ ಮುದ್ದು ಅಲ್ವೇ? ಹಾಗಾಗಿ ಇದನ್ನು ನೋಡಿ ಹಿಗ್ಗು ಆಗುವುದು ನಿಜವಾದರೂ, ಬರೆದದ್ದೆಲ್ಲ ಚೆನ್ನಾಗಿದೆ ಅನ್ನುವ ಭ್ರಮೆಯೇನೂ ನನಗಿಲ್ಲ! ಅದಿರಲಿ! ಇಷ್ಟು ದಿನಕ್ಕೆ ನಾನು ಬರೆದಿದ್ದು ಚಿಕ್ಕದು ಪುಟ್ಟದು ಎಲ್ಲ ಸೇರಿ ಸುಮಾರು ಐನೂರು ಬರಹಗಳಾಗಿವೆ ಹಂಸನಾದದಲ್ಲಿ.


ಹಂಸನಾದದಿಂದ ನಾನು ಗಳಿಸಿದ್ದು ಬಹಳ! ಹೊಸ ಗೆಳೆತನ, ಹೊಸ ಕಲಿಕೆ ಎಲ್ಲಕ್ಕೂ ಇದು ಕಾರಣವಾಗಿದೆ ಎಂದು ಹೇಳಿದರೆ ಅದರಲ್ಲಿ ಹೆಚ್ಚಾಯವೇನಿಲ್ಲ. ಇಲ್ಲಿಯವರೆಗೆ ಇಲ್ಲಿಗೆ ಬಂದು ಹೋದ, ಓದಿದ, ತಮ್ಮ ಅನಿಸಿಕೆಗಳನ್ನು ಬರೆದ, ನನ್ನ ಕಲಿಕೆಗೆ ಕಾರಣರಾದ ಎಲ್ಲರಿಗೂ ನಾನು ಆಭಾರಿ. ಹೀಗೇ ಬಂದು ಹೋಗುತ್ತಿರಿ.


ಈ ಸಂದರ್ಭದಲ್ಲಿ, ಹಿಂದೊಮ್ಮೆ ಭಕ್ತಿವೇದಾಂತ ದರ್ಶನವೆಂಬ ಪತ್ರಿಕೆಗೆ ಬರೆದಿದ್ದ ಬರಹದ ಕರಡು ಸಿಕ್ಕಿತು. ಅದನ್ನು ಹೇಗೂ ಹಂಸನಾದದಲ್ಲಿ ಈ ಮೊದಲು ಹಾಕಿರಲಿಲ್ಲ, ಹಾಗಾಗಿ, ಕೆಲವು ಚಿತ್ರಗಳನ್ನೂ ಸೇರಿಸಿ ಪೋಸ್ಟಿಸಿದ್ದೇನೆ.

ನಲುಮೆಯಿರಲಿ,


-ಹಂಸಾನಂದಿ


ಜಯತು ಜಯ ವಿಠಲಮಂಗಳಮಯ ತುಂಗಭದ್ರದಿ ಮೆರೆವನ
ಅಂಗಜಪಿತ ಶ್ರೀ ಲಕ್ಷ್ಮೀಪತಿಯ
ಶೃಂಗಾರ ಮೂರುತಿ ಪುರಂದರ ವಿಠಲನ
ಕಂಗಳಿಂದಲಿ ಕಂಡೆ ಹಿಂಗಿತು ಭವಭಯ!

ವಿಜಯ ವಿಠಲ ದೇವಾಲಯ, ಹಂಪೆ

ನೀವು ಹಂಪೆಗೆ ಹೋಗಿದ್ದಿರಾದರೆ, ಅಲ್ಲಿರುವ ಎರಡು ಮುಖ್ಯವಾದ ಗುಡಿಗಳನ್ನು ನೋಡಿಯೇ ಇರುತ್ತೀರಿ. ಒಂದು ಪಂಪಾಪತಿ ವಿರೂಪಾಕ್ಷ ಶಿವನ ರೂಪವಾದರೆ, ಮತ್ತೊಂದು, ಊರಿನ ಮತ್ತೊಂದು ತುದಿಯಲ್ಲಿರುವ ವಿಜಯ ವಿಠಲನ ಗುಡಿ. ಪುರಂದರ ದಾಸರು ತುಂಗಭದ್ರಾ ತೀರದಲ್ಲಿ ಮೆರೆಯುವ ಶೃಂಗಾರಮೂರುತಿಯೆಂದು ಹಾಡಿಹೊಗಳುತ್ತಿರುವುದು ಈ ವಿಜಯವಿಠಲನನ್ನೇ. ಆದರೆ, ಇಂದು ನೀವು ವಿಜಯ ವಿಠಲನ ಗುಡಿಯಲ್ಲಿ ನೋಡಿದರೆ, ಮೂಲ ಮೂರ್ತಿಯೇ ಇಲ್ಲ. ಕೇವಲ ಹೊರಗಿನ ಗೋಪುರದ ಮೇಲೆ ವಿಠಲ ರುಕುಮಾಯಿಯರನ್ನು ನೋಡಿ ಮರಳಬೇಕಷ್ಟೆ. ಹಾಗಿದ್ದರೆ, ಇಲ್ಲಿ ಗರ್ಭಗುಡಿಯಲ್ಲಿದ್ದ ವಿಠಲ ಏನಾದ? ಹಂಪೆಯನ್ನು ಆಕ್ರಮಣಕಾರರು ಹಾಳುಗೆಡವಿದಾಗ ಇಲ್ಲಿಯ ಮೂರ್ತಿ ಮಾಯವಾಯಿತೇ?

ಇಂದು ವಿಠಲನ ಕ್ಷೇತ್ರವಾಗಿ ಪ್ರಸಿದ್ಧವಾಗಿರುವುದು ಪಂಢರಪುರ. ಮಹಾರಾಷ್ಟ್ರದಲ್ಲಿ ಇಂದು ಎಲ್ಲಕ್ಕಿಂತ ಹೆಚ್ಚು ಭಕ್ತರು 

ಪಂಢರಪುರದ ವಿಠಲ
ನಡೆದುಕೊಳ್ಳುವ ಕ್ಷೇತ್ರವೆಂದರೆ ಪಂಡರಪುರವೇ. ಇಲ್ಲಿಗೆ ನೆರೆಯ ಕರ್ನಾಟಕ ಹಾಗೂ ಆಂಧ್ರಪ್ರದೇಶಗಳಿಂದ ಬರುವ ಭಕ್ತರ ಸಂಖ್ಯೆಯೂ ಗಣನೀಯವಾಗಿದೆ. ಭೀಮಾ ನದಿಯ ಬಲ ದಡದಲ್ಲಿರುವ ಸೋಲಾಪುರ ಜಿಲ್ಲೆಯ ಪಂಡರಾಪುರ, ಈಗಿನ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಬಹಳ ಸಮೀಪದಲ್ಲಿದೆ. ಈ ಸ್ಥಳದಲ್ಲಿ, ಭೀಮಾನದಿಯು ಅರ್ಧಚಂದ್ರದ ಆಕೃತಿಯಲ್ಲಿ ಹರಿಯುವುದರಿಂದ ಭೀಮೆಗೆ ಚಂದ್ರಭಾಗಾ ಎಂದೂ ಹೆಸರು ಬಂದಿದೆ. ಕನ್ನಡನಾಡಿನ ಹರಿದಾಸರು ಕೂಡ ಕೆಲವು ರಚನೆಗಳಲ್ಲಿ ಪಂಢರಪುರದ ವಿಠಲನನ್ನು ಹೆಸರಿಸಿದ್ದಾರೆ. ವಿಠಲನಿಗೆ ವಿಠೋಬ, ಪಾಂಡುರಂಗ ಎಂಬ ಹೆಸರುಗಳೂ ಇವೆ. ವಿಠೋಬಾ ಎಂದರೆ ವಿಟ್ಠಲ ಬಾಬಾ - ಎಂದರೆ ತಂದೆ ವಿಠಲ ಎನ್ನುವುದರ ಚಿಕ್ಕರೂಪವೆಂದು ಮರಾಠಿ ಮಾತನಾಡುವವರು ಹೇಳುವ ಮಾತು.

