ಕಸ್ತೂರೀ ತಿಲಕಂ ...ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ
ಎಣೆಯಿರದ ಕೌಸ್ತುಭವು ಅವನೆದೆಯಲಿ
ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ
ಕಣದ ಕೈಯಲ್ಲಿ ಮೆರೆವ  ಕೊಳಲು!

ನರುಗಂಪು ಬೀರುತಿರಲವನು ಪೂಸಿದ ಗಂಧ
ಕೊರಳಲೋಲಾಡಿ ಮೆರೆಯುತಿರೆ ಸರವು
ನೆರೆದ ಗೋಪಿಯರೆಲ್ಲ ನಡುವಿನಲಿ ಕಂಗೊಳಿಸು
ತಿರುವನೈ ಗೊಲ್ಲನಿವ ರತುನದಂತೆ 

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ 2-108

ಕಸ್ತೂರೀ ತಿಲಕಂ ಲಲಾಟ ಪಟಲೆ ವಕ್ಷಸ್ಥಲೇ ಕೌಸ್ತುಭಂ
ನಾಸಾಗ್ರೇ ವರಮೌಕ್ತಿಕಂ ಕರತಲೇ ವೇಣು: ಕರೇ ಕಂಕಣಂ
ಸರ್ವಾಂಗೇ ಹರಿ ಚಂದನಂ ಕಲಯಯನ್ಕಂಠೇ ಚ ಮುಕ್ತಾವಲೀ
ಗೋಪಸ್ತ್ರೀಪರಿವೇಷ್ಠಿತೋ ವಿಜಯತೇ ಗೋಪಾಲ ಚೂಡಾಮಣಿ:

कस्तूरी तिलकं ललाट पटले वक्ष: स्थले कौस्तुभं ।
नासाग्रे वरमौक्तिकं करतले वेणु: करे कंकणं॥
सर्वांगे हरि चन्दनं कलयन्कंठे च मुक्तावली।
गोपस्त्रीपरिवेष्टितो विजयते गोपाल चूडामणि:


-ಹಂಸಾನಂದಿ

ಕೊ: ನೆನ್ನೆ-ಇವತ್ತು ಕೃಷ್ಣ ಜಯಂತಿಯಾದ್ದರಿಂದ, ಇದು ತಕ್ಕ ಪದ್ಯವೆಂದು ಅನುವಾದಿಸಿದೆ

ಕೊ.ಕೊ: ಮೂಲ ಪದ್ಯಕ್ಕಿಂತ ಅಲ್ಲಲ್ಲಿ ದೂರವಾಗಿರಬಹುದಾದರೂ ಒಟ್ಟಾರೆ ಭಾವವನ್ನುಳಿಸುವ ಪ್ರಯತ್ನ ಮಾಡಿರುವೆ


ಕೊ.ಕೊ.ಕೊ: ಚಿತ್ರ ಹಿಂದೂ ಪತ್ರಿಕೆ ಕಲಾವಿದರಾದ ಕೇಶವ್ ವೆಂಕಟರಾಘವನ್ ಅವರ ತೈಲಚಿತ್ರ. ಅವರು ಈ ಚಿತ್ರವನ್ನು ಇದೇ ಪದ್ಯವನ್ನು ಮನಸ್ಸಿನಲ್ಲಿಟ್ಟುಕೊಂಡೇ ರಚಿಸಿದ್ದಂತೆ. ಗೋಪಿಯರು ಸುತ್ತುವರಿದಿರುವುದನ್ನು ಅವರು ಕೃಷ್ಣನ ಕಿರೀಟದಲ್ಲಿ ಚಿತ್ರಿಸಿರುವುದು ಬಲುಸೊಗಸು!

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?