ಚುಕ್ಕಿ ಮಳೆ

ಚುಕ್ಕಿ ಮಳೆ ಅನ್ನೋ ಮಾತನ್ನ ನೀವು  ಕೇಳೇ ಇರಲಾರಿರಿ. ಯಾಕಂದ್ರೆ  ಯಾರೂ ಅದನ್ನ ಇಲ್ಲಿಯವರೆಗೆ ಬಳಸಿದ ಹಾಗೆ ಕಂಡಿಲ್ಲ. ಅಲ್ಲಿಲ್ಲಿ ಕೇಳಿ ಬರೋ ಉಲ್ಕಾವರ್ಷ ಅನ್ನೋ ಹೆಸರನ್ನೂ ಕೂಡ ಅದು ಏನು ಅಂತ ಗೊತ್ತಿರೋವ್ರಿಗೆ ಕೇಳಿ ಗೊತ್ತಿರತ್ತೆ ಅಷ್ಟೆ. ಈಗ ಪಟ್ಟಣಗಳಲ್ಲೆಲ್ಲಾ ರಾತ್ರಿ ಹೊತ್ತಿನಲ್ಲಿ ಬೀದಿ ದೀಪಗಳ, ಮನೆಗಳ, ಅಂಗಡಿ ಮುಂಗಟ್ಟುಗಳ ದೀಪಗಳ ಬೆಳಕು ಹೆಚ್ಚಾಗಿ ರಾತ್ರಿ ಆಕಾಶದ ಸೊಬಗೇ ಮಾಯವಾಗಿದೆ. ಆಕಾಶದಲ್ಲಿ ನಕ್ಷತ್ರಗಳೇ ಕಾಣ್ತಿಲ್ಲ. ಒಂದುವೇಳೆ ಕೆ ಇ ಬಿ ದಯದಿಂದ ಪವರ್ ಕಟ್ ಆದ್ರೂ, ಈಗ ಎಲ್ಲೆಲ್ಲೂ ಯುಪಿಎಸ್ ಗಳಿರೋ ಕಾಲ. ಹಾಗಾಗಿ ಆಕಾಶ ನೋಡೋ ಅವಕಾಶ ಸಿಕ್ಕಬೇಕು ಅಂದರೆ, ಎಲ್ಲೋ ದೂರದ ಹಳ್ಳಿಗಾಡಿನಲ್ಲಿ ವಿದ್ಯುತ್ ದೀಪದ ಸುದ್ದಿನೇ ಇಲ್ಲದಿರೋ ಕಡೆಗೆ ಹೋಗಬೇಕು ಬಿಡಿ.

ಈ ಉಲ್ಕೆ ಆಂದರೆ ಆಗೀಗ ಯಾವುದೋ ಒಂದು ಚಿಕ್ಕ ದೂಳಿನ ಕಣವೋ ಸಣ್ಣ ಕಲ್ಲಿನ ತುಂಡೋ ಭೂಮಿಯ ವಾತಾವರಣದ ಒಳಗೆ ಬಂದು ಬಿದ್ದಾಗ ಅದು ಉರಿದು ಹೋಗುತ್ತಲ್ಲ, ಅದು ನಮ್ಮ ಕಣ್ಣಿಗೆ ಒಂದು ನಕ್ಷತ್ರದ ಹಾಗೇ ಹೊಳೆದು ಮಿಂಚಿ ಮಾಯವಾಗುತ್ತೆ ಕೆಲವೇ ಕ್ಷಣಗಳಲ್ಲಿ. ಇದನ್ನೇ ನಕ್ಷತ್ರ ಬಿತ್ತು ಅಂತಲೂ ಅಂತಾರೆ. ನೀವು ಕೇಳಿರಬಹುದು. ಆದರೆ ಕಾಣದಿರೋ ಆಕಾಶದಲ್ಲಿ ಇನ್ನು ಆಗಲೋ ಈಗಲೋ ಬೀಳೋ ಉಲ್ಕೆ ಇನ್ನು ಯಾರಿಗೆ ಕಾಣತ್ತೆ ಹೇಳಿ?  ಅದೇ ಈಗ ಬಂದಿರೋ ತೊಂದರೆ.


