Skip to main content

ಕುಮಾರ ವ್ಯಾಸನಿಗೊಂದು ನಮನ

ಕುಮಾರವ್ಯಾಸನ ಕಾವ್ಯ ನನಗೆ ಬಹಳ ಹಿಡಿಸುತ್ತೆ - ಇದಕ್ಕೆ , ಕನ್ನಡದ ಬೇರೆ ಹಳೆಯ ಕಾವ್ಯಗಳಿಗಿಂತ ಇದು ಓದಿದರೆ ಸುಲಭವಾಗಿ ಅರ್ಥವಾಗುತ್ತೆ ಅನ್ನೋದೂ ಒಂದು ಕಾರಣವಿರಬಹುದು. ಅದಿರಲಿ, ಸದ್ಯಕ್ಕೇ ಬರುವ ಕುಮಾರವ್ಯಾಸ ಜಯಂತಿಯ ಸಂದರ್ಭದಲ್ಲಿ, ವರಕವಿಗೊಂದು ನಮನ - ಅವನ ಕಾವ್ಯದಲ್ಲಿ ಬಳಸಿದ ಭಾಮಿನೀ ಷಟ್ಪದಿಯ ಹತ್ತು ಪದ್ಯಗಳಲ್ಲಿ.

ಈ ಹತ್ತು ಪದ್ಯಗಳನ್ನು ಬರೆಯಲಾಗಿದ್ದು ನನ್ನ ಅದೃಷ್ಟವೆಂದೇ ನನ್ನೆಣಿಕೆ. ಹಿಂದಿನಿಂದಲೂ ಕುಮಾರವ್ಯಾಸನ ಪದ್ಯಗಳನ್ನೋದಿ, ಆದರ ಧಾಟಿಯ ಪರಿಚಯವಿದ್ದರೂ, ಈಚೆಗೆ ಪದ್ಯಪಾನ ಜಾಲತಾಣದಲ್ಲಿ ಕಳೆದ ಒಂದು ವರ್ಷದಲ್ಲಿ ಕಲಿತ, ಓದಿದ ಕೆಲವು ಪಾಠಗಳಿಂದಲೇ ನನಗೆ ಇದನ್ನು ಬರೆಯಲು ಸಾಧ್ಯವಾದದ್ದು ಅನ್ನುವುದರಲ್ಲಿ ಯಾವ ಅನುಮಾನವೇ ಇಲ್ಲ.


ಸಾಸಿರದಲಿವನೊಬ್ಬ ಕವಿವರ
ಲೇಸು ರೂಪಕದರಸ ಕುವರ
ವ್ಯಾಸನಿಗೆ ನಮಿಸುವೆನು ಮೊದಲಲಿ ಬಳಿಕ ಶಾರದೆಗೆ
ಮಾಸ ವರ್ಷಗಳೆಷ್ಟೊ ಸಂದರು
ಮಾಸದಿಹುದಾ ಕವಿಯ ನೆನಪಿದು
ಹಾಸುಹೊಕ್ಕಾಗುಳಿದ ನಮ್ಮಯ ಮನಸಿನಂಗಳದಿ || ೧||

ತಿಳಿದು ಪೇಳಲು ಕೃಷ್ಣ ಕಥೆಯ-    
ನ್ನಳವೆಯನ್ಯಗೆ? ಗಾಳು ಕವಿಗಳು
ಗಳಹಿದರೆ ಸುಮ್ಮನೆಯೆ ವ್ಯರ್ಥದೆ ಬೀಳು ಮಾತಿನಲಿ?
ಸುಳಿವಿರದ ಕಬ್ಬಗಳನೋದಿದ
ಬಳಿಕವೋದಲು ನಾರಣಪ್ಪನ
ಹೊಳೆವುದೈ ಸಲೆ ಸುಕವಿಕಾವ್ಯದ ಹಿತವು ಮನಸಿನಲಿ!  ||೨||

