ಗೆಳತಿಗೊಂದು ಮಾತು
ಅತ್ತ ಹೊರಗಡೆ ತಲೆಯ ಬಾಗಿಸಿ ನೆಲವ ಕೆರೆಯವ ನಲ್ಲನು
ತುತ್ತು ತಿನ್ನದೆ ಹೋದ ಗೆಳತಿಯರತ್ತು ಕಂಗಳು ಬಾತಿವೆ
ಮತ್ತೆ ಪಂಜರದಲ್ಲಿ ಗಿಳಿಗಳ ಸದ್ದು ಕೇಳದೆ ಹೋಗಿದೆ
ಇತ್ತಲಿಂತಹ ಪಾಡು ನಿನ್ನದು! ತೊರೆಯೆ ಹಠವನು ಬೇಗನೆ!


ಸಂಸ್ಕೃತ ಮೂಲ (ಅಮರುಕನ ಅಮರುಶತಕ, ಶ್ಲೋಕ ೮):

ಲಿಖನ್ನಾಸ್ತೇ ಭೂಮಿಂ ಬಹಿರನತಃ ಪ್ರಾಣದಯಿತೋ
ನಿರಾಹಾರಾಃ ಸಖ್ಯಃ ಸತತರುದಿತೋಛ್ಛನ್ನನಯನಾಃ ।
ಪರಿತ್ಯಕ್ತಂ ಸರ್ವಂ ಹಸಿತಪಠಿತಂ ಪಂಜರಶುಕೈ-
ಸ್ತವಾವಸ್ಥಾಚೇಯಂ ವಿಸೃಜ ಕಠಿನೇ! ಮಾನಮಧುನಾ ॥


-ಹಂಸಾನಂದಿ


ಕೊ: ಇಲ್ಲಿರುವ ಚಿತ್ರವನ್ನು ನಾನು  http://www.indianminiaturepaintings.co.uk/Hyderabad_Vilaval_Ragini_23408.html ಇಲ್ಲಿಂದ ತೆಗೆದುಕೊಂಡಿದ್ದೇನೆ. ಇದೊಂದು ರಾಗಮಾಲಾ ಚಿತ್ರ


ಕೊ.ಕೊ: ರಾಗಮಾಲಾ ಚಿತ್ರಗಳು ಸಾಮಾನ್ಯವಾಗಿ  ಹಿಂದೂಸ್ತಾನಿ ಸಂಗೀತದ ರಾಗ ರಾಗಿಣಿಗಳಿಗೊಂದು ವ್ಯಕ್ತಿತ್ವವನ್ನು ಕೊಟ್ಟು  ಚಿತ್ರಿಸುವಂತಹ ಒಂದು ಸಾಂಪ್ರದಾಯಿಕ ವರ್ಣಚಿತ್ರ ಶೈಲಿ.  ಇಲ್ಲಿ ಹಾಕಿರುವ  ವಿಲಾವಲ್ ರಾಗಿಣಿಯನ್ನು ತೋರಿಸುವ ಈ ಚಿತ್ರ ನನಗೆ ಈ ಪದ್ಯದಲ್ಲಿರುವ ನಾಯಕಿ ಮತ್ತು  ಅವಳಿಗೆ ಸಲಹೆ ನೀಡುವ  ಗೆಳತಿಯನ್ನು ಸೂಚಿಸುತ್ತೆ ಅನ್ನಿಸಿದ್ದರಿಂದ ಇಲ್ಲಿ ಬಳಸಿಕೊಂಡಿದ್ದೇನೆ. ಈ ಚಿತ್ರ ಸುಮಾರು ಕ್ರಿ.ಶ.೧೭೫೦ರ ಲ್ಲಿ ಹೈದರಾಬಾದ್ ನಲ್ಲಿ ಚಿತ್ರಿತವಾದದ್ದೆಂದು ಇದನ್ನು ತೆಗೆದುಕೊಂಡ ಜಾಲತಾಣದಲ್ಲಿ ಹಾಕಲಾಗಿದೆ.

ಕೊ.ಕೊ.ಕೊ: ಮೈಸೂರಿನ ಮಹಾರಾಜ  ಮುಮ್ಮಡಿ ಕೃಷ್ಣರಾಜ ಒಡೆಯರು (ಕ್ರಿ.ಶ. ೧೭೯೪- ೧೮೬೮)   ಬರೆದ  “ಶ್ರೀ ತತ್ತ್ವನಿಧಿ” ಯಲ್ಲಿ ಕರ್ನಾಟಕ ಸಂಗೀತದ ರಾಗಗಳಿಗೂ ಕೆಲವು ರಾಗಮಾಲಾ ಚಿತ್ರಗಳಿವೆಯೆಂದು ನೆನಪು.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?