Posts

Showing posts from January, 2014

ಗಬ್ಬರ್ ಸಿಂಗ್ V 2.0

ಇದು ಕೆಲವು ತಿಂಗಳುಗಳ ಹಿಂದೆ, ನಾನು ಭಾಗವಹಿಸಿದ್ದ , ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ನಡೆದ ಒಂದು ಕಿರುನಾಟಕದ ವಿಡಿಯೋ.

ಅಂತೂ ಇದರ ವಿಡಿಯೋವನ್ನು ಇಲ್ಲಿ ಹಾಕುವುದಕ್ಕಿಂದು ಮುಹೂರ್ತ ಬಂತು. ನೋಡಿ!


ನಾಟಕವನ್ನು ಬರೆದು ಆಡಿಸಿದ್ದು ರವೀಂದ್ರ ವಿಶ್ವನಾಥ್.

-ಹಂಸಾನಂದಿ

ಹಂಬಲ

Image
ದಣಿವಿರದ ಚೆಲುನಗೆಯ ಕಡುಕೆಂಪಿನಾ ತುಟಿಯ
ಮನಗೆಲುವ ಹಿಗ್ಗಪೆರ್ಚಿಪ ತಂಪುಗೊಳಲ
ಅರೆತೆರೆದ ಸೊಗದ ಕಣ್ಣತ್ತಿತ್ತ ಹರಿಯುತಿಹ
ಮುಗುದ ಮೊಗದಾವರೆಯ ನಾಕಾಂಬೆನೆಂದು?

ಸಂಸ್ಕೃತ ಮೂಲ (ಬಿಲ್ವ ಮಂಗಳ ಲೀಲಾ ಶುಕನ ಕೃಷ್ಣ ಕರ್ಣಾಮೃತದ ಆಶ್ವಾಸ ೧, ಪದ್ಯ ೪೪):
ಅಶ್ರಾಂತಸ್ಮಿತಮರುಣಾಧರೋಷ್ಟಂ ಹರ್ಷಾರ್ದ್ರದ್ವಿಗುಣ  ಮನೋಜ್ಞ ವೇಣುಗೀತಂ | ವಿಭ್ರಾಮ್ಯದ್ವಿಪುಲ ವಿಲೋಚನಾರ್ಧಮುಗ್ಧಂ ವೀಕ್ಷ್ಯತೇ ತವ ವದನಾಂಬುಜಂ ಕದಾ ನು ||
-ಹಂಸಾನಂದಿ
ಚಿತ್ರ: ಮಿತ್ರ ಕೇಶವ ವೆಂಕಟ ರಾಘವನ್ ಅವರ ‘ಮಧುರಾಧಿಪತಿ’ ಎಂಬ ವರ್ಣಚಿತ್ರ
ತೆಲಿಯಲೇರು ರಾಮ ಭಕ್ತಿ ಮಾರ್ಗಮುನು

Image
ಇಂದು ಪುಷ್ಯ ಬಹುಳ ಪಂಚಮಿ. 1847ರಲ್ಲಿ ತ್ಯಾಗರಾಜರು ಸಮಾಧಿ ಹೊಂದಿದ ದಿನ.ಈ ಮೊದಲೂ ತ್ಯಾಗರಾಜರ ಆರಾಧನೆಯ ಸಮಯದಲ್ಲಿ , ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದೆ. ಇವತ್ತು ಅದಕ್ಕಾಗೇ ನಾನು ಆಯ್ದುಕೊಂಡಿದ್ದು 'ತೆಲಿಯಲೇರು ರಾಮ ಭಕ್ತಿಮಾರ್ಗಮುನು' ಎಂಬ ಧೇನುಕ ರಾಗದ ರಚನೆ. ಈ ರಚನೆಗೆ ನಾನು ಮಾಡಿದ ಕನ್ನಡ ಅನುವಾದ ಇಲ್ಲಿದೆ.