ವೀರ ನಾರಾಯಣನ ಸನ್ನಿಧಿ
ಯಾರ ಭಾಗ್ಯಕೆ ಸಿಗುವುದುಂಟೋ!
ಬೇರದಾರೋ ದೇವನಿಹನೇ  ಸರಿಯಗಟ್ಟಲಿಕೆ?
ಧೀರ ಬಿಟ್ಟಿಗರಾಯ ಕೆತ್ತಿಸಿ           
ಪೂರಯಿಸಿದನು ತನ್ನ ಹರಕೆಯ
ಸಾರುತಲಿ ಜಗದೊಡೆಯ ನಾರಾಯಣನೆ  ಮೊದಲೆಂದು! ||೩||

ಕತ್ತಲೆಯು ಕಳೆಯುತಿರೆ  ಮೂಡಲ
ಹೊತ್ತು ಮೂಡಿರೆ ಕೋಳಿ ಕೂಗಿರ-
ಲಿತ್ತ ಬಂದನು ನಾರಣಪ್ಪನು ನಾರಯಣ ಗುಡಿಗೆ
ಸುತ್ತಿ ಗುಡಿಯನು ಹತ್ತು ಸಲ ಮ-
ತ್ತತ್ತ ಪುಷ್ಕರದೊಳಗೆ ತಾ ಮೀ -
ಯುತ್ತಲೆದ್ದನು ಮಡಿಯನುಟ್ಟನು ಹರಿಯ ನೆನೆಯುತಲಿ  ||೪||

ಮುದ್ದು ಕೋಗಿಲೆಯೊಂದು ಹಾಡುತ-
ಲಿದ್ದುದದು ಮಾಮರದಿ ಗುಡಿಯೊಳ-
ಗಿದ್ದ ದೇವಗೆ ಸುಪ್ರಭಾತವ ನಲಿದು ಕೋರುತಲಿ
ಒದ್ದೆಯುಟ್ಟವ ದೇಗುಲದ ಮುಂ-
ದಿದ್ದ ಮಂಟಪದೊಳಗೆ ಹೊಕ್ಕನು
ಸದ್ದು  ಬೇರೊಂದಿಲ್ಲ ಸುತ್ತಣ ಜನರು ನಿದ್ರೆಯಲಿ ||೫||ಒರಗಿ ಕುಳಿತನು ಕಂಬವೊಂದಕೆ
ಕರದಿ ಪಿಡಿದೋಲೆಗರಿ ಕಟ್ಟನು
ಬರೆದನೈ ಹಾಡುತ್ತ  ಭಾರತ ಕಥಾಮಂಜರಿಯ 
ಹರಿದುದಲ್ಲೇ ಕಾವ್ಯಸುಧೆ ಸರ-
ಸರನೆ ಷಟ್ಪದಿಗಳನು ಸರಸದ-
ಲರಿವೆಯಲಿ ಪಸೆಯಿರ್ಪವರೆಗೂ ಕುಳಿತು ಬರೆದಿರ್ದ  ||೬||

ಹಲಗೆ ಬಳಪವ ಪಿಡಿಯದೇ ಬಲು
ಸುಲಭದಲ್ಲಿಯೆ ಕಥೆಯ ಪೇಳ್ದನು
ಕಲುಷವಿಲ್ಲದ ತಿರುಳುಗನ್ನಡನಾಡ ನುಡಿಯಲ್ಲಿ
ಬಲು ತುರುಸಿನಲೆ ಹಬ್ಬಿತೊಸಗೆಯು
ಚೆಲುವು ಕಬ್ಬವನೊರೆವ ಕವಿಯನು
ನಿಲುಕಿ ನೋಡಲು ನಿತ್ಯ ಪುರಜನ ಸಾಲುಗಟ್ಟಿದರು ||೭||


ಮತ್ತೆ ವಾರವು ಮಾಸಗಳು ಕಳೆ
ದಿತ್ತು ಕವಿವರ ಬರೆದು ಮುಗಿಸಲು
ಹತ್ತು ಪರ್ವಗಳಲ್ಲಿ ಭಾರತ ಕಾಳಗದ ಕಥೆಯ
ಚಿತ್ತಜನ ಪಿತ ಕೃಷ್ಣ ಕಥೆಯಿ-
ನ್ನುತ್ತಮರು ಪರಿಕಿಸಲು ಮೆರೆವುದು
ಮತ್ತೆ ಉಳಿದಿರ್ದೆಂಟು ಪರ್ವದ ಗೊಡವೆ ಬೇಡೆಂದ ||೮||

