ಪತಿಗಳ್ ಸೀತೆಗದೆಷ್ಟು ಮಂದಿ ?

ರಾಮ ಏಕಪತ್ನೀ ವ್ರತಸ್ಥ ಅಂತ ನಮಗೆಲ್ಲರಿಗೂ ಗೊತ್ತೇಇದೆ. ಅಲ್ಲದೇ ಪತಿವ್ರತೆ ಅಂದ ತಕ್ಷಣ ಹೊಳೆಯೋ ಹೆಸರೇ ಸೀತೆಯದ್ದು. ಅಂತಹದರಲ್ಲಿ ಸೀತೆಗೆ ಅದೆಷ್ಟು ಜನ ಗಂಡಂದಿರು ಅಂತ ಕೇಳಿದ್ರೆ? ಅದೆಂಥಾ ಅಭಾಸ ಅಲ್ಲವೇ?

ಈಗ ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ ಕೇಳಿದ್ದ ಪ್ರಶ್ನೆ ಇದು :

ಪತಿಗಳ್ ಸೀತೆಗದೆಷ್ಟು ಮಂದಿ ಗಣಿಸಲ್ಕೇನೊರ್ವರೇಯಿರ್ವರೇ?

ದೇವರೇ ಗತಿ!  ಮೊದಲೇ ಸೀತೆಗೆ ಒಂದಕ್ಕಿಂತ ಹೆಚ್ಚು ಗಂಡಂದಿರು ಅಂತ ಹೇಳಿದ್ದೊಂದೇ ಅಲ್ಲ - ಲೆಕ್ಕ ಹಾಕೋಕಾಗದಷ್ಟು ಜನ ಅಂತ ಬೇರೆ ಅಂತಿದ್ದಾರಲ್ಲಪ್ಪ? ರಾಮ ರಾಮಾ! ಇದಕ್ಕಿಂತ ಬೇರೆ ತರಹ ಹೆಸರು ಕೆಡಿಸೋದನ್ನೆಲ್ಲಾದರೂಕಂಡಿದೀರಾ?

ಆದರೆ ಸಮಸ್ಯಾ ಪುರಾಣದ ಇಂತಹ ಪ್ರಶ್ನೆಗಳನ್ನ ನೋಡಿದವರಿಗೆ ಗೊತ್ತೇ ಇರುತ್ತೆ - ಒಂದು ಸ್ಬಲ್ಪ ಪದಗಳ ಜೊತೆಯಲ್ಲಿ ಆಟ ಆಡಿದರೆ ಇಲಿಯನ್ನ ಹುಲಿ ಮಾಡಬಹುದು , ಇಲಿಯನ್ನ ಚೆಕ್ಕಿಲಿ ಮಾಡಿ ತಿಂದುಬಿಡಬಹುದು

ಈ ಸಮಸ್ಯೆಯನ್ನು ಬಿಡಿಸಲು ನಾನು ಸೀತೆಯನ್ನ ಶಾಲೆಗೆ ಕಳಿಸಬೇಕಾಯಿತು. ಅಂದ ಹಾಗೆ ಜನಕ ರಾಯನ ಮಗಳು ಸೀತೆ ಇಂಥ ಶಾಲೆಗೆ ಹೋಗಿದ್ದಳೋ ಇಲ್ಲವೋ ನನ್ನಗ್ಗೊತ್ತಿಲ್ಲ. ಅಥವಾ, ಹೋಗಿದ್ದರೂ  ಹೋಗಿದ್ದಿರಬಹುದು ! ಯಾರು ಕಂಡವರು? ಇರಲಿ, ಈಗ ನನ್ನ ಉತ್ತರವನ್ನ ಓದಿ:

ಹಿತದೊಳ್ ತೋರ್ಪೆನು ಶಾಸ್ತ್ರಪಾಠಗಳ ನಾಂ ನೀ ಬೇಗ ಬಾರೆಂದೆನ-
ಲ್ಕತಿಸಂತೋಷದಿ ಬಂದ ಸೀತೆ ಮುದದೊಳ್ ಕಣ್ಣಲ್ಲೆ ಕಣ್ಣಾಗಿ ಜಾ-
ಗೃತಿಯಿಂ ಪಟ್ಟಕಮಂ ತಳೆರ್ದಿರೆ ಮೊದಲ್ ಬಾನಲ್ಲಿ ಕಂಡರ್ ದಿವ- 
ಸ್ಪತಿಗಳ್ ಸೀತೆಗದೆಷ್ಟು ಮಂದಿ! ಗಣಿಸಲ್ಕೇನೊರ್ವರೇಯಿರ್ವರೇ ?

ಈ ಪದ್ಯದ ನಾಯಕಿ ಸೀತೆ ಚುರುಕಿನ ಹುಡುಗಿ. ಓದಿ ತಿಳಿ ಮಾಡಿ ಕಲಿ ಅನ್ನೋ ಮಂತ್ರ ಪಾಲಿಸೋ ಅಂತಹವಳು. ಅವಳು ಶಾಲೆಯಲ್ಲಿ ಬೆಳಕಿನ ವಿಷಯವನ್ನು ಕಲಿಯುವಾಗ, ಪ್ರಯೋಗ ಮಾಡಲು ಕೈಗೆ ಪಟ್ಟಕ ( kaleidoscope) ವೊಂದನ್ನು ತೆಗೆದುಕೊಂದು ಆಕಾಶದತ್ತ ನೋಡಿದಾಗ ಕಂಡಿದ್ದೇನು? ಲೆಕ್ಕ ಹಾಕಲಾರದಷ್ಟು ಸೂರ್ಯ ಬಿಂಬಗಳು! ನಿಜ ತಾನೇ? ಏನಂತೀರಿ?

-ಹಂಸಾನಂದಿ 

ಕೊ:. ಇದು ಮತ್ತೇಭವಿಕ್ರೀಡಿತ ಅನ್ನುವ ವೃತ್ತದಲ್ಲಿದೆ 

ಕೊ.ಕೊ : ಸಾಮಾನ್ಯವಾಗಿ ಪಟ್ಟಕ ಅನ್ನುವ ಪದವನ್ನ ( prism ) ಎನ್ನುವ ಅರ್ಥದಲ್ಲೇಬಳಸುವುದು ರೂಢಿ. ನಾನು ಮುಮ್ಮೂಲೆಯ ಪಟ್ಟಕದಂತೆಯೇ ಕಾಣುವಂತಹ kaleidoscope ಗೂ ಕೂಡ ಇಲ್ಲಿ ಪಟ್ಟಕ ಅಂತಲೇ ಕರೆದಿದ್ದೇನೆ. 

ಕೊ.ಕೊ.ಕೊ : ದಿವಸ್ಪತಿ = ದಿನದ ಒಡೆಯ, ಸೂರ್ಯ, ರವಿ


Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