ವರುಷತೊಡಕಿನ ದಿನ


ಯುಗಾದಿಯಂಥ ವರ್ಷಾವಧಿ ಹಬ್ಬದ ಮರುದಿನವನ್ನ ವರ್ಷತೊಡಕಿನ ದಿನ ಅಂತ ಕರೆಯೋ ರೂಢಿ. ಚಿಕ್ಕವನಿರುವಾಗ, ಈ ವರ್ಷತೊಡಕಿನ ದಿನ ಏನು ಮಾಡಿದರೆ, ವರ್ಷವಿಡೀ ಅದನ್ನೇ ಮತ್ತೆ ಮತ್ತೆ ಮಾಡ್ತಿರ್ತೇವೆ ಅಂತ ಮನೆಯಲ್ಲಿ ಹೇಳುತ್ತಿದ್ದರು. ಅಂದ್ರೆ ಆ ದಿನ ಸಿನೆಮಾಗೆ ಹೋಗೋದು ಇತ್ಯಾದಿ ಚಟುವಟಿಕೆಗಳು ಮನ್ನಾ. ಒಂದು ಸ್ವಲ್ಪವಾದರೂ ಓದಿ ಬರೆದು ಮಾಡಿ ಅಂತ ಮನೆಯಲ್ಲಿ ಅಪ್ಪಣೆ ( ಬೇಸಿಗೆಯ ಪರೀಕ್ಷೆ ಒಂದು ವೇಳೆ ಕಳೆದು ಹೋಗಿದ್ದರೂ ಕೂಡ)!

ಈಗ ಜನವರಿ ಒಂದನೇ ತೇದಿ ಕೂಡ ವರ್ಷಾರಂಭವಾದ್ದರಿಂದ, ಇವತ್ತು, ಎರಡನೇ ತಾರೀಕನ್ನ ವರ್ಷತೊಡಕು ಅಂತ ಕರೆದರೂ ತಪ್ಪಿಲ್ಲವೇನೋ. ಇವತ್ತು ಏನನ್ನೋ ನೋಡುತ್ತಿದ್ದಾಗ ವಿದ್ಯಾಕರನ ಸುಭಾಷಿತ ರತ್ನಕೋಶವೆಂಬ ಪುಸ್ತಕವೊಂದು ದೊರೆತಿತು. ಜೈ ಗೂಗಲೇಶ್ವರ! ಕೆಲವು ಪದ್ಯಗಳನ್ನ ಓದಿದೆ. ಒಂದು ಪದ್ಯವನ್ನ ಅನುವಾದಿಸಬೇಕೆನ್ನಿಸಿ ಮಾಡಿದೆ. ಅದು ಹೀಗಿದೆ ನೋಡಿ.ಅರರೆ! ಅದೆಂತಹ ನಿಪುಣತೆಯು
ಬಿಲ್ಗಾರಿಕೆಯಲಿ ಮದನನದು
ಬಿಟ್ಟಿರೆ ಬಾಣವು ಮೈಮೇಲೆ
ತಗುಲದೆ ಒಳಮನ ಸೀಳುವುದು!

ಸಂಸ್ಕೃತ ಮೂಲ: (ಪದ್ಯ 330, ವಿದ್ಯಾಕರನ ಸುಭಾಷಿತ ರತ್ನಕೋಶದಿಂದ)

ಅಹೋ ಧನುಷಿ ನೈಪುಣ್ಯಂ ಮನ್ಮಥಸ್ಯ ಮಹಾತ್ಮನಃ
ಶರೀರಂ ಅಕ್ಷತಂ ಕೃತ್ವಾ ಭಿನ್ನತಿ ಅಂತರ್ಗತಂ ಮನಃ ||

अहो धनुषि नैपुण्यं मन्मथस्य महात्मनः  ।
शरीरं अक्षतं कृत्वा भिनत्ति अन्तर्गतं मनः  । ।


ಈಗ ವರುಷತೊಡಕಿನ ಮಹಿಮೆಯಿಂದ ಈ ರೀತಿಯ ಕೆಲಸಗಳನ್ನೇ ಮತ್ತೆ ಮತ್ತೆ ಮಾಡುವಂತೆ ನಿಜಕ್ಕೂ ಆದರೆ, ಅದು ನನಗೆ ಸಂತಸವನ್ನೇ ತರುವುದೆಂದು ಮತ್ತೆ ಹೇಳಬೇಕಾದ್ದೇ ಇಲ್ಲ!

-ಹಂಸಾನಂದಿ

ಕೊ: ಸ್ವಲ್ಪ ಇದೇ ರೀತಿ ಮನ್ಮಥನ ಬಾಣ ಬಿಡುವ ಕುಶಲತೆಯ ಬಗ್ಗೆ ಹಿಂದೊಮ್ಮೆ ಬರೆದಿದ್ದೆ.

ಚಿತ್ರ ಕೃಪೆ: ವಿಕಿಪೀಡಿಯಾ