ಚೆಲ್ವಾಯ್ತು ಚಂದ್ರೋದಯಂ!


ಎರಡು ವೃತ್ತಗಳು: (ಪದ್ಯಸಪ್ತಾಹ 67 ರಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ)

|| ಶಾರ್ದೂಲವಿಕ್ರೀಡಿತ ||
ಸೀತಾಮಾತೆಯ ಕಾಣಪೋದ ಹನುಮಂ ಕಂಡಾಕೆಯಂ ರಾತ್ರಿಯೊಳ್
ಮಾತೊಂದಾಡದೆ ಮುನ್ನಮೇ ತೆಗೆಯುತುಂ ಪೊನ್ನುಂಗುರಂ ಮುದ್ರೆಯಂ
ತಾ ತಂದಿರ್ಪುದ ತೋರಿ “ರಾಮ ಬರುವನ್” ಎನ್ನುತ್ತ ಸಂತೈಸಿರಲ್
ಹಾ! ತಂಪಾದುದು ತಾಪಗೊಂಡ ಮನಮುಂ! ಚೆಲ್ವಾಯ್ತು ಚಂದ್ರೋದಯಂ !
(ಸುಂದರ ಕಾಂಡದಲ್ಲಿ ಸೀತೆಯನ್ನು ಅಶೋಕ ವನದಲ್ಲಿ ಹನುಮ ಕಂಡು ಅವಳಿಗೆ ಮುದ್ರೆಯುಂಗುರ ವನ್ನು ತೋರಿ, ರಾಮ ಬರುವನೆಂಬ ಮಾತನ್ನು ಹೇಳಿದಾದ ಸೀತೆಯ ಮನಸ್ಸೂ ತಂಪಾಗಿ, ಆಗ ಉದಯಿಸುತ್ತಿದ್ದ ಚಂದ್ರನೂ ಸೊಗಸಾಗಿ ಕಂಡ)
॥ ಮತ್ತೇಭವಿಕ್ರೀಡಿತ ॥
ಸತಿ ಚಿನ್ನಾಂಬಿಕೆ ಮಾಘದೊಂದಿರುಳೊಳಾ ಪಂಪಾನದೀ ತೀರದೊಳ್
ಮತಿಯೊಳ್ ಬೇಡುತ ರಾಯನಾವಿಜಯಮಂ ತಾ ಚಿಂತಿಸುತ್ತಿರ್ದಪಳ್
ಸ್ಮೃತಿಯೊಳ್ ವೇಂಕಟನಾಥನಂ ಬಗೆದಿರಲ್ ಬಂದೋರ್ವ ದೂತಂ ಸುಸಂ-
ಗತಿಯಂ ಪೇಳ್ದೊಡನಾಕೆಗಾದುದು ಮುದಂ! ಚೆಲ್ವಾಯ್ತು ಚಂದ್ರೋದಯಂ!
ಹಿನ್ನಲೆ: ಹದಿನೈದನೇ ಶತಮಾನದ ಕಥೆ – ಕೃಷ್ಣದೇವರಾಯನು ಯಾವುದೋ ಯುದ್ಧಕ್ಕೆ ಹೋಗಿರುವಾಗ, ಅವನ ಮಡದಿ ಚಿನ್ನಾದೇವಿಯು ಒಂದು ಸಂಜೆ ತುಂಗಭದ್ರೆಯ ದಡದಲ್ಲಿ ಪತಿಗೆ ಗೆಲುವಾಗಲೆಂದು ದೇವರನ್ನು ಬೇಡುತ್ತಿರುವಾಗಲೇ ದೂತನೊಬ್ಬ ಬಂದು ಒಳ್ಳೆಯ ಸುದ್ದಿ (ಪತಿಯ ಗೆಲುವನ್ನೋ, ಊರಿಗೆ ಮರಳುತ್ತಿರುವುದನ್ನೋ) ಹೇಳಲಾಗಿ, ಆಗ ಉದಯಿಸುತ್ತಿದ್ದ ಚಂದ್ರ ಆಕೆಗೆ ಸೊಗಸಾಗಿ ಕಂಡನು! – ನನ್ನ ಕಲ್ಪನೆಯ ಸಂದರ್ಭವಷ್ಟೇ
-ಹಂಸಾನಂದಿ
ಕೊ:ಈ ಪದ್ಯವನ್ನು ಬರೆಯುವಾಗ ಸವರಣೆಗಳನ್ನು ಮಾಡಿದ ಜೀವೆಂ ಅವರಿಗೆ ನಾನು ಆಭಾರಿ

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?