Posts

Showing posts from March, 2013

ಅಳಲು

Image
ಒಲವಿನಾ ಕಟ್ಟುಗಳನೆಲ್ಲ  ಕಳಚಿ
ಬಲುದೂರವಾಗಿಸಿದ ಪ್ರೀತಿಯಾದರವ
ನಲುಮೆ ಭಾವಗಳನ್ನು ಹಿಂದೆ ಸರಿಸಿ
ಸಲೆ ಹೊಸಬನಂತವನು ದೂರ ಹೋದ!

ಕಣ್ಣಾರೆ ಕಂಡರೂ ಈ ಕಡೆಗಣಿಕೆಯನ್ನು
ಮುನ್ನದಾದಿನಗಳನೆ ಮತ್ತೆ ನೆನೆನೆನೆದೂ
ನುಚ್ಚುನೂರಾಗದೆಯೆ ಉಳಿಯಿತೇಕೆ
ಎನ್ನೆದೆಯು ಎಂಬುದನು ನಾನರಿಯೆ ಗೆಳತಿ!ಸಂಸ್ಕೃತ ಮೂಲ (ಅಮರುಕನ ಅಮರುಶತಕದಿಂದ) :

ಗತೇ ಪ್ರೇಮಬಂಧೇ ಪ್ರಣಯಬಹುಮಾನೇ ವಿಗಲಿತೇ
ನಿವೃತ್ತೇ ಸದ್ಭಾವೇ ಜನ ಇವ ಜನೇ ಗಚ್ಛತಿ ಪುರಃ
ತದುತ್ಪ್ರೇಕ್ಷ್ಯೋಪೇಕ್ಷ್ಯಾ ಪ್ರಿಯಸಖಿ ಗತಾಂಸ್ತಾಂಶ್ಚ ದಿವಸಾನ್
ನ ಜಾನೇ ಕೋ ಹೇತುರ್ದಲತಿ ಶತಧಾಯನ್ನ ಹೃದಯಂ || 38 (43)||

गते प्रेमबन्धे प्रणयबहुमाने विगलिते
निवृत्ते सद्भावे जन इव जने गच्छति पुरः ||
तदुत्प्रेक्ष्योपेक्षा प्रियसखि गतांस्तांशच दिवसान्
न जाने को हेतुर्दलति शतधा यन्न हृदयं ||


-ಹಂಸಾನಂದಿ

ಕೊ: ಚಿತ್ರ ಕೃಪೆ ವಿಕಿಪೀಡಿಯಾದಿಂದ. ರಾಜಾ ರವಿ ವರ್ಮನ "ರಾಧೆ ಮತ್ತು ಸಖಿ" ಎಂಬ ವರ್ಣಚಿತ್ರ.
(http://commons.wikimedia.org/wiki/File:Raja_Ravi_Varma,_Radha_and_Sakhi_(Oleographic_print).jpg)


ಸೀತಾ ಕಲ್ಯಾಣ ವೈಭೋಗವೇ !

Image
ಈ ಹಿಂದಿನ ವಾರ ಪದ್ಯಪಾನದಲ್ಲಿ ಸೀತಾ ಸ್ವಯಂವರದ ಬಗ್ಗೆ ಪದ್ಯಗಳನ್ನು ಬರೆಯಲು ಪದ್ಯಪಾನಿಗಳನ್ನು ಕೇಳಲಾಗಿತ್ತು. ಅಲ್ಲಿ ಕಥೆ ಮುಂದುವರೆಯುತ್ತಿದ್ದಂತೆ ನಾನು ಅಲ್ಲಲ್ಲಿ ಬರೆದ ಇಪ್ಪತ್ತು ಪದ್ಯಗಳನ್ನು ಸೇರಿಸಿ ಇಲ್ಲಿ ಒಟ್ಟಿಗೆ ಹಾಕಿದ್ದೇನೆ. ಮುಂಬರುವ ರಾಮನವಮಿಯ ಸಮಯಕ್ಕೆ ಇಲ್ಲಿ ಪೋಸ್ಟಿಸಬೇಕೆಂದುಕೊಂಡಿದ್ದರೂ, ಕೊನೆಯ ಮಂಗಳದಲ್ಲಿ ಬರುವ ಹೋಳಿಹುಣ್ಣಿಮೆಯಿಂದೇ ಆದದ್ದರಿಂದ ಈಗಲೇ ಹಾಕಿಬಿಟ್ಟೆ!

ಸೀತೆಗೆ ಸ್ವಯಂವರವೆಂದು ಜನಕ ಘೋಷಿಸಿದ್ದಾನೆ. ಡಂಗುರದಲ್ಲಿ ಸೀತೆ ಶಿವಧನುಸ್ಸನ್ನು ಎತ್ತಿದವರನ್ನು ಮದುವೆಯಾಗುವಳೆಂಬ ವಿಷಯವನ್ನು ಕೇಳಿದ ಮಿಧಿಲೆಯ ಜನರು ಕುತೂಹಲ-ಆತಂಕದಲ್ಲಿ ತಮ್ಮ ರಾಜಕುಮಾರಿಗೆ ತಕ್ಕ ವರನು ಸಿಕ್ಕಾನೋ ಇಲ್ಲವೋ ಎಂದು, ಅವಳಿಗೆ ಒಳಿತಾಗಲೆಂದು ಮನದಲ್ಲೇ ಹರಸಿದ, ನನ್ನ ಊಹೆಯ ಸಂದರ್ಭ

ಸಾರಿರಲು ಡಂಗುರವ ಮಿಥಿಲೆಯ
ಚಾರ ಗಡಣವು ನಾಳೆಯರಸು ಕು- ಮಾರಿ ಶಿವಧನುವೆತ್ತಿದನ ತಾ ವರಿಸುವಳೆನುತಲಿ ಊರ ಜನ ಕಾತರದಿ ನುಡಿದಿಹ- ರಾರು ಬರುವರೊ? ಹೆದೆಯನೇರಿಸಿ ಯಾರೊ? ಸೀತೆಯ ದೈವಕಾಯಲೆನುತ್ತ ಹರಸಿಹರು  ॥೧॥

ಸೀತಾಸ್ವಯಂವರದ ಬಗ್ಗೆ ಜನಕ ರಾಜ ಡಂಗೂರವಂತೂ ಸಾರಿದ್ದಾಯಿತು – ಇನ್ನು ಶಿವಧನುವನ್ನು ಹೆದೆಯೇರಿಸಿ ಸೀತೆಯ ಮನಗೆಲ್ಲುವನಾರಿರಬಹುದೆಂಬ ಕುತೂಹಲವುಂಟಾಗಿರಲು ಈ ಷಟ್ಪದಿ:
ಪುರವು ಮಿಥಿಲೆಯು ಸಡಗರಿಸುತಿದೆ ಬರುವರೆನ್ನುತ ರಾಜಕುವರರು ಸರಳತರಳೆಯ ಮುಗುದೆಸೀತೆಯ ಕೈಯ ಹಿಡಿಯಲಿಕೆ! ಇರುವುದಾರಿಗೊ ಭಾಗ್ಯವಿಂಥದು? ಸರಸಿಜವ ನಾಚಿಸುವ ಮೊಗವಿಹ ಸಿರಿಯಿವಳ ಮನವನ್ನು…

ರಾಮನೇ ? ಇವ ಕಾಮನೇ? ಅಭಿರಾಮನೇ?

Image
ಸೀತಾಸ್ವಯಂವರದ ಸಮಯದಲ್ಲಿ ಹಲವು ರಾಜರು ಸೀತೆಯ ತಂದೆ ಜನಕರಾಯನಿಟ್ಟ ಪಂಥದಲ್ಲಿ ವಿಫಲರಾದನಂತರ, ರಾಮ ಎದ್ದು ಶಿವಧನುವಿಟ್ಟೆಡೆಗೆ ನಡೆದಿರಲು - ಸಂದರ್ಭಕ್ಕೆಂದು ಬರೆದ ಎರಡು ಪದ್ಯಗಳು:


ರಾಮ ಹೊರಡಲು ಹರಧನುವಿನೆಡೆ ಶಿವನ ನುತಿಸುತ ಚೆಂದದಿಂ ತಾಮರೆಯನೇ ಪೋಲ್ವಕಂಗಳ ದಿಟ್ಟ ನಡಿಗೆಯ ಧೀರನ ಕಾಮದೇವನ ಚೆಲ್ವಮೀರಿಹ ಠೀವಿನೋಡುತ ಸೀತೆಯು ಹಾ! ಮನದಿನಿಯನೀಗ ಹೊರಟಿರೆ ಜೀವವುಳಿಯಿತುಯೆಂದಳು!
ರಾಮ ಹೊರಟಿರೆ ನಮಿಸಿ ಜನಕಗೆ ಹರನಚಾಪವನಿಟ್ಟೆಡೆ ತಾಮರೆಯನೇ ಪೋಲ್ವಕಂಗಳ ದಿಟ್ಟ ನಡಿಗೆಯ ಧೀರನ ಕಾಮದೇವನ ಚೆಲ್ವಮೀರಿಹ ಠೀವಿನೋಡುತ ಸಜ್ಜನರ್  ರಾಮನೇ? ಇವ ಸೋಮನೇ! ಮನದಭಿರಾಮನೇ ಸರಿಯೆಂದರು!

-ಹಂಸಾನಂದಿ ಕೊ: ಪದ್ಯಪಾನದಲ್ಲಿ ಈ ವಾರ ಸೀತಾ ಕಲ್ಯಾಣದ ಬಗ್ಗೆ ಬರೆಯುವ ಪ್ರಶ್ನೆ ಇತ್ತು - ಆ ಎಳೆಗೆಂದು ನಾನು ಬರೆದಿದ್ದರಲ್ಲಿ ಎರಡು ಪದ್ಯಗಳಿವು.