ಮುನ್ನವೋದಿದ್ದವರೆ ಅರಿತಾ-
ರಿನ್ನಿವನ ಭಾರತದ ಸೊಗ ಬಲು
ಚೆನ್ನವೈ ನವರಸಗಳನು ಸವಿವಂಥ ಲೋಗರಿಗೆ
ಇನ್ನು ಭಾರತವೆಂದು ಪೇಳಲು
ಕನ್ನಡಕೆ ಮಿಗಿಲಾಯ್ತು ಕಾವ್ಯವಿ-
ದುನ್ನತವು ಕವಿಕುವರ ವ್ಯಾಸನ ಕಥಾ ಮಂಜರಿಯು ||೯||

ಚಂದವಿದು ಕರ್ನಾಟಭಾಷೆಯ
ಲೊಂದು ರತುನವು ಶಂಕೆ ಬೇಡೈ!
ಸುಂದರವು  ಮನಸೂರೆಗೊಳ್ವುದು ರಸಿಕ ಬೃಂದವನು
ಸಂದರೇನೈನೂರು ವರುಷಗ-
ಳಿಂದ ಜನಮನದಲ್ಲಿ ನಿಂತಿಹು-
ದೆಂದಿಗೂ ನಿಲ್ಲುವುದು ಕುವರವ್ಯಾಸ ಭಾರತವು  ||೧೦||

-ಹಂಸಾನಂದಿ

ಕೊ: ಗದುಗಿನ ನಾರಣಪ್ಪನೆಂಬ ಕವಿ ಸುಮಾರು ೧೪೩೦ರಲ್ಲಿ, ಕನ್ನಡದಲ್ಲಿ ವ್ಯಾಸಭಾರತದ ಮೊದಲ ಹತ್ತು ಪರ್ವಗಳ ಕಥೆಯನ್ನು ಭಾಮಿನೀ ಷಟ್ಪದಿಯಲ್ಲಿ ಅನುವಾದಿಸಿದ. ಅವನ ಮೊದಲೂ ಪಂಪರನ್ನಾದಿಗಳು ಮಹಾಭಾರತದ ಕಥೆಯನ್ನು ಕನ್ನಡಕ್ಕೆ ತಂದಿದ್ದರೂ ಕೂಡ, ನಾರಣಪ್ಪನ "ಕರ್ಣಾಟ ಭಾರತ ಕಥಾಮಂಜರಿ"ಯೇ ಕನ್ನಡದಲ್ಲಿ ಎಲ್ಲ ಭಾರತ ಕಥೆಗಳಲ್ಲೂ ಹೆಚ್ಚು ಜನಪ್ರಿಯ. ಇದೇಕಾರಣಕ್ಕೆ ನಾರಣಪ್ಪನಿಗೆ ಕುಮಾರವ್ಯಾಸನೆಂಬ ಹೆಸರು.
 
ಕೊ.ಕೊ: ಈ ವಾರ ಕುಮಾರವ್ಯಾಸ ಜಯಂತಿ ಎಂದು ಗೆಳೆಯ ಶ್ರೀಕಾಂತ್ ಅವರೊಡನೆ ಮಾತಾಡುತ್ತಿದ್ದಾಗ ಗೊತ್ತಾಯಿತು. ನನಗೂ ಕುಮಾರವ್ಯಾಸನಿಗೂ ಬಹಳ ಹಳೆಯ ನಂಟು. ನನ್ನ ಅಮ್ಮ ಗಮಕ ಕಾವ್ಯವಾಚನ ಕಲಾವಿದರು. ಹಾಗಾಗಿ ಚಿಕ್ಕಂದಿನಿಂದಲೂ ಕುಮಾರವ್ಯಾಸನ ಭಾರತ ವಾಚನವನ್ನು ಕೇಳುತ್ತ ಬೆಳೆದವನು ನಾನಾದರೂ, ಹೀಗೊಂದು ಕುಮಾರವ್ಯಾಸ ಜಯಂತಿ ಇರುವುದೆಂದು ನನಗೆ ಇಂದಿನ ತನಕ ಗೊತ್ತಿರಲಿಲ್ಲ! ಈ ವಿಷಯವನ್ನು ಕೇಳಿದಾಗ ಹೊಳೆದ ಕೆಲವು ಷಟ್ಪದಿಗಳlli ಕುಮಾರವ್ಯಾಸನ ಕಾವ್ಯ ರಚನೆಯ ಹಿನ್ನಲೆಯನ್ನು ವಿವರಿಸುವ ಪ್ರಯತ್ನ ಇದು.

ಕೊ.ಕೊ.ಕೊ: ಹಿಂದೊಮ್ಮೆ ಕುಮಾರವ್ಯಾಸ ಭಾರತದ ಕಥೆಯ ಹಿನ್ನೆಲೆಯಲ್ಲಿಯೇ ನಾನು  ಕರ್ಣ ರಸಾಯನ ಎಂಬ ಒಂದು ನಾಟಕವನ್ನು ಬರೆದು ಆಡಿಸಿದ್ದೆ. ಅದನ್ನು ಇಲ್ಲಿ ಓದಬಹುದು.

ಚಿತ್ರ ಕೃಪೆ: ಕುಮಾರವ್ಯಾಸನ ಚಿತ್ರ ಉಡುಪಿಯ ಚಿತ್ರಕುಟೀರದ ಬಿ.ಪಿ. ಬಾಯಿರಿಯವರ ಕಲೆಗಾರಿಕೆ; ನನಗೆ ಇದು http://www.kamat.com/ ನಲ್ಲಿ ದೊರಕಿತು. ಮತ್ತೆ ಕುಮಾರವ್ಯಾಸ ನ ಕಂಬದ ಚಿತ್ರ ಗೆಳೆಯ ಮಂಜುನಾಥ ಕೊಳ್ಳೇಗಾಲ ಅವರ ನನ್ನಬರಹ ಬ್ಲಾಗ್ ನಿಂದ.

ಪದ್ಯಗಳಿಗೆ ಕೆಲವು ಟಿಪ್ಪಣಿಗಳು:

೧) ರೂಪಕದರಸ:  ಕುಮಾರ ವ್ಯಾಸ ರೂಪಕಾಲಂಕಾರವನ್ನು ಬಳಸುವುದರಲ್ಲಿ ಎತ್ತಿದ ಕೈ. ಅದಕ್ಕೇ ಅವನಿಗೆ "ರೂಪಕ ಸಾಮ್ರಾಜ್ಯ ಚಕ್ರವರ್ತಿ" ಎಂಬ ಬಿರುದೇ ಇದೆ.

೨) ಕೃಷ್ಣನ ಭಕ್ತನಾದ ಕುಮಾರವ್ಯಾಸನಿಗೆ ಮಹಾಭಾರತವು ಕೃಷ್ಣನ ಕಥೆಯೇ ಸರಿ. "ತಿಳಿಯ ಹೇಳುವೆ ಕೃಷ್ಣ ಕಥೆಯನು ಇಳೆಯ ಜಾಣರು ಮೆಚ್ಚುವಂತಿರೆ..." ಎಂದು ಅವನು ಪೀಠಿಕಾ ಸಂಧಿಯಲ್ಲೇ ಹೇಳಿರುವುದನ್ನು ನೆನೆಯಬಹುದು.

೩) ಕೋಳಿವಾಡ ಗ್ರಾಮದ ನಾರಣಪ್ಪ, ಗದುಗಿನ ವೀರನಾರಾಯಣನ ಗುಡಿಯಲ್ಲಿ ಕುಳಿತು ತನ್ನ ಭಾರತಕಾವ್ಯವನ್ನು ಬರೆದನೆಂಬುದು ನಂಬಿಕೆ. ಹೊಯ್ಸಳರ ಅರಸ ಬಿಟ್ಟಿಗ (ವಿಷ್ಣುವರ್ಧನ) ಸುಮಾರು ಕ್ರಿ.ಶ. ೧೧೨೦ ರ ವೇಳೆಯಲ್ಲಿ, ತಾನು ಗಂಗರ ಮೇಲೆ ಯುದ್ಧದಲ್ಲಿ ಗೆದ್ದ ನೆನಪಿಗಾಗಿ ಕಟ್ಟಿಸಿದ ಐದು ದೇವಾಲಯಗಳಲ್ಲಿ ಈ ವೀರನಾರಾಯಣನ ದೇವಾಲಯವೂ ಒಂದು.

೪) ೫) ಮತ್ತೆ ೬) ನಾರಣಪ್ಪ ಪ್ರತಿದಿನ ಗದುಗಿನ ವೀರನಾರಾಯಣ ದೇವಾಲಯದ ಪುಷ್ಕರಿಣಿಯಲ್ಲಿ ಮುಳುಗೆದ್ದು, ಒದ್ದೆ ಬಟ್ಟೆಯುಟ್ಟು, ಆ ಬಟ್ಟೆ ಒಣಗುವವರೆಗೆ ಮಾತ್ರ ದೇವಾಲಯದ ಕಂಬವೊಂದಕ್ಕೊರಗಿ , ತನ್ನ ಕಾವ್ಯ ರಚಿಸಿದನೆಂದು ಪ್ರತೀತಿ. ಇದನ್ನೇ ಈಗ ಕುಮಾರವ್ಯಾಸ ಕಂಬ ಎನ್ನಲಾಗುತ್ತೆ. ಅಲ್ಲದೇ, ಕುಮಾರವ್ಯಾಸನು ಪದಬಳಕೆಯಲ್ಲಿ, ವ್ಯಾಕರಣದಲ್ಲಿ, ಕೆಲವೊಮ್ಮೆ ಪದ್ಯದ ಛಂದಸ್ಸಿಗಾಗಿ ಪದಗಳನ್ನು ರೂಢಿಗಿಂತ ಬದಲಿಸುವುದನ್ನು ನೋಡಬಹುದು. ಹಾಗಾಗಿ, ಅವನದೇ "ನಾರಯಣ" ಪದವನ್ನೂ ನಾನು ಬಳಸಿದ್ದೇನೆ.

೭) ಕುಮಾರವ್ಯಾಸನೇ ತನ್ನ ಬಗ್ಗೆ ಹೇಳಿಕೊಳ್ಳುವಾದ "ಹಲಗೆ ಬಳಪವ ಹಿಡಿಯದೊಂದಗ್ಗಳಿಕೆ ಪದವಿಟ್ಟಳುಪದೊಂದಗ್ಗಳಿಕೆ" ಎಂದು ಹೇಳಿಕೊಂಡಿದ್ದಾನೆ. ಅಷ್ಟು ನಂಬಿಕೆ ಅವನಿಗೆ ತನ್ನ ಸಾಮರ್ಥ್ಯದ ಮೇಲೆ! ಇವನು ತನ್ನ ಕಾವ್ಯಕ್ಕೆ ಬಳಸಿದ್ದೂ ಗದಗು ಲಕ್ಷ್ಮೇಶ್ವರಗಳ ತಿರುಳ್ಗನ್ನಡವನ್ನೇ.

೮) ಕುಮಾರವ್ಯಾಸನು ಆದಿಪರ್ವದಿಂದ ಗದಾಪರ್ವ - ಒಟ್ಟು ಹತ್ತು ಪರ್ವಗಳನ್ನು ಮಾತ್ರ ಬರೆದಿದ್ದಾನೆ. ನಂತರ ಕೃಷ್ಣ ದೇವರಾಯನ ಆಸ್ಥಾನದಲ್ಲಿದ್ದ ತಿಮ್ಮಣ್ಣಕವಿಯು ಕುಮಾರವ್ಯಾಸನು ಕೈ ಹಾಕದ ಕಡೆಯ ಎಂಟು ಪರ್ವಗಳನ್ನು ಕನ್ನಡಕ್ಕೆ ತಂದಿದ್ದಾನೆ.

೯) ಲೋಗರಿಗೆ=ಜನಗಳಿಗೆ; ಇದೂ ಕುಮಾರವ್ಯಾಸನು ಬಳಸಿದ ಪದವೇ. ಇವನ ಭಾರತಕ್ಕೆ ಹೆಸರು "ಕರ್ನಾಟ ಭಾರತಕಥಾ ಮಂಜರಿ" ಎಂದು,

೧೦) ಕುಮಾರವ್ಯಾಸ, ಕುವರವ್ಯಾಸ , ಈ ಎರಡೂ ಪದಗಳನ್ನೂ ನಾರಣಪ್ಪ ತನ್ನ ಬಗ್ಗೆ ಹೇಳುವಾಗ ಬಳಸಿಕೊಂಡಿದ್ದಾನೆ.

Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ಹಲವರಿಗೆ ಪತ್ರಿಕೆಯಲ್ಲಿ ಬಂದದ್ದೆಲ್ಲಾ ಸತ್ಯ, ಪ್ರಕಟವಾಗಿದ್ದೆಲ್ಲ ನಿಜ ಅನ್ನುವ ಭ್ರಮೆ ಇರುತ್ತೆ. ಒಂದು ವಾದವಿದ್ದರೆ ಅದರ ಎಲ್ಲ ಮುಖಗಳನ್ನೂ ನೋಡಿ ಅವರವರ ತೀರ್ಮಾನ ಅವರು ತೆಗೆದುಕೊಳ್ಳುವುದೇನೋ ಸರಿಯೇ. ಆದರೆ ಈ ದಾರಿ ಹಿಡಿಯದೇ, ಪ್ರಕಟವಾದಮೇಲೆ ಅದು ಸರಿಯೇ ಇರಬೇಕು ಎಂದು ಕೊಳ್ಳುವುದು ಮಾತ್ರ ಹಳ್ಳ ಹಿಡಿಯುವ ದಾರಿ.

ಐದು  ವರ್ಷಗಳ ಹಿಂದೆ ಬರೆದಿಟ್ಟಿದ್ದ ಈ ಬರಹವನ್ನು ಇವತ್ತು, ಸ್ವಲ್ಪ ತಿದ್ದು ಪಡಿ ಮಾಡಿ, ಸ್ವಲ್ಪ ಸೇರಿಸಿ,  ಪ್ರಕಟಿಸಿದ್ದೇಕೆ ಎಂದರೆ, ಪ್ರಜಾವಾಣಿಯಲ್ಲಿ  ಐದು ವರ್ಷ ಹಿಂದೆ ಅಂಕಣವೊಂದರಲ್ಲಿ ಪ್ರಕಟವಾಗಿದ್ದ  ಬರಹವೊಂದು ಅವರಿವರ ಫೇಸ್ ಬುಕ್ ಗೋಡೆಗಳಲ್ಲಿ ಕಾಣಿಸಿಕೊಂಡಿದ್ದು. ಮತ್ತೆ ಹಲವರು  ಆ ಬರಹವನ್ನು ಹಂಚಿಕೊಂಡು, ಮರುಪ್ರಸಾರ ಮಾಡಿದ್ದೂ ನನ್ನ ಕಣ್ಣಿಗೆ ಬಿದ್ದುದರಿಂದ, ಹಿಂದೆ ನಾನು ಬರೆದಿಟ್ಟ ಟಿಪ್ಪಣಿಗಳು ನೆನಪಾದುವು!


ಈ ಬರಹದ ಬಗ್ಗೆ ಐದು ವರ್ಷಗಳ ಹಿಂದೆಯೇ, ಅಂದರೆ ಈ ಅಂಕಣ ಬರಹ ಪ್ರಜಾವಾಣಿಯಲ್ಲಿ ಬಂದಾಗಲೇ, ಗೂಗಲ್ ಬಜ಼್ ನಲ್ಲಿ ಒಂದಷ್ಟು ಚರ್ಚೆ ಆಗಿತ್ತು. ಪತ್ರಿಯೆಯ ಅಂಕಣದಲ್ಲಿ ಅಂಕಣಕಾರರು ಬರೆದದ್ದೆಲ್ಲಾ ಸತ್ಯ ಅಥವಾ ಸರಿ ಎಂದು ಕೊಂಡ ಕೆಲವು ಮಿತ್ರರು (ಏಕೆಂದರೆ ಅದು ಪ್ರಜಾವಾಣಿಯಂತಹ ಪತ್ರಿಕೆಯಲ್ಲೇ ಪ್ರಕಟವಾಗಿತ್ತಲ್ಲ!) ಈ ಬರಹವನ್ನು ಆಧಾರವಾಗಿಟ್ಟುಕೊಂಡು,  ಕೃಷ್ಣ ದ್ರಾವಿಡ ಭಾಷೆಯಾಡುತ್ತಿದ್ದವನೇ, ಅದರಲ್ಲೂ ಅವನು ಕನ್ನಡದವನೇ ಎಂದು ವಾದಿಸಿದ್ದರು. ಕೃಷ್ಣ ಕನ್ನಡದವನೇ ಅಲ್ಲವೇ ಅನ್ನುವುದನ್ನ…

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಪ್ರತಿದಿನ ಪತ್ರಿಕೆಯಲ್ಲಿ ದಿನಭವಿಷ್ಯ ನೋಡುವಂತಹ ಕೋಟ್ಯಂತರ ಜನಗಳಲ್ಲಿ ನೀವು ಒಬ್ಬರಾಗಿದ್ದರೆ, ಅಥವ ನಿಮ್ಮ ರಾಶಿ ಫಲವನ್ನು  ಪತ್ರಿಕೆಯಲ್ಲೋ, ಇಂಟರ್ನೆಟ್ ನಲ್ಲೋ ಆಗಾಗ ನೋಡುವ ಹವ್ಯಾಸ ನಿಮಗಿದ್ದರೆ, ಈ ಬರಹ ಓದೋದು ನಿಮಗೆ ಅತೀ ಅಗತ್ಯ. ಯಾಕೆ ಗೊತ್ತಾ? ನೀವು ನೋಡ್ತಾ ಇರೋ ರಾಶಿ ನೀವು ಹುಟ್ಟಿದ ರಾಶಿಯೇ ಅಲ್ಲದೆ ಇರಬಹುದು. ಇದೇನಪ್ಪಾ ನಾನು ಹುಟ್ಟಿದ್ದೇ ಸುಳ್ಳಾ ಹೀಗನ್ನೋಕೆ ಅಂದಿರಾ? ತಾಳಿ, ನಿಮಗೇ ಅರ್ಥವಾಗುತ್ತೆ. ಇನ್ನು ನಿಮಗೆ ಈ ಭವಿಷ್ಯ ಜ್ಯೋತಿಷ್ಯ ಇಂತಹದ್ದರ ಬಗ್ಗೆ ನಂಬಿಕೆ ಇಲ್ಲವೇ? ಅದರೂ, ಸುಮ್ಮನೆ ನಿಮ್ಮ ಆಕಾಶದ ಬಗ್ಗೆ ತಿಳುವಳಿಕೆಯನ್ನ ಹೆಚ್ಚಿಸಿಕೊಳ್ಳೋದಕ್ಕೆ ಓದಬಹುದು ನೀವಿದನ್ನ. ನಮ್ಮಲ್ಲಿ ಹಲವರು ನಾನು ಇಂಥ ನಕ್ಷತ್ರದಲ್ಲಿ ಹುಟ್ಟಿದೆ , ಇಂತಹ ರಾಶಿ ಅಂತ ಅಂದುಕೊಂಡಿರ್ತಾರೆ. ಅಂತಹವರಲ್ಲಿ ನೀವೂ ಸೇರಿದ್ದರೆ, ಈ ಜನ್ಮ ನಕ್ಷತ್ರಗಳು ಸಾಮಾನ್ಯವಾಗ ನೀವು ಹುಟ್ಟಿದಾಗ ಚಂದ್ರ ಆಕಾಶದಲ್ಲಿ ಯಾವ ನಕ್ಷತ್ರದ ಹತ್ತಿರ ಕಾಣಿಸ್ತಿದ್ದ ಅನ್ನೋದರ ಮೇಲೆ ಹೇಳಲಾಗುತ್ತೆ. ಚಂದಿರ ಆಕಾಶದ ಸುತ್ತಾ ಒಂದು ಸುತ್ತನ್ನ ಸುಮಾರು ೨೭ ದಿನದಲ್ಲಿ ಪೂರಯಿಸುತ್ತಾನೆ. ಹಾಗಾಗಿ ದಿನಕ್ಕೊಂದು ನಕ್ಷತ್ರ. ಈ ಇಪ್ಪತ್ತೇಳು ನಕ್ಷತ್ರಗಳು ೧೨ ರಾಶಿಗಳಲ್ಲಿ ಹಂಚಿರೋದ್ರಿಂದ, ಒಂದು ತಿಂಗಳ ಅವಧಿಯಲ್ಲಿ ಹುಟ್ಟಿರೋ ಒಂದಷ್ಟು ಜನರನ್ನ ನೋಡಿದರೆ, ಅವರು ಹುಟ್ಟಿದ ಚಾಂದ್ರಮಾನ ರಾಶಿ ಹನ್ನೆರಡು ರಾಶಿಗಳಲ್ಲಿ ಯಾವುದಾದರೂ ಆಗಿರಬಹುದು. ಇದು ಚಾಂದ್ರಮಾನದ ರೀತಿ. ಆದರೆ…

ಲಕ್ಷ್ಮೀ ಸ್ತುತಿ - ಕನಕಧಾರಾ ಸ್ತೋತ್ರ

ಮೊಗ್ಗೊಡೆದಿಹ ಲವಂಗ ಮರವನ್ನು ಮುತ್ತುತಿಹ
ಹೆಣ್ದುಂಬಿಯೋಲ್ ಹರಿಯ ಬಳಿಸಾರಿ ನಲಿವಾಕೆ
ಕಣ್ಣುಗಳ ಓರೆನೋಟದಲೆ ಸಕಲಸುಖವಿತ್ತು
ಒಳ್ಳಿತನು ತಂದೀಯಲಾ ಮಂಗಳೆ

ಜೇನ ಸವಿಯಲು ಚೆಲುವ ಕನ್ನೈದಿಲೆಯ ಕಡೆಗೆ
ಮರಮರಳಿ ಬರುತಲಿಹ ಜೇನ್ದುಂಬಿಯಂತೆ
ನಾಚುತಲಿ ಒಲವಿನಲಿ ಆ ಮುರಾರಿಯ ಮೊಗವ
ಓರಣದಿ ಹೊರಳುತಲಿ ನೋಡುತಿಹ ಮುಗುದೆ
ಹಿರಿಕಡಲ ಮಗಳ ಆ ಸೊಗದ ನೋಟದ ಮಾಲೆ
ತೋರುತಿರಲೆನಗೀಗ ಸಕಲ ಸಂಪದಗಳನೆ

ಹಾವ ಮೇಗಡೆ ಕಣ್ಣಮುಚ್ಚಿ ಪವಡಿಸಿರುವಂಥ
ಪತಿಯನ್ನು ಎವೆಯಿಕ್ಕದೆಯೆ ಪ್ರೀತಿಯಲ್ಲಿ
ನೋಡುತಿಹ ಕಮಲಕಣ್ಣವಳೋರೆ ನೋಟಗಳು
ಬೀಳುತಿರಲೆನ್ನೆಡೆಗೆ ಸಂತಸವ ತರಲು

ಕೌಸ್ತುಭವನಿಟ್ಟವಗೆ  ಮಧುವನ್ನು ಮಡುಹಿದಗೆ
ನಿನ್ನ ಕಣ್ನೋಟಗಳ ಸರವ ತೊಡೆಸಿಹಳೆ!
ಕಮಲದಲಿ ನಿಂದಿಹಳೆ ಬಯಸಿದ್ದನೀಯುವಳೆ
ತುಸು ಬೀರು ಎನ್ನೆಡೆಗೆ ಮಂಗಳವ ತರುತ

ಸಂಸ್ಕೃತ ಮೂಲ (ಆದಿ ಶಂಕರರ ಕನಕಧಾರಾ ಸ್ತೋತ್ರದಿಂದ): 

ಅಂಗಂ ಹರೇಃ ಪುಲಕ ಭೂಷಣ ಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಮ್ |
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಳ ದೇವತಾಯಾಃ ||

ಮುಗ್ದಾ ಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾ ಪ್ರಣಿಹಿತಾನಿ ಗತಾಗತಾನಿ |
ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ ಸಂಭಾವಾ ಯಾಃ ||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ
ಮಾನಂದಕಂದಮನಿಷೇಷಮನಂಗ ನೇತ್ರಮ್ |
ಅಕೇಕರಸ್ಥಿತಕನೀನಿಕ ಪದ್ಮನೇತ್ರಂ
ಭೂತ್ಯೈ ಭವನ್ಮಮ ಭುಜಂಗಶಯಾಂಗನಾಯಾಃ ||

ಬಾಹ್ವಂತರೇ ಮಧುಜಿತಃ ಶ…