ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ!

ಸಮಸ್ಯಾಪೂರಣದ ಬಗ್ಗೆ ಈ ಹಿಂದೆಹಲವು ಬಾರಿ ಬರೆದಿದ್ದೆ - ಪದ್ಯದಲ್ಲಿ ಒಂದು ಸಾಲನ್ನು ಕೊಟ್ಟು, ಉಳಿದ ಸಾಲುಗಳನ್ನು ಕೊಟ್ಟ ಛಂದಸ್ಸಿಗೆ ಹೊಂದುವಂತೆ ಬರೆಯಬೇಕೆನ್ನುವುದೇ ಸವಾಲು. ಶತಮಾನಗಳ ಹಿಂದಿನಿಂದಲೂ ಬೆಳೆದು ಬಂದ ಈ ಕಲೆಯ ಬಗ್ಗೆ ನನಗೆ ಓದುವ ಆಸಕ್ತಿ ಇದ್ದರೂ ಈ ರೀತಿಯ ಸಮಸ್ಯೆಗಳನ್ನು ಬಿಡಿಸುವುದಕ್ಕೆ ಕೈ ಹಾಕುವುದನ್ನು ದೈರ್ಯ ನನಗೆ ಬಂದಿದ್ದು ಈಚೆಗೆ ಪದ್ಯಪಾನದಲ್ಲಿ ಕೆಲವು ಸಮಸ್ಯೆಗಳನ್ನು ನೋಡಿದ ಮೇಲೆಯೇ.
ಕೆಲವು ತಿಂಗಳ ಹಿಂದೆ ನಡೆದ ಶತಾವಧಾನದಲ್ಲಿ ಕೊಟ್ಟ ಸಮಸ್ಯೆಗೆ ಕೆಲವು ಪ್ರೇಕ್ಷಕರು 10-20 ಉತ್ತರಗಳನ್ನು ಕೊಟ್ಟಿದ್ದನ್ನು ನೋಡಿದಾಗಿನಿಂದ ನನಗೂ ಅಂತಹ ಪ್ರಯತ್ನ ಮಾಡಬೇಕಂತ ಅನ್ನಿಸಿತ್ತು. ಆದರೆ, ನನಗೆ ಸರಿಯಾಗಿ ಮನವರಿಕೆಯಾಗಿರುವ ಛಂದಸ್ಸುಗಳೇ ಒಂದೋ ಎರಡೋ! ಅಲ್ಲದೆ ಬಗೆಬಗೆಯ ಉತ್ತರ ಕೊಡುವಂತಹ ಸಮಸ್ಯೆಯೂ ಬೇಕಲ್ಲ!  

ಇವತ್ತು (ಅಂದರೆ ಏಪ್ರಿಲ್ 21ರಂದು) ಪುತ್ತೂರಿನಲ್ಲಿ ನಡೆದ ಅಷ್ಟಾವಧಾನದ ಆಯೋಜಕರಲ್ಲೊಬ್ಬರಾಗಿದ್ದ ನನ್ನ ಗೆಳೆಯರೊಬ್ಬರು ಈ ಅವಧಾನದಲ್ಲಿ ಹೀಗೊಂದು ಸಮಸ್ಯೆ ಕೊಡುವ ಉದ್ದೇಶವಿದೆ ಅಂತ ಆ ಸಾಲನ್ನು ನನಗೆ ಕೆಲದಿನಗಳ ಹಿಂದೆಯೇ ತೋರಿಸಿದ್ದರು:
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ

ಕೃಷ್ಣ ಅರ್ಜುನನಿಗೆ ಸಾರಥಿಯಾಗಿದ್ದು ಗೊತ್ತಿರುವ ಸಮಾಚಾರವೇ. ಆದರೆ ಅರ್ಜುನ ಕೃಷ್ಣನಿಗೆ ಸಾರಥಿಯಾಗಿದ್ದು ಯಾವಾಗ? ಒಳ್ಳೇ ಸಮಸ್ಯೆಯೇ ಅನ್ನಿಸಿತು. ಜೊತೆಗೆ ಈ ಸಾಲು ಭಾಮಿನೀ ಷಟ್ಪದಿಯಲ್ಲಿದ್ದುದ್ದು ನನಗೆ ಖುಷಿಯಾಯ್ತು. ಏಕೆಂದರೆ ಸ್ವಲ್ಪ ಇದ್ದಿದ್ದರಲ್ಲಿ ನನಗೆ ಕೈಹಾಕಬಹುದಾದಂತಹ ಛಂದಸ್ಸು ಅದು. ಅಲ್ಲದೆ ಅವಧಾನವಾಗುದಕ್ಕೆ ಕೆಲ ಸಮಯ ಮೊದಲೇ ನಾನು ಈ ಸಾಲನ್ನು ನೋಡಿದ್ದರಿಂದ, ಇದಕ್ಕೆ ರಾ.ಗಣೇಶರ ಉತ್ತರವೇನಿರುತ್ತೋ ಗೊತ್ತಿಲ್ಲ. ಹಾಗಾಗಿ ಯೋಚಿಸುತ್ತಾ ಪರಿಹಾರವೊಂದನ್ನು ಬರೆದೆ. ಮತ್ತೆ ಅದೇ ರೀತಿ ಯೋಚಿಸುತ್ತಾ ಹೋದಂತೆ ಮತ್ತೆ ಕೆಲವು ಹೊಸ ಪೂರಣಗಳೂ ಹೊಳೆದವು. ಹೀಗೇ ಒಂದಾದಮೇಲೊಂದು ಒಟ್ಟು ಮೂವತ್ತು ಪರಿಹಾರಗಳಾದುವು. ಅವುಗಳನ್ನು ಇಲ್ಲಿ ಸೇರಿಸಲು ಇವತ್ತು ಕಾಲ ಬಂದಿತು.

ಕೆಲವು ಪರಿಹಾರಗಳು ಒಂದೇ ತರಹ ಇರಬಹುದಾದರೂ , ಹೊಟ್ಟೆಗೆ ಹಾಕಿಕ್ಕೊಳ್ಳಬೇಕೆಂಬ ಕೋರಿಕೆ :-) ಕೆಲವು 21ನೇ ಶತಮಾನದ ಪರಿಹಾರಗಳೂ ಇವೆ :-) ನಿದಾನವಾಗಿ ಓದಿ,ಅನಿಸಿಕೆಗಳನ್ನು ತಿಳಿಸಿ.


ಗಿರಿಜೆ ಪೂಜೆಗೆ ಸತ್ಯಭಾಮೆಯು
ತೆರಳಬಯಸುತ ಜೊತೆಗೆ ಕುಳ್ಳಿರೆ
ಕರೆದಳೈ ಪತಿಯನ್ನು ನಾದಿನಿ ಸುಭದ್ರೆಯ ಸಹಿತ |
ಹೊರಗೆ ಸೂತನೆ ಕಾಣ! ಬೇಗನೆ  
ಪುರದ ದೇವಳ ಸೇರಬೇಕೆನೆ  
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ  ॥೧॥


ಗಿರಿಜೆ ಪೂಜೆಗೆ ಸತ್ಯಭಾಮೆಯು
ಪೊರಟಿರಲು ಪತಿಯೊಡನೆ ನೋಂಪಿಗೆ
ಬಿರಿದ ಹೂಗಳ ಬುಟ್ಟಿಯಲಿ ಹಾಕಿಟ್ಟು ಮುದದಿಂದ
ಹೊರಗೆ ನೋಡಲು ಸೂತನಿಲ್ಲವು
ಪುರದ ದೇವಳ ಸೇರಬೇಕೆನೆ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥೨॥


ಸರಸದಲ್ಲಿ ಸುಭದ್ರೆಯತ್ತಿಗೆ-
ಯರೊಡಗೂಡುತ ಲೆತ್ತವಾಡಿರ-
ಲರಸಿ ರುಕ್ಮಿಣಿ ಗೆದ್ದು ನಾದಿನಿಯನ್ನು ಛೇಡಿಸುತ
ಮೆರವಣಿಗೆಯಲಿ ನನ್ನ ಗಂಡನ
ಪುರದಿ ಕೊಂಡೊಯ್ಯುವುದೆ ಪಣವೆನೆ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ !  ॥೩॥


ಮರಳಿ ನೆನೆದರು ಕುರುಕ್ಷೇತ್ರದ
ಭರದ ಕದನವ ಗೀತ ಬೋಧೆಯ
ನರನು ನಾರಾಯಣನು ಸೇರಿರೆ ವರ್ಷಗಳುಕಳೆದು ॥
ಮರಳಿಯದೆನಿತು ನಿನಗೆ ಸಲಿಪುದು
ಹರಕೆಯಂದಿನದೆಂದು ಪೇಳುತ  
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ! ॥೪॥


ತರಳನಿವನಭಿಮನ್ಯು ದ್ವಾರಾ-
ಪುರಿಗೆ ತೆರಳಿರುವಾಗ  ಕಡಲಿನ
ಕರೆಯ ಮರಳಲಿ ಕಪ್ಪೆ ಗೂಡನು ಕಟ್ಟಬಯಸಿದನು ।
ಕಿರಿಯ ಮಾವನು ತಾಯ ಜೊತೆ ಕು-
ಳ್ಳಿರಲೆ ಬೇಕೆಂದು  ಹಠಗೈದಿರೆ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ! ॥೫॥


ತರಳಶಿಶು ಅಭಿಮನ್ಯು ತಾಯ ತ-
ವರಿಗೆ ಪೋಗಿರುವಾಗ  ಸಾಗರ
ಕರೆಯ ಉಸುಕಿನಲಾಡಬೇಕೆಂದಾಸೆ ಪಟ್ಟಿರಲು
ಕಿರಿಯ ಮಾವನು ರಥದಿ ಜೊತೆ ಕು-
ಳ್ಳಿರಲೆಬೇಕೆನುತ ಮಗು ಕೇಳಲು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ! ॥೬॥


ಸರಸರನೆ ಷಾಪಿಂಗು ಮುಗಿಸದ
ಸರಸು ಕೃಷ್ಣನ ಹಿರಿಯ ಮೂರ್ತಿಯ-
ನರೆಗಳಿಗೆಯಲಿಕೊಳ್ಳೆ ವಿಸ್ಮಯ ಗಂಡ ಅರ್ಜುನಗೆ!
ಹೊರಟುಬಿಡುವೆನು   ಬಾಕಿ ಕೆಲಸಗ-
ಳಿರುವುದೆನುತಲಿ ಕಾರಲಿರಿಸುತ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ||  ೭॥


ಸರಸರನೆ ಷಾಪಿಂಗು ಮುಗಿಸುತ
ಸರಸು ಕೃಷ್ಣನ ಹಿರಿಯ ಮೂರ್ತಿಯ-
ನರೆಗಳಿಗೆಯಲಿಕೊಳ್ಳೆ ವಿಸ್ಮಯ ಗಂಡ ಅರ್ಜುನಗೆ!
ಹೊರಡುವುದೆ ಸರಿಯೆಂದು ಕಾರ-
ಲ್ಲಿರಿಸಿ ಭಾರದ ವಿಗ್ರಹವ ತಾ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ || ೮॥


ವಿರಸ ಬೇಡೆಲೆ ಮಾನಿನೀ ನಾ-
ನರಸುತಿಲ್ಲವು ಸುಳ್ಳುಕಾರಣ
ಕರೆಯಬೇಡವೆ ಮಾಲಿಗೇ  ಶಾಪಿಂಗ ನಾ ಮಾಣೆ ।
ಹೊರಡಬೇಕಿದೆ ಮಗನು ಟ್ಯೂಷನ್
ತರಗತಿಗೆ ತುಸು ಹೊತ್ತಿನಲೆನುತ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥೯ ॥ (ಅಪ್ಪನ ಹೆಸರು ಅರ್ಜುನ, ಮಗನ ಹೆಸರು ಕೃಷ್ಣ)    


ತುರಿದು ಕಾಯನು ಘಮಘಮೆನ್ನುತ
ಹುರಿದ ರವೆಯುಪ್ಪಿಟ್ಟು ಮಾಡುವೆ
ತರುವ ಸಮಯವು  ಬಾಲಕೃಷ್ಣನ ಶಾಲೆಯಿಂದೆನಲು
ಹೊರಟನರ್ಜುನ ಪುಟ್ಟ ಮಗನನು
ಕರೆದು ಮಾರುತಿಯೊಳಗೆ ಕೂರಿಸಿ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥೧೦॥(ಅಪ್ಪನ ಹೆಸರು ಅರ್ಜುನ, ಮಗನ ಹೆಸರು ಕೃಷ್ಣ)    


ತರಿವೆ ದುರುಳರ ನೀನಿರಲು ತಡೆ   
ವರನ್ನಾರನು ಕಾಣೆನೆನ್ನಲು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ
ಸುರರು ಸುರಿದರು ಸುಮಗಳನ್ನಾ
ದರದಿ ಸುರಪತಿ ಪುತ್ರನೀಗಲೆ
ಹೊರಟನೈ ಕಾಳಗಕೆ  ಮಡುಹುವ ಕೌರವರನೆನುತ    ॥೧೧॥

ಹರಿಯೆ ಕೇಳೈ ನಿಚ್ಚಯವು ನಿನ-
ಗಿರಲು ನೇಹವು ಪಾಂಡು ಸುತರಲಿ
ಮರಳಿ ಏಳಕ್ಷೋಹಿಣಿಯ ಪಡೆಯನ್ನು ಗಣಿಸದೆಲೇ
ತರಿದು ಹಾಕುವೆ ಕುರುಡಕುವರರ
ಸರದಿಯಲಿ ನಾನೆಂದು ನುಡಿದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ!  ॥೧೨||


ಮುರಿದು ದುರ್ಯೋಧನನ ತೊಡೆಯನು
ಮರುಳ ಕರ್ಣನ ಕೊಂದು ನಂತರ
ದುರುಳ  ದುಶ್ಶಾಸನನ ರಕ್ತದಿ ಜಡೆಯ ಮೀಯಿಸಲು
ತರಳೆಗಾದವಮಾನಕದುವೇ  
ಸರಿಯು ಕೇಳೆನ್ನುತಲಿ ನುಡಿದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ  ||13 ||


ಮರೆಯಲಾರೆನು ನಾನು ಮಾಧವ
ತರಳೆ ದ್ರೌಪದಿಗಂದು ಹಸ್ತಿನ
ಪುರದಿ ಕೌರವರಾಯನಿಂದಾಗಿರ್ದ ವಿಭವವನು ।  
ದುರುಳ ಕರ್ಣನ ಯುದ್ಧ ಭೂಮಿಯ-
ಲುರುಳಿಸಾಯ್ತೈ ನೆಮ್ಮದಿಯೆನುತ
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 14॥


ಕುರುಕ್ಷೇತ್ರದ ಭಾರಿಯುದ್ಧದ
ಮರೆಯಲಾರದ ದಿವಸವಿದು ಕೇಳ್
ತರಿದೆ ದುರ್ಯೋಧನನಿಗಾಸರೆಯಾದ ಕರ್ಣನನು ।
ಧರೆಗೆ ಬಿದ್ದನು! ಅಗ್ನಿ ಕನ್ಯೆಗೆ
ದೊರಕಿಹುದು ತುಸು ನ್ಯಾಯವೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 15॥


ಕುರುಕ್ಷೇತ್ರದ ಕಾಳಗದಲಿದು
ಮರೆಯಲಾರದ ದಿನವಿದೇ ಸರಿ
ದುರುಳ ದುರ್ಯೋಧನನಿಗಾಸರೆಯಾದ  ಕಲಿಕರ್ಣ ।
ಧರೆಗೆ ಬಿದ್ದನುಯೆನ್ನ ಮಡದಿಗೆ
ದೊರಕಿಸಿದೆನೈ ನ್ಯಾಯವೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 16||
(ಕರ್ಣ ಕೆಸರಿನಲ್ಲಿ ರಥವನ್ನೆತ್ತುತ್ತಿರುವಾಗ ಹೇಳಿದ್ದಿದು)


ಮರುಕವೊಂದನು ತೋರಬೇಡವು
ದುರುಳನೆಂಬುದೆ ದಿಟವು ಧರೆಯ ಕೆ-
ಸರಲಿ ಕರ್ಣನು ರಥದ ಗಾಲಿಯನೆತ್ತುತಿಹ  ನೋಡೈ
ಸರಲು ಹೂಡುತಲಿವನ ಕೊಲ್ಲೆಂ
ದಿರಲು ಹರಿ ಸರಿ ಮಾಳ್ಪೆನೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥17 ॥


ತರಣಿ ತನಯನು  ಮತ್ತೆ ಭೂಮಿಗೆ
ಮರಳಿ ಗಾಲಿಯನೆತ್ತುತಿರೆ ತಾ
ಶರವ ಹೂಡಿಡುತಲವನ ಧರಣಿಗುರುಳಿಸುತ
ತರುಣಿ ದುರುಪದಿಗಿಂದು ನೆಮ್ಮದಿ
ಬರುವುದೌ  ಹರಿ ಕೇಳುಯೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 18॥


ತರಣಿಯಾಕಾಶದಲಿ ಕಂತು-
ತ್ತಿರಲು ಕರ್ಣನು ರಥದ ಚಕ್ರ ಕೆ-
ಸರಲಿ ಸಿಲುಕಲು ತಾನದನು ಬಿಡಿಸಲಿಕ್ಕಿಳಿದಿರಲು
ಸರಿಯ ಸಮಯವು ಕೊಲ್ಲಲೀತನ
ದುರುಳತನಕಿದು ತಕ್ಕುದೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥19॥

ತರಣಿ ಕಂತುವ ಸಮಯದಲ್ಲಿಯೆ
ತರಣಿ ತನಯನು ನೀಗಲಸುವನು
ತರಣಿಗಾಗಿಹ ದುಗುಡದಿಂದಾಗಸವು ಕಪ್ಪಡರಿ
ಸುರಿಸಿರಲು ಮಳೆಯನ್ನು ಖಂಡಿತ*
ಧರೆಗೆ ತಂಪಾಯ್ತೆಂದು ಹೇಳಿದ **
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 20॥


* ಕಂಡಿತ ಕ್ಕೆ ಬದಲಾಗಿ ಬಳಕೆಯಲ್ಲಿರುವ ಖಂಡಿತವನ್ನೇ ಬಳಸಿದೆ

ತರಣಿ ಕಂತುವ ಸಮಯದಲ್ಲಿಯೆ
ತರಣಿ ತನಯನು ನೀಗಲಸುವನು
ತರಣಿಗಾಗಿಹ ದುಗುಡದಿಂದಾಗಸವು ಕಪ್ಪಡರಿ
ಸುರಿಸಿರಲು ಮಳೆಯನ್ನು ಖಂಡಿತ
ಧರಣಿ ಭಾರವದಿಳಿಯಿತೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ 21॥ಕರುಳ ಕುಡಿಯಭಿಮನ್ಯುವನು ತಾ

ನರಿಯದಂತೆಯೆ ವ್ಯೂಹದಲಿ ಸಿಲು-
ಕಿರಿಸಿದನು ಕಡುನೀಚನೀತನ ನಾನು ಬಿಡಲೊಲ್ಲೆ ।
ದುರುಳ ಕರ್ಣನಿಗೆನ್ನ ಸರಳಲಿ
ಮರಣವೇ ಸೈಯಿವನಿಗೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ ೨೨॥


ನರಿಮೊಗದ ಶಕುನಿಗೂ ಕೇಡಿಗ
ದುರುಳ ದುರ್ಯೋಧನನ ನೇಹಿಗ
ಉರಿವ ಹೊಟ್ಟೆಯ ಕರುಬುಗಾಂಧಾರಿಗಿವನೆ ಸಾಕುಮಗ
ದುರುಪದಿಯ ಮೇಣ್ ಸತಿಸುಭದ್ರೆಯ
ಮರುಗಿಸಿದನನು ಕೊಂದೆಯೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ ೨೩॥


ನರಿಮೊಗದ ಶಕುನಿಗೂ ಕೇಡಿಗ
ದುರುಳ ದುರ್ಯೋಧನನ ನೇಹಿಗ
ಕುರುಡು ಪಟ್ಟಿಯ ರಾಣಿಗೀತನೆ ಸಾಕುಮಗನಲ್ತೆ
ದುರುಪದಿಯನೇ ದಾಸಿಯೆಂದನೆ!
ತರಿದು ಶಾಂತಿಯ ಪಡೆದೆನೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ ೨೪॥


ಮರುಳ! ಶಲ್ಯನ ನಂಬಿ ಬಂದನು
ವಿರಸದಲ್ಲವ ಹೊರಟು ಹೋಗಿರೆ
ದುರುಳ ಕರ್ಣನು ಕಾಳಗವನಿನ್ನೆಂತು ನಡೆಸುವನು?
ಕರುಣೆಯನು ತೋರದೆಯೆ ನೀ ಶತ
ಶರವ ಹೂಡೆನೆ ಮಾಳ್ಪೆನೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ ೨೫॥


ಅರಳುಮರುಳಿನ ಮುದುಕ ಶಲ್ಯನ-
ನರಿಯದೆಯೆ ನಂಬಿದ್ದ ಕಾರಣ
ದುರುಳ ಕರ್ಣನಿಗೀಗ ಸಾರಥಿಯಿಲ್ಲದೇ ಹೋಯ್ತು
ಕೊರಗುತಿಹನೈ ರಥದ ಗಾಲಿಗ-
ಳೆರಡು ಸಿಲುಕಿವೆ ಕೆಸರಲೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ       ॥ ೨೬॥


ಹರಿಯೆ ನೀನೀ ಗೀತ ಬೋಧೆಯ-
ನೊರೆದಿರಲು ಮನ ಹಗುರವಾದುದು!
ಮರುಳುಹಿಡಿದುದು ಬಿಟ್ಟುಹೋದುದು ನಿನ್ನ ದಯೆಯಿಂದ
ದುರುಳರನು ಕೊಲ್ವುದಕೆ ಬೇಗನೆ
ಹೊರಡು ಹೂಡಿ ಲಗಾಮೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ ೨೭॥
 

ಹೊರಡೊ ಮಗನೇ*  ಊರು ದೂರವು
ಭರದಲೋಡಿಸು ಕಾರು ದಾರಿಗೆ
ಕರಿದ ತಿಂಡಿಯನಷ್ಟು ಕಟ್ಟಿಸಿಕೊಂಡು ಹೋಗೋಣ!
ಕುರುಕುರೆನ್ನುವ ಚಕ್ಕುಲಿಗಳಿರೆ
ಸರಿದು ಪೋಪುದು ಯಾನವೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ||೨೮||


* - ಅಪ್ಪನ ಹೆಸರು ಅರ್ಜುನ, ಮಗನ ಹೆಸರು ಕೃಷ್ಣ   ಎಂದು  ( ಅಥವಾ ಈ ಕಾಲದ ಇಬ್ಬರು ಗೆಳೆಯರು ಅಂತ ಬೇಕಾದರೂ)  ಇಟ್ಟುಕೊಳ್ಳಬಹುದು


ಮರದ ಮೇಗಡೆ ಹತ್ತಿ ನೋಡಿರೆ
ನೆರೆದ ಸೈನ್ಯವು ಬಾನಿನಂಚಿನ-
ವರೆಗು ನಿಂತಿರುವುದನು ಕಾಣುತ ಮನದಿ ಹಿತವಡೆದು
ಮುರಿದು ಹಾಕುವೆವಿನ್ನು ಕೌರವ                                                                                                                                                                                                                                                                                                           
ದುರುಳರನೆನುತ ಕೂಗಿ ಹೇಳಿದ
ಹರುಷದಲರ್ಜುನನು ಸಾರಥಿಯಾದ ಕೃಷ್ಣನಿಗೆ! ॥೨೯॥


ಸರದಿಯಲಿ ಸತ್ತಿರುವ  ಕೌರವ
ದುರುಳರೆಲ್ಲರು ತೆರಳಿ ಯಮನ ನ
ಗರಿಯಲೀಗಲೆ ಹಳಬರಾದರು ಶಿಕ್ಷೆಪಡೆಯುತಲಿ
ಪರಮ ಗುರು ನೀನೆಮ್ಮ ಜೊತೆಯಾ-
ಗಿರುವುದಕೆ ನಾ ಧನ್ಯನೆಂದನು
ಹರುಷದಲರ್ಜುನನು ಸಾರಥಿಯಾದ ಕೃಷ್ಣನಿಗೆ  ॥೩೦॥


ಗುರುಗುಡುತ್ತಲಿ ತುಂಬುಕೆಸರಲಿ
ಭರದಿ ಹೊಕ್ಕಿರೆ ರಥದ ಚಕ್ರವು
ಸರಸರನೆಯಿಳಿದ ಕರ್ಣ ತಾನದನು ಬಿಡಿಸಲಿಕೆ
ಸರಿಯ ಕಾಲವು ಕೊಲ್ಲಲೆಂದಿರೆ
ಹರಿಯು ಬಾಣವ ಬಿಟ್ಟೆನೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ ೩೧॥

-ಹಂಸಾನಂದಿ ಕೊ: ಈ ಪದ್ಯದ ಅಡುಗೆ ಮಾಡುತ್ತಿರುವಾಗಲೇ, ನಡುನಡುವೆ ರುಚಿನೋಡಿ, ಉಪ್ಪು ಹುಳಿ ಖಾರ ಸರಿಯಿಲ್ಲದ್ದಲ್ಲಿ ತೋರಿಸಿ ತಿದ್ದಿದ ಗೆಳೆಯರಾದ ಜೇವೆಂ, ಮಂಜುನಾಥ ಕೊಳ್ಳೇಗಾಲ, ಅನಿಲ್ ಜೋಷಿ, ಹರೀಶ್ ಮತ್ತೆ ಸುಬ್ರಹ್ಮಣ್ಯ ಭಟ್ ಅವರಿಗೆ ನಾನು ಆಭಾರಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?