ದಾಳದ ಆಟ


ಹಲಜನರು ತಂಗಿರುತ್ತಿದ್ದ ಮನೆಯೊಳಗೀಗಲೊಬ್ಬಂಟಿ ನಿಂತನೋರ್ವ
ಒಬ್ಬರೋ ಹಲವರೋ ಮೊದಲಿದ್ದ ಕಡೆಯಲ್ಲಿ ಕೊನೆಯಲಾರೂ ಕಾಣರು
ದಿನರಾತ್ರಿಯೆಂಬೆರಡು ದಾಳಗಳನುರುಳಿಸುತ ಎಡೆಬಿಡದೆ ಕಾಲಪುರುಷ
ಪಗಡೆಯನ್ನಾಡಿಹನು ಬುವಿಯ ಹಾಸನು ಹೂಡಿ ಜೀವಿಗಳ ಕಾಯಿ ನಡೆಸಿ

ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕ, ಪದ್ಯ ೪೨):

ಯತ್ರಾನೇಕಃ ಕ್ವಚಿದಪಿ ಗೃಹೇ ತತ್ರ ತಿಷ್ಠತ್ಯಥೈಕೋ
ಯತ್ರಾಪ್ಯೇಕಸ್ತದನು ಬಹವಸ್ತ್ರತ್ರ ನೈಕೋಪಿ ಚಾಂತೇ
ಇತ್ಥಂ ನೇಯೌ ರಜನಿ ದಿವಸೌ ಲೋಲಯನ್ ದ್ವಾವಿನಾಕ್ಷೌ
ಕಾಲಃ ಕಲ್ಯೋ ಭುವನ ಫಲಕೇ ಕ್ರೀಡತಿ ಪ್ರಾಣಿಶಾರೈಃ

-ಹಂಸಾನಂದಿ

ಕೊ: ಅನುವಾದವು , ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿ ಇದೆ. ಪ್ರತೀ ಸಾಲಿನಲ್ಲೂ ೫-೫-೫-೫-೫-೫-೨ ಈ ರೀತಿಯ ಗಣವಿಭಾಗವಿದೆ. ಆದರೆ, ಪ್ರಾಸವನ್ನಿಟ್ಟಿಲ್ಲ.

ಕೊ.ಕೊ: ಪಗಡೆಯಾಟದ ಮನೆಗಳಲ್ಲಿ ಯಾವ ಕಾಯೂ ಇದ್ದಲ್ಲೇ ಇರದು. ಬದಲಾಗುತ್ತಲೇ ಇರುತ್ತವೆ ಅಲ್ಲವೆ? ಅದೇ ರೀತಿ, ಈ ಜಗದ ಜೀವರಾಶಿಗಳೆಲ್ಲ ಬದಲಾಗುತ್ತಲೇ ಇರುತ್ತವೆ, ಯಾವುದೂ ಸ್ಥಿರವಲ್ಲ, ಕಾಲವನ್ನು ತಡೆಯೋರು ಯಾರೂ ಇಲ್ಲ  ಅನ್ನುವುದು ಪದ್ಯದ ಆಶಯ.


ಕೊ.ಕೊ.ಕೊ: ಸೂರ್ಯನು ಉತ್ತರದ ಕಡೆಗೆ ತನ್ನ ಚಲನೆಯನ್ನು ಬದಲಾಯಿಸುತ್ತಾನೆನ್ನಲಾಗುವ ಈ ಮಕರ ಸಂಕ್ರಾಂತಿಯಂದು ( ಅದು ಹೇಗೆ ಪೂರ್ತಿ ಸರಿಯಲ್ಲ ಅನ್ನುವುದಕ್ಕೆ ಇಲ್ಲಿ ಮತ್ತೆ ಇಲ್ಲಿ ಓದಿ ನೋಡಿ), ಹೀಗೆ ಕಾಲನಾಡುವ ಪಗಡೆಯಾಟದ ಪದ್ಯ ನನಗೆ ಸಿಕ್ಕಿದ್ದು ಅದೃಷ್ಟವೇ ಸರಿ. ಕಾಲದ ಕೈಯಲ್ಲಿ ನಾವೆಲ್ಲಾ ಆಟದ ಕಾಯಿಗಳು ತಾನೇ?