ಅದೇ ಒಂದುವೇಳೆ, ನಿಮಗೆ ಸ್ವಲ್ಪ ಅದೃಷ್ಟವಿದ್ದು ನೀವು ಒಳ್ಳೇ ಕತ್ತಲು ರಾತ್ರಿ ಇರೋ ಕಡೆಯಲ್ಲಿ ಒಂದು ತುಸು ಹೊತ್ತು ನಿಂತು ಆಕಾಶವನ್ನೇ ನೋಡುತ್ತಿದ್ದರೆ ನಿಮಗೆ ಒಂದೋ ಎರಡೋ ನಕ್ಷತ್ರ ಬೀಳೋದು ಕಾಣೋದು ಖಾತ್ರಿ. ಹ್ಹಹ್ಹ ನಾನೂ ನಕ್ಷತ್ರ ಬೀಳೋದು ಅಂತಲೇ ಅಂದುಬಿಟ್ಟೆ ನೋಡಿ! ಈ ಉಲ್ಕೆಗಳು ಸಾಮಾನ್ಯವಾಗಿ ಯಾವುದಾದರೋ ದೂಳಿನ ಕಣಗಳಾಗಿದ್ದು, ಸೂರ್ಯನ ಸುತ್ತ ಗಿರಕಿ ಹೊಡೀತಿರೋವಾಗ ಒಮ್ಮೊಮ್ಮೆ ಭೂಮಿಯ ಗುರುತ್ವಕ್ಕೆ ಸಿಕ್ಕಿ ತಮ್ಮ ದಾರಿ ಬಿಟ್ಟು ಭೂಮಿಗೆ ಬಂದು ಬೀಳುತ್ತವೆ. ಸಾಮಾನ್ಯವಾಗಿ ಧೂಮಕೇತುಗಳು ಹೋಗುವ ದಾರಿಯಲ್ಲಿ, ಅವು ಸೂರ್ಯನ ಹತ್ತಿರ ಬಂದಾಗ ಬೆಳೆಯೋ ಬಾಲದಿಂದ ಹಿಂದೆ ಬಿದ್ದ ಈ ಉಲ್ಕೆಗಳ ಮೋಡವೇ ಹೋಗ್ತಾ ಇರುತ್ತೆ. ಭೂಮಿ ಸೂರ್ಯನ ಸುತ್ತ ಹೋಗುವಾಗ  ಇಂತಹ ದಾರಿಯ ಮೇಲೆ ಹೋಗೋದಾದ್ರೆ , ಅಂತಹ ದಿನ ನೂರಾರು ಸಾವಿರಾರು ಉಲ್ಕೆಗಳು ಭೂಮಿಯತ್ತ ಬೀಳುತ್ತವೆ. ಇದಕ್ಕೇ ಉಲ್ಕಾವರ್ಷ (neteor shower) ಎನ್ನುವುದು. ಅದನ್ನೇ ನಾನು ಚುಕ್ಕಿ ಮಳೆ ಅಂದಿದ್ದು ಮೊದಲು. ಅಂತಹ ದಿನಗಳಲ್ಲಿ, ಸರಿಯಾದ ಸಂದರ್ಭವಿದ್ದರೆ, ಗಂಟೆಯಲ್ಲಿ 20-50 ರಷ್ಟು ಉಲ್ಕೆಗಳು ಬೀಳುವುದನ್ನೂ ನೋಡಬಹುದು.

ಇಂತಹ ಚುಕ್ಕಿಮಳೆಗಳು ಸಾಮಾನ್ಯವಾಗಿ ವರ್ಷದ ನಿಗದಿತ ದಿನಗಳಲ್ಲೇ ಕಾಣುತ್ತವೆ. ಯಾಕೆ ಅಂದ್ರೆ , ಮೊದಲೇ ಹೇಳಿದಂತೆ ಯಾವುದಾದರೂ ಧೂಮಕೇತುವಿನ ಹಾದಿಯೂ ಭೂಮಿಯ ಹಾದಿಯೂ ಒಂದನ್ನೊಂದನ್ನ ಅಡ್ಡ ಹಾದುಹೋಗೋವಾಗ ಅಂತ ಹೇಳಿದೆನಲ್ಲ. ಭೂಮಿ ಅದರ ಕಕ್ಷೆಯಲ್ಲಿ ಸೂರ್ಯನ ಸುತ್ತ ಹೋಗುವುದು ನಿಗದಿತವಾದ್ದರಿಂದ ಅದಕ್ಕೆ ಅಡ್ಡವಾಗಿ ಧೂಮಕೇತುವಿನ ಹಾದಿ ಸಿಕ್ಕೋದೂ ನಿಗದಿತವಾದ ದಿನಗಳಲ್ಲೇ ಅಲ್ವೇ. ಅದೇ ಕಾರಣಕ್ಕೆ, ಈ ಉಲ್ಕೆಯ ಮಳೆಗಳು ಆಕಾಶದ ಯಾವುದೋ ಒಂದು ನಿಗದಿತ ಭಾಗದಿಂದಲೇ ಬಂದಂತೆಯೂ ಕಾಣುತ್ತವೆ. ಇಂಥಾ ಪ್ರತೀ ಚುಕ್ಕಿಮಳೆಯೂ ಯಾವ ರಾಶಿಯ ಕಡೆಯಿಂದ ಬಂದಂತೆ ಕಾಣುತ್ತದೆಯೋ ಆ ರಾಶಿಯ ಹೆಸರಿಂದಲೇ ಕರೆಯೋದೇ ರೂಢಿ. ಉದಾಹರಣೆಗೆ,  ಅಕ್ಟೋಬರ್ ಇಪ್ಪತ್ತೊಂದರಂದು ಒರೈಯನ್ ಕಡೆಯಿಂದ ಬಂದಂತೆ ಕಾಣುವ ಚುಕ್ಕಿಮಳೆಗೆ ಒರೈಯನಿಡ್ಸ್ ಅಂತ ಹೆಸರು. ಇನ್ನೂ ಈ ವಿಷಯದ ಬಗ್ಗೆ ಓದೋ ಆಸಕ್ತಿ ಇದ್ದರೆ ವಿಕಿಪೀಡಿಯಾದ ಈ ಪುಟವನ್ನು ನೋಡಿ.

