ತೆಲಿಯಲೇರು ರಾಮ ಭಕ್ತಿ ಮಾರ್ಗಮುನು

ಇಂದು ಪುಷ್ಯ ಬಹುಳ ಪಂಚಮಿ. 1847ರಲ್ಲಿ ತ್ಯಾಗರಾಜರು ಸಮಾಧಿ ಹೊಂದಿದ ದಿನ.ಈ ಮೊದಲೂ ತ್ಯಾಗರಾಜರ ಆರಾಧನೆಯ ಸಮಯದಲ್ಲಿ , ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದೆ. ಇವತ್ತು ಅದಕ್ಕಾಗೇ ನಾನು ಆಯ್ದುಕೊಂಡಿದ್ದು 'ತೆಲಿಯಲೇರು ರಾಮ ಭಕ್ತಿಮಾರ್ಗಮುನು' ಎಂಬ ಧೇನುಕ ರಾಗದ ರಚನೆ. ಈ ರಚನೆಗೆ ನಾನು ಮಾಡಿದ ಕನ್ನಡ ಅನುವಾದ ಇಲ್ಲಿದೆ.

ತಿಳಿಯಲಾರರು ಭಕ್ತಿಮಾರ್ಗವನ್ನು ||ತಿಳಿಯಲಾರರು ||

ತಿರೆಯೆಲ್ಲವ ತಿರುಗುತ್ತ ಕನ
-ವರಿಸುತಿಹರೆಲ್ಲ ರಾಮ || ತಿಳಿಯಲಾರರು ||

ಹಾಸಿಗೆಯಿಂದೆದ್ದು ಮುಳುಗು ಹಾಕಿ ಬೂದಿ 
ಪೂಸಿ ತೋರಿಕೆಗೆ ಬೆರಳನೆಣಿಸಿ
ಕಾಸು ಗಳಿಕೆಯಲ್ಲೇ ತಮ್ಮ ಮನವನಿಡುತ
ಲೇಸು ತ್ಯಾಗರಾಜ ವಿನುತನ|| ತಿಳಿಯಲಾರರು ||

ಹೀಗೆ ಅನುವಾದಿಸುವಲ್ಲಿ ನಾನು ಮುಖ್ಯವಾಗಿ ಅನುವಾದವನ್ನು ಮೂಲದ ಮಟ್ಟಿನಲ್ಲಿಯೇ, ಅದೇ ಸಂಗತಿಗಳನ್ನೇ ಉಳಿಸಿಕೊಂಡು ಹಾಡಲು ಸಾಧ್ಯವಾಗಬೇಕು ಅನ್ನುವುದಕ್ಕೆ ಹೆಚ್ಚು ಗಮನವಿಟ್ಟಿದ್ದೇನೆ. ಹಾಗಾಗಿ, ಮೂಲದಲ್ಲಿದ್ದ ಕೆಲವು ಪದಗಳು ಅನುವಾದದಲ್ಲಿ ಇಲ್ಲದಿದ್ದರೂ, ಅಥವಾ ಅಲ್ಲಿಲ್ಲದ ಪದಗಳು ಅನುವಾದದಲ್ಲಿ ಬಂದರೂ, ಒಟ್ಟಾರೆ ಭಾವಾರ್ಥವನ್ನು ಮಾತ್ರ ಬದಲಿಸಿಲ್ಲ.ಅದರ ಜೊತೆಗೇ ಪ್ರಾಸವನ್ನೂ ಒಂದು ಮಟ್ಟಕ್ಕೆ ಉಳಿಸಿಕೊಂಡಿದ್ದೇನೆ ಅನ್ನುವುದು ನನಗೆ ಸಮಾಧಾನ ತರುವ ಸಂಗತಿ.

ಈ ರೀತಿ ಅನುವಾದಗಳು ಬೇಕೇ? ಅನ್ನುವುದು ಕೆಲವರ ಪ್ರಶ್ನೆ. ಅದು ಒಂದು ಮಟ್ಟಕ್ಕೆ ಸರಿಯೂ ಹೌದು. ತ್ಯಾಗರಾಜರ ಸಂಗೀತದ ಅಭಿಮಾನಿಯಾಗಿ, ನನಗೂ ಪೂರ್ತಿ ಅರ್ಥವಾಗದಿದ್ದಾಗಲೂ ಆ ರಚನೆಗಳನ್ನ ಅವರು ಬರೆದಂತೆ ಕೇಳುವುದೇ ಮೆಚ್ಚುಗೆ ಅನ್ನುವುದು ನಿಜವಾದ ಮಾತು. ಆದರೆ ಅದೇ ವೇಳೆಗೆ, ಅರ್ಥವನ್ನೂ ತಿಳಿಸುವಂತೆ, ಸಂಗೀತವನ್ನೂ ಉಳಿಸಿಕೊಂಡು ಮಾಡುವ ಪ್ರಯತ್ನದಲ್ಲಿ ತಪ್ಪಿಲ್ಲವೆಂದೂ ನನಗೆ ಮೊದಲಿಂದಲೂ ಅನ್ನಿಸುತ್ತಿತ್ತು. ಡಾ.ಬಾಲಮುರಳಿಕೃಷ್ಣರಂತಹ ಮೇಧಾವಿಗಳು ಪುರಂದರ ದಾಸರ ದೇವರನಾಮಗಳನ್ನು ತೆಲುಗಿಗೆ ಅನುವಾದಿಸಿ ಸೊಗಸಾಗಿ ಹಾಡಿರುವುದನ್ನು ಕೇಳಿ ಆ ರೀತಿಯ ಪ್ರಯತ್ನದಲ್ಲಿ ತಪ್ಪೇನಿಲ್ಲವೆಂದು ತಿಳಿದು, ಈ ರೀತಿ ಹಲವಾರು ಕೃತಿಗಳನ್ನು ಕನ್ನಡಿಸಿದ್ದೇನೆ.

ಧೇನುಕ ತ್ಯಾಗರಾಜರು ಬಳಕೆಗೆ ತಂದ ರಾಗಗಳಲ್ಲಿ ಒಂದು . ಅವರ ಮೊದಲು ಈ ರಾಗದಲ್ಲಿ ಯಾರೂ ಕೃತಿ ರಚಿಸಿದ ಹಾಗೆ ತೋರುವುದಿಲ್ಲ.   

-ಹಂಸಾನಂದಿ

ಕೊ: ಮೂಲ ಕೃತಿ, ಇಂಗ್ಲಿಷ್ ಅನುವಾದದೊಂದಿಗೆ ಇಲ್ಲಿದೆ.

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