ಅವಳ ಅಂತರಂಗ

ಹುಬ್ಬು ಗಂಟಿಕ್ಕಿದ್ದಾಯಿತು
ಬಹುಕಾಲ
ಕಣ್ಮುಚ್ಚಿರುವುದನು
ರೂಢಿಸಿದ್ದಾಯ್ತು

ಜೊತೆಗೆ ಅಳುವುದ
ಚೆನ್ನಾಗಿ ಕಲಿಸಿದ್ದಾಯಿತು
ನಗುವನೊತ್ತಾಯದಲಿ
ಮೌನದಲಿ ನಿಲಿಸಾಯ್ತು

ಮನಸ ಹೇಗೋ
ಗಟ್ಟಿ ಮಾಡುತ್ತ
ಕಡುದಿಟ್ಟತನದಲಿ
ಕಟ್ಟಿರಿಸಿದ್ದಾಯಿತು

ಹಮ್ಮು ಬಿಡದಿರಲಿಕೆ
ಎಲ್ಲ ಅಣಿಗೊಳಿಸಾಯ್ತು
ಇನ್ನು ಗೆಲುವನು
ದೇವರಿಗೇ ಬಿಟ್ಟಾಯ್ತು


ಸಂಸ್ಕೃತ ಮೂಲ (ಅಮರುಕನ ಅಮರುಶತಕ 92/97):

ಭ್ರೂಭೇದೋ ರಚಿತಶ್ಚಿರಂ* ನಯನಯೋರಭ್ಯಸ್ತಮಾಮೀಲನಂ
ರೋದ್ಧುಂ ಶಿಕ್ಷಿತಮಾದರೇಣ ಹಸಿತಂ ಮೌನೇಭಿಯೋಗಃ ಕೃತಃ
ಧೈರ್ಯಂ ಕರ್ತುಮಪಿ ಸ್ಥಿರೀಕೃತಮಿದಂ ಚೇತಃ ಕಥಂಚಿತ್ ಮಯಾ
ಬಧ್ದೋ ಮಾನಪರಿಗ್ರಹೇ ಪರಿಕರಃ ಸಿದ್ಧಿಸ್ತು ದೈವಸ್ಥಿತಾ

-ಹಂಸಾನಂದಿ

ಕೊ: *ಭ್ರೂಭಂಗೋ ಗುಣಿತಶ್ಚಿರಂ ಅನ್ನುವ ಪಾಠಾಂತರವೂ ಇದೆ

ಕೊ.ಕೊ: ತನ್ನ ಇನಿಯನ ಮೇಲೆ ಕೋಪಬಂದಿರುವ ನಾಯಕಿ,ಅವನು ಬಂದಾಗ ಅವನ ಮೇಲೆ ಮುನಿಸು ತೋರಲು ಎಲ್ಲರೀತಿಯಿಂದಲೂ ಸಿದ್ಧಳಾದರೂ, ಕೊನೆಗೆ ಆ ಮುನಿಸು ತೋರುವುದು  ತನ್ನಿಂದ  ಆಗದೇ ಹೋಗಬಹುದೆಂದು ಅವಳ ಅಂತರಂಗ ನುಡಿಯುತ್ತಿದೆ ಅನ್ನುವುದೇ ಸಾರಾಂಶ

ಚಿತ್ರಕೃಪೆ:  ಖಂಡಿತೆ ನಾಯಕಿಯ ರೂಪದಲ್ಲಿ ರಾಗ್ ಗುಜರಿ, ರಾಗಮಾಲಾ ಚಿತ್ರ  (http://www.sweetcouch.com/art/23647 )