"ವೀರ" ವಸಂತ


ಇಂದು ಬೆಳಗ್ಗೆ ಬರುವಾಗ ರೇಡಿಯೋದಲ್ಲಿ ಕೇಳಿದ ಸುದ್ದಿ - ಈ ದಿನ ಹೀಟ್ ಅಡ್ವೈಸರಿ! ಅಂದ್ರೆ, ನಿಜವಾದ ಸೆಖೆಗಾಲ ಶುರುವಾಯ್ತು ಅಂತಲೇ ಅರ್ಥ, ಲೆಕ್ಕಕ್ಕೆ ಯಾವತ್ತು ಶುರುವಾದರೂ. ಹಾಗಾಗಿ ಬೇಸಿಗೆ ಜೋರಾಗಿ ಮೊದಲಾಗೋಕ್ಕಿಂತ ಮುಂಚೆಯೇ ಈ 'ವೀರ' ವಸಂತನ ಬಗ್ಗೆಯ ಪದ್ಯದ ಅನುವಾದವನ್ನು ಹಾಕೋಣವೆನ್ನಿಸಿತು!


ಹೊಮ್ಮಿರುವ ಮಾಂದಳಿರ ಮೊನಚು ಬಾಣಗಳನ್ನು
ಚಿಮ್ಮಿಸಲು ದುಂಬಿಸಾಲಿನ ಬಿಲ್ಲ ಹೆದೆಯ
ಹಮ್ಮುಗೊಳಿಸುತ ಯೋಧ ಬಂದಿಹ ವಸಂತನಿವ-
ನೊಮ್ಮೆಗೇ ಪ್ರಣಯಿಗಳ ಮನವ ಪೀಡಿಸಲು ||

ಸಂಸ್ಕೃತ ಮೂಲ ( ಕಾಳಿದಾಸನ ಋತುಸಂಹಾರ, ಸರ್ಗ 6, ಪದ್ಯ 1)

ಪ್ರಫುಲ್ಲ ಚೂತಾಂಕುರತೀಕ್ಷ್ಣಸಾಯೋ
ದ್ವಿರೇಫಮಾಲಾ ವಿಲಸದ್ಧನುರ್ಗುಣಃ
ಮನಾಂಸಿ ವೇದ್ಧುಮ್* ಸುರತಃಪ್ರಸಂಗಿನಾಂ^
ವಸಂತಯೋದ್ಧಾ~ ಸಮುಪಾಗತಃ ಪ್ರಿಯೇ

प्रफुल्लचूताङ्कुरतीक्ष्णसायो
द्विरेफमालाविलसद्धनुर्गुणः।
मनांसि वेद्धुम् सुरतप्रसङ्गिनां
वसन्तयोद्धा समुपागतः प्रिये॥६-१||

-ಹಂಸಾನಂದಿ

ಚಿತ್ರ: ಹೂಬಿಟ್ಟ ಮಾಮರ, ವಿಕಿಪೀಡಿಯಾದಿಂದ

ಕೊ: ಈ ಪಾಠಾಂತರಗಳೂ ಇವೆ: * – ಭೇತ್ತುಮ್ ;    ^ – ಸುರತೋತ್ಸುಕಾನಾಮ್  ; ~ – ಯೋಧಃ ;  ಇವುಗಳಿಂದ ಅರ್ಥದಲ್ಲೇನೂ ಭಾರಿ ಬದಲಾಗುವುದಿಲ್ಲ.

ಕೊ.ಕೊ: (ಕೆಲವು 1:1 ಅನುವಾದವಿಲ್ಲದಿದ್ದರೂ ಒಟ್ಟಾರೆ ಭಾವವನ್ನು ಉಳಿಸುವ ಪ್ರಯತ್ನ ಮಾಡಿದ್ದೇನೆ.

ಕೊ.ಕೊ.ಕೊ: "ವೀರವಸಂತ" ಎನ್ನುವುದು ಕರ್ನಾಟಕ ಸಂಗೀತದ ಒಂದು ರಾಗವೂ ಹೌದು. ಸ್ವಲ್ಪ ಅಪರೂಪವಾದ ರಾಗವೇ. ಇದರಲ್ಲಿ ತ್ಯಾಗರಾಜರ "ಏಮನಿ ಪೊಗಡುದುರಾ" ಮತ್ತೆ ಮುದ್ದುಸ್ವಾಮಿ ದೀಕ್ಷಿತರ "ವೀರವಸಂತ ತ್ಯಾಗರಾಜ" ಅನ್ನುವ ರಚನೆಗಳು ಇವೆ.


Popular posts from this blog

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