ತಿಳಿಯಲಾರರು ಭಕ್ತಿಮಾರ್ಗವನ್ನು ||ತಿಳಿಯಲಾರರು ||

ತಿರೆಯೆಲ್ಲವ ತಿರುಗುತ್ತ ಕನ
-ವರಿಸುತಿಹರೆಲ್ಲ ರಾಮ || ತಿಳಿಯಲಾರರು ||

ಹಾಸಿಗೆಯಿಂದೆದ್ದು ಮುಳುಗು ಹಾಕಿ ಬೂದಿ 
ಪೂಸಿ ತೋರಿಕೆಗೆ ಬೆರಳನೆಣಿಸಿ
ಕಾಸು ಗಳಿಕೆಯಲ್ಲೇ ತಮ್ಮ ಮನವನಿಡುತ
ಲೇಸು ತ್ಯಾಗರಾಜ ವಿನುತನ|| ತಿಳಿಯಲಾರರು ||

ಹೀಗೆ ಅನುವಾದಿಸುವಲ್ಲಿ ನಾನು ಮುಖ್ಯವಾಗಿ ಅನುವಾದವನ್ನು ಮೂಲದ ಮಟ್ಟಿನಲ್ಲಿಯೇ, ಅದೇ ಸಂಗತಿಗಳನ್ನೇ ಉಳಿಸಿಕೊಂಡು ಹಾಡಲು ಸಾಧ್ಯವಾಗಬೇಕು ಅನ್ನುವುದಕ್ಕೆ ಹೆಚ್ಚು ಗಮನವಿಟ್ಟಿದ್ದೇನೆ. ಹಾಗಾಗಿ, ಮೂಲದಲ್ಲಿದ್ದ ಕೆಲವು ಪದಗಳು ಅನುವಾದದಲ್ಲಿ ಇಲ್ಲದಿದ್ದರೂ, ಅಥವಾ ಅಲ್ಲಿಲ್ಲದ ಪದಗಳು ಅನುವಾದದಲ್ಲಿ ಬಂದರೂ, ಒಟ್ಟಾರೆ ಭಾವಾರ್ಥವನ್ನು ಮಾತ್ರ ಬದಲಿಸಿಲ್ಲ.ಅದರ ಜೊತೆಗೇ ಪ್ರಾಸವನ್ನೂ ಒಂದು ಮಟ್ಟಕ್ಕೆ ಉಳಿಸಿಕೊಂಡಿದ್ದೇನೆ ಅನ್ನುವುದು ನನಗೆ ಸಮಾಧಾನ ತರುವ ಸಂಗತಿ.

ಈ ರೀತಿ ಅನುವಾದಗಳು ಬೇಕೇ? ಅನ್ನುವುದು ಕೆಲವರ ಪ್ರಶ್ನೆ. ಅದು ಒಂದು ಮಟ್ಟಕ್ಕೆ ಸರಿಯೂ ಹೌದು. ತ್ಯಾಗರಾಜರ ಸಂಗೀತದ ಅಭಿಮಾನಿಯಾಗಿ, ನನಗೂ ಪೂರ್ತಿ ಅರ್ಥವಾಗದಿದ್ದಾಗ…

ದಾಳದ ಆಟ

Image
ಹಲಜನರು ತಂಗಿರುತ್ತಿದ್ದ ಮನೆಯೊಳಗೀಗಲೊಬ್ಬಂಟಿ ನಿಂತನೋರ್ವ ಒಬ್ಬರೋ ಹಲವರೋ ಮೊದಲಿದ್ದ ಕಡೆಯಲ್ಲಿ ಕೊನೆಯಲಾರೂ ಕಾಣರು ದಿನರಾತ್ರಿಯೆಂಬೆರಡು ದಾಳಗಳನುರುಳಿಸುತ ಎಡೆಬಿಡದೆ ಕಾಲಪುರುಷ ಪಗಡೆಯನ್ನಾಡಿಹನು ಬುವಿಯ ಹಾಸನು ಹೂಡಿ ಜೀವಿಗಳ ಕಾಯಿ ನಡೆಸಿ
ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕ, ಪದ್ಯ ೪೨):
ಯತ್ರಾನೇಕಃ ಕ್ವಚಿದಪಿ ಗೃಹೇ ತತ್ರ ತಿಷ್ಠತ್ಯಥೈಕೋ ಯತ್ರಾಪ್ಯೇಕಸ್ತದನು ಬಹವಸ್ತ್ರತ್ರ ನೈಕೋಪಿ ಚಾಂತೇ ಇತ್ಥಂ ನೇಯೌ ರಜನಿ ದಿವಸೌ ಲೋಲಯನ್ ದ್ವಾವಿನಾಕ್ಷೌ ಕಾಲಃ ಕಲ್ಯೋ ಭುವನ ಫಲಕೇ ಕ್ರೀಡತಿ ಪ್ರಾಣಿಶಾರೈಃ
-ಹಂಸಾನಂದಿ
ಕೊ: ಅನುವಾದವು , ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿ ಇದೆ. ಪ್ರತೀ ಸಾಲಿನಲ್ಲೂ ೫-೫-೫-೫-೫-೫-೨ ಈ ರೀತಿಯ ಗಣವಿಭಾಗವಿದೆ. ಆದರೆ, ಪ್ರಾಸವನ್ನಿಟ್ಟಿಲ್ಲ.
ಕೊ.ಕೊ: ಪಗಡೆಯಾಟದ ಮನೆಗಳಲ್ಲಿ ಯಾವ ಕಾಯೂ ಇದ್ದಲ್ಲೇ ಇರದು. ಬದಲಾಗುತ್ತಲೇ ಇರುತ್ತವೆ ಅಲ್ಲವೆ? ಅದೇ ರೀತಿ, ಈ ಜಗದ ಜೀವರಾಶಿಗಳೆಲ್ಲ ಬದಲಾಗುತ್ತಲೇ ಇರುತ್ತವೆ, ಯಾವುದೂ ಸ್ಥಿರವಲ್ಲ, ಕಾಲವನ್ನು ತಡೆಯೋರು ಯಾರೂ ಇಲ್ಲ  ಅನ್ನುವುದು ಪದ್ಯದ ಆಶಯ.