ಈಗ ಕೊನೇಗೆ ವಿಷಯಕ್ಕೆ ಬರ್ತೀನಿ. ಒಂದೆರಡು ತಿಂಗಳ ಹಿಂದೆ ಪದ್ಯಪಾನದಲ್ಲಿ ಒಂದು ಸಮಸ್ಯಾಪೂರಣವನ್ನು ಕೊಟ್ಟಿದ್ದರು.  "ಮಳೆಯು ಮುದವಾಯ್ತು"  ಅಂತ ಕೊನೆಯಾಗುವಂತೆ ಭಾಮಿನಿ ಷಟ್ಪದಿಯಲ್ಲೊಂದು ಪದ್ಯ ಬರೀಬೇಕು ಅನ್ನೋದೇ ಸಮಸ್ಯೆ. ಅದು ನಾನು ನೋಡಿದ್ದು ಈಚೆಗೆ - ಅಲ್ಲಿ ಹಲವಾರು ಮುದದ ಮಳೆಯ ಬಗ್ಗೆ ಬೇಕಾದಷ್ಟು ಉತ್ತರಗಳು ಬಂದಿದ್ದರಿಂದ, ನನಗೆ ಕೂಡಲೆ ಹೊಳೆದಿದ್ದು ಈ ಉಲ್ಕೆಯ ಮಳೆಯ ವಿಷಯ. ಅದನ್ನಿಟ್ಟುಕೊಂಡು ನಾನು ಮಾಡಿದ ಪೂರಣ ಹೀಗಿದೆ.

ಕುಳಿರುಗಾಳಿಯ ಮಾರ್ಗಶಿರದಲಿ
ಚಳಿಯ ತಡೆಯಲು ತೊಟ್ಟು ಟೊಪ್ಪಿಯಿ-
ರುಳಿನ ಮೂರನೆ ಜಾವಕೆನ್ನುತ ಕಾದು ಕುಳಿತಾಯ್ತು
ಇಳೆಯ ಹಾದಿಯ ಬಾಲಚಿಕ್ಕೆಯ
ಪಳೆಯುಳಿಕೆಗಳು ಹಾದುಹೋಗಿರೆ
ಹೊಳೆಯುತಾಗಸ ತುಂಬಿ ಲಿಯೊನಿಡ್ಸ್ ಮಳೆಯು ಮುದವಾಯ್ತು!

-ಹಂಸಾನಂದಿ

ಕೊ: ಲಿಯೊನಿಡ್ಸ್ ಎಂಬುದು ನವೆಂಬರ್ ೧೫-೧೬ರ ವೇಳೆಗೆ ಕಾಣಬರುವ ಒಂದು ಉಲ್ಕಾ ವರ್ಷ (meteor shower). ಬಹುಪಾಲು ಎಲ್ಲಾ ಉಲ್ಕೆಯ ಮಳೆಯಂತೆ ಇದೂ ಕೂಡ, ಭೂಮಿ ಸೂರ್ಯನನ್ನು ಸುತ್ತುವ ಹಾದಿಗೆ ಧೂಮಕೇತುವೊಂದರ ಉಳಿಕೆಗಳು, ದೂಳು ಇತ್ಯಾದಿ ಹೋಗುವ ಹಾದಿಯೂ ಅಡ್ಡಹೋಗುವುದರಿಂದ ಉಂಟಾಗುತ್ತದೆ. ಹಾಗಾಗೇ ಪ್ರತೀ ವರ್ಷ ಒಂದೇ ಸಮಯದಲ್ಲಿ ಇದು ಕಂಡುಬರುತ್ತೆ. ಈ ಉಲ್ಕೆಗಳು ಸಿಂಹ ರಾಶಿಯಿಂದ ಹೊರಟಂತೆ ಕಾಣುವುದರಿಂದ ಇದಕ್ಕೆ ಲಿಯೊನಿಡ್ಸ್ ಎಂದು ಹೆಸರು.


Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?