ಅದ್ವೈತನಿಂತಿಹುದವನರೂಪ ಕಣ್ಣಲ್ಲಿ ಮತ್ತವನ
ಸ್ಪರ್ಶವೇ ನೆಲೆಸಿರಲು ಮೈಯಲ್ಲಿ
ಮಾತು ಕಿವಿಯಲ್ಲಿರಲು ಮನಸು ಮನಸಲ್ಲಿರಲು
ಬೇರೆ ಮಾಡುವುದೇನು ದೈವವಿನ್ನು ?ಪಾಕೃತ ಮೂಲ (ಹಾಲನ ಗಾಥಾ ಸತ್ತಸಯಿ ೨-೩೨) :


ರೂಅಂ ಅಚ್ಛೀಸು ಠಿಅಂ  ಫರಿಸೋ ಅಂಗೇಸು ಜಂಪಿಅಂ ಕಣ್ಣೇ 
ಹಿಅಅಂ ಹಿಅಏ ಣಿಹಿಅಂ ವಿಓಝಅಂ ಕಿಂತ್ಥ ದೇವ್ವೇಣ


‘ಮಂಜುನಾಥ’ ಭಟ್ಟ' ಶ್ರೀ ಮಥುರಾನಾಥ ಶಾಸ್ತ್ರಿಯವರ ಸಂಸ್ಕೃತ ಅನುವಾದ::


ರೂಪಮಷ್ಣೋಃ ಸ್ಥಿತಂ ಸ್ಪರ್ಶೋಂಗೇಷು ಜಲ್ಪಿತಂ ಕರ್ಣೇ
ಹೃದಯಂ ಹೃದಯೇ ನಿಹಿತಂ ವಿಜೋಜಿತಂ ಕಿಮತ್ರ ದೈವೇನ-ಹಂಸಾನಂದಿ

ಕೊ:  ಗಾಹಾ ಸತ್ತಸಯಿ ಎಂಬುದು ಶಾತವಾಹನರ ರಾಜ ಹಾಲನೆಂಬವನು ಮಾಡಿರುವ ೭೦೦ ಪದ್ಯಗಳ ಸಂಗ್ರಹ. ಇದರಲ್ಲಿ ಅವನ ರಚನೆಗಳೂ, ಮತ್ತೆ ಬೇರೆ ಕವಿಗಳ ರಚನೆಗಳೂ ಸೇರಿವೆಯಂತೆ. ಇದು ಮಹಾರಾಷ್ಟ್ರೀ ಎನ್ನುವ ಪ್ರಾಕೃತ ಭಾಷೆಯಲ್ಲಿದೆ. ಇದರ ಕಾಲ ಸುಮಾರಾಗಿ ಕ್ರಿ.ಶ. ಒಂದನೇ ಶತಮಾನ.

ಕೊ.ಕೊ: ಈ ಅನುವಾದಕ್ಕೆ ನಾನು ಮೂಲವಾಗಿಟ್ಟುಕೊಂಡಿದ್ದು, ‘ಮಂಜುನಾಥ’ ನ ಸಂಸ್ಕೃತ ಪದ್ಯವನ್ನು. ಈ ಎರಡನ್ನೂ ಹೋಲಿಸಿ ನೋಡಿದಾಗ, ಸಂಸ್ಕೃತವು ಹೇಗೆ ಬೇರೆ ಬೇರೆ ಪ್ರಾಕೃತಗಳಾಗಿ ಮೂಲ ಸ್ವರೂಪವನ್ನು ಬದಲಾಯಿಸಿಕೊಂಡು, ಇಂದು ಬಳಕೆಯಲ್ಲಿರುವ ಭಾಷೆಗಳಾಗಿ ಬದಲಾಗಿದೆ ಅನ್ನುವುದು ಸುಲಭವಾಗಿ ತಿಳಿಯುತ್ತೆ.

ಕೊ.ಕೊ.ಕೊ: ಅಜಿಂಠಾ (ಅಜಂತ) ದಲ್ಲಿರುವ ಗುಹೆಗಳ ಮೊದಮೊದಲ ವರ್ಣಚಿತ್ರಗಳು ರಚನೆಯಾದದ್ದು ಶಾತವಾಹನರ ಕಾಲದಲ್ಲೇ. ಹಾಗಾಗಿ ಅಲ್ಲಿನ ಒಂದು ಚಿತ್ರವನ್ನೇ ಹಾಕಿದ್ದೇನೆ. ಈ ಪದ್ಯ ನಾಯಕಿ ಅವಳ ಗೆಳತಿಗೆ ಹೇಳುತ್ತಿರುವುದು ಎಂದು ಭಾವಿಸಬಹುದು. ಅದ್ವೈತವೆಂದರೆ ಎರಡಲ್ಲ, ಒಂದೇ ಎಂದರ್ಥ. ಇಲ್ಲಿನ ನಾಯಕಿ, ತಾನೂ ನಾಯಕನೂ ಒಂದೇ ಆಗಿರುವಾಗ, ಬೇರ್ಪಡಿಸುವರು ಯಾರಿದ್ದಾರೆಂದು ಸವಾಲು ಹಾಕುತ್ತಿದ್ದಾಳಲ್ಲ, ಅದಕ್ಕೇ ಆ ತಲೆಬರಹವನ್ನು ಕೊಟ್ಟೆ.


ಚಿತ್ರ ಕೃಪೆ:  http://www.narrowstreetsholidays.com/images/ajanta.jpgPopular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ಪತ್ರಿಕೆ, ಅಂಕಣಕಾರರು, ಭಗವದ್ಗೀತೆ ಮತ್ತು ಸತ್ಯಗಳು

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?