ಕೊ.ಕೊ.ಕೊ: ಸೂರ್ಯನು ಉತ್ತರದ ಕಡೆಗೆ ತನ್ನ ಚಲನೆಯನ್ನು ಬದಲಾಯಿಸುತ್ತಾನೆನ್ನಲಾಗುವ ಈ ಮಕರ ಸಂಕ್ರಾಂತಿಯಂದು ( ಅದು ಹೇಗೆ ಪೂರ್ತಿ ಸರಿಯಲ್ಲ ಅನ್ನುವುದಕ್ಕೆ ಇಲ್ಲಿ ಮತ್ತೆ ಇಲ್ಲಿ ಓದಿ ನೋಡಿ), ಹೀಗೆ ಕಾಲನಾಡುವ ಪಗಡೆಯಾಟದ ಪದ್ಯ ನನಗೆ ಸಿಕ್ಕಿದ್ದು ಅದೃಷ್ಟವೇ ಸರಿ. ಕಾಲದ ಕೈಯಲ್ಲಿ ನಾವೆಲ್ಲಾ ಆಟದ ಕಾಯಿಗಳು ತಾನೇ?

Death Valley, California

Image
ಇದು  ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ ದ ಸೊಬಗನ್ನು ವರ್ಣಿಸುವ ಪ್ರಯತ್ನ.ಕೆಲವು ವಾರಗಳ ಹಿಂದೆ ಪದ್ಯಪಾನದಲ್ಲಿ ಯಾವುದಾದರೊಂದು ಪ್ರಕೃತಿಯ ವಿಷಯದ ಬಗ್ಗೆ ಕಡೆಯ ಪಕ್ಷ ಐದು ಪದ್ಯಗಳಲ್ಲಿ ವರ್ಣಿಸಿ ಅನ್ನುವ ಪ್ರಶ್ನೆ ಕೊಟ್ಟಿದ್ದರು. ಬೇರೆ ಬೇರೆ ಕೆಲಸಗಳ ನಡುವೆ ಅದನ್ನು ಅಷ್ಟು ಗಮನಿಸಿರಲಿಲ್ಲ. ಈಗ ಸುಮಾರು ಎರಡು ವರ್ಷಗಳ ಹಿಂದೆ ಡೆತ್ ವ್ಯಾಲಿಗೆ ಹೋದಾಗ ಅದರ ಬಗ್ಗೆ ಎರಡು ಪದ್ಯಗಳನ್ನು ಕುಸುಮ ಷಟ್ಪದಿಯಲ್ಲಿ ಬರೆದಿದ್ದು ನೆನಪಾಯ್ತು. ಹಾಗಾಗಿ ಅದಕ್ಕೆ ಇನ್ನು ಮೂರು ಪದ್ಯ ಬರೆದು ಸೇರಿಸಿದ್ದಾಯ್ತು!    ಕೊನೆಯ ಸಾಲಿನ “ಸಾವಿನ ಕಣಿವೆ” ಅನ್ನುವುದನ್ನು ಗಮನಿಸಿ.
ಮರಳು ಕಾಡಿನ ಸೊಬಗ
ನರಿಯದೆಲೆ ಸುಮ್ಮನೆಯೆ
ಬರಿದೆ ಮಾತಲ್ಲದನು ಪೇಳ್ವುದೆಂತು
ತೆರೆದು ಕಣ್ಣನು ನೋಡಿ
ದರೆ ಹೊಳೆವ ಬಂಗಾರ
ದರಿವೆ ತೊಟ್ಟಿತೆ ಭೂಮಿಯೆನ್ನಿಸೀತು ॥೧॥ ಸುತ್ತ ಕಾಂಬುದು ಕೋಟೆ
ಕೊತ್ತಲಗಳನು ಮೀರಿ
ಎತ್ತರದ ಬೆಟ್ಟಗಳ ಚೆಲ್ವ ಸಾಲು
ಎತ್ತ ನೋಡಿದರಲ್ಲಿ
ಚಿತ್ತವನು ಸೆಳೆವುದೈ!
ಸುತ್ತ ನೋಡುವ ಕಣ್ಗೆ ಹಬ್ಬವಾಗಿ ॥೨॥ ಹರಳು ಗಟ್ಟಿರುವುಪ್ಪು
ಮರಳಿನಾ ಚಿತ್ತಾರ
ತಿರೆಯುಟ್ಟು ನಲಿಯುತಿಹ ಬಿಳಿಯ ಸೀರೆ
ಧರೆಗಿಂತ ತಾನೇಕೆ
ಕಿರಿಯವಳು ಎನ್ನುತಲಿ
ಮೆರೆವುದಾಗಸವಚ್ಚ ನೀಲಿಯುಟ್ಟು ॥೩॥ ಹಲ್ಲು ಕಡಿಸುವ ಚಳಿಯ
ಸೊಲ್ಲನಡಗಿಪ ಕುಳಿರ
ಕಲ್ಲು ತುಂಬಿದ ಹಾದಿ ಮರೆಸುವಂತೆ
ಚೆಲ್ಲಿ ಹರಿದಿವೆ ಬಾನ
-ಲೆಲ್ಲೆಲ್ಲು ತಾರೆಗಳು
ಮಲ್ಲೆ ಬನದಲಿ ಕೋಟಿ ಹೂಗಳಂತೆ! ॥೪॥ ಬೇಸರವ ಕಳೆಯಲಿಕೆ
ನೇಸರುದಯದ ಚಂದ

