ಹರಕೆ

ಈ ಬಾರಿಯ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆ ಹೀಗಿತ್ತು:

Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರು ಘಟನಾವಳಿಯನ್ನು ಆಧರಿಸಿ (ಅಥವಾ ಕೃಷ್ಣಸ್ತುತಿಯ)ಪದ್ಯಗಳನ್ನು ನಿಮ್ಮ ಇಷ್ಟದ ಛಂದಸ್ಸಿನಲ್ಲಿ ರಚಿಸಿರಿ)

ಎಲ್ಲಿಯ ಟ್ರಿಗೊನಮೆಟ್ರಿ? ಎಲ್ಲಿಯ ಗೋಪಾಲಕೃಷ್ಣ?  ಅದೂ ಅಲ್ಲದೆ 
ಸುಮಾರು ಎರಡು ತಿಂಗಳಿಂದ 'ಹಂಸನಾದ' ದ ಕಡೆಗೆ ತಲೆ ಹಾಕಿಯೂ ಮಲಗಿರಲಿಲ್ಲ! ಹಾಗಾಗಿ  ಈ ಪ್ರಶ್ನೆಗೆ  ಉತ್ತರಿಸುವಾಗ ಸ್ವಲ್ಪ ತಿಣುಕಾಡಲೇ ಬೇಕಾಯಿತು! 

ಬರೆದ ಕೆಲವು ಉತ್ತರಗಳನ್ನ  ಇಲ್ಲಿ ಹಾಕಿರುವೆ:

ಮೊದಲು  ಪಂಚಮಾತ್ರಾ  ಚೌಪದಿಯಲ್ಲೊಂದು : 

ಕೊರಳಲ್ಲಿ ಮೆರೆಯುತಿದೆ ಕಾಸಿನಾ ಸರವು ಮುಂ-
ಗುರುಳಲ್ಲೊ ಸೈ! ನಗುವ ನವಿಲಗರಿ ಸೊಗಸು!
ಮರೆತೆನೇನಕಟಾ! ನಲಿವ ಹರಿಯ ನೆನಕೆಯನು?
ಹರಸಲೀತನ ನೋಟ ಕಾಟಗಳ ಕಳೆದು 


ಮತ್ತೆ ಸುಮಾರು  ಇದೇ ಹಂದರದಲ್ಲಿಯೇ, ಸ್ವಲ್ಪ ಬದಲಾವಣೆಗಳೊಂದಿಗೆ   ಭಾಮಿನಿ ಷಟ್ಪದಿಯಲ್ಲೊಂದು ಉತ್ತರ  : 

ಕೊರಳಿನಲಿ ಕುಣಿಯುತಿಹ ಕಾಸಿನ
ಸರವ ನಲಿದಾಡುತಿಹ ಪಾದದಿ
ಮೆರೆವ ಗೆಜ್ಜೆಯ ಮೊಗದ ನಗುವನು ನೋಳ್ಪ ಸೊಗವೇ ಸೈ!
ನರರೊಳುತ್ತಮ ಗೊಲ್ಲ ಬಾಲನ 
ತುರುವ ಕಾಯ್ದನ ಮರೆತೆನಕಟಾ!
ನರೆತ ಜೀವದ ಭವದ ಕಾಟವನಿವನೆ ಕಳೆವುದೆ ಸೈ!


ಇದನ್ನೇ ಚೂರುಪಾರು ಬದಲಾಯಿಸಿ, ಇನ್ನೊಂದು: 

ಕೊರಳಿನಲಿ ಕುಣಿಯುತಿಹ ಕಾಸಿನ
ಸರದ ನಲಿದಾಡುತಿಹ ಪಾದದಿ
ಮೆರೆವ ಗೆಜ್ಜೆಯ ನಾದದಿಂಚರ ಕೇಳ್ವ ಸೊಗವೇ ಸೈ!
ನರರೊಳುತ್ತಮ ಗೊಲ್ಲ ಬಾಲನ
ತುರುವ ಕಾಯ್ದನ ಮರೆತೆನಕಟಾ

ನುರವಣಿಸಿರುವ ಭವದ ಕಾಟವನವನೆ ಕಳೆವುದೆ ಸೈ!

-ಹಂಸಾನಂದಿ 

(ಚಿತ್ರ: ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ  ಗೋಡೆಯಲ್ಲಿ   ಕೃಷ್ಣ  - ನನ್ನ ಫೋನ್ ಕ್ಯಾಮರಾದ ಚಳಕ 

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