Death Valley, California

ಇದು  ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ ದ ಸೊಬಗನ್ನು ವರ್ಣಿಸುವ ಪ್ರಯತ್ನ.ಕೆಲವು ವಾರಗಳ ಹಿಂದೆ ಪದ್ಯಪಾನದಲ್ಲಿ ಯಾವುದಾದರೊಂದು ಪ್ರಕೃತಿಯ ವಿಷಯದ ಬಗ್ಗೆ ಕಡೆಯ ಪಕ್ಷ ಐದು ಪದ್ಯಗಳಲ್ಲಿ ವರ್ಣಿಸಿ ಅನ್ನುವ ಪ್ರಶ್ನೆ ಕೊಟ್ಟಿದ್ದರು. ಬೇರೆ ಬೇರೆ ಕೆಲಸಗಳ ನಡುವೆ ಅದನ್ನು ಅಷ್ಟು ಗಮನಿಸಿರಲಿಲ್ಲ. ಈಗ ಸುಮಾರು ಎರಡು ವರ್ಷಗಳ ಹಿಂದೆ ಡೆತ್ ವ್ಯಾಲಿಗೆ ಹೋದಾಗ ಅದರ ಬಗ್ಗೆ ಎರಡು ಪದ್ಯಗಳನ್ನು ಕುಸುಮ ಷಟ್ಪದಿಯಲ್ಲಿ ಬರೆದಿದ್ದು ನೆನಪಾಯ್ತು. ಹಾಗಾಗಿ ಅದಕ್ಕೆ ಇನ್ನು ಮೂರು ಪದ್ಯ ಬರೆದು ಸೇರಿಸಿದ್ದಾಯ್ತು!   
ಕೊನೆಯ ಸಾಲಿನ “ಸಾವಿನ ಕಣಿವೆ” ಅನ್ನುವುದನ್ನು ಗಮನಿಸಿ.

ಮರಳು ಕಾಡಿನ ಸೊಬಗ
ನರಿಯದೆಲೆ ಸುಮ್ಮನೆಯೆ
ಬರಿದೆ ಮಾತಲ್ಲದನು ಪೇಳ್ವುದೆಂತು
ತೆರೆದು ಕಣ್ಣನು ನೋಡಿ
ದರೆ ಹೊಳೆವ ಬಂಗಾರ
ದರಿವೆ ತೊಟ್ಟಿತೆ ಭೂಮಿಯೆನ್ನಿಸೀತು ॥೧॥
ಸುತ್ತ ಕಾಂಬುದು ಕೋಟೆ
ಕೊತ್ತಲಗಳನು ಮೀರಿ
ಎತ್ತರದ ಬೆಟ್ಟಗಳ ಚೆಲ್ವ ಸಾಲು
ಎತ್ತ ನೋಡಿದರಲ್ಲಿ
ಚಿತ್ತವನು ಸೆಳೆವುದೈ!
ಸುತ್ತ ನೋಡುವ ಕಣ್ಗೆ ಹಬ್ಬವಾಗಿ ॥೨॥
ಹರಳು ಗಟ್ಟಿರುವುಪ್ಪು
ಮರಳಿನಾ ಚಿತ್ತಾರ
ತಿರೆಯುಟ್ಟು ನಲಿಯುತಿಹ ಬಿಳಿಯ ಸೀರೆ
ಧರೆಗಿಂತ ತಾನೇಕೆ
ಕಿರಿಯವಳು ಎನ್ನುತಲಿ
ಮೆರೆವುದಾಗಸವಚ್ಚ ನೀಲಿಯುಟ್ಟು ॥೩॥
ಹಲ್ಲು ಕಡಿಸುವ ಚಳಿಯ
ಸೊಲ್ಲನಡಗಿಪ ಕುಳಿರ
ಕಲ್ಲು ತುಂಬಿದ ಹಾದಿ ಮರೆಸುವಂತೆ
ಚೆಲ್ಲಿ ಹರಿದಿವೆ ಬಾನ
-ಲೆಲ್ಲೆಲ್ಲು ತಾರೆಗಳು
ಮಲ್ಲೆ ಬನದಲಿ ಕೋಟಿ ಹೂಗಳಂತೆ! ॥೪॥
ಬೇಸರವ ಕಳೆಯಲಿಕೆ
ನೇಸರುದಯದ ಚಂದ
ಹಸನಾದ ನೋಟಗಳ ಸಾಲೆ ಇರಲು
ಹಸಿರು ಸಿಗದಿರಲೇನು?
ಬಿಸಿಲ ಧಗೆಯಿರಲೇನು?
ಹೆಸರು ಸಾವಿನಕಣಿವೆ ಸರಿಯಲ್ಲವು! ॥೫॥
-ಹಂಸಾನಂದಿ
ಕೊ: ಡೆತ್ ವ್ಯಾಲಿಯಲ್ಲಿ ರಾತ್ರಿಯ ಆಕಾಶ ಬಲು ಸೊಗಸು. ಯು ಎಸ್ ಎ ಯಲ್ಲಿ ಆಕಾಶ ನೋಡಲು ಅತ್ಯುತ್ತಮ ಸ್ಥಳಗಳಲ್ಲಿ ಡೆತ್ ವ್ಯಾಲಿ ಮುಂಚೂಣಿಯಲ್ಲಿದೆ. ರಾತ್ರಿಯಾಗಸ ಎಷ್ಟು ಕಪ್ಪಾಗಿರುತ್ತೆ ಎನ್ನುವುದನ್ನು ಸೂಚಿಸುವ ಬಾರ್ಟಲ್ ಸ್ಕೇಲ್ ನಲ್ಲಿ ಡೆತ್ ವ್ಯಾಲಿ ಮೊದಲ ಶ್ರೇಣಿಯಲ್ಲಿದೆ (Class 1 sky).

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?