ತಿಳಿಯದವಳು

Image
ನಲ್ಲ
ಬಳಿಬಂದು
ನುಡಿಯೆ
ಸವಿಮಾತುಗಳ

ಮೈಯೆಲ್ಲ
ಕಿವಿಯಾಯ್ತೊ
ಕಣ್ಣಾಯ್ತೊ
ಎಂಬುದನು
ನಾನರಿಯೆ!


ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ, ಪದ್ಯ 64) :
ನ ಜಾನೇ ಸಮ್ಮುಖಾಯಾತೇ ಪ್ರಿಯಾಣಿ ವದತಿ ಪ್ರಿಯೇ ಪ್ರಯಾಂತಿ ಮಮ ಗಾತ್ರಾಣಿ ಶ್ರೋತ್ರತಾಂ ಕಿಮು ನೇತ್ರತಾಮ್ ||
न जाने सम्मुखायाते प्रियाणि वदति प्रिये ।  प्रयान्ति मम गात्राणि श्रोत्रतां किमु नेत्रताम् ||
-ಹಂಸಾನಂದಿ
ಕೊ: ಇದೇ ಪದ್ಯ ಪದ್ಮಾವತೀ ಕೃತ ಶ್ರೀಕೃಷ್ಣ ಸೂಕ್ತಿಯಲ್ಲಿಯೂ ಕಂಡು ಬಂತು.ಗೂಗಲೇಶ್ವರನ ದಯದಿಂದ.
ಕೊ.ಕೊ: ಎರಡನೇ ಸಾಲಿಗೆ "ಸರ್ವಾಣ್ಯಂಗಾನಿ ಮೇ ಯಾಂತಿ" ಎನ್ನುವ ಪಾಠಾಂತರವೂ ಇದ್ದಹಾಗಿದೆ. ಅರ್ಥದಲ್ಲಿ ಅದರಿಂದ ಬದಲಾವಣೆಯೇನೂ ಆಗದು.
ಚಿತ್ರ ಕೃಪೆ: ರವಿವರ್ಮನ "The Stolen Interview"  ವರ್ಣಚಿತ್ರ (http://www.suagifts.com/Raja-Ravi-Varma-Painting/Raja-Ravi-Varma-painting--Title--Stolen-Interview--id-111123.html)ಚಿತ್ರ ಕೃಪೆ: ರವಿವರ್ಮನ