ಕೆಲವು ದಂತಕಥೆಗಳ ಪ್ರಕಾರ, ಈಗ ಪಂಢರಪುರದಲ್ಲಿರುವ ವಿಠೋಬನೇ ಒಂದು ಕಾಲದಲ್ಲಿ ಈ ಗುಡಿಯಲ್ಲಿದ್ದ ಹಂಪೆಯ ವಿಜಯವಿಠಲ. ವಿಜಯನಗರ ಸಾಮ್ರಾಜ್ಯ ೧೫೬೫ರಲ್ಲಿ ಕೊನೆಗೊಂಡಾಗ, ಇಲ್ಲಿಂದ ವಿಠಲಮೂರ್ತಿಯನ್ನು ತೆಗೆದುಕೊಂಡು ಹೋಗಿ ಪಂಢರಪುರದಲ್ಲಿ ಪ್ರತಿಷ್ಟಾಪಿಸಲಾಯಿತು. ಆದರೆ, ಅದಕ್ಕೂ ಮೊದಲಿಂದಲೇ ಪಂಢರಪುರವು ವಿಠಲನು ನೆಲೆಸಿರುವ ಯಾತ್ರಾಸ್ಥಳವೆಂದೇ ಹೆಸರಾಗಿತ್ತು ಎನ್ನುವುದಕ್ಕೆ ಹಲವು ಆಧಾರಗಳಿವೆ. ಇದೊಂದು ವಿರೋಧಾಭಾಸದಂತೆ ಕಾಣುತ್ತೆ ಅಲ್ಲವೇ? ಇದರ ರಹಸ್ಯ ತಿಳಿಯುವ ಮೊದಲು ಸ್ವಲ್ಪ ವಿಠಲನ ಹಿನ್ನಲೆ ತಿಳಿಯೋಣ.


ವಿಠಲನ ಹಿನ್ನಲೆ, ಮತ್ತೆ ಕನ್ನಡನಾಡಿನ ಜೊತೆ ವಿಠಲನ ಸಂಬಂಧ:

ಪಂಢರಪುರವನ್ನು ಹಿಂದಿನ ಶಾಸನ,ದಾಖಲೆಗಳಲ್ಲಿ ಪಂಢರಿಗೆ, ಪಂಡರಂಗೆ, ಪಂಡರಗೆ, ಪಾಂಡುರಂಗ ಕ್ಷೇತ್ರ ಎನ್ನುವ ಬೇರೆಬೇರೆ ಹೆಸರುಲ್ಲಿ ಕರೆಯಲಾಗಿದೆ. ಪಂಡರಗೆ ಎನ್ನುವ ಹೆಸರೂ ಕೂಡ ಅಚ್ಚ ಕನ್ನಡದ್ದೇ. ಇದು ಕನ್ನಡದ ಪಂದರ (ಎಂದರೆ ಹಂದರ) ಎನ್ನುವ ಪದದಿಂದ ಬಂದಿದೆ ಎಂದು ಭಾಷಾ ವಿಜ್ಞಾನಿಗಳು ಅಭಿಪ್ರಾಯ. ಇಲ್ಲಿ ದೊರೆತ ಒಂದು ಶಾಸನದಲ್ಲಿ ಈ ಊರಿನ ಸುತ್ತಮುತ್ತಲೂ ಹಂದರಗಳ ಮೇಲೆ ದ್ರಾಕ್ಷಿ ಬಳ್ಳಿಗಳನ್ನು ಬೆಳೆಸಿರುವ ವಿಷಯವಿದೆಯಂತೆ. ಆದ್ದರಿಂದಲೇ ಈ ಊರಿಗೆ ಮೂಲದಲ್ಲಿ ಪಂದರಿಗೆ ಎಂದು ಹೆಸರಿದ್ದು, ಅದು ಕಾಲಾನುಕ್ರಮದಲ್ಲಿ ಪಂಡರಿಗೆ ಆಗಿರಬೇಕೆನ್ನುವುದು ಒಂದು ತರ್ಕ. ೧೩ನೇ ಶತಮಾನದ ನಂತರ ಬಂದ ಮರಾಠಿ ಸಂತರಾದ ಜ್ಞಾನೇಶ್ವರ (ಕ್ರಿ.ಶ. ೧೨೭೫-೧೨೯೬) , ನಾಮದೇವ(ಕ್ರಿ.ಶ.೧೨೭೦- ೧೩೫೦),ಏಕನಾಥ (ಕ್ರಿ.ಶ. ೧೫೩೩-೧೫೯೯), ತುಕಾರಾಮ್ ((ಕ್ರಿ.ಶ. ೧೫೭೭-೧೬೫೦),  ಮೊದಲಾದವರೂ, ಕನ್ನಡನಾಡಿನ ಹರಿದಾಸರಾದ ಪುರಂದರ ದಾಸ,ಕನಕದಾಸ,ವಿಜಯದಾಸ,ಗೋಪಾಲದಾಸ ಮೊದಲಾದವರೆಲ್ಲ ವಿಠಲನ ಭಕ್ತರೇ. ಹರಿದಾಸರಲ್ಲಿ ಹೆಚ್ಚಿನವರು ತಮ್ಮ ಅಂಕಿತದಲ್ಲಿ ವಿಠಲ ಎಂದು ಸೇರಿಸಿಕೊಳ್ಳುವುದನ್ನು (ಉದಾ: ಶ್ರೀಪಾದರಾಯರು (ಕ್ರಿ.ಶ ೧೪೦೪-೧೫೦೨) ರ ಅಂಕಿತ ರಂಗವಿಠಲ. ಪುರಂದರದಾಸ(ಕ್ರಿ.ಶ.೧೪೮೪-ಅ೫೬೪)ರ ಅಂಕಿತ ಪುರಂದರ ವಿಠಲ) ನಾವಿಲ್ಲಿ ನೆನೆಯಬಹುದು

ವಿಠಲನ ಪಂಥ ಸುಮಾರು ೧೦-೧೨ನೇ ಶತಮಾನದಿಂದ ಈಗಿನ ಮಹಾರಾಷ್ಟ್ರ- ಕರ್ನಾಟಕಗಳ 
ಗಡಿಭಾಗದಲ್ಲಿ ಆರಂಭವಾಯಿತೆಂದು ಹೇಳುವುದಕ್ಕೆ ಆಧಾರಗಳಿವೆ. ಈ ಮಧ್ಯಕಾಲೀನ ಮರಾಠೀ ಭಕ್ತರಲ್ಲಿ ಹಲವರು ವಿಠಲನನ್ನು ಕಾನಡೀ ವಿಠಲ, ಕರ್ನಾಟಕೂ ವಿಠಲ ಎಂದರೆ, ಕನ್ನಡದ, ಕರ್ನಾಟಕದ ವಿಠಲ ಎಂದು ಕರೆದಿರುವುದು ಒಂದು ಗಮನಿಸಬೇಕಾದ ವಿಚಾರ. ನಮಗೆ ಹೊರಗಿನಿಂದ ಬಂದ, ಅಥವ ಬೇರೆಕಡೆಯಿಂದ ಬಂದ ಏನನ್ನಾದರೂ ನಮ್ಮದಾಗಿ ಮಾಡಿಕೊಳ್ಳುವಾಗ, ಅದರ ಮೂಲವನ್ನೂ ಹೆಸರಿನಲ್ಲೇ ಸೂಚಿಸುವುದೊಂದು ರೂಢಿ.  ಹೊರದೇಶದಿಂದ ಬಂದ ಸೀಮೆಬದನೆಕಾಯಿಗೆ ’ಸೀಮೆ’ಬದನೆಕಾಯಿ ಎನ್ನುವುದೂ, ಇಂತಹದ್ದೇ ಕಾರಣಕ್ಕೆ. ಹಾಗಾಗಿಯೇ ಪಕ್ಕದ ಕನ್ನಡದ ನೆಲದಿಂದ ಬಂದ ವಿಠಲನನ್ನು ಮರಾಠಿಯಲ್ಲಿ 'ಕಾನಡೀ' ವಿಠಲ ಎಂದರೆ ಅದು ಸೂಕ್ತವೇ ಆಗಿದೆ.  ಮರಾಠಿಯಲ್ಲಿ, ಕನ್ನಡ ಭಾಷೆಗೂ, ಕನ್ನಡಿಗರಿಗೂ ಈಗಲೂ ಕಾನಡೀ ಎಂದೇ ಹೇಳುವುದನ್ನು ನಾವು ಗಮನಿಸಬಹುದು.


ಭೀಮೆಯ ದಡದಲ್ಲಿನ ಪಾಂಡುರಂಗ ದೇಗುಲ, ಪಂಢರಪುರ

ಸಂತ ಜ್ಞಾನೇಶ್ವರನು ತನ್ನ ಒಂದು ಅಭಂಗದಲ್ಲಿ "ಕಾನಡಾ ಹೋ ವಿಟ್ಠಲು ಕರ್ನಾಟಕು, ಯೇಣೆ ಮಝಲಾವಿಲೆ ವೇದು" ಎಂದರೆ,  "ಕನ್ನಡದ, ಕರ್ನಾಟಕದ ವಿಠಲ ನನ್ನ ಮನಸ್ಸನ್ನು ಸೆಳೆದೊಯ್ದ" ಎನ್ನುತ್ತಾನೆ. ಅಂತೆಯೇ, ನಾಮದೇವನು  ಒಂದು ಅಭಂಗದಲ್ಲಿ  "ಕಾಶಿಯೇ ಕನೌಜು ದ್ವಾರಕೇ ಗುರ್ಜರು ಕಾನಡಾ ವಿಟ್ಠಲು ಪಂಡರೀಯೇ" , ಎಂದರೆ, " ಕನೋಜಿನಲ್ಲಿರುವ ಕಾಶಿಯಂತೆ, ಗುಜರಾತಿನಲ್ಲಿರುವ ದ್ವಾರಕೆಯಂತೆ, ಕಾನಡೀ (ಕನ್ನಡದ) ವಿಟ್ಠಲನು ಪಂಢರಿಯಲ್ಲಿ (ಎಂದರೆ ಪಂಢರಪುರದಲ್ಲಿ) ಎನ್ನುತ್ತಾನೆ. ಇನ್ನೊಂದು ಅಭಂಗದಲ್ಲಿ ನಾಮದೇವನೇ "ಕಾನಡಾ ವಿಟ್ಠಲ ವೋ ಉಭಾ ಭೀವರೇತೀರೀ" ಎಂದರೆ, " ಕನ್ನಡದ ವಿಟ್ಠಲನು ಎದ್ದು ನಿಂತ" ಎಂದರೆ, ಮತ್ತೊಂದರಲ್ಲಿ " ವಿಟ್ಠಲ ಕಾನಡೇ ಬೋಲೂ ಜಾಣೇ, ತ್ಯಾಚೀ ಭಾಷಾ ಪುಂಡಲೀಕ ನೇಣೇ " ಎಂದರೆ, "ವಿಠಲನು ಮಾತಾಡುವನು ಕನ್ನಡ, ಅದನೇ ಮರುನುಡಿಯವನು ಪುಂಡಲೀಕ" ಎಂದು . ಸಂತ ಏಕನಾಥನು "ತೀರ್ಥ ಕಾನಡೇ ದೇವ ಕಾನಡೇ ಕ್ಷೇತ್ರ ಕಾನಡೇ ಪಂಡರೀಯೇ" ಎಂದರೆ, " ತೀರ್ಥವೂ ಕನ್ನಡ, ದೇವನೂ ಕನ್ನಡ, ಪಂಡರೀ ಕ್ಷೇತ್ರವೂ ಕನ್ನಡ"  ಎಂದು ಹೇಳಿದ್ದಾನೆ. ಇದನ್ನೆಲ್ಲ ನೋಡಿದಾಗ, ವಿಠಲನನ್ನು ಭಜಿಸುವ ಪಂಥ ಕನ್ನಡನಾಡಿನಲ್ಲೇ ಆರಂಭವಾಗಿದ್ದಿರಬೇಕು ಎನ್ನುವುದಕ್ಕೆ ಪುಷ್ಟಿ ದೊರೆಯುತ್ತದೆ. ಆದರೆ ಕೆಲವು ವಿದ್ವಾಂಸರು ಇದನ್ನೊಪ್ಪದೇ ಕಾನಡಾ ಎಂದರೆ ಅಗಮ್ಯನೆಂದೂ, ಕರ್ನಾಟಕವೆಂದರೆ, ಕಪಟನಾಟಕ ಸೂತ್ರಧಾರ ಎಂಬ ಅರ್ಥ ಮಾಡುವುದೂ ಉಂಟು.

ಕೆಲವು ವಿದ್ವಾಂಸರು ಬೌದ್ಧ ಧರ್ಮದ ಪ್ರಭಾವದಿಂದ ವಿಠಲನ ಭಕ್ತಿ ಸಂಪ್ರದಾಯ ಆರಂಭವಾಯಿತು ಎಂಬ ವಾದವನ್ನು ಮುಂದಿಟ್ಟಿದ್ದಾರಾದರೂ, ಇಂದು ವಿಠಲನೆಂದರೆ ವಿಷ್ಣುವಿನ ರೂಪವೆಂಬ ಭಾವನೆಯೇ ಜನರಲ್ಲಿ ನೆಲೆನಿಂತಿದೆ.ಪಂಢರಪುರದ ವಿಠಲನನ್ನು ಸಾಧಾರಣವಾಗಿ ಕೃಷ್ಣನ ರೂಪವೆಂದೇ ಪರಿಗಣಿಸಲಾಗುತ್ತೆ. ವಿಠಲನು ವಿಷ್ಣು-ಶಿವ ಇಬ್ಬ ಪ್ರತೀಕವೆಂದೂ ಹೇಳುವವರಿದ್ದಾರೆ. ಇನ್ನೊಂದು ವಿಶೇಷವೆಂದರೆ  ಬೇರೆ ವಿಷ್ಣು ಮಂದಿರಗಳಲ್ಲಿರುವಂತೆ ವಿಠಲನೊಡನೆ ಲಕ್ಷ್ಮೀದೇವಿಯ ಜೊತೆಗೆ ರುಕುಮಾಯಿ, ಅಥವಾ ರುಕ್ಮಿಣಿ ಇದ್ದಾಳೆ. ಅಲ್ಲದೆ ವಿಠೋಬನು ಇವನು ಕೃಷ್ಣನಂತೆ ಕೈಯಲ್ಲಿ ಕೊಳಲುಹಿಡಿದಿಲ್ಲದೆ, ಸೊಂಟದ ಮೇಲೆ ಕೈಯಿಟ್ಟುನಿಂತಿರುವುದೊಂದು ವಿಶೇಷ. ವಿಷ್ಣು ಎಂಬ ಹೆಸರು ಕನ್ನಡಕ್ಕೆ ಬಂದಾಗ ಬಿಟ್ಟಿಗ ಎಂದಾಗುತ್ತೆ. ಅದೇ ವಿಟ್ಠಲ ಎಂಬ ರೂಪ ತಾಳಿದೆ ಎಂಬ ಅನಿಸಿಕೆಯೂ ಕೂಡ ಇದೆ.

ಮೊದಲು ಪಂಢರಪುರದ ದೇವಾಲಯದ ಇತಿಹಾಸ,ಅಲ್ಲಿ ಸಿಕ್ಕ ಶಾಸನಾಧಾರಗಳ ಬಗ್ಗೆ  ಸ್ವಲ್ಪ ಪರಿಚಯ ಮಾಡಿಕೊಂಡು ನಂತರ ವಿಠಲ ಸೊಂಟದ ಮೇಲೆ ಕೈಯಿಟ್ಟಿರುವುದ್ದು ಯಾಕೆ ಎನ್ನುವುದರ ಬಗ್ಗೆ ಪ್ರಚಲಿತದಲ್ಲಿರುವ ಕಥೆಗಳನ್ನು ನೋಡೋಣ.

ಚಾರಿತ್ರಿಕ ಹಿನ್ನಲೆ ಮತ್ತು ಶಾಸನಾಧಾರಗಳು:

ಕ್ರಿ.ಶ. ೧೧೪೦ರ ಹೊಯ್ಸಳ ವೀರಬಲ್ಲಾಳನ ಶಾಸನವೊಂದರಲ್ಲಿಯೂ ವಿಠಲದೇವನನ್ನು ಸ್ತುತಿಸಿದ್ದಾನೆ. ಅದು ಪಂಢರಪುರದ ಬಗ್ಗೆ ಹೇಳುವುದಿಲ್ಲವಾದರೂ, ಆ ಸಮಯಕ್ಕೆ, ವಿಠಲನ ಪೂಜೆಯಂತೂ ಇತ್ತು ಎಂಬುದು ತಿಳಿದುಬರುತ್ತದೆ.ಸುಮಾರು ೧೩ನೇ ಶತಮಾನದಲ್ಲೇ ಪಂಡರಿಗೆಯಲ್ಲಿ ವಿಠೋಬನ ದೇವಾಲಯವಿದ್ದದ್ದಕ್ಕೆ ಶಾಸನಾಧಾರವಿದೆ. ಪಂಢರಪುರದಲ್ಲಿ ದೊರೆತಿರುವ ೧೨೭೦ರ ಯಾದವರ ಮಹಾದೇವನ ಶಾಸನದಲ್ಲಿ, ಈ ಊರನ್ನು ಪಾಂಡುರಂಗಪುರವೆಂದು ಕರೆಯುವುದರಿಂದ ಆ ಕಾಲಕ್ಕಾಗಲೇ ಈ ಊರು ಪಾಂಡುರಂಗನ ನೆಲೆಯಾಗಿತ್ತು ಎಂದು ತಿಳಿದುಬರುತ್ತದೆ. ಕ್ರಿ.ಶ. ೧೨೩೭ರ ಹೊಯ್ಸಳ ಸೋಮೇಶ್ವರನದೆಂದು ಊಹಿಸಲಾದ ಶಾಸನವು ಈಗ ಪಂಢರಪುರದ ವಿಠಲನ ದೇವಾಲಯದಲ್ಲಿರುವ ಸೋಲಾಖಂಬ (ಹದಿನಾರು ಕಂಬದ) ಮಂಟಪದಲ್ಲಿರುವ ತೊಲೆಯ ಮೇಲಿದೆ. ಈ ತೊಲೆ ಮೊದಲು ಈ ಗುಡಿಯ ಯಾವುದೋ ಬಾಗಿಲಿನ ಮೇಲಿನ ವಾಡದ ತೊಲೆಯಾಗಿರುವುದು ಅದರ ಕಟ್ಟಡದಿಂದ ತಿಳಿದುಬರುತ್ತದೆ. ಈ ಶಾಸನವು ಭೀಮರಥಿಯ ದಡದಲ್ಲಿರುವ ಪಂಡರಗೆಯ ವಿಠಲನಿಗೆ ಕೆಲವು ಹಳ್ಳಿಗಳನ್ನು ದತ್ತಿ ಬಿಟ್ಟಿರುವ ವಿಷಯವನ್ನು ಅರುಹುತ್ತದೆ. ಇದೇ ಶಾಸನವೇ ಈ ದೇವಸ್ಥಾನವನ್ನು ವಿಸ್ತರಿಸುವ, ಜೀರ್ಣೋದ್ಧಾರ ಮಾಡುವ ಕೆಲಸಗಳ ಬಗ್ಗೆ ಮಾತಾಡುತ್ತದೆ. ಇದನ್ನು ಕೆಲವರು ಯಾದವರ ಸೋಮೇಶ್ವರನ ಶಾಸನವೆಂದು ಹೆಸರಿಸಿದ್ದರೂ, ದೇವಗಿರಿಯ ಯಾದವರಲ್ಲಿ ಈ ಸಮಯದಲ್ಲಿ ಸೋಮೇಶ್ವರನೆಂಬ ರಾಜ ಇಲ್ಲದಿದ್ದುದ್ದು ಯೋಚಿಸಬೇಕಾದ ಅಂಶ. ಮೊದಮೊದಲ ಹೊಯ್ಸಳರ ಹಲವು ಶಾಸನಗಳಲ್ಲಿ ಅವರನ್ನೂ ಯಾದವರೆಂದು ಕರೆದಿದ್ದರೂ, ೧೩ನೇ ಶತಮಾನದ ಕಡೆಯವೇಳೆಗೆ ಅವರು ತಮ್ಮ ಹೊಯ್ಸಳರೆಂಬ ಹೆಸರನ್ನು ಬಿಟ್ಟು ಯಾದವರೆಂಬ ಹೆಸರನ್ನು ದಾಖಲಿಸಿದ್ದಿರಬಹುದೇ ಎಂಬುದೂ ಪ್ರಶ್ನೆಯಾಗಿ ನಿಲ್ಲುತ್ತದೆ. ಈ ಶಾಸನ ಬರೆಸಿದ ಸೋಮೇಶ್ವರ ಹೊಯ್ಸಳ ಸೋಮೇಶ್ವರನದ್ದೇ ಆಗಿರಲಿ, ಅಥವಾ ದೇವಗಿರಿಯ ರಾಜರಲ್ಲಿ ಸೋಮೇಶ್ವರನೆಂಬ ಎರಡನೇ ಹೆಸರುಳ್ಳ ಇನ್ನೊಬ್ಬ ಅರಸನದೇ ಆಗಿರಲಿ, ೧೩ನೇ ಶತಮಾನದ ಮಧ್ಯಭಾಗದಲ್ಲಾಗಲೇ ಈ ಕ್ಷೇತ್ರ ವಿಠಲನ ಕ್ಷೇತ್ರವಾಗಿ ಹೆಸರುಗಳಿಸಿತ್ತು ಎನ್ನುವುದಂತೂ ಖಚಿತವಾಗುತ್ತದೆ. ಆ ವೇಳೆಗಾಗಲೇ ಈಗಿರುವ ದೇವಸ್ಥಾನದ ಕೆಲವು ಮೂಲ ಭಾಗಗಳಾದರೂ ಇದ್ದಿರಬೇಕು, ಮತ್ತೆ ಆಗಲೇ ದೇವಸ್ಥಾನದ ಕಟ್ಟಡಗಳನ್ನು ದುರಸ್ತಿಪಡಿಸುವ, ಅಥವಾ ಹಿರಿದಾಗಿಸುವ ವಿಷಯ ಇರುವುದರಿಂದ, ಆಗ ದೇವಾಲಯ ಅಷ್ಟು ಕಾಲಕ್ಕಾಗಲೇ ಹಳತಾಗಿದ್ದಿರಬೇಕು. ಅಂದರೆ ೧೨೩೭ಕ್ಕಿಂತ ಹಲವಾರು ದಶಕಗಳು ಮೊದಲೇ ಈ ದೇವಾಲಯ ಇತ್ತು ಎಂಬುದು ಸಾಬೀತಾಗುತ್ತದೆ. ನಂತರ ವಿಶಾಲವಾಗಿ ವಿಸ್ತರಿಸಲ್ಪಟ್ಟಿರುವ ಈ ದೇವಾಲಯದಲ್ಲಿ ಈಗ ಇರುವ ಕಟ್ಟಡಗಳಲ್ಲಿ ಬಹುಪಾಲು ೧೭ನೇ ಶತಮಾನದ ನಂತರ ಕಟ್ಟಲ್ಪಟ್ಟವು.

ವಿಠಲನ ಮೂಲ ಮೂರ್ತಿ ಶೈಲಿಯ ದೃಷ್ಟಿಯಿಂದ ಇದು  ಶಾಸನಾಧಾರಗಳು ತೋರುತ್ತಿರುವ ೧೧-೧೨ನೇ ಶತಮಾನಕ್ಕಿಂತ ಹಳೆಯದಿರಬೇಕೆಂಬ ಅಭಿಪ್ರಾಯ ಇದೆ. ಗುಪ್ತರ ಕಾಲ (೪-೬ನೇ ಶತಮಾನ)ದ ವಿಗ್ರಹಗಳ ಛಾಯೆ ಇದರಲ್ಲಿದೆ. ವಿಠಲನ ತಲೆಯಮೇಲೆ ಇರುವ ಕಿರೀಟವು  ಟೋಪಿಯಾಕಾರದಲ್ಲಿದೆ. ಬಾದಾಮಿಯ ಗುಹೆಗಳಲ್ಲಿರುವ ಕೆಲವು ಮೂರ್ತಿಗಳಲ್ಲಿ (ಕ್ರಿ.ಶ. ೬-೭ನೆ ಶತಮಾನ)  ಈ ರೀತಿಯ ಕಿರೀಟವು ಕಂಡುಬರುತ್ತದೆ. ಆದರೆ, ವಿಠಲನ ಮೂರ್ತಿಯ ಕಿರೀಟ ಬಾದಾಮಿಯ ಕಿರೀಟಗಳಿಗಿಂತ ಸರಳವಾಗಿರುವುದೂ, ಈ ಮೂರ್ತಿಯನ್ನು ೬ನೇ ಶತಮಾನದ್ದೆಂದು ಹೇಳಲು ಒಂದು ಕಾರಣ. ಬೇರೆಲ್ಲೋ ಇದ್ದ ಮೂರುತಿ ೧೧-೧೨ನೇ ಶತಮಾನಕ್ಕೆ ಮೊದಲು ಪಂಢರಪುರಕ್ಕೆ ಬಂದಿರಬಹುದೆಂಬ ಊಹೆ ಸೂಕ್ತವಾಗುತ್ತದೆ.

ಪದ್ಮಪುರಾಣದಲ್ಲಿಯೂ ಭೀಮರಥಿಯ ದಡದಲ್ಲಿರುವ ಪಾಂಡುರಂಗ ವಿಠಲನ ಪ್ರಸ್ತಾಪ ಇದೆ. ಪುರಾಣಗಳು ಸುಮಾರು  ೧ ರಿಂದ ೫ ನೇ ಶತಮಾನದ ಕಾಲದಲ್ಲಿ ರಚಿಸಿರುವುದೆಂದು ಊಹೆ. ಆದರೆ, ಪುರಾಣಗಳಲ್ಲಿನ ಕೆಲವು ಭಾಗಗಳು ಮೂಲಕ್ಕಿಂತ ಸ್ವಲ್ಪ ಕಾಲಾನಂತರ ಸೇರಿಸಲ್ಪಟ್ಟ ಅಂಶಗಳಾಗಿರಬಹುದು ಎಂದು ಕೆಲವರು ತರ್ಕ ಮಾಡಿದ್ದಾರೆ. ಹಾಗಾಗಿ, ಆರನೇ ಶತಮಾನಕ್ಕೆ ಮೊದಲೇ ಈ ಕಥೆ ಪುರಾಣದಲ್ಲಿ ಸೇರಿತ್ತೇ ಇಲ್ಲವೇ, ಅಥವಾ ಅನಂತರ ಸೇರಿಸಿರುವುದೇ ಎನ್ನುವುದನ್ನು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ. ಹಾಗಾಗಿ, ೬ ರಿಂದ ೧೧ನೇ ಶತಮಾನಗಳ ನಡುವೆ, ವಿಠಲನ ಮೊದ ದೇಗುಲವನ್ನು ಕಟ್ಟಿರಬಹುದೆಂದು ಅಂದಾಜು ಮಾಡಬಹುದು.  ಈ ಪುರಾಣಗಳೇ ಅಲ್ಲದೆ, ಹದಿಮೂರನೆ ಶತಮಾನದಲ್ಲಿ ಬಿಲ್ವಮಂಗಳನೆಂಬ ಸಂಸ್ಕೃತ ಕವಿ ತನ್ನ ಕೃಷ್ಣಕರ್ಣಾಮೃತದಲ್ಲಿ, ಮತ್ತೆ ಚೌಡರಸನೆಂಬ ಕವಿ ತನ್ನ ಕನ್ನಡದ ಅಭಿನವದಶಕುಮಾರಚರಿತೆಯಲ್ಲಿ ವಿಠಲನನ್ನು ಸ್ತುತಿಸಿದ್ದಾರೆ.

ಪಾಂಡುರಂಗಪುರವೆಂಬ ಹೆಸರು ಮೊದಲು ಇಲ್ಲಿದ್ದ ಶಿವನ ದೇವಾಲದಿಂದ ಬಂದಿರಬಹುದು ಎಂಬ ಇನ್ನೊಂದು ಅಭಿಪ್ರಾಯವೂ ಇದೆ. ಪಾಂಡು ರಂಗ ಎಂದರೆ, ಸಂಸ್ಕೃತ ಹಾಗೂ ಮರಾಠಗಳಲ್ಲಿ ಬಿಳೀ ಬಣ್ಣದವ ಎಂದರ್ಥವಾಗುತ್ತೆ. ಆದರೆ, ವಿಠೋಬ (ಕೃಷ್ಣ, ವಿಷ್ಣು) ನನ್ನು ಯಾವಾಗಲೂ ನೀಲಮೇಘಶ್ಯಾಮನೆಂದೇ ವರ್ಣಿಸುವುದು ಪದ್ಧತಿ.  ಮತ್ತೆ ಶಿವನು ಬಿಳಿಮೈಯವನೆಂದು ನಂಬಿಕೆ. ಹಾಗಾಗಿ ಪಾಂಡುರಂಗಪುರದಲ್ಲಿದ್ದ (ಮೊದಲು ಶಿವನ ಸ್ಥಾನವಾಗಿದ್ದ) ಪಂಡರಗೆ ಯಾವಾಗ ವಿಠಲನ ನೆಲೆಯಾಗಿ, ವಿಠಲನೇ ಅಲ್ಲಿದ್ದ ಶಿವನಿಗಿಂತ ಪ್ರಖ್ಯಾತನಾದನೋ, ಆಗ ಅವನನ್ನೆ ಪಾಂಡುರಂಗವಿಠಲನೆಂದು ಕರೆದರೆಂದೂ, ಆನಂತರ ಪಾಂಡುರಂಗ, ವಿಠಲ ಎರಡೂ ಒಂದೇ ಅರ್ಥಬರುವ ಹೆಸರುಗಳೆಂಬ ಬದಲಾವಣೆ ಆಗಿದೆಯೆಂಬ ವಾದವೂ ಇದೆ.ಆದರೆ, ಬಹುಪಾಲು ಪಾಂಡುರಂಗನೆಂಬ ಹೆಸರು, ಪಂಢರಪುರದ ಹಳೆಯ ಹೆಸರಾದ ಪಂಡರಗೆ ಎನ್ನುವುದರಿಂದ ಬಂದಿದೆಯೆಂದು ಒಮ್ಮತದ ಅಭಿಪ್ರಾಯವಿರುವುದರಿಂದ ಈ ವಾದವನ್ನು ಅಷ್ಟಾಗಿ ಒಪ್ಪಲಾಗದು.


ಜ್ಞಾನದೇವ, ನಾಮದೇವ, ಏಕನಾಥ, ತುಕಾರಾಮ ಮೊದಲಾದ ಸಂತರು ಆಗಿಹೋದ ಮಹಾರಾಷ್ಟ್ರದ ಭಕ್ತಿ ಸಂಪ್ರದಾಯಕ್ಕೆ ವಾರಕರಿ ಸಂಪ್ರದಾಯವೆಂದು ಹೆಸರು. ಇವರೆಲ್ಲ ಮರಾಠಿ ಭಾಷೆಯಲ್ಲಿ ಮುಖ್ಯವಾಗಿ ವಿಠಲನನ್ನು ಕುರಿತು ಕವಿತೆಗಳನ್ನ ರಚಿಸಿದ್ದಾರೆ. ಇವುಗಳಿಗೆ ಅಭಂಗಗಳೆಂದು ಹೆಸರು. ವಾರಕರಿ ಸಂಪ್ರದಾಯಕ್ಕೆ ಸೇರಿದ ಸಂತರು ಢಾಂಭಿಕ ಆಚರಣೆಗಳಿಗೆ ಹೆಚ್ಚಿಗೆ ಗಮನ ಕೊಡದೆ, ಭಕ್ತಿಯೊಂದೇ ಪ್ರಧಾನವೆಂದು ಭಾವಿಸಿದವರು. ಜಾತಿ ಮತಗಳ ಭೇದವಿಲ್ಲದೆ ಎಲ್ಲರೂ ಒಟ್ಟಿಗೆ,ವರ್ಷೇ ವರ್ಷೇ ಎರಡು ಬಾರಿ, ಆಷಾಢ ಏಕಾದಶಿ ಮತ್ತು ಕಾರ್ತಿಕ ಏಕಾದಶಿಗಳಂದು ಪಂಢರಪುರಕ್ಕೆ ಯಾತ್ರೆ ಹೋಗಿ ವಿಠಲನ ದರ್ಶನ ಮಾಡುವುದಕ್ಕೆ ಈ ಸಂಪ್ರದಾಯದಲ್ಲಿ  ಬಹಳ ಹೆಚ್ಚಿನ ಮಹತ್ವವಿತ್ತು.  ಇಂದಿಗೂ ಕೂಡ ಆ ದಿನಗಳಂದು ಪಂಢರಪುರಕ್ಕೆ ಬಹಳ ಹೆಚ್ಚಿನ ಸಂಖೆಯಲ್ಲಿ ಭಕ್ತರು ಹೋಗುತ್ತಾರೆ.


ಭಕ್ತ ಪುಂಡಲೀಕನ ಕಥೆ

ಮಹಾರಾಷ್ಟ್ರದಲ್ಲಿ ಹೆಚ್ಚಿಗೆ ಪ್ರಚಲಿತದಲ್ಲಿರುವ ಕಥೆಯೊಂದರ ಪ್ರಕಾರ ಪುಂಡಲಿಕನೆಂಬ ಹರಿಭಕ್ತನೊಬ್ಬ ವಿಷ್ಣುವನ್ನು ಕುರಿತು ತಪಸ್ಸು ಮಾಡಿದ. ಅವನ ಭಕ್ತಿಗೆ ಮೆಚ್ಚಿ ವಿಷ್ಣುವೇ ಅವನ ಮನೆಗೆ ಬಂದುಬಿಟ್ಟ. ಆಗ, ಪುಂಡಲಿಕನು ತನ್ನ ತಂದೆತಾಯಿಯರ ಸೇವೆಯಲ್ಲಿ ನಿರತನಾಗಿದ್ದ. ತಂದೆ-ತಾಯಿಯರೇ ಎಲ್ಲರಿಗೂ ಮಿಗಿಲೆಂದು ಬಗೆದ ಪುಂಡಲಿಕನು, ವಿಷ್ಣುವಿನತ್ತ ಒಂದು ಇಟ್ಟಿಗೆಯನ್ನು ಎಸೆದು, ತಾನು ಬರುವ ವರೆಗೆ ಅದರಮೇಲೇ ನಿಲ್ಲಬೇಕೆಂದು ಹೇಳಿದನಂತೆ. ಸರಿ, ವಿಷ್ಣು ಸೊಂಟದ ಮೇಲೆ ಕೈಹೊತ್ತು ಪುಂಡಲಿಕನ ಬರವನ್ನೇ ಕಾಯುತ್ತಿದ್ದಾನಂತೆ. ಆದರೆ ಪುಂಡಲೀಕ ಅವನ ತಂದೆತಾಯಿಯರನ್ನು ಬಿಟ್ಟು ಬರದೇ ಇದ್ದುದರಿಂದ, ವಿಠಲನು ಅಲ್ಲೇ ಕಲ್ಲಾಗಿ ನಿಂತುಬಿಟ್ಟನಂತೆ. ಈ ಕತೆಯೇ, ಚೂರುಪಾರು ಬದಲಾವಣೆಗಳಿಂದ ಹಲವಾರು ಶತಮಾನಗಳಿಂದ ಚಾಲ್ತಿಯಲ್ಲಿದೆ.

ಇಟ್ಟಿಗೆಯ (ಮರಾಠಿಯಲ್ಲಿ ವೀಠ್) ಮೇಲೆ ನಿಂತದ್ದರಿಂದ ಇವನು ವಿಟ್ಠಲನಾದನೆಂದು ಮರಾಠಿ ಮಾತಾಡುವವರ ಹೇಳಿಕೆ. ಇದು ವಿಷ್ಣುವಿನ ಇನ್ನೊಂದು ಹೆಸರಾದ ಬಿಟ್ಟು, ಬಿಟ್ಟಿ ಇಂದ ಬಂದಿದೆ ಎನ್ನುವುದು ಇನ್ನೊಂದು ವಾದ. ಬಿಟ್ಟಿದೇವ ಎನ್ನುವುದು ಹೊಯ್ಸಳ ವಿಷ್ಣುವರ್ಧನನ ಹೆಸರು ಎನ್ನುವುದು ಗೊತ್ತಿರುವ ಸಂಗತಿಯೇ. ವ-ಮತ್ತು- ಬ ಈ ಅಕ್ಷರಗಳು ಕನ್ನಡಭಾಷೆಯಲ್ಲಿ  ಒಂದರ ಬದಲು ಒಂದು ಬರುವುದೂ ಸಹಜವೇ ಆದಾಗ, ಬಿಟ್ಟುವೇ ವಿಠು ಎನ್ನುವ ಪದಕ್ಕೆ  ಮೂಲವೇಕಾಗಿರಬಾರದು ಎನ್ನುವುದು ಯೋಚಿಸಬೇಕಾದ ಮಾತೇ ಆಗಿದೆ.

ಪದ್ಮಪುರಾಣದಲ್ಲಿರುವ ಕಥೆ ಸ್ವಲ್ಪ ವಿಭಿನ್ನವಾಗಿದೆ. ಬೃಂದಾವನದಿಂದ ಒಮ್ಮೆ ರಾಧೆಯು ದ್ವಾರಕೆಗೆ ಬಂದಳಂತೆ. ಕೃಷ್ಣನು ರಾಧೆಯ ಜೊತೆಗೆ ತನಗಿಂತಲೂ ಹೆಚ್ಚು ಸಲಿಗೆಯಿಂದಿರುವುದನ್ನು ಕಂಡು ರುಕ್ಮಿಣಿಗೆ ಸಹಿಸಲಾಗದೇ, ಅವಳು ಪಂಢರಪುರದ ಬಳಿಯ ದಿಂಡಿವನಕ್ಕೆ ನಡೆದಳು. ಕೃಷ್ಣನು ರುಕ್ಮಿಣಿಯನ್ನು ಮನ್ನಿಸೆಂದು ಕೋರಲು ಅವಳನ್ನು ಹಿಂಬಾಲಿಸಿದ. ರುಕ್ಮಿಣಿಯ ಕೋಪ ಇಳಿಯಲಿಲ್ಲವಾಗಿ, ಅವನು ತನ್ನ ಭಕ್ತ ಪುಂಡಲೀಕನನ್ನು ನೋಡಲು ಅವನ ಮನೆಗೆ ನಡೆದ. ಅಲ್ಲಿ ನಡೆದದ್ದೆಲ್ಲ ಈ ಹಿಂದೆ ಹೇಳಿದಂತೆಯೇ. ಆಮೇಲೆ, ಕೋಪವಿಳಿದ ಮೇಲೆ ರುಕ್ಮಿಣಿಯೂ ಅಲ್ಲಿಗೇ ಬಂದು ವಿಠೋಬನೊಡನೆ ನೆಲೆನಿಂತಳಂತೆ. ಈಗ ಪಂಢರಪುರದಲ್ಲಿ ಪುಂಡಲಿಕನಿಗೂ ಕೂಡ ಒಂದು ಗುಡಿ ಇದೆ. ಅದು ಅವನ ಸಮಾಧಿಯಿರಬಹುದೇ ಎಂಬ ಚಿಂತನೆಯನ್ನೂ ಮಾಡಿದ್ದಾರೆ. ಆ ಗುಡಿಯಲ್ಲಿ ಈಗ ಒಂದು ಶಿವಲಿಂಗವಿದ್ದು, ಇದನ್ನೂ ಪಂಢರಪುರವು ಶಿವ-ವಿಷ್ಣು ಎರಡೂ ಭಕ್ತರ ಕೇಂದ್ರವೆಂಬುದರ ಸೂಚಕವಾಗಿದೆ.

ಸ್ಕಂದಪುರಾಣದಲ್ಲಿ ಕಥೆ ಇನ್ನೂ ಸ್ವಲ್ಪ ಬೇರೆ ಇದೆ. ಇದರಲ್ಲಿ ವಿಷ್ಣುವು ಪುಂಡಲೀಕನು ತಂದೆ ತಾಯಿ
ರ ಮೇಲೆ ತೋರುವ ಭಕ್ತಿಯಿಂದ ಪ್ರಸನ್ನನಾಗಿ ಅವನಿಗೆ ಪ್ರತ್ಯಕ್ಷನಾಗಿ ಬೇಕಾದ ವರ ಬೇಡಿಕೋ ಎಂದನು. ಅದಕ್ಕೆ ಪುಂಡಲೀಕನು ಅದೇ ಸ್ಥಳದಲ್ಲಿ ತನಗೆ ಕಾಣಿಸಿಕೊಂಡ ಆ ಸುಂದರ ರೂಪದಲ್ಲೇ ನೆಲೆನಿಂತು ಎಂದೆಂದಿಗೂ ಪುಂಡರೀಕನ ಹೆಸರು ಮರೆಯದೆ ಇರುವಂತೆ, ತನ್ನ ಊರನ್ನು ಒಂದು ತೀರ್ಥಕ್ಷೇತ್ರವಾಗುವಂತೆ ಕರುಣಿಸು ಎಂದನಂತೆ. ಈಗ ಪಂಢರಪುರದ ವಿಠಲನ ಮೂರ್ತಿ ಹೇಗಿದೆಯೋ ಅದರ ವರ್ಣನೆ ಕೂಡ ಸ್ಕಂದಪುರಾಣದಲ್ಲಿ ದೊರೆಯುತ್ತದೆ. ಇದೆಲ್ಲವನ್ನೂ ನೋಡಿದರೆ, ಪಂಢರಪುರದಲ್ಲಿ ಈ ಮೂರ್ತಿಯ ಪ್ರತಿಷ್ಟಾಪನೆಯಾದ ನಂತರವೇ ಈ ಕಥೆ ಸ್ಕಂದಪುರಾಣಕ್ಕೆ ಸೇರಿರಬಹುದಾಗಿ ಊಹಿಸಬಹುದು.

ಈ ಪುಂಡಲೀಕನ ಕಥೆ ಮೇಲ್ನೋಟಕ್ಕೆ ಕಪೋಲಕಲ್ಪಿತವಾಗಿಯೂ, ಅಧ್ಭುತ ರಮ್ಯವಾಗಿಯೂ ಇರುವಂತೆ ತೋರಬಹುದಾದರೂ, ಈ ಕಥೆಯ ಹಿಂದೆ ಒಂದು ಚಾರಿತ್ರಿಕ ಘಟನೆ  ಇದ್ದೇ ಇದೆ ಎಂದು ಕೆಲವು ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ. ಪುಂಡಲೀಕನು ಚಾರಿತ್ರಿಕ ವ್ಯಕ್ತಿಯೇ ಸರಿ. ಇವನು ಕನ್ನಡವನೇ ಎಂದೂ ಕೂಡ ಹೇಳಲಾಗಿದೆ. ಪದ್ಮಪುರಾಣ, ಸ್ಕಂದಪುರಾಣಗಳಲ್ಲಿ ಇವನನ್ನು ಮುನಿಯೆಂದು ಬಹಳ ಗೌರವದಿಂದ ಕರೆಯಲಾಗಿದೆ. ಕೆಲವು ಪರಂಪರೆಗಳಲ್ಲಿ ಪುಂಡಲೀಕ ಮುನಿಯು ಮೇಲುಕೋಟೆಯಿಂದ ಹೋದವನೆಂದೂ ಹೇಳಲಾಗುತ್ತದೆ. ಒಟ್ಟಿನಲ್ಲಿ ಈತ ಬೇರೆಲ್ಲಿಂದಲೋ ವಿಠಲನನ್ನು ಪಂಢರಪುರಕ್ಕೆ ತಂದು ನೆಲೆಗೊಳಿಸಿದ್ದನ್ನೇ ಈ ಕಥೆಗಳು ಸ್ವಲ್ಪ ಬಣ್ಣ ಕಟ್ಟಿ ಹೇಳುತ್ತಿವೆಯೆಂದು ಸಾಮಾನ್ಯ ಅಭಿಪ್ರಾಯ. ಆ ಕಾಲದಲ್ಲಿ ಪೂಜೆ ಇಲ್ಲದೇ ಹೋಗಿದ್ದ, ಅಥವ ಜೀರ್ಣಸ್ಥಿತಿಯಲ್ಲಿದ್ದ ಮಹಾದೇವನ ದೇವಾಲಯದಲ್ಲೇ ಈ ವಿಠಲನ ಪ್ರತಿ
ಷ್ಠಾಪನೆ ಮಾಡಿ, ಅಥವಾ ಹೊಸದೊಂದು ದೇವಾಲಯದಲ್ಲೇ ಪ್ರತಿಷ್ಠಾಪಿಸಿ, ನಂತರ ಅದನ್ನು ಜನಪ್ರಿಯಗೊಳಿಸಿದ್ದು ಪುಂಡಲೀಕನೇ ಇರಬೇಕು. ಪರಂಪರೆಯ ನಂಬಿಕೆಯಂತೆ ಪುಂಡಲೀಕನೇ ವಾರಕರಿ ಸಂಪ್ರದಾಯದ ಮೂಲಪುರುಷ. ದೇವಸ್ಥಾನದಲ್ಲಿರುವ ೧೨೩೭ರ ಹೊಯ್ಸಳ ಸೋಮೇಶ್ವರನ ಶಾಸನವೂ ಪುಂಡಲೀಕನ ಹೆಸರನ್ನು ಹೇಳುತ್ತದೆ. ನಂತರ ೧೨೭೦ರಲ್ಲಿ ಜನಿಸಿದ ನಾಮದೇವನೂ ಪುಂಡಲೀಕನನ್ನು ಸ್ಮರಿಸಿರುವುದರಿಂದ, ಅವನು ಇವೆರಡಕ್ಕಿಂತ ಮೊದಲೇ ಇದ್ದಿರಬೇಕು.  ಅಂದರೆ ಪುಂಡಲೀಕನನ್ನೂ, ವಿಠಲ ಮೊದಲು ಪಂಡರಗೆಯಲ್ಲಿ ನೆಲೆನಿಂತದ್ದೂ ೧೨೦೦ರ ಸುಮಾರಿಗೆ ಎನ್ನಬಹುದು.

ಇಂತಹ ಸಂದರ್ಭದಲ್ಲಿ ಪಂಢರರಪುರದ ವಿಠಲನ ದೇವಾಲಯವನ್ನು ಹೊಯ್ಸಳ ವಿಷ್ಣುವರ್ಧನ (ಬಿಟ್ಟಿಗ) ಕಟ್ಟಿಸಿರಬಹುದು, ರಾಜರ ಹೆಸರಿನಿಂದ ದೇವರುಗಳನ್ನು ಕರೆಯುವ ವಾಡಿಕೆ ಇದ್ದದ್ದರಿಂದ (ಉದಾಹರಣೆಗೆ ಹೊಯ್ಸಳೇಶ್ವರ, ಶಾಂತಲೇಶ್ವರ ಮೊದಲಾದ ಹೆಸರುಗಳನ್ನು ಗಮನಿಸಿ), ಈ ಗುಡಿಗೆ/ ದೇವರಿಗೆ ವಿಟ್ಠಲನೆಂಬ ಹೆಸರಾಗಿರಬಹುದೆಂಬ ವಾದ ಕೆಲವರದ್ದು. ಆದರೆ, ಇದಕ್ಕೆ ಶಾಸನಾಧಾರ ಇದ್ದಂತೆ ಕಾಣುವುದಿಲ್ಲ; ಇದು ನಿಜವಾದ ಪಕ್ಷದಲ್ಲಿ ಪುಂಡಲೀಕನ ಕಾಲವನ್ನು ಇನ್ನೂ ಸ್ವಲ್ಪ ಹಿಂದಕ್ಕೆ ಇನ್ನೊಂದು ಐವತ್ತು ವರ್ಷ ಹಿಂದೆ ತಳ್ಳಬೇಕಾಗುತ್ತೆ. ವಿಷ್ಣುವರ್ಧನ ರಾಜ್ಯವಾಳಿದ್ದು ಆಳಿದ್ದು ಕ್ರಿ.ಶ. ೧೧೦೮ ರಿಂದ ೧೧೫೨ರ ವರೆಗೆ. 

ಒಟ್ಟಿನಲ್ಲಿ ಪುಂಡಲೀಕನೇ ವಿಠಲನ ಸ್ಥಾಪಕನೂ, ಮತ್ತು ವಿಠಲ ಮಂದಿರದ ಮೊದಲ ಪ್ರಧಾನ ಅರ್ಚಕನಿದ್ದಿರಬೇಕೆನ್ನುವ ಅಭಿಪ್ರಾಯವನ್ನು ಹೆಚ್ಚು ಕಡಿಮೆ ಎಲ್ಲ ಇತಿಹಾಸಕಾರರೂ ತಾಳಿದ್ದಾರೆ.

ವಿಜಯನಗರದ ವಿಜಯವಿಠಲ

ಇದಕ್ಕೂ ಮೊದಲೇ ಹೇಳಿದಹಾಗೆ ವಿಠಲನ ವಿಷಯಕ್ಕೆ ಬರುವಾಗ, ಹಂಪೆಯನ್ನೂ, ಪಂಢರಪುರವನ್ನೂ ಒಟ್ಟಿಗೇ ಹೇಳಬೇಕಾಗುತ್ತೆ. ಹೇಗೆ ಮರಾಠಿಯಲ್ಲಿ ಅಭಂಗಗಳನ್ನು ರಚಿಸಿದ  ಮರಾಠೀ ಸಂತರು ಪಂಢರಪುರದ ಮಹಿಮೆಯನ್ನು ಹಾಡಿ ಕೊಂಡಾಡಿದರೋ, ಕನ್ನಡದ ಹರಿದಾಸರೂ ಹಾಗೇ ಪಂಢರಪುರದ ವಿಠಲನನ್ನು ನೆನೆದಿದ್ದಾರೆ. ಜೊತೆಗೆ ಹಂಪೆಯ

ತುಂಗಭದ್ರೆಯ ದಡದ ಪುರಂದರ ಮಂಟಪ, ಹಂಪೆ
ವಿಠಲನನ್ನೂ ಕೂಡ. ದಾಸಕೂಟದ ಪ್ರಮುಖರಾದ ವ್ಯಾಸತೀರ್ಥರು,  ಪುರಂದರ ದಾಸರು , ಕನಕದಾಸರು ಹಂಪೆ (ವಿಜಯನಗರದಲ್ಲಿ) ಹಲವಾರು ವರ್ಷಗಳನ್ನು ಕಳೆದರು.  ಹಂಪೆಯ ವಿಜಯ ವಿಠಲ ದೇವಾಲಯದ ಬದಿಯಲ್ಲೇ, ಪುರಂದರ ದಾಸರು ಇದ್ದರೆನ್ನಲಾದ ಪುರಂದರ ಮಂಟಪವೂ ಇದೆ. ಹಂಪೆಯ ವಿಜಯವಿಠಲನೂ, ಪಂಡರಾಪುರದ ವಿಠೋಬನೂ ಒಬ್ಬನೇ ಎನ್ನುವುದೊಂದು ನಂಬಿಕೆ ಕರ್ನಾಟದಲ್ಲಿ ಪರಂಪರಾಗತವಾಗಿ ನಿಂತಿದೆ. ಇದರಲ್ಲೇನು ಆಶ್ಚರ್ಯ, ದೇವರು ಒಬ್ಬನೇ ಅಲ್ಲವೆ ಎನ್ನುವಿರಾ?

ದೇವರೊಬ್ಬನೇ  ಅನ್ನುವುದು ಸರಿಯಾದರೂ ಇಲ್ಲಿನ ವಿಷಯ ಇನ್ನೂ ಸ್ವಲ್ಪ ಗಹನವಾಗಿದೆ! ಕೆಲವರಪ್ರಕಾರ  ಕೃಷ್ಣ ದೇವರಾಯನು ಪಂಡರಪುರದ ವಿಠಲಮೂರ್ತಿಯನ್ನು ಅಲ್ಲಿಂದ ಬಲವಂತದಿಂದ ತಂದು ತಾನು ಕಟ್ಟಿಸಿದ ಹಂಪೆಯ ವಿಠಲನ ಗುಡಿಯಲ್ಲಿ  ಪ್ರತಿಷ್ಟಾಪಿಸಿದನಂತೆ. ಇನ್ನು ಕೆಲವರ ಪ್ರಕಾರ, ಪಂಢರಪುರದ ದೇವಾಲಯಕ್ಕೆ ಅನ್ಯಧರ್ಮೀಯ ರಾಜರಿಂದ ಇದ್ದ ಭೀತಿಯಿಂದ, ಮೂಲ ವಿಗ್ರಹವನ್ನು ಕಾಪಾಡಲು ಕೃಷ್ಣದೇವರಾಯನು ಮೂರ್ತಿಯನ್ನು ವಿಜಯನಗರಕ್ಕೆ ತಂದನಂತೆ. ನಂತರ ವಾರಕರಿ ಸಂಪ್ರದಾಯಕ್ಕೆ ಸೇರಿದ ಭಾನುದಾಸನೆಂಬ ಭಕ್ತ ಈ ಮೂರುತಿಯನ್ನು ಮತ್ತೆ ಪಂಢರಪುರಕ್ಕೆ ಕೊಂಡೊಯ್ದು ಮತ್ತೆ  ನೆಲೆಗೊಳಿಸಿದನೆಂದು ಹೇಳುವರು. ಆದರೆ, ಇಲ್ಲಿ ಇನ್ನೂ ಇದಮಿತ್ಥಂ ಎಂದು ಹೇಳುವ ಸಂಶೋಧನೆ ಆಗಬೇಕಿದೆ. ಈ ಭಾನುದಾಸ ಸಂತ ಏಕನಾಥರ ಮುತ್ತಜ್ಜ ಎಂದು ಗುರುತಿಸಲಾಗಿದೆ.

ಕೆಲವು ವಿದ್ವಾಂಸರು ಮುಸಲ್ಮಾನ ಆಕ್ರಮಣಕಾರರ ಭೀತಿ ಇದ್ದ ಆ ಕಾಲದಲ್ಲಿ ಹಿಂದೂ ಸಾಮ್ರಾಜ್ಯ ವಿಜಯನಗರದ ಅರಸ ಕೃಷ್ಣದೇವರಾಯ, ಮೂರ್ತಿಯ ಸುರಕ್ಷತೆಗಾಗಿ, ಅದನ್ನು ಹಂಪೆಗೆ ಸ್ಥಳಾಂತರಿಸಿದ್ದರೆ ಅಚ್ಚರಿಯೇನಿಲ್ಲ ಎಂದು ವಾದಿಸಿದ್ದಾರೆ.  ಮೂಲದಲ್ಲಿ ಪಂಢರಪುರದಲ್ಲಿದ್ದ ವಿಠಲನ ಮೂರ್ತಿಯನ್ನು ಕೃಷ್ಣದೇವರಾಯ ೧೫೧೩ರಲ್ಲಿ ವಿಜಯವಿಠಲನ ದೇವಾಲಯವನ್ನು ಕಟ್ಟಿಸಲು ಆರಂಭಿಸಿದಾಗ ಅಲ್ಲಿ ಪ್ರತಿಷ್ಠಾಪಿಸಲಿಕ್ಕೆಂದೇ ತಂದನೆನ್ನುವುದಕ್ಕೂ, ತಾಳೀಕೋಟೆಯ ಯುದ್ಧದ ಸಮಯದಲ್ಲಿ, ಅಥವಾ ಆಕ್ರಮಣಕಾರರ ಭೀತಿ ತೊಲಗಿದಾಗ  ಕೃಷ್ಣದೇವರಾಯನೇ ತನ್ನ ಇಚ್ಚೆಯಿಂದಲೇ ಭಾನುದಾಸನ ಜೊತೆ ಅದನ್ನು ಮರಳಿಸಿ ಪಂಢರಪುರಕ್ಕೆ ಕಳಿಸಿರಬೇಕೆಂಬ ವಾದಕ್ಕೆ ಒಂದು ತೊಂದರೆ ಇದೆ. ಅದು ಭಾನುದಾಸನ ಕಾಲ. ಕ್ರಿ.ಶ. ೧೪೪೮ರಲ್ಲಿ ಜನಿಸಿದ ಭಾನುದಾಸ ೧೫೧೩ರಲ್ಲಿ, ಇಲ್ಲವೇ ೧೫೨೩ರಲ್ಲಿ ಸಮಾಧಿ ಹೊಂದಿದನೆಂದು ಹೇಳಲಾಗಿದೆ. ವಿಜಯವಿಠಲ ದೇವಾಲಯವನ್ನು ಕೃಷ್ಣದೇವರಾಯನು ಕಟ್ಟಲು ಆರಂಭಿಸಿದ್ದು ೧೫೧೩ರಲ್ಲಿ, ಮತ್ತು ಸುಮಾರು ಕ್ರಿ.ಶ. ೧೫೬೫ರಲ್ಲಿ ತಾಳೀಕೋಟೆಯ ಯುದ್ಧವಾಗುವವರೆಗೂ ಈ ಭವ್ಯ ದೇಗುಲದ ಕಟ್ಟಡದ ಕೆಲಸ ಇನ್ನೂ ನಡೆಯುತ್ತಿತ್ತು ಎಂದು ಹೇಳುವಾಗ,  ೧೫೨೩ರ ಮೊದಲೇ ಮೂರುತಿ ಪಂಢರಪುರಕ್ಕೆ ಮರಳಿಸಲು ಸಾಧ್ಯವೇ  ಎನ್ನುವದು ಪ್ರಶ್ನಾರ್ಹ ವಿಷಯ. ಅಂತಹ ಭವ್ಯ ದೇವಾಲಯವನ್ನು ಕಟ್ಟಿದ ನಂತರ ಎರವಲು ತಂದ ಮೂಲವಿಗ್ರಹವನ್ನು ಕೆಲವೇ ವರ್ಷಗಳಲ್ಲಿ ಬೇರೆ ಕಡೆಗೆ ಕಳಿಸುವ ಸಾಧ್ಯತೆ ಎಷ್ಟು ಎಂಬುದು ಚಿಂತನೀಯವಾದ ವಿಚಾರ.

ಈ ಕಥೆಗೆ ಅಧಾರವೆಂದು ಹೇಳುವ ಭಾನುದಾಸನ ಅಭಂಗ ಹೀಗಿದೆ:

ಜರೀ ಹೇ ಆಕಾಶ ವರ ಪಡೋ ಪಾಹೇ
ಬ್ರಹ್ಮ ಗೋಲ ಭಂಗ ಜಾಯ್
ವಡವಾನಲ ತ್ರಿಭುವನ ಕಾಯ್
ತರೀ ಮೀ ತುಝೀಚ್ ವಾಸ್ ಪಾಹೀನ ಗಾ ವಿಠೋಬಾ


(ಕನ್ನಡ ಭಾವಾನುವಾದ:

ಆಕಾಶವೇ ತಲೆಮೇಲೆ ಬಿದ್ದರೇನಂತೆ
ಬ್ರಹ್ಮಾಂಡವೊಡೆದು ಹೋದರೇನಂತೆ
ಮೂರುಲೋಕ ಹೊತ್ತಿಯುರಿದರೇನಂತೆ
ನಾ ಹೊಂದುವೆ ನಿನ್ನನೇ ಓ ವಿಠೋಬಾ )

ಈ ಅಭಂಗದಲ್ಲಿ ನೇರವಾಗಿ ವಿಠಲನ ಮೂರ್ತಿಯನ್ನು ಪಂಢರಪುರಕ್ಕೆ ಕೊಂಡೊಯ್ದ ಪ್ರಸ್ತಾಪವಂತೂ ಇಲ್ಲ. ಹಾಗಾಗಿ, ಒಂದುವೇಳೆ ವಿಜಯವಿಠಲನ ದೇವಾಲಯದ ಮೂರ್ತಿ ಪಂಢರಪುರದಿಂದಲೇ ಬಂತಿತ್ತೇ, ಅಲ್ಲಿಗೇ ಮರಳಿತೇ ಎನ್ನುವ ವಿಷಯ ಮಾತ್ರ ಗೂಢವಾಗಿಯೇ ಉಳಿದಿದೆ.

ಒಟ್ಟಿನಲ್ಲಿ ವಿಠಲನು ಮಹಾರಾಷ್ಟ್ರ ಕರ್ನಾಟಕಗಳ ಶತಮಾನಗಳ ಚರಿತ್ರೆಯಲ್ಲಿ ಹಾಸುಹೊಕ್ಕಾಗಿ ಹೋಗಿದ್ದಾನೆ. ಇಂದಿಗೂ, ಮರಾಠಿ ಅಭಂಗಗಳು, ಕನ್ನಡ ದೇವರನಾಮಗಳ ಮೂಲಕ
ವಿಠಲನ್ನ ನಮ್ಮ ಜನ ನೆನೆಯುತ್ತಲೇ ಇದ್ದಾರೆ.

- ಹಂಸಾನಂದಿ

ಚಿತ್ರ ಕೃಪೆ: 
1)  www.grahana.net ( Pavan K Murthy)

2) http://my.opera.com/aadit89802/albums/showpic.dml?album=5093442&picture=76960002
3) www.wikipedia.org/
4) www.pandharpurinfo.blogspot.com/

ಇತರ ಆಕರಗಳು:

1) R.D.Ranade Mysticism in Maharashtra: The Poet Saints of Maharashtra
2) History of dvaita school of vedanta and its literature - BNK Sharma 
3)Studies in Indian Archeology - H D Sankalia felicitation volume
4) Nartananirṇayaḥ  By Puṇḍarīkaviṭṭhala - Translated by  R. Sathyanarayana,  Indira Gandhi National Centre for the Arts
5) The History of Sacred Places in India as Reflected in Traditional Literature -
By Hans Bakker, Joel P. Brereton,  - In this book , "The Legend of Pundarika. the founder of Pandarapur, by Erik Reenberg Sang
6) The Vithoba Faith of Maharashtra: The Vithoba Temple of Pandharapur and Its Mythological Structure - Shima Iwao
7) The Pandharapur Stone Inscription of the Yadava King Mahadeva, Saka 1192 - Shobhana Gokhale
Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?