ಸೀತಾ ಕಲ್ಯಾಣ ವೈಭೋಗವೇ !

ಈ ಹಿಂದಿನ ವಾರ ಪದ್ಯಪಾನದಲ್ಲಿ ಸೀತಾ ಸ್ವಯಂವರದ ಬಗ್ಗೆ ಪದ್ಯಗಳನ್ನು ಬರೆಯಲು ಪದ್ಯಪಾನಿಗಳನ್ನು ಕೇಳಲಾಗಿತ್ತು. ಅಲ್ಲಿ ಕಥೆ ಮುಂದುವರೆಯುತ್ತಿದ್ದಂತೆ ನಾನು ಅಲ್ಲಲ್ಲಿ ಬರೆದ ಇಪ್ಪತ್ತು ಪದ್ಯಗಳನ್ನು ಸೇರಿಸಿ ಇಲ್ಲಿ ಒಟ್ಟಿಗೆ ಹಾಕಿದ್ದೇನೆ. ಮುಂಬರುವ ರಾಮನವಮಿಯ ಸಮಯಕ್ಕೆ ಇಲ್ಲಿ ಪೋಸ್ಟಿಸಬೇಕೆಂದುಕೊಂಡಿದ್ದರೂ, ಕೊನೆಯ ಮಂಗಳದಲ್ಲಿ ಬರುವ ಹೋಳಿಹುಣ್ಣಿಮೆಯಿಂದೇ ಆದದ್ದರಿಂದ ಈಗಲೇ ಹಾಕಿಬಿಟ್ಟೆ!

ಸೀತೆಗೆ ಸ್ವಯಂವರವೆಂದು ಜನಕ ಘೋಷಿಸಿದ್ದಾನೆ. ಡಂಗುರದಲ್ಲಿ ಸೀತೆ ಶಿವಧನುಸ್ಸನ್ನು ಎತ್ತಿದವರನ್ನು ಮದುವೆಯಾಗುವಳೆಂಬ ವಿಷಯವನ್ನು ಕೇಳಿದ ಮಿಧಿಲೆಯ ಜನರು ಕುತೂಹಲ-ಆತಂಕದಲ್ಲಿ ತಮ್ಮ ರಾಜಕುಮಾರಿಗೆ ತಕ್ಕ ವರನು ಸಿಕ್ಕಾನೋ ಇಲ್ಲವೋ ಎಂದು, ಅವಳಿಗೆ ಒಳಿತಾಗಲೆಂದು ಮನದಲ್ಲೇ ಹರಸಿದ, ನನ್ನ ಊಹೆಯ ಸಂದರ್ಭ


ಸಾರಿರಲು ಡಂಗುರವ ಮಿಥಿಲೆಯ

ಚಾರ ಗಡಣವು ನಾಳೆಯರಸು ಕು-
ಮಾರಿ ಶಿವಧನುವೆತ್ತಿದನ ತಾ ವರಿಸುವಳೆನುತಲಿ
ಊರ ಜನ ಕಾತರದಿ ನುಡಿದಿಹ-
ರಾರು ಬರುವರೊ? ಹೆದೆಯನೇರಿಸಿ
ಯಾರೊ? ಸೀತೆಯ ದೈವಕಾಯಲೆನುತ್ತ ಹರಸಿಹರು  ॥೧॥


ಸೀತಾಸ್ವಯಂವರದ ಬಗ್ಗೆ ಜನಕ ರಾಜ ಡಂಗೂರವಂತೂ ಸಾರಿದ್ದಾಯಿತು – ಇನ್ನು ಶಿವಧನುವನ್ನು ಹೆದೆಯೇರಿಸಿ ಸೀತೆಯ ಮನಗೆಲ್ಲುವನಾರಿರಬಹುದೆಂಬ ಕುತೂಹಲವುಂಟಾಗಿರಲು ಈ ಷಟ್ಪದಿ:

ಪುರವು ಮಿಥಿಲೆಯು ಸಡಗರಿಸುತಿದೆ
ಬರುವರೆನ್ನುತ ರಾಜಕುವರರು
ಸರಳತರಳೆಯ ಮುಗುದೆಸೀತೆಯ ಕೈಯ ಹಿಡಿಯಲಿಕೆ!
ಇರುವುದಾರಿಗೊ ಭಾಗ್ಯವಿಂಥದು?
ಸರಸಿಜವ ನಾಚಿಸುವ ಮೊಗವಿಹ
ಸಿರಿಯಿವಳ ಮನವನ್ನು ಗೆಲ್ಲುವ ಮನ್ನನಾರಿಹನೊ!  ॥೨॥


ಇತ್ತ ಅದೇ ಸಮಯಕ್ಕೆ ರಾಮ ಲಕ್ಷ್ಮಣರು ವಿಶ್ವಾಮಿತ್ರನೊಡನೆ ಮಿಥಿಲೆಯನ್ನು ಪ್ರವೇಶಿಸಿ ಆ ನಗರಿಯ ಸೊಗಸಿನ ಬಗ್ಗೆ ಮಾತಾಡುತ್ತ ರಸ್ತೆಯಲ್ಲಿ ಬರುವಾಗ, ಒಬ್ಬ ವೃದ್ಧೆ ರಾಮನ ಬಳಿಸಾರಿ, ಆವನ ಅಂದಕ್ಕೆ ಬೆರಗಾಗಿ ಅವನಿಗೆ ದೃಷ್ಟಿಯಾಗಬಾರದೆಂದು ದೃಷ್ಟಿತೆಗೆದ ಪರಿ:

ಬಹಳ ಸೊಗವೀ ನಗರಿ ಲಕ್ಷ್ಮಣ!
ಇಹರು ಸಜ್ಜನನಿಕರ! ಶೋಭಿಸು-
ತಿಹುದು ಸಗ್ಗಕೆ ಸಾಟಿಯೆನಿಸುತ್ತ ಮೆರೆದಿಹುದು!
ಅಹಹ ಹಿತವೆನುತಿರಲು ರಾಮನು
ಮಹಿಳೆಯೋರ್ವಳು ಬಳಿಗೆ ಸಾರುತ
ಸಹಜದಲಿ ರಘುರಾಮನಿಗೆ ಮಿಗೆ ದಿಟ್ಟಿ ತೆಗೆದಿಹಳು  ॥೩ ॥ದೃಷ್ಟಿ ತೆಗೆದ ನಂತರ ಆಕೆ , ತನ್ನ ಬಳಿಯಿದ್ದವರಿಗೆ ಹೇಳಿದ್ದು ಹೀಗೆ:

ಮುಗಿಲಬಣ್ಣನು ನವಿರುನುಡಿವನು
ಹಗಲ ನೇಸರ ಹೊಳೆವ ತಿಂಗಳ
ಮಿಗಿಲ ಕಾಂತಿಯನಾಂತ ಚೆಲುವನು ರಾಮಚಂದಿರನು
ನಗುವ ಮುಖವನು ನೋಡಿದಾಕ್ಷಣ
ಹಗುರವೆನಿಸಿಹನೆನ್ನ ಮನವನು
ಚಿಗುರು ಪೂಶರವಿಡಿದ ಮನ್ಮಥಗಿಂತ ಸುಂದರನು  ॥೪॥


ರಾಮ ಲಕ್ಷ್ಮಣರು ಅರಮನೆಯ ದಾರಿಗೆ ಬಂದು ಮುಂದಿನ ಮೆಟ್ಟಿಲು ಹತ್ತುತ್ತಿರುವಾಗ ಮೇಲೆ ಅಂತಃಪುರದ  ಉಪ್ಪರಿಗೆಯಲ್ಲಿ
ಊರ್ಮಿಳೆ
ಅವರಿಬ್ಬರನ್ನು ಕಂಡಾಗ ನಡೆದದ್ದೇನು?

ಚಟುವಟಿಕೆ ಚಿಮ್ಮುತಿಹ ಕೋಮಲೆ
ತಟವಟವನರಿಯದಿಹಳೂರ್ಮಿಳೆ
ಕಿಟಕಿಯಲಿ ಕುಳಿತವಳು ಬರುತಿರುವವರ ಕಂಡಿಹಳು
ಸಟೆಯನಾಡದ ಬಾಲೆ ಕಣ್ಣೆವೆ
ಮಿಟುಕಿಸದೆಲೆಯೆ ನೋಡಿ ನುಡಿದಳು
ದಿಟದಲಿಬ್ಬರು ಸೂರ್ಯರೊಟ್ಟಿಗೆ ಬಂದರಿಲ್ಲೆಂದು!  ॥೫॥


ಮುಂದುವರಿಯುತ್ತಾ ಊರ್ಮಿಳೆ ಅಕ್ಕ ಸೀತೆಗೆ ಹೀಗೆ ನುಡಿದಳು:

ಏನು ಹೇಳಲಿ ಕೇಳೆ ಜಾನಕಿ
ಸಾನುರಾಗದಲೆನ್ನ ಮಾತನು
ಮಾನಿಸರಿಗೆಲ್ಲಿರುವುದಿಂತಹ ಕಳೆಯು ಮೊಗದಲ್ಲಿ?
ಜ್ಜಾನಿಗಳ ಕೇಳಿದರೆ ಪೇಳುವ
ರೀ ನಿರಂಜನ ರೂಪಿ ಯುವಕರು
ಮಾನಿನೀಯರ ಮನಕೆ ಲಗ್ಗೆಯ ಹಾಕೆ ಬಂದಿಹರು!  ॥೬॥


ಜಾಣೆ ಊರ್ಮಿಳೆಯಿಂದ ಸೀತೆಗೆ ಇನ್ನಷ್ಟು ಸಲಹೆಗಳು:

ಅಕ್ಕ! ಕೇಳೀಗೆನ್ನ ಮಾತನು
ಚಿಕ್ಕವಳು ನಾನೆಂದು ಗಣಿಸದೆ
ನಕ್ಕು ಬಿಡದೆಲೆ ಸಿಗ್ಗು ತೋರದೆ ಕಡೆಯಗಾಣಿಸದೆ |
ತಕ್ಕವನು ನಿನಗಿವನು ಕಣ್ಣಿಗೆ
ಸಿಕ್ಕಿರಲು ಬಹುಮೂಲ್ಯ ರತುನವು
ಮಿಕ್ಕವರ ಮೇಲಕ್ಕರೆಯ ಕಿಂಚಿತ್ತು ತೋರದಿರು! || ೭॥


ಸ್ವಯಂವರ ಮಂಟಪಕ್ಕೆ ಬರುತ್ತಲಿದ್ದ ಸೀತೆ ಕುಳಿತ ರಾಜಕುಮಾರರ ಮುಂದೆ ಹಾದುಹೋಗುವಾಗ:

ಮಾಲೆ ಪಿಡಿದಳು ಮೆಲ್ಲನಡೆದಳು ಪುಲ್ಲಲೋಚನೆ ಚೆಂದದಿಂ
ಸಾಲು ಕುಳಿತಿಹ ರಾಜ ಕುವರರು ಓರೆನೋಟಕೆ ಬಿದ್ದಿಹರ್
ಕಾಲು ಮುಂದಕೆ ಹೋಗಲೊಲ್ಲದು ರಾಮಚಂದಿರ ಕಂಡಿರಲ್
ನೀಲವರ್ಣನ ಭಾನುತೇಜನ ರೂಪವನೆ ಸಲೆ ನೋಡುತಂ  ॥೮ ॥


ಸೀತೆ ಮೊದಲ ಬಾರಿ ರಾಮನನ್ನು ಕಂಡ ಸಂದರ್ಭಲ್ಲಿ:

ಮಾತೊಂದಿಲ್ಲದೆ ನೋಡಿದಳ್ ಸುದತಿ ತಾನ್! ಶ್ರೀರಾಮನಂ ದಿಟ್ಟಿಸು-
ತ್ತಾ ತಿಂಗಳ್ಪಗಲಲ್ಲಿ  ಕಾಣುತಿಹನೇನ್? ಇಲ್ಲೇನು ವೈಚಿತ್ರಮೋ?
ಹಾ! ತಂದಿಟ್ಟನೆಯೆನ್ನೊಳಾ ಸುಮಶರನ್! ತಾರುಣ್ಯ ಚಾಪಲ್ಯಮಂ
ಗೀತಂ ಪಾಡಿಹುದೈಮನಂ ಹರುಷದಿಂ! ಕಂಡೀತನಂ  ಪೆರ್ಚಿನಿಂ  ॥೧೦ ॥


ತನ್ನ ಮುಂದೆ ಕ್ಷಣಕಾಲ ಕಾಲ್ದೆಗೆಯದೆ ನಿಂತ ಸೀತೆಯನ್ನ ಕಂಡ ಶ್ರೀರಾಮನ ಮನಸ್ಸಿನಲ್ಲಿ ಮೂಡಿದ ಭಾವನೆಗಳು:

ಸೀತೆಯೇ ಭುವಿಜಾತೆಯೇ ಮೇಣ್ ಕ್ಷೀರ ಸಾಗರ ಜಾತೆಯೇ?
ಸೀತೆಯೇ ಸುವಿನೀತೆಯೇ ಈರೇಳುಜಗವಿಖ್ಯಾತೆಯೇ!
ಸೀತೆಯೇ ಶಶಿಕಾಂತಿಯೇ ನವರತ್ನ ಶೋಭಿತಮೂರ್ತಿಯೇ!
ಸೀತೆಯೇ ಬಹುಪ್ರೀತೆಯೇ! ಮನವನ್ನು ನಿಮಿಷದಿ ಗೆಲ್ದೆಯೇ! ॥೧೧॥

ಸೀತೆಯೇ ಭುವಿಜಾತೆಯೇ ಮೇಣ್ ಕ್ಷೀರಸಾಗರ ಜಾತೆಯೇ?
ಪ್ರೀತಿಯೇನತಿ ಪ್ರೀತಿಯೇ ನೀಯುಂಟುಮಾಡಿಹೆಯೆನ್ನೊಳೇಂ?
ನೀತಿಯೇನಿದು ರೀತಿಯೇ ನೀಯೆನ್ನಮೊಗವನು ನೋಡದೇ?
ಸೀತೆಯೇ? ನೀ ಸೋಲೆಯೇ? ರಘುರಾಮ ನಾ ಮನ ಸೋತಿಹೇ! ॥೧೨॥


ಒಬ್ಬರಾದ ಮೇಲೆ ಒಬ್ಬ ರಾಜರು, ಶಿವಧನುಸ್ಸನ್ನು  ಎತ್ತಿ ಹೆದೆಯೇರಿಸಲು ಹೋದಾಗ:

ಸರದಿಯಂತೆಯೆ ಹೊರಟ ರಾಯರು
ಸರಸರನೆ  ನಡೆಯುತ್ತ ಶಿವಧನು-
ವಿರಿಸಿರುವೆಡೆಗೆ ಹೋಗಿ ಬಿಲ್ಲನ್ನೆತ್ತ ಹೊರಟಿರಲು
ಅರರೆ! ಕಟ್ಟಿತು ಹಣೆಯ ಮೇಲೆ ಬೆ-
ವರಿನ ಹನಿಗಳ ಸಾಲು! ಗೋಡೆಯ-
ದುರಿತು! ಸಾಗದ ಕಾರ್ಯವಿದೆನುತ ನೆಲವು ನಡುಗಿತ್ತು!   ॥೧೩॥


ಒಬ್ಬರಾದ ಮೇಲೆ ಒಬ್ಬರು ಸೋಲುತ್ತಿದ್ದಂತೆ, ಅತ್ತ ಜನಕನಿಗೆ, ಇತ್ತ ಸೀತೆಗೆ ಇಬ್ಬರಿಗೂ ಮನದಲ್ಲು ದುಗುಡ:

ಏನ ಪೇಳಲಿ ಕೇಳು ರಾಯರ
ಮಾನ ಪೋದುದು ಜನಕ ಭೂಪತಿ
ತಾನು ಮಾಡಿದ ಪಾಪವೇನಿಹುದೆಂದು ಯೋಚಿಸಿರೆ
ಜಾನಕಿಗೆ ಪರಿತಾಪ ಹೆಚ್ಚಿತು
ಸಾನುರಾಗದಿ ರಾಮಚಂದ್ರನ-
ದೇನು ಶಿವಧನುವೆಡೆಗೆ ಪೋಗನೆನುತ್ತ ಮಿಡುಕಿದಳು  ॥೧೪॥


ಹಲವು ರಾಜರು ಸೀತೆಯ  ತಂದೆ  ಜನಕರಾಯ ನಿಟ್ಟ ಪಂಥದಲ್ಲಿ ವಿಫಲರಾದನಂತರ, ಇನ್ನು ವಿಳಂಬವು ಬೇಡ, ಕೂಡಲೆ
ಹೋಗಿ ಬಿಲ್ಲನ್ನೆತ್ತಬೇಕೆಂದು ಲಕ್ಷ್ಮಣ ತನ್ನ ಅಣ್ಣನನ್ನು ಕಳಿಸುತ್ತಾ:ಇತ್ತಕಡೆ ರಾಮನನ್ನೆಬ್ಬಿಸುತ ಲಕ್ಷ್ಮಣನು
ಮತ್ತೆ ನುಡಿದಿಹನಲ್ತೆ ಹಸನುವಾತು
ಅತ್ತ ಹೋಗೈದಾಶರಥಿ ರಾಮ ಧನುವೆಡೆಗೆ
ಚಿತ್ತದಲಿ ನೀನಿಟ್ಟು ಮೈಥಿಲಿಯ ಮುದದಿ!  ॥೧೫ ॥


ರಾಮ ಎದ್ದು ಶಿವಧನುವಿಟ್ಟೆಡೆಗೆ ನಡೆದಿರಲು:

ರಾಮ ಹೊರಡಲು ಹರಧನುವಿನೆಡೆ ಶಿವನ ನುತಿಸುತ ಚೆಂದದಿಂ
ತಾಮರೆಯನೇ  ಪೋಲ್ವಕಂಗಳ  ದಿಟ್ಟ ನಡಿಗೆಯ ಧೀರನ
ಕಾಮದೇವನ ಚೆಲ್ವಮೀರಿಹ  ಠೀವಿನೋಡುತ ಸೀತೆಯು
ಹಾ! ಮನದಿನಿಯನೀಗ ಹೊರಟಿರೆ  ಜೀವವುಳಿಯಿತುಯೆಂದಳು!  ॥೧೬॥


ಇನ್ನು ಅದನ್ನು ನೋಡುತ್ತಿದ್ದ ಸಭಿಕರು:

ರಾಮ ಹೊರಟಿರೆ ನಮಿಸಿ ಜನಕಗೆ  ಹರನಚಾಪವನಿಟ್ಟೆಡೆ
ತಾಮರೆಯನೇ  ಪೋಲ್ವಕಂಗಳ  ದಿಟ್ಟ ನಡಿಗೆಯ ಧೀರನ
ಕಾಮದೇವನ ಚೆಲ್ವಮೀರಿಹ  ಠೀವಿನೋಡುತ ಸಜ್ಜನರ್
ರಾಮನೇ? ಇವ ಸೋಮನೇ! ಮನದಭಿರಾಮನೇ ಸರಿಯೆಂದರು!  ॥೧೭॥


ರಾಮ ಶಿವಧನುವನ್ನೆತ್ತಿದ್ದೂ ಆಯಿತು! ಅದನನ್ನು ಹೆದೆಯೇರಿಸುವಾದ ಅದು ಮುರಿದದ್ದೂ ಆಯಿತು. ಸೀತೆ ಮಾಲೆ ಹಾಕಿದ್ದೂ 

ಆಯ್ತು. ಮತ್ತೆ ಜನರೆಲ್ಲಾ ಮೆಚ್ಚಿದ್ದೂ ಆಯ್ತು:

ಬಗ್ಗಿಸಿರೆ ಬಿಲ್ಲನಾರಾಮ ಮನದಭಿರಾಮ
ಹಿಗ್ಗುತಲಿ ಜಾನಕಿಯ ಮೊಗವರಳಿದೆ!
ಅಗ್ಗಳವೆ ಸೈ! ಜೋಡಿಯೆನ್ನುತಿರೆ ನೆರದವರು
ಸಗ್ಗವೇ ಬಂದಿಹುದು ಮಿಥಿಲೆಪುರಕೆ !  ॥೧೮॥


ಹೋಳಿ ಹುಣ್ಣಿಮೆ ಬಾನಿನಿಂದ ಭೂಮಿದೆ ಬಂದಿತೇ?

ಇನಕುಲಜ ರಾಮನೋ ನೀಲವರ್ಣನು ಜೊತೆಗೆ
ಮನದನ್ನೆ ಜಾನಕಿಯು ಕದಪು ಕೆಂಪು
ಮನಸೆಳೆಯೆ ವಧುವರರ ಪಚ್ಚೆಪೀತಾಂಬರವು
ಜನಕನೋಲಗದಲ್ಲೆ ಹುಣ್ಣಿಮೆಯ ಹೋಳಿ!  ॥೧೯॥


ಸೀತಾ ಕಲ್ಯಾಣವಾದ ಮೇಲೆ, ಮತ್ತೆಲ್ಲ ಮಂಗಳವೇ! ಅಲ್ಲವೆ?

ಮಂಗಳವು ಸಿಂಗಾರಿ ಸೀತೆ ಮುಖಕಮಲಕ್ಕೆ
ತಂಗದಿರನಂತೆಸೆವ ಶ್ರೀರಾಮಗೆ ।
ಮಂಗಳವಿರಲಿ ಸಕಲ ಜನಕೆಲ್ಲ ಹರಸುವೆವು
ಪೊಂಗುತಿರಲೆಲ್ಲೆಲ್ಲು ಸುಖಶಾಂತಿಯು ॥ ೨೦॥

-ಹಂಸಾನಂದಿ

ಕೊ: ಎಲ್ಲ ಪದ್ಯಗಳೂ ಪೂರ್ವಕವಿ ಪ್ರಸಿದ್ಧವಾದ ಛಂದಸ್ಸಿನಲ್ಲೇ ಇವೆ. ಹೆಚ್ಚಿನವು ಭಾಮಿನಿ ಷಟ್ಪದಿಯಲ್ಲಿದ್ದರೂ    , ಕೆಲವು ಪದ್ಯಗಳಿಗೆ ಪಂಚಮಾತ್ರಾ ಚೌಪದಿ, ಮತ್ತಕೋಕಿಲ ಮಾತ್ರಾ ಛಂದಸ್ಸು ಮತ್ತು ಶಾರ್ದೂಲವಿಕ್ರೀಡಿತ ವೃತ್ತಗಳನ್ನೂ ಬಳಸಿದ್ದೇನೆ.


ಕೊ.ಕೊ: 
ಈ ರೀತಿ ಒಂದು ಅವಕಾಶವನ್ನು ಆಗುಮಾಡಿಸಿಕೊಟ್ಟ ಪದ್ಯಪಾನದ ಗೆಳೆಯರಿಗೆ ನಾನು ಆಭಾರಿ.ನೀವು ಪದ್ಯಪಾನದ ಈ ಕೊಂಡಿಗೇ ಹೋದರೆ, ಎಲ್ಲ ಪದ್ಯಪಾನಿಗಳು ಬರೆದ ಪದ್ಯಗಳನ್ನೂ ಓದಿ ಆನಂದಿಸಬಹುದು


ಕೊ.ಕೊ.ಕೊ: ಸೀತಾ ಕಲ್ಯಾಣ ವೈಭೋಗಮೇ ಅನ್ನುವುದು ತ್ಯಾಗರಾಜರ ಒಂದು ಜನಪ್ರಿಯ ದಿವ್ಯನಾಮ ಕೃತಿ. ಈ ರಚನೆಯಲ್ಲಿ ತ್ಯಾಗರಾಜರು ರಾಮ ಸೀತೆಯ ಮದುವೆಯನ್ನು ವರ್ಣಿಸುತ್ತಾರೆ.  ಅದನ್ನೇ ಅನುಸರಿಸಿ ನಾನು, ಈ ಬರಹಕ್ಕೆ  ‘ಸೀತಾಕಲ್ಯಾಣ ವೈಭೋಗವೇ’ ಅನ್ನುವ ತಲೆಬರಹವನ್ನು ಕೊಟ್ಟಿದ್ದೇನೆ.
Